ಹೊಸದುರ್ಗ: ಪಟ್ಟಣದ ಹೊಳಲ್ಕೆರೆ ರಸ್ತೆಯ ಹೋಂಡಾ ಶೋ ರೂಂ ಪಕ್ಕದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಜೆಲ್ಲಿ ಕಲ್ಲುಗಳನ್ನು ಹಾಕಿ ತಿಂಗಳುಗಳೇ ಕಳೆದಿವೆ. ಆದರೆ ಇನ್ನೂ ರಸ್ತೆ ಮಾಡಿಲ್ಲ. ಇದರಿಂದ ವಾಹನ ಸವಾರರಿಗೆ ಸಂಚಕಾರ ಎದುರಾಗಿದೆ.
ಈ ಬಡಾವಣೆಯಲ್ಲಿ ರಸ್ತೆ ನಿರ್ಮಾಣಕ್ಕಾಗಿ 500 ಮೀಟರ್‌ನಷ್ಟು ದೂರದವರೆಗೆ ಜೆಲ್ಲಿ ಕಲ್ಲುಗಳನ್ನು ಹಾಕಲಾಗಿದೆ.
ಸದ್ಯ 3ರಿಂದ 4 ತಿಂಗಳೇ ಕಳೆದಿವೆ. ಆದರೂ ಯಾವ ಅಧಿಕಾರಿಗಳೂ ಈ ಬಗ್ಗೆ ಗಮನಹರಿಸಿಲ್ಲ. ನಿತ್ಯ ಶಾಲೆ- ಕಾಲೇಜುಗಳಿಗೆ, ವಿವಿಧ ಕೆಲಸಗಳಿಗೆ ತೆರಳುವ ಹತ್ತಾರು ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.
ರಸ್ತೆ ಪಕ್ಕದಲ್ಲಿ ಚರಂಡಿಗಳಿದ್ದು, ಸುತ್ತಲೂ ಗಿಡಗಂಟಿಗಳು ಆವರಿಸಿವೆ. ಚರಂಡಿ ಇರುವುದೇ ತಿಳಿಯದಂತಾಗಿದೆ. ಒಮ್ಮೆ ಒಂದೇ ವಾಹನ ಸಂಚಾರ ಮಾಡಬಹುದು. ಹಿಂದೆ ಮತ್ತೊಂದು ವಾಹನ ಬಂದರೆ, ದೂಳು, ಕಿರಿಕಿರಿ, ಕಲ್ಲುಗಳು ಮುಖಕ್ಕೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಎಷ್ಟೋ ಜನರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಪಾದಚಾರಿಗಳಂತೂ ಈ ಮಾರ್ಗದಲ್ಲಿ ಭಯದಿಂದಲೇ ಓಡಾಡುವಂತಹ ದುಃಸ್ಥಿತಿಯಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಸೂಕ್ತ ಪರಿಹಾರ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-44-1726089959

