ವಿಶ್ವಸಂಸ್ಥೆ: 'ಒಂದು ವೇಳೆ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿದರೆ ಆಹಾರ ಪದಾರ್ಥಗಳು, ಜೀವನ ನಿರ್ವಹಣಾ ವೆಚ್ಚವು ಏರಿಕೆಯಾಗಲಿದೆ. ಜೊತೆಗೆ, ಇಂಧನ ಪೂರೈಕೆಗೆ ಸಂಬಂಧಿಸಿ ಏಷ್ಯಾದ ದೇಶಗಳೇ ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುತ್ತವೆ' ಎಂದು ವ್ಯಾಪಾರ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಅಂಗಸಂಸ್ಥೆ ಯುಎನ್‌ಸಿಟಿಎಡಿ ಎಚ್ಚರಿಕೆ ನೀಡಿದೆ.
ಜಲಸಂಧಿ ಮುಚ್ಚುವುದರಿಂದ ಜಗತ್ತಿನ ವ್ಯಾಪಾರ ಮತ್ತು ಅಭಿವೃದ್ಧಿಯ ಮೇಲಾಗುವ ಪರಿಣಾಮಗಳ ಕುರಿತು ಯುಎನ್‌ಸಿಟಿಎಡಿ ಮಂಗಳವಾರ ವರದಿ ಬಿಡುಗಡೆ ಮಾಡಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಅವರು ಇದೇ ದಿನ ಮಾಧ್ಯಮಗೋಷ್ಠಿ ನಡೆಸಿ ವರದಿಯನ್ನು ವಿವರಿಸಿದರು.
'ಪರಿಣಾಮಗಳು ದೀರ್ಘಾವಧಿಯದ್ದಾಗಿರುತ್ತವೆ. ತೈಲ ಬೆಲೆ ಏರಿಕೆಯಾದರೆ, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುತ್ತದೆ. ಅಡುಗೆ ಅನಿಲ ಬೆಲೆ ಏರಿಕೆಯಾದರೆ, ರಸಗೊಬ್ಬರಗಳ ಬೆಲೆಯೂ ಏರಿಕೆಯಾಗುತ್ತದೆ' ಎಂದು ಹೇಳಿದರು.
'ಏಷ್ಯಾದ ದೇಶಗಳು ಮಾತ್ರವಲ್ಲ ಇಡೀ ಜಗತ್ತಿನ ಪೂರೈಕೆ ಸರಪಳಿ ಮೇಲೆಯೇ ತೀವ್ರ ಪರಿಣಾಮ ಉಂಟಾಗಲಿದೆ. ಸರಕು ಸಾಗಾಟ ದರ, ಹಡಗಿನಲ್ಲಿ ಬಳಸುವ ಇಂಧನ ಮತ್ತು ವಿಮೆ ಕಂತುಗಳು ಅಲ್ಲದೆ ಇಂಧನ, ರಸಗೊಬ್ಬರ ಮತ್ತು ಸಂಚಾರದ ವೆಚ್ಚ ಏರಿಯಾದರೆ, ಜನರ ಜೀವನ ನಿರ್ವಹಣಾ ವೆಚ್ಚ ಅಧಿಕವಾಗಲಿದೆ. ಇದರಿಂದ ಸಮಾಜದ ದುರ್ಬಲ ಜನರು ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ' ಎಂದರು.

