ಹುಣಸೂರು: 'ಗ್ರಾಮೀಣ ಭಾಗದಲ್ಲಿ ಅಸ್ಪೃಶ್ಯತೆ ಇಂದಿಗೂ ಜೀವಂತವಿದ್ದು, ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳಬೇಕು' ಎಂದು ದಸಂಸ ಮುಖಂಡ ನಿಂಗರಾಜ್ ಮಲ್ಲಾಡಿ ಆಗ್ರಹಿಸಿದರು.
ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಉಪವಿಭಾಗ ಮಟ್ಟದ ಎಸ್‌ಸಿ ಮತ್ತು ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
'ತೊಂಡಾಳು ಗ್ರಾಮದಲ್ಲಿ ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರ ಕಾರ್ಯ ಶ್ಲಾಘನೀಯ. ಇದೇ ಮಾದರಿ ಪ್ರತಿಯೊಂದು ಘಟನೆಯಲ್ಲೂ ಆರೋಪಿಗಳನ್ನು ಶಿಕ್ಷಿಸುವಂತಹ ಕೆಲಸ ಆಗಬೇಕು' ಎಂದು ಮನವಿ ಮಾಡಿದರು.
ನಿಲುವಾಗಿಲು ಪ್ರಭಾಕರ್ ಮಾತನಾಡಿ, 'ಗ್ರಾಮದಲ್ಲಿ ನಾಯಕ ಸಮುದಾಯದವರ ಸ್ಮಶಾನಕ್ಕೆ ನಿಗದಿಯಾಗಿದ್ದ ಭೂಮಿ ಸಾಗುವಳಿ ಮಾಡಲಾಗುತ್ತಿದೆ. ಕಂದಾಯ ಇಲಾಖೆ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಬೇಕು. ನರಸಿಂಹಸ್ವಾಮಿ ಬಡಾವಣೆಯ ಮಹಿಳೆ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ' ಎಂದು ಆರೋಪಿಸಿದರು.
ಕಿರಂಗೂರು ಸ್ವಾಮಿ ಮಾತನಾಡಿ, 'ಹನಗೋಡು ಹೋಬಳಿಯಲ್ಲಿ ಗಿರಿಜನರ ಬಾಲ್ಯವಿವಾಹ ಹೆಚ್ಚಾಗಿದ್ದು, ಕಾನೂನು ಜಾಗೃತಿ ಅವಶ್ಯವಿದೆ. ಕಾಡಂಚಿನಲ್ಲಿ ಮಾದಕ ವಸ್ತು ಸೇವನೆ ಮತ್ತು ಬೆಳೆಯುವವರ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸ್ ಕಣ್ಗಾವಲು ಹೆಚ್ಚಾಗಬೇಕು' ಎಂದು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮಾತನಾಡಿ, 'ಅಸ್ಪೃಶ್ಯತೆ ಆಚರಣೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಇಲಾಖೆ ಬದ್ಧವಿದೆ. ಗ್ರಾಮಗಳಿಗೆ ಕಡ್ಡಾಯವಾಗಿ ಪೊಲೀಸ್ ಬೀಟ್ ನಡೆಸಿ ಸ್ಥಳೀಯರೊಂದಿಗೆ ಚರ್ಚಿಸಲಾಗುವುದು' ಎಂದರು.
'ಕಟ್ಟೆಮಳಲವಾಡಿ ಗ್ರಾಮಕ್ಕೆ ಪೊಲೀಸ್ ಚೌಕಿ ಬೇಡಿಕೆ ಇದ್ದರೂ ಹುಣಸೂರು ನಗರಕ್ಕೆ ಹತ್ತಿರ ಇರುವುದರಿಂದ ಗ್ರಾಮಕ್ಕೆ ನಿತ್ಯ ಪೊಲೀಸ್ ಭೇಟಿ ನೀಡುವ ವ್ಯವಸ್ಥೆ ಮಾಡಲಾಗುವುದು' ಎಂದು ತಿಳಿಸಿದರು.
ಸಭೆಯಲ್ಲಿ ಡಿವೈಎಸ್ಪಿ ರವಿಕುಮಾರ್, ಸಿಪಿಐ ರವಿ, ಚಿಕ್ಕಸ್ವಾಮಿ, ದಲಿತ ಮುಖಂಡರಾದ ಗಜೇಂದ್ರ, ದೇವೇಂದ್ರ, ಚೆನ್ನಯ್ಯ ಕೋಟೆ, ಗಿರೀಶ್, ನರಸಿಂಹಮೂರ್ತಿ, ನಾಗೇಶ್ ದೊಡ್ಡ ಹೆಜ್ಜೂರು, ಪುಟ್ಟರಾಜ್, ಪ್ರಸನ್ನಕುಮಾರ್ ಇದ್ದರು.

