Dailyhunt Logo
  • Light mode
    Follow system
    Dark mode
    • Play Story
    • App Story
ಹೃದಯದ ಬೆಳವಣಿಗೆ

ಹೃದಯದ ಬೆಳವಣಿಗೆ

ಅಮೃತೇಶ್ವರಿ ಬಿ.

ನಾವು ಹುಟ್ಟಿದಾಗಿನಿಂದ ನಮ್ಮ ಜೀವನದುದ್ದಕ್ಕೂ ಎಡೆಬಿಡದೆ ಕೆಲಸ ಮಾಡುತ್ತಲೇ ಇರಬೇಕಾದ ಅಂಗ ಹೃದಯ. ಇಂತಹ ಅತ್ಯಮೂಲ್ಯ ಅಂಗ ಹುಟ್ಟಿ, ಬೆಳೆದು, ಒಂದು ಹಂತದ ನಂತರ ಆ ಬೆಳವಣಿಗೆಯ ಪ್ರಕ್ರಿಯೆ ನಿಂತು ಪಕ್ವವಾಗಬೇಕಲ್ಲವೇ? ಹುಟ್ಟಿದಾಗಿನಿಂದ ಪ್ರತಿ ಕೋಶಗಳೂ ಬೆಳೆಯುತ್ತಲೇ ಇದ್ದರೆ, ಸಾಯುವವರೆಗೆ ನಮ್ಮ ದೇಹದ ಗಾತ್ರ ಎಷ್ಟಿರುತ್ತಿತ್ತು‌, ಅಲ್ಲವೇ?

ಯಾವುದೇ ಅಂಗ ಬೆಳೆಯಬೇಕಾದರೆ ಕೋಶಗಳ ವಿಭಜನೆ ಆಗಬೇಕು. ಪ್ರತಿ ಜೀವಕೋಶವೂ ಎರಡಾಗಿ ಎರಡು ನಾಲ್ಕಾಗಿ ವಿಭಜನೆಯಾಗುತ್ತಾ ಅಂಗಗಳು ದೊಡ್ಡದಾಗುತ್ತವೆ. ಹೃದಯದ ಕೋಶಗಳೂ ಹಾಗೆಯೇ. ಆದರೆ ಇವು ಬೆಳೆಬೆಳೆಯತ್ತಾ ಯಾವ ಹಂತದಲ್ಲಿ ಕೋಶವಿಭಜನೆಯನ್ನು ನಿಲ್ಲಿಸುತ್ತವೆ; ಜೀವನದುದ್ದಕ್ಕೂ ಬಡಿಯುತ್ತಿರಲು ಬೇಕಾದ ಗುಣಲಕ್ಷಣಗಳು ಮತ್ತು ಶಕ್ತಿಯನ್ನು ಹೇಗೆ ಪಡೆದುಕೊಳ್ಳುತ್ತವೆ ಎಂದು ಅರ್ಥಮಾಡಿಕೊಳ್ಳುವುದು ಹೃದಯತಜ್ಞರಿಗೆ ಸವಾಲಾಗಿತ್ತು.

ಹೃದಯತಜ್ಞರು ಈ ಸಂಶೋಧನೆಯಲ್ಲಿ ತೊಡಗಿದ್ದರು. ಈಗ ಫಲಿತಾಂಶ ದೊರಕಿದೆ. ಕ್ಯೋಟೋ ವಿಶ್ವವಿದ್ಯಾಲಯ ಹಾಗೂ ಒಸಾಕ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೃದಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ಸುಳಿವನ್ನು ಪತ್ತೆ ಹಚ್ಚಿ ಹೃದಯವಿಜ್ಞಾನದಲ್ಲಿ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಅದುವೇ 'PRDM16' ಎನ್ನುವ ಜೀನ್‌ಗಳಿಗೆ ಸಂಬಂಧಿಸಿದ ಪ್ರೋಟೀನ್‌. ಈ ಪ್ರೋಟೀನು ಮನುಷ್ಯನ ಹೃದಯದ ಕೋಶಗಳಲ್ಲಿರುವ, ಆ ಕೋಶಗಳಲ್ಲಾಗುವ ಎಲ್ಲ ಹಂತದ ಬದಲಾವಣೆಗಳನ್ನು ನಿಯಂತ್ರಿಸುವ ಪ್ರೋಟೀನ್‌ ಎನ್ನುತ್ತಾರೆ, ಸಂಶೋಧಕರಾದ ಯೋಶಿನೋರಿ ಯೋಶಿಡಾ ಮತ್ತು ಸಂಗಡಿಗರು.

ಈ PRDM16ನ ಪ್ರಮಾಣ ಹೃದಯದಲ್ಲಿ ಕಡಿಮೆಯಿದ್ದರೆ ಹೃದಯದ ಸ್ನಾಯುಕೋಶಗಳು ಬೆಳವಣಿಗೆಯಾಗುತ್ತಿರುತ್ತವೆ. PRDM16ನ ಪ್ರಮಾಣ ಹೆಚ್ಚಾದಾಗ ಹೃದಯಕ್ಕೆ ರಚನಾತ್ಮಕ ಹಾಗೂ ಕ್ರಿಯಾತ್ಮಕ ಸಾಮರ್ಥ್ಯವನ್ನು ಒದಗಿಸಿ ಹೃದಯದ ಕೋಶಗಳು ಬಲಿತು ಸದೃಢವಾಗುತ್ತವೆ. ಅರ್ಥಾತ್‌, ಆಗ ಹೃದಯದ ಗಾತ್ರ ದೊಡ್ಡದಾಗುವುದು ನಿಲ್ಲುತ್ತದೆ. PRDM16 ಪ್ರೋಟೀನನ್ನು ನೀವು ಒಂದು 'ಡಿಮ್ಮರ್‌ ಸ್ವಿಚ್‌' ಎಂದು ಭಾವಿಸಬಹುದು. ಇವು ಹೃದಯಕೋಶಗಳ ಕಾರ್ಯವನ್ನು ಅಗತ್ಯಕ್ಕೆ ತಕ್ಕಂತೆ ಆನ್‌ ಅಥವಾ ಆಫ್‌ ಮಾಡಬಲ್ಲದು.

ಗರ್ಭಾವಸ್ಥೆಯಲ್ಲಿ ಹೃದಯ ಇನ್ನೂ ಬೆಳೆಯುತ್ತಿರುತ್ತವೆ. ಆಗ ಹೃದಯಕೋಶಗಳು ಯಥೇಚ್ಛವಾಗಿ ವಿಭಜನೆಯಾಗಿ ಹೃದಯವನ್ನು ಬೆಳೆಸುತ್ತವೆ. ಭ್ರೂಣದ ಜನನದ ನಂತರ ತಕ್ಷಣವೇ, ವಿಭಜನಾಕಾರ್ಯವನ್ನು ನಿಲ್ಲಿಸಿ, ಜೀವನದುದ್ದಕ್ಕೂ ಸಂಕೋಚನವಾಗುವಂತೆ, ಸರಿಯಾದ ರೀತಿಯಲ್ಲಿ ಬಡಿದುಕೊಳ್ಳುತ್ತಾ, ರಕ್ತದ ಸರಬರಾಜು ಕೆಲಸದಲ್ಲಿಯೂ ಕಾರ್ಯೋನ್ಮುಖವಾಗುವಂತೆ ವಿಶೇಷ ಕಾರ್ಯವೈಖರಿಯನ್ನು ಹೃದಯಕ್ಕೆ ನೀಡಲಾರಂಭಿಸುತ್ತವೆ. ಹೃದಯವು ಈ ಪರಿಪಕ್ವವಾಗುವ ಹಂತದಲ್ಲಿ, ಮನುಷ್ಯನ ಹೃದಯಕ್ಕೆ ಪುನರುಜ್ಜೀವನ ಮಾಡುವ ಶಕ್ತಿ ಇಲ್ಲವಾಗಿಬಿಡುತ್ತದೆ! ವಯಸ್ಸಾಗುತ್ತಿದ್ದಂತೆ ಗುಣಮುಖರಾಗುವ ಸಾಧ್ಯತೆ ಕಡಿಮೆಯಾಗುವುದು ಇದೇ ಕಾರಣಕ್ಕೆ. ಯಾವುದೇ ಅಂಗವೂ ಎಲ್ಲ ಕೆಲಸಗಳನ್ನೂ ಒಟ್ಟಾಗಿ ಮಾಡಲಾಗುವುದಿಲ್ಲವಲ್ಲ? ಆಗ ಆಘಾತಗಳಾಗುವ ಅಪಾಯವೂ ಹೆಚ್ಚು. ಇತ್ತೀಚೆಗೆ ಭಾರತವು 'ಹೃದ್ರೋಗಿಗಳ ರಾಜಧಾನಿ'ಯಾಗುತ್ತಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಅಧ್ಯಯನ ಅನಿವಾರ್ಯ. ಹೃದಯವನ್ನು ಪುನರುಜ್ಜೀವನಗೊಳಿಸುವ ಚಿಕಿತ್ಸೆಗಳು ಯಶಸ್ವಿಯಾಗಬೇಕಾದರೆ ಮೂಲಭೂತ ವಿಷಯಗಳಲ್ಲಿನ ಗೊಂದಲಗಳ ನಿವಾರಣೆಯಾಗಬೇಕು.

ಇತ್ತೀಚೆಗೆ ವಿಜ್ಞಾನಿಗಳು 'iPS - induced Pluripotent Stem cells'ಗಳನ್ನು ಬಳಸಿಕೊಂಡು ಹೃದಯದ ಕೋಶಗಳನ್ನು ತಯಾರಿಸಿದ್ದರು. 'iPS' ಎಂದರೆ ವಯಸ್ಕ ಮನುಷ್ಯ ದೇಹದ ಸಾಮಾನ್ಯ ಕೋಶಗಳನ್ನು ಸ್ಟೆಮ್‌ ಕೋಶಗಳಾಗಿ ರೀಪ್ರೋಗ್ರಾಮ್‌ ಮಾಡುವುದು. ಸ್ಟೆಮ್‌ ಕೋಶಗಳು ಒಂದು ವಿಶೇಷ ರೀತಿಯ ಕೋಶಗಳು. ಅವನ್ನು ವಿಭಜಿಸಿ ಅದೇ ರೀತಿಯ ಕೋಶಗಳನ್ನಾಗಿ ಬೆಳೆಸಬಹುದು ಅಥವಾ ಬೇರೆಯದೇ ಕೋಶಗಳಾಗಿ ಪರಿವರ್ತಿಸಿ ಬೆಳೆಸಬಹುದು. ಅವುಗಳಿಂದ ಕೃತಕ ಅಂಗ ಮಾದರಿಗಳನ್ನು ತಯಾರಿಸಿ ಅಧ್ಯಯನ ಮಾಡಲು ಬಳಸಿಕೊಳ್ಳಲಾಗುತ್ತದೆ. ಹೊಸ ಚಿಕಿತ್ಸೆಗಳನ್ನೂ ಪತ್ತೆ ಹಚ್ಚಲು ನೆರವಾಗುತ್ತದೆ. ಇಂತಹ ಕೋಶಗಳನ್ನು ಬಳಸಿಕೊಂಡು ನಮ್ಮ ಹೃದಯತಜ್ಞರು ಹೃದಯದ ಕೋಶಗಳನ್ನೂ ರಚಿಸಿದ್ದರಂತೆ. ಆದರೆ ಅವು ಬಲಿಯದೆ ಎಳೆಯದಾಗಿಯೇ ಉಳಿದುಕೊಂಡವಂತೆ. ಹಾಗಾಗಿ ಇವನ್ನು ಮುಂದುವರಿದ ಸಂಶೋಧನೆಗಳಿಗೆ ಬಳಸಿಕೊಳ್ಳಲು ಅಸಾಧ್ಯವಾಗಿತ್ತು. ಹಾಗಾಗಿ ಹೃದಯದ ಬೆಳವಣಿಗೆ ಹಾಗೂ ಬಲಿತು ಸದೃಢವಾಗುವ ಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವುದು ರೀಜನರೇಟಿವ್‌ ಮೆಡಿಸಿನ್‌ ಕೇತ್ರದ ಮುಖ್ಯ ಗುರಿ. 'ರೀಜನರೇಟಿವ್‌ ಮೆಡಿಸಿನ್‌' ಎಂದರೆ ಕೇವಲ ರೋಗಲಕ್ಷಣಗಳನ್ನು ಗುಣಪಡಿಸುವುದು ಮಾತ್ರವಲ್ಲದೇ ಅಂಗಗಳನ್ನು ದುರಸ್ತಿಗೊಳಿಸಿ, ಅಥವಾ ಬದಲಾಯಿಸಿ ಅಥವಾ ಹಾಳಾಗಿರುವ ಅಂಗಗಳನ್ನು ಮತ್ತೆ ಹೊಸದಾಗಿ ಬೆಳೆಯುವಂತೆ ಮಾಡುವತ್ತ ಚಿಕಿತ್ಸೆ ನೀಡುವ ಒಂದು ವಿಭಾಗ.

ಇಂತಹ ಒಂದು ಪ್ರಮುಖ ಅಧ್ಯಯನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದೇ PRDM16 ಪ್ರೋಟೀನ್‌. ಸಂಶೋಧಕರು ಈ ಪ್ರೋಟೀನಿನ ಕಾರ್ಯವನ್ನು ಪರೀಕ್ಷಿಸಿ ನೋಡಿದ್ದಾರಂತೆ. ಅದರ ಪ್ರಮಾಣವನ್ನು ತಗ್ಗಿಸಿದಾಗ, ವಯಸ್ಕ ಹೃದಯದ ಮಾದರಿಯಲ್ಲಿಯೂ ಹೃದಯದ ಕೋಶಗಳು ಮತ್ತೆ ವಿಭಜನೆಯಾಗಿ ಬೆಳೆಯುವುದನ್ನು ಮುಂದುವರಿಸಿದವಂತೆ! ಆಗ ಬಲಿತ ಹೃದಯದ ಗುಣಲಕ್ಷಣಗಳು ಇಲ್ಲದಾಗಿ ಎಳೆಯ ಹೃದಯದಂತಾಗಿಬಿಟ್ಟಿತಂತೆ! ಅರ್ಥಾತ್‌, PRDM16 ಪ್ರೋಟೀನು ಬೆಳವಣಿಗೆ ಮತ್ತು ವಿಶಿಷ್ಟ ಶಕ್ತಿ ಪಡೆಯುವ ಹಂತಗಳನ್ನು ಸಂಭಾಳಿಸುವ ಆಣ್ವಿಕ ರಕ್ಷಣಾಬಿಂದು. ಅದಕ್ಕಾಗಿ PRDM16 ಪ್ರೋಟೀನುಗಳ ಜೀನೋಮಿಕ್‌ ಟಾರ್ಗೆಟ್‌, ಅವುಗಳ ಕಾರ್ಯವೈಖರಿ, ಮತ್ತು ಹೃದಯದ ಬೆಳವಣಿಗೆಯ ದಾರಿಯುದ್ದಕ್ಕೂ ಆಗುವ ಅದರ ನಿಯಂತ್ರಣ ಚಟುವಟಿಕೆಗಳಲ್ಲಿನ ಬದಲಾವಣೆಗಳನ್ನು ಅರಿಯಬೇಕು. ಈ ಸಮತೋಲನದ ಗುಟ್ಟನ್ನು ಅರ್ಥ ಮಾಡಿಕೊಂಡರೆ ಹೃದ್ರೋಗಗಳ ಅಧ್ಯಯನ, ಹೊಸ ಔಷಧಗಳ ಪರೀಕ್ಷೆ, ರೋಗಕ್ಕೆ ತುತ್ತಾಗಿರುವ ಹೃದಯಗಳ ದುರಸ್ತಿ, ಹಾಗೂ ಮುಖ್ಯವಾಗಿ ಇವೆಲ್ಲವನ್ನೂ ಅಧ್ಯಯನ ಮಾಡಲು ಬೇಕಾದ ಉತ್ತಮ ಗುಣಮಟ್ಟದ ಕೃತಕ ಹೃದಯದ ಮಾದರಿಗಳನ್ನು ತಯಾರಿಸುವುದು ಸುಲಭ. ಇದು ಸಾಧ್ಯವಾದರೆ, ಹೃದ್ರೋಗದ ಸವಾಲುಗಳನ್ನು ಬಗೆಹರಿಸಿ ಜನರ ಹೃದಯಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು ಎನ್ನುವುದು ವಿಜ್ಞಾನಿಗಳ ಆಶಯ.

261104-51-497166863

Dailyhunt
Disclaimer: This content has not been generated, created or edited by Dailyhunt. Publisher: Prajavani