ವಾಷಿಂಗ್ಟನ್: ಇರಾನ್ ವಿರುದ್ಧದ ಸಂದಾನ ಮಾತುಕತೆ ವಿಫಲವಾದ ಬೆನ್ನಲ್ಲೇ ಮುನಿದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಎಲ್ಲ ಹಡಗುಗಗಳನ್ನು ತಡೆಯುವುದಾಗಿ ಹಠಕ್ಕೆ ಬಿದ್ದಿದ್ದಾರೆ. ಹೊರ್ಮುಜ್ ಕಣಿವೆಗೆ ಪ್ರವೇಶಿಸುವ ಮತ್ತು ಹೊರಬರುವ ಎಲ್ಲ ಹಡಗುಗಳನ್ನು ಕೂಡಲೇ ಅಮೆರಿಕ ನೌಕಾಪಡೆ ತಡೆಯ;ಲಿದೆ ಎಂದು ಅವರು ಘೋಷಿಸಿದ್ದಾರೆ.
'ಇರಾನ್‌ಗೆ ಸುಂಕ ಪಾವತಿಸಿರುವ ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿರುವ ಪ್ರತಿಯೊಂದು ಹಡಗನ್ನು ಹುಡುಕಿ ನಿಷೇಧಿಸಲು ನಮ್ಮ ನೌಕಾಪಡೆಗೆ ಸೂಚನೆ ನೀಡಿದ್ದೇನೆ'ಎಂದು ಅಧ್ಯಕ್ಷರು ಹೇಳಿದ್ದಾರೆ. ಅಕ್ರಮ ಸುಂಕ ಪಾವತಿಸುವ ಯಾರಿಗೂ ಸಮುದ್ರದಲ್ಲಿ ಸುರಕ್ಷಿತ ಮಾರ್ಗವಿರುವುದಿಲ್ಲ ಎಂದಿದ್ದಾರೆ.
ಸೂಕ್ತ ಸಂದರ್ಭದಲ್ಲಿ ಇರಾನ್ ಅನ್ನು ಮುಗಿಸಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿರುವ ಟ್ರಂಪ್, ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನ ವೈಫಲ್ಯಕ್ಕೆ ಇರಾನ್‌ನ ಪರಮಾಣು ಮಹತ್ವಾಕಾಂಕ್ಷೆಗಳು ಮೂಲ ಕಾರಣ ಎಂದು ಒತ್ತಿ ಹೇಳಿದ್ದಾರೆ.
ಪರಮಾಣು ಶಸ್ತ್ರಾಸ್ತ್ರದ ಮಾರ್ಗವನ್ನು ತ್ಯಜಿಸಲು ಇರಾನ್ ನಿರಾಕರಿಸಿದ್ದರಿಂದ ಮಾತುಕತೆ ವಿಫಲವಾಯಿತು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಆದರೆ, ಇರಾನಿನ ಅಧಿಕಾರಿಗಳು ಅಮೆರಿಕದ ಅತಿಯಾದ ಬೇಡಿಕೆ ಮಾತುಕತೆ ಮುರಿದುಬೀಳಲು ಕಾರಣ ಎಂದಿದ್ದಾರೆ.
ನಮ್ಮ ಅಂತಿಮ ಮತ್ತು ಅತ್ಯುತ್ತಮ ಆಫರ್ ಅನ್ನುಇರಾನ್‌ಗೆ ಕೊಟ್ಟಿದ್ದೇವೆ. ಇರಾನಿಯನ್ನರು ಅದನ್ನು ಸ್ವೀಕರಿಸುತ್ತಾರೆಯೇ ಎಂದು ನಾವು ಕಾದುನೋಡುತ್ತೇವೆ ಎಂದು ವ್ಯಾನ್ಸ್ ಮಾತುಕತೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಮಾರು ಒಂದು ಗಂಟೆಯ ನಂತರ ಅವರು ನಿರ್ಗಮಿಸಿದ್ದಾರೆ.
ಇದು ಅಮೆರಿಕವು ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಸಮಯವಿದು ಎಂದು ಇರಾನ್ ಹೇಳಿದೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್ ಮತ್ತು ಅಮೆರಿಕ ನಡುವಿನ ಮೊದಲ ನೇರ, ಉನ್ನತ ಮಟ್ಟದ ಮಾತುಕತೆ ಇದಾಗಿತ್ತು.
ಕಳೆದ 24 ಗಂಟೆಗಳಲ್ಲಿ ಹಲವು ಸುತ್ತಿನ ತೀವ್ರ ಮತ್ತು ರಚನಾತ್ಮಕ ಚರ್ಚೆಗಳಿಗೆ ತಮ್ಮ ದೇಶವು ಮಧ್ಯಸ್ಥಿಕೆ ವಹಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ದರ್ ಹೇಳಿದ್ದಾರೆ.
ಫೆಬ್ರುವರಿ 28ರಂದು ಅಮರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ ಸರ್ವೋಚ್ಚ ನಾಯಕ ಅಯಾತೊಲ್ಲಾ ಖಮೇನಿಯನ್ನು ಕೊಂದ ಬಳಿಕ ಸಂಘರ್ಷ ತೀವ್ರಗೊಂಡಿತ್ತು. ತಿರುಗಿಬಿದ್ದಿದ್ದ ಇರಾನ್, ಗಲ್ಫ್‌ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ದಾಳಿ ನಡೆಸುವ ಜೊತೆಗೆ ಹೊರ್ಮುಜ್ ಜಲಸಂಧಿಗೆ ಐತಿಹಾಸಿಕ ದಿಗ್ಬಂಧನ ವಿಧಿಸಿತ್ತು. ಇದರಿಂದ ಜಾಗತಿಕ ತೈಲ ಬಿಕ್ಕಟ್ಟು ಉಂಟಾಗಿತ್ತು.
ಆದಾದ ಬಳಿಕ ಏಪ್ರಿಲ್ 7 ರಂದು ಉಭಯ ದೇಶಗಳು ಎರಡು ವಾರಗಳ ಕದನ ವಿರಾಮ ಘೋಷಿಸುವ ಮೂಲಕ ಯುದ್ಧ ಅಂತ್ಯಕ್ಕೆ ಮಾತುಕತೆಗೆ ಮುಂದಾಗಿದ್ದವು. ಇದೀಗ, ಆ ಮಾತುಕತೆಯೂ ಮುರಿದುಬಿದ್ದಿದೆ.

