ವಾಷಿಂಗ್ಟನ್/ ದುಬೈ (ಎಎಫ್‌ಪಿ/ಎಪಿ): 'ಇರಾನ್‌ನ ಬಂದರುಗಳನ್ನು, ಹೊರ್ಮುಜ್ ಜಲಸಂಧಿಯನ್ನು ಅಮೆರಿಕ ಹಿಡಿತಕ್ಕೆ ಪಡೆದು, ಬಳಕೆಗೆ ಮುಕ್ತಗೊಳಿಸಲಿದೆ. ಸುರಕ್ಷತೆ ಒದಗಿಸಿದ್ದಕ್ಕಾಗಿ ಹಡಗುಗಳಿಗೆ ನಾವು ಶುಲ್ಕ ವಿಧಿಸುತ್ತೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ತಿಳಿಸಿದ್ದಾರೆ.
ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಯುದ್ಧಕ್ಕೆ ಶಾಶ್ವತ ಅಂತ್ಯವಾಡುವ ಪ್ರಯತ್ನಗಳ ಬಗ್ಗೆಯೂ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿ ಅಮೆರಿಕ ಸೋಮವಾರ ನಡೆಸಿದ ದಾಳಿಸಿತು
'ಹೊರ್ಮುಜ್ ಜಲಸಂಧಿ ಮುಕ್ತವಾಗಿಯೇ ಇರಲಿದೆ. ಇರಾನ್‌ನ ತಡೆಯನ್ನು ನಾವು ತೆರವು ಮಾಡಲಿದ್ದೇವೆ. ಇದಕ್ಕೆ ದಿ ಇರಾನಿಯನ್ ಬ್ಲಾಕೇಡ್ ಎಂದು ಹೆಸರಿಸುತ್ತೇವೆ. ಇರಾನ್ ಹಡಗುಗಳನ್ನು ಮತ್ತು ಅದು ವಿಧಿಸುವ ಶುಲ್ಕವನ್ನು ನಿಲ್ಲಿಸುತ್ತೇವೆ' ಎಂದು ತಮ್ಮ ಸಾಮಾಜಿಕ ಮಾಧ್ಯಮ 'ಟ್ರುತ್'ನಲ್ಲಿ ಟ್ರಂಪ್ ಬರೆದುಕೊಂಡಿದ್ದಾರೆ.
'ಇತರೆ ಎಲ್ಲ ದೇಶಗಳ ಬಳಕೆಗೆ ಹೊರ್ಮುಜ್ ಮುಕ್ತವಾಗಿರಲಿದೆ. ಇನ್ನು ಮುಂದೆ ಅಮೆರಿಕ ಹೊರ್ಮುಜ್‌ನ 'ರಕ್ಷಕ'ನಾಗಿರಲಿದೆ' ಎಂದಿದ್ದಾರೆ.
'ಹಡಗುಗಳಿಗೆ ಸುರಕ್ಷತೆ ಮತ್ತು ಭದ್ರತೆ ಕಲ್ಪಿಸುವ ಭಾಗವಾಗಿ ಶುಲ್ಕ ಸಂಗ್ರಹಿಸುತ್ತೇವೆ. ಅಮೆರಿಕ ಎಲ್ಲ ಸರಕು ಸಾಗಣೆ ಹಡಗುಗಳಿಗೆ ಶೇ 20ರಷ್ಟು ಶುಲ್ಕವನ್ನು ಮರುಪಾವತಿ ಮಾಡಲಿದೆ. ತಕ್ಷಣದಿಂದಲೇ ಈ ಪ್ರಕ್ರಿಯೆ ಜಾರಿಗೆ ಬರಲಿದೆ' ಎಂದು ಅವರು ಹೇಳಿದ್ದಾರೆ.
ಅಮೆರಿಕ-ಇರಾನ್ ನಡುವೆ ದಾಳಿ ತೀವ್ರ :
ಹೊರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಹಡಗಿನ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಅಮೆರಿಕ ಸೋಮವಾರವೂ ಇರಾನ್ ಮೇಲೆ ಸರಣಿ ದಾಳಿಗಳನ್ನು ನಡೆಸಿದೆ. ಅದಕ್ಕೆ ಇರಾನ್ ಸಹ ಪ್ರತಿದಾಳಿ ನಡಸಿದೆ. ಅಲ್ಲದೆ, ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಿಸುವುದಾಗಿ ಎರಡೂ ದೇಶಗಳು ಪ್ರತಿಪಾದಿಸಿವೆ.
ಇರಾನ್ ವಾಯು ರಕ್ಷಣಾ ವ್ಯವಸ್ಥೆಗಳು, ರಾಡಾರ್ ನೆಲೆಗಳು, ಕ್ಷಿಪಣಿ ಮತ್ತು ಡ್ರೋನ್ ಉಪಕರಣಗಳು ಸೇರಿದಂತೆ ಡಜನ್‌ಗೂ ಹೆಚ್ಚಿನ ನೆಲೆಗಳನ್ನು ಗುರಿಯಾಗಿಸಿ ವಾಯು ದಾಳಿ ನಡೆಸಿರುವುದಾಗಿ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿದೆ. ಅಲ್ಲದೆ, ಇರಾನ್‌ನ ಕೆಲ ಸಣ್ಣ ದೋಣಿಗಳ ಮೇಲೂ ದಾಳಿ ಮಾಡಿರುವುದಾಗಿ ಅದು ತಿಳಿಸಿದೆ.
ಅಮೆರಿಕ ಸೇನೆ ನಡೆಸಿದ ಈ ವಾಯ ದಾಳಿಯಲ್ಲಿ ತನ್ನ ಒಬ್ಬ ವ್ಯಕ್ತಿ ಮೃತಪಟ್ಟಿರುವುದಾಗಿ ಇರಾನ್ ಹೇಳಿಕೊಂಡಿದೆ.
ಶಾಂತಿ ಸ್ಥಾಪನೆ ಯತ್ನಕ್ಕೆ ಹಿನ್ನಡೆ ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು ಯುದ್ಧ ಕೊನೆಗೊಳಿಸುವ ಮತ್ತು ಶಾಂತಿ ಸ್ಥಾಪಿಸುವ ಯತ್ನಕ್ಕೆ ಹಿನ್ನಡೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಮೆರಿಕ- ಇರಾನ್ ನಡುವಿನ ಯುದ್ಧ ಆರಂಭವಾದಾಗಿನಿಂದಲೂ ಈ ಜಲಸಂಧಿಯಲ್ಲಿ ಸಾಗಣೆಗೆ ಹಲವು ಬಾರಿ ಅಡ್ಡಿಯಾಗಿದೆ. ಉಭಯ ದೇಶಗಳ ನಡುವೆ ಮಧ್ಯಂತರ ಶಾಂತಿ ಒಪ್ಪಂದ ಚಾಲ್ತಿಯಲ್ಲಿ ಇರುವಾಗಲೇ ಈ ಜಲಸಂಧಿ ವಿಷಯಕ್ಕೆ ಪದೇ ಪದೇ ದಾಳಿ ಪ್ರತಿದಾಳಿಗಳು ನಡೆಯುತ್ತಿವೆ. ಈ ಪರಿಸ್ಥಿತಿ ಪೂರ್ಣ ಪ್ರಮಾಣದಲ್ಲಿ ಯುದ್ಧ ಪುನರಾರಂಭವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. ಇದು ವಿಶ್ವದ ನಾಯಕರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ. ಗುಟೆರಸ್ ಕಳವಳ: 'ಪೂರ್ಣ ಪ್ರಮಾಣದ ಯುದ್ಧಕ್ಕೆ ಮರಳವುದು ಸರಿಯಲ್ಲ. ಅದು ದುರಂತದ ಪರಿಣಾಮಗಳನ್ನು ಹೆಚ್ಚಿಸುತ್ತದೆ' ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅಮೆರಿಕ-ಇರಾನ್ ನಡುವಿನ ಉದ್ವಿಗ್ನ ಸ್ಥಿತಿ ಕಡಿಮೆ ಮಾಡಿ ಕದನ ವಿರಾಮವನ್ನು ಬಲಪಡಿಸುವ ನಿಟ್ಟಿನಲ್ಲಿ ಮಾತುಕತೆಗಳೂ ಮುಂದುವರಿದಿವೆ. ಪಾಕಿಸ್ತಾನದ ವಿದೇಶಾಂಗ ಸಚಿವರು ಇರಾನ್‌ನ ಉನ್ನತ ರಾಜತಾಂತ್ರಿಕ ಅಧಿಕಾರಿ ಜತೆಗೆ ದೂರವಾಣಿ ಮೂಲಕ ಈ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

