Dailyhunt Logo
  • Light mode
    Follow system
    Dark mode
    • Play Story
    • App Story
ಹುಟ್ಟಿನಿಂದ ಪೌರತ್ವ ಎತ್ತಿಹಿಡಿದ ಅಮೆರಿಕ ನ್ಯಾಯಾಲಯ: ಭಾರತೀಯರು ಏನಂತಾರೆ?

ಹುಟ್ಟಿನಿಂದ ಪೌರತ್ವ ಎತ್ತಿಹಿಡಿದ ಅಮೆರಿಕ ನ್ಯಾಯಾಲಯ: ಭಾರತೀಯರು ಏನಂತಾರೆ?

ಮೆರಿಕದ ಜನ್ಮಸಿದ್ಧ ಪೌರತ್ವ ಹಕ್ಕನ್ನು ನಿರ್ಬಂಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ಅಲ್ಲಿನ ಸುಪ್ರೀಂ ಕೋರ್ಟ್ ತಿರಸ್ಕರಿಸುವ ಮೂಲಕ ಅಲ್ಲಿ ವಾಸಿಸುತ್ತಿರುವ ಸಾವಿರಾರು ಮಂದಿ ಭಾರತೀಯರು ನಿಟ್ಟುಸಿರು ಬಿಟ್ಟಿದ್ದಾರೆ.

ಟ್ರಂಪ್ ಅವರ ಕಾರ್ಯಕಾರಿ ಆದೇಶವು ದೇಶದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ಒದಗಿಸುವ ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂದು 6-3 ಬಹುಮತದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಪೋಷಕರು ಅಮೆರಿಕದ ಪ್ರಜೆಯಾಗಿಲ್ಲದಿದ್ದರೆ ಅಥವಾ ಕಾನೂನುಬದ್ಧ ಶಾಶ್ವತ ನಿವಾಸಿಯಾಗಿಲ್ಲದಿದ್ದರೆ ಅಂತಹವರ ಮಕ್ಕಳ ಪೌರತ್ವವನ್ನು ಪರಿಗಣಿಸಬಾರದು ಎಂದು ಅಮೆರಿಕ ಏಜೆನ್ಸಿಗಳಿಗೆ ನಿರ್ದೇಶನ ನೀಡಿ ಟ್ರಂಪ್ ಆದೇಶ ಹೊರಡಿಸಿದ್ದರು.

ಅಮೆರಿಕದಲ್ಲಿ ಹುಟ್ಟಿದ ಮಕ್ಕಳು ಸ್ವಯಂಚಾಲಿತವಾಗಿ ಪೌರತ್ವದ ಹಕ್ಕನ್ನು ಪಡೆಯುತ್ತಾರೆ ಎಂದು ಅಮೆರಿಕದ ಸುಪ್ರೀಂ ಕೋರ್ಟ್ ಈಗ ಖಚಿತಪಡಿಸಿದೆ. ಟ್ರಂಪ್ ಅವರ ಕಾರ್ಯಕಾರಿ ಆದೇಶವು ದೇಶದಲ್ಲಿ ಹುಟ್ಟಿದ ಮಕ್ಕಳಿಗೆ ಪೌರತ್ವ ಒದಗಿಸುವ ಸಂವಿಧಾನದ 14ನೇ ತಿದ್ದುಪಡಿಯನ್ನು ಉಲ್ಲಂಘಿಸುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ ಹೇಳಿದ್ದಾರೆ.

1898ರ ತೀರ್ಪನ್ನು ಉಲ್ಲೇಖಿಸಿದ ಅವರು, ಅಮೆರಿಕದಲ್ಲಿ ಜನಿಸಿದ ಎಲ್ಲ ಮಕ್ಕಳಿಗೆ ಪೌರತ್ವ ಖಾತರಿಪಡಿಸುವ ವಾಂಗ್ ಕಿಮ್ ಆರ್ಕ್ ಅವರ ನಿಯಮವನ್ನು 128 ವರ್ಷಗಳಿಂದ ನಾವು ಪದೇ ಪದೇ ಅರ್ಥಮಾಡಿಕೊಂಡಿದ್ದೇವೆ. ಇಂದು ಆ ದೃಷ್ಟಿಕೋನದಿಂದ ನಿರ್ಗಮಿಸಲು ನಮಗೆ ಯಾವುದೇ ಕಾರಣ ಕಾಣುತ್ತಿಲ್ಲ ಎಂದಿದ್ದಾರೆ.

ಜನ್ಮಸಿದ್ಧ ಪೌರತ್ವವನ್ನು ಮಿತಿಗೊಳಿಸಲು 14ನೇ ತಿದ್ದುಪಡಿಯನ್ನು ಪರಿಷ್ಕರಿಸುವ ಟ್ರಂಪ್ ಆಡಳಿತದ ನಿರ್ಧಾರ ಬೆಂಬಲಿಸಲು ಅಲ್ಪ ಪುರಾವೆಗಳು ಮಾತ್ರ ಇವೆ ಎಂದು ನ್ಯಾಯಮೂರ್ತಿ ರಾಬರ್ಟ್ಸ್ ಹೇಳಿದ್ದರು.

ಸುಪ್ರೀಂ ಕೋರ್ಟ್ ನಿರ್ಧಾರವು ಅಮೆರಿಕಕ್ಕೆ ವಲಸೆ ಹೋಗಿರುವವರಿಗೆ, ವಿಶೇಷವಾಗಿ ಭಾರತೀಯ ಅಮೆರಿಕನ್ನರಿಗೆ ನಿರಾಳತೆ ತಂದಿದೆ. ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿರುವ ವಲಸಿಗರ ಗುಂಪು ಭಾರತದ್ದಾಗಿದೆ.

ಇದು ಭಾರತ ಮತ್ತು ದಕ್ಷಿಣ ಏಷ್ಯಾ ವಲಸಿಗರಿಗೆ ಅಭೂತಪೂರ್ವ ಗೆಲುವಾಗಿದೆ ಎಂದು ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್‌ನ ನಿರ್ದೇಶಕ ಚಿಂತನ್ ಪಟೇಲ್ ಹೇಳಿದ್ದಾರೆ.

'ಈ ತೀರ್ಪು ಅಮೆರಿಕದ ವಲಸಿಗರಿಗೆ ಅವರ ಹಕ್ಕನ್ನು ಮತ್ತೊಮ್ಮೆ ಖಚಿತಪಡಿಸಿದೆ. ಟ್ರಂಪ್ ಅವರ ಕಾರ್ಯಕಾರಿ ಆದೇಶದಿಂದ ನೇರವಾಗಿ ಪರಿಣಾಮ ಎದುರಿಸುತ್ತಿದ್ದವರಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾ ವಲಸಿಗರು ಪ್ರಮುಖರು. ಅಮೆರಿಕಕ್ಕೆ ವಲಸೆ ಹೋಗುವ ದಂಪತಿಗೆ ಅಲ್ಲಿ ಶಾಶ್ವತ ಪೌರತ್ವ ಪಡೆಯುವ ಮೊದಲೇ ಮಕ್ಕಳು ಹುಟ್ಟುತ್ತಾರೆ. ಟ್ರಂಪ್ ಆದೇಶದ ಹಿನ್ನೆಲೆ ಅವರಿಗೆಲ್ಲ ಭಾರಿ ಹಿನ್ನಡೆ ಆಗಿತ್ತು. ಇಂದು ಸುಪ್ರೀಂ ಕೋರ್ಟ್ ಅಂತಹ ಕುಟುಂಬಗಳ ಕಡೆ ನೋಡಿ. ನಿಮ್ಮ ಮಕ್ಕಳು ಅಮೆರಿಕದವರು. ಅಮೆರಿಕಕ್ಕೆ ಸೇರಿದವರು ಎಂದು ಹೇಳಿದೆ' ಎಂದಿದ್ದಾರೆ.

'ಇದನ್ನೇ ಸಂವಿಧಾನದ 14ನೇ ತಿದ್ದುಪಡಿ ಹೇಳುವುದು. ಯಾವುದೇ ಅಧ್ಯಕ್ಷರು ತಮ್ಮ ಲೇಖನಿಯಿಂದ ಅದನ್ನು ಅಳಿಸಲಾಗದು ಎಂದು ಇಂದು ನ್ಯಾಯಾಲಯ ಹೇಳಿದೆ. ಭಾರತ ಅಮೆರಿಕನ್ನರು ಇದನ್ನು ಹೆಮ್ಮೆಯಿಂದ ಸಂಭ್ರಮಿಸಬೇಕಿದೆ. ಅದರ ಜೊತೆಗೆ, ನಮ್ಮನ್ನು ಪರಿಪೂರ್ಣ ಅಮೆರಿಕನ್ನರು ಎಂಬುದನ್ನು ನ್ಯಾಯಾಲಯ ಖಚಿತಪಡಿಸಿದೆ' ಎಂದಿದ್ದಾರೆ.

ಅಮೆರಿಕದಲ್ಲಿ ಜೀವನ ಕಟ್ಟಿಕೊಂಡಿರುವ ಲಕ್ಷಾಂತರ ಭಾರತೀಯರಿಗೆ ಅಮೆರಿಕ ನ್ಯಾಯಾಲಯದ ತೀರ್ಪು ಅತ್ಯಂತ ಅಗತ್ಯವಿದ್ದ ಖಚಿತತೆಯನ್ನು ಒದಗಿಸಿದೆ ಎಂದು ಭಾರತ ಮತ್ತು ಭಾರತೀಯ ಅಧ್ಯಯನಗಳ ಪ್ರತಿಷ್ಠಾನದ(ಎಫ್‌ಐಐಡಿಎಸ್) ಅಧ್ಯಕ್ಷ, ನೀತಿ ಮತ್ತು ಕಾರ್ಯತಂತ್ರದ ಮುಖ್ಯಸ್ಥ ಖಂಡೇರಾವ್ ಕಾಂಡ್ ಹೇಳಿದ್ದಾರೆ.

'ಈಗ ಸುಮಾರು 5.2 ಮಿಲಿಯನ್ ಜನರಿರುವ ಭಾರತೀಯ-ಅಮೆರಿಕನ್ ಸಮುದಾಯದಲ್ಲಿ 1.2 ಮಿಲಿಯನ್‌ಗಿಂತಲೂ ಹೆಚ್ಚು ನುರಿತ ವೃತ್ತಿಪರರು ಮತ್ತು ಕುಟುಂಬ ಸದಸ್ಯರು ಹಲವು ವರ್ಷಗಳಿಂದ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿದ್ದಾರೆ'ಎಂದು ಹೇಳಿದ್ದಾರೆ.

'ಈ ತೀರ್ಪಿನ ಬಳಿಕ ನಮ್ಮ ಕಾನೂನು ವಲಸೆ ವ್ಯವಸ್ಥೆಯನ್ನು ಆಧುನೀಕರಿಸುವತ್ತ ಸರ್ಕಾರ ಗಮನ ಹರಿಸುತ್ತದೆ ಎಂದು ನಾವು ಭಾವಿಸುತ್ತೇವೆ'ಎಂದು ಖಂಡೇರಾವ್ ಹೇಳಿದ್ದಾರೆ.

ಭಾರತೀಯ-ಅಮೆರಿಕನ್ ಸಂಸದರಾದ ರಾಜಾ ಕೃಷ್ಣಮೂರ್ತಿ, ಪ್ರಮೀಳಾ ಜಯಪಾಲ್ ಮತ್ತು ಸುಹಾಸ್ ಸುಬ್ರಮಣ್ಯಂ ಈ ತೀರ್ಪನ್ನು ಸ್ವಾಗತಿಸಿದ್ದು, ಟ್ರಂಪ್ ಅವರ ಕಾರ್ಯಕಾರಿ ಆದೇಶವನ್ನು ದೇಶದಾದ್ಯಂತ ವಲಸಿಗರ ಮಕ್ಕಳ ಪೌರತ್ವವನ್ನು ಕಸಿದುಕೊಳ್ಳುವ ಸ್ಪಷ್ಟ ಮತ್ತು ಅಸಂವಿಧಾನಿಕ ಪ್ರಯತ್ನ ಎಂದು ಕರೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani