Thursday, 04 Mar, 9.26 am ಪ್ರಜಾವಾಣಿ

ಜಿಲ್ಲೆ
ಹೊಸ ಪಶು ವಿವಿ ಪ್ರಸ್ತಾವ ಕೈಬಿಡಲು ಆಗ್ರಹ

ಬೀದರ್: ಮುಖ್ಯಮಂತ್ರಿ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇನ್ನೊಂದು ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಗೆ ತಯಾರಿ ನಡೆದಿದೆ ಎನ್ನುವ ವಿಚಾರವು ಜಿಲ್ಲೆಯಲ್ಲಿ ಹೋರಾಟದ ಕಿಚ್ಚು ಹೊತ್ತಿಸಿದೆ.

ಜನತಾ ಹೂವು ಮಾರಾಟಗಾರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ನಗರದಲ್ಲಿ ಬುಧವಾರ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.

ಡಾ. ನಂಜುಂಡಪ್ಪ ವರದಿಯ ಶಿಫಾಸಿನ ಮೇರೆಗೆ ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೀದರ್‌ನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಇದರ ಅಡಿಯಲ್ಲಿ ಐದು ಪಶು ವೈದ್ಯಕೀಯ ಮಹಾವಿದ್ಯಾಲಯ, ಎರಡು ಹೈನು ಮಹಾವಿದ್ಯಾಲಯ, ಒಂದು ಮೀನುಗಾರಿಕೆ ಮಹಾವಿದ್ಯಾಲಯ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗಳು ಇವೆ ಎಂದು ತಿಳಿಸಿದರು.

ಹಿಂದುಳಿದ ಪ್ರದೇಶದ ಅಭಿವೃದ್ಧಿಗಾಗಿಯೇ ವಿಶ್ವವಿದ್ಯಾಲಯ ಸ್ಥಾಪಿಸಿದರೂ ವಿಶ್ವವಿದ್ಯಾಲಯದ ಕೇಂದ್ರ ಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ದೂರಿದರು.

ಮುಖ್ಯಮಂತ್ರಿ ಅವರು ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬಜೆಟ್‍ನಲ್ಲಿ ಅನುದಾನ ಒದಗಿಸಬೇಕು. ಶಿವಮೊಗ್ಗದಲ್ಲಿ ಎರಡನೇ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎನ್ನುವ ಕೂಗು ಕೇಳಿ ಬರುತ್ತಿದ್ದು, ಅಂತಹ ಪ್ರಸ್ತಾವವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಕೃಷಿ ಶೈಕ್ಷಣಿಕ ಕರಡು ವರದಿ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರ ಯಾವುದೇ ಹೊಸ ಪಶು, ಕೃಷಿ, ಮೀನುಗಾರಿಕೆ, ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸುವಂತಿಲ್ಲ. ಇರುವ ವಿಶ್ವವಿದ್ಯಾಲಯಗಳನ್ನೇ ಸದೃಢಗೊಳಿಸಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಿದರು.

ಹೊಸ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಈ ಭಾಗಕ್ಕೆ ಅನ್ಯಾಯವಾಗಲಿದೆ. ಹಾಗಾದಲ್ಲಿ ಬರುವ ದಿನಗಳಲ್ಲಿ ಸಂಘಟನೆಗಳು ಹೋರಾಟದ ದಾರಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಜನತಾ ಹೂವು ಮಾರಾಟಗಾರರ ಸಂಘದ ಅಧ್ಯಕ್ಷ ಸಿದ್ದಪ್ಪ ಫುಲಾರಿ, ಮುಖಂಡರಾದ ರಮೇಶ ಬಿರಾದಾರ್, ರಾಜೇಶ ಕುಲಕರ್ಣಿ, ಸಂತೋಷ ಚಟ್ಟೆ, ಗುರುನಾಥ ವಡ್ಡೆ, ವೀರಭದ್ರಪ್ಪ ಉಪ್ಪಿನ್, ಭಗವಾನ್, ಶ್ರೀನಿವಾಸ ಚಿಲ್ಲರ್ಗಿ, ಮಾರುತಿ ಕಂಟಿ, ಶ್ರೀದೇವಿ ಪಾಲ್ಗೊಂಡಿದ್ದರು.

'ಪಶು ವಿವಿ ವಿಭಜನೆ ಬೇಡ'
ಬೀದರ್:
ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ವಿಭಜಿಸದೆ ಯಥಾವತ್ತಾಗಿ ಮುಂದುವರಿಸಬೇಕು ಎಂದು ಬೀದರ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ್ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಅವರು, 'ಶಿವಮೊಗ್ಗದಲ್ಲಿ ಇನ್ನೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರವನ್ನು ಕೈಬಿಡಬೇಕು. 16 ವರ್ಷಗಳ ಬೀದರ್‌ ವಿವಿ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ವಿವಿಧ ಸೌಕರ್ಯ ಗಳನ್ನು ಒದಗಿಸುವ ಬದಲು ವಿಶ್ವವಿದ್ಯಾಲಯ ವಿಭಜಿಸಲು ಹೊರಟಿರುವ ಕ್ರಮವು ಸಮಯೋಚಿತವಲ್ಲ' ಎಂದಿದ್ದಾರೆ.

'ಇನ್ನೊಂದು ವಿಶ್ವವಿದ್ಯಾಲಯ ಸ್ಥಾಪಿಸುವ ನಿರ್ಧಾರ ಕೈಬಿಡಬೇಕು. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಆಗುವ ಅನ್ಯಾಯ ತಡೆಯಬೇಕು' ಎಂದು ಆಗ್ರಹಿಸಿದ್ದಾರೆ.

'ಪಶು ಸಂಗೋಪನಾ ಸಚಿವರು ಜಿಲ್ಲೆಗೆ ನ್ಯಾಯ ಕೊಡಿಸಲಿ'
ಬೀದರ್:
ಶಿವಮೊಗ್ಗದಲ್ಲಿ ಇನ್ನೊಂದು ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಿದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಎಚ್ಚರಿಸಿದ್ದಾರೆ.

ಎನ್. ಧರ್ಮಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಹಿಂದುಳಿದ ಬೀದರ್ ಜಿಲ್ಲೆಯಲ್ಲಿ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪಿಸಿದ್ದರು. ಆದರೆ, ಇದೀಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದ ಪುತ್ತೂರಿನಲ್ಲಿ ಮತ್ತೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಇನ್ನೊಂದು ಪಶು ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಿದರೆ ಶೇ 70 ರಷ್ಟು ಅಂಗ ಸಂಸ್ಥೆಗಳು ಅದರ ಅಧೀನಕ್ಕೆ ಹೋಗಲಿದ್ದು, ಬೀದರ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಶೇ 30 ರಷ್ಟು ಮಾತ್ರ ಉಳಿಯಲಿವೆ. ಇದರಿಂದಾಗಿ ಬೀದರ್ ಜಿಲ್ಲೆಗೆ ಘೋರ ಅನ್ಯಾಯವಾಗಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯವರೇ ಆದ ಪ್ರಭು ಚವಾಣ್ ಪಶು ಸಂಗೋಪನಾ ಸಚಿವರಿದ್ದಾರೆ. ಕೂಡಲೇ ಹೊಸ ವಿಶ್ವವಿದ್ಯಾಲಯದ ಪ್ರಸ್ತಾವ ಕೈ ಬಿಡುವಂತೆ ನೋಡಿಕೊಂಡು ಜಿಲ್ಲೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲೇ ಬೀದರ್ ಅತ್ಯಂತ ಹಿಂದುಳಿದಿದೆ. ಜಿಲ್ಲೆಗೆ ಹಿಂದಿನಿಂದಲೂ ಮಲತಾಯಿ ಧೋರಣೆ ತೋರುತ್ತ ಬರಲಾಗಿದೆ. ಈ ಭಾಗದ ಅಭಿವೃದ್ಧಿಗೆ ಪೂರಕವಾದ ವಿಶ್ವವಿದ್ಯಾಲಯವನ್ನು ವಿಭಜಿಸುವುದು ಸರಿಯಲ್ಲ. ಒಂದು ವೇಳೆ ಸರ್ಕಾರ ಇನ್ನೊಂದು ವಿಶ್ವ ವಿದ್ಯಾಲಯ ಘೋಷಿಸಿದರೆ ಈ ಭಾಗದ ಜನ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top