ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ ಹೊಸ ಉದ್ಯಮ ಶುರು ಮಾಡಿದ್ದಾರೆ. ಅಪ್ಪ ತಮ್ಮನ್ನು ಕರೆಯುತ್ತಿದ್ದ ಹೆಸರನ್ನೇ ಇಟ್ಟು 'ನುಕಾಸ್ ಕೆಫೆ' ಎಂಬ ಆನ್‌ಲೈನ್ ಬೇಕಿಂಗ್ ಉದ್ಯಮವನ್ನು ಆರಂಭಿಸಿದ್ದಾರೆ.

ವಂದಿತಾ ಅವರ ನುಕಾಸ್ ಕೆಫೆ
ಈ ಬಗ್ಗೆ ವಂದಿತಾ ಪುನೀತ್ ರಾಜ್‌ಕುಮಾರ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೊ ಹಾಕಿ ಆರ್ಡರ್ ಮಾಡಿ ಎಂದು ಲಿಂಕ್ ಹಂಚಿಕೊಂಡಿದ್ದರು.
ಬೇಕಿಂಗ್ ಮೇಲಿನ ತಮ್ಮ ಆಸಕ್ತಿಯನ್ನು ಉದ್ಯಮವನ್ನಾಗಿಸಿಕೊಂಡ ವಂದಿತಾ, ತಿರಮಿಸು, ಬ್ರೌನಿ, ಚೀಸ್ ಕೇಕ್ ಸೇರಿದಂತೆ ಹಲವು ಸಿಹಿ ತಿನಿಸುಗಳನ್ನು ಸ್ವತಃ ತಯಾರಿಸಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಹೆಚ್ಚಿನ ಆರ್ಡರ್‌ಗಳು ಬಂದರೆ ಡೆಲಿವರಿ ತಡವಾಗುವ ಸಾಧ್ಯತೆ ಇದೆ ಎಂದು ಮೊದಲೇ ತಿಳಿಸಿದ್ದಾರೆ.
ಅಂದಹಾಗೆ ಅಪ್ಪು ಅವರು ಪ್ರೀತಿಯಿಂದ ಮಗಳಿಗೆ ನುಕಾ ಎಂದು ಕರೆಯುತ್ತಿದ್ದರು. ಈಗ ಅಪ್ಪ ತಮಗೆ ಇಟ್ಟ ಹೆಸರಿನಿಂದಲೇ ಉದ್ಯಮ ಆರಂಭಿಸಿರುವ ವಂದಿತಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ.
ವಿಶೇಷ ಎಂದರೆ ಇತ್ತೀಚೆಗಷ್ಟೆ ತಮ್ಮ ಸಹೋದರ ವಿನಯ್ ರಾಜ್‌ಕುಮಾರ್ ಅವರ 'ಗ್ರಾಮಾಯಣ' ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ವಂದಿತಾ ಅವರು ಅಣ್ಣನಿಗಾಗಿ ವಿಶೇಷ ಕೇಕ್ ತಯಾರಿಸಿದ್ದರು. ಅದರ ಮೇಲೆ 'ಗ್ರಾಮಾಯಣ' ಎಂದು ಸಹ ಬರೆದಿದ್ದರು. ಈ ಫೋಟೊವನ್ನು ವಿನಯ್ ರಾಜ್‌ಕುಮಾರ್ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡು 'ನಾನು ಮಾಡುವ ಕೆಲಸಕ್ಕೆಲ್ಲ ಇಂಥಾ ಪ್ರೀತಿ ಸಿಕ್ಕರೆ, ಅದನ್ನು ನಾನು ನೂರು ಬಾರಿ ಮತ್ತೆ ಮಾಡುವೆ' ಎಂದು ಬರೆದು ವಂದಿತಾ ಅವರನ್ನು ಟ್ಯಾಗ್ ಮಾಡಿದ್ದರು.

