Dailyhunt Logo
  • Light mode
    Follow system
    Dark mode
    • Play Story
    • App Story
ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?

ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?

'ನನ್ನ ಪತ್ನಿ ಹಾಗೂ ಮಕ್ಕಳನ್ನು ಬ್ರಿಟನ್‌ಗೆ ಮತ್ತೆ ಕರೆದುಕೊಂಡು ಹೋಗುವ ಪರಿಸ್ಥಿತಿ ಇಲ್ಲ'

15 ತಿಂಗಳ ಹಿಂದೆ ಪ್ರಿನ್ಸ್‌ ಹ್ಯಾರಿ (ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರ ಪುತ್ರ) ಹೇಳಿದ್ದ ಮಾತು ಇಂದು ವಿಚಿತ್ರವಾಗಿ ಧ್ವನಿಸುತ್ತಿದೆ. ರಾಜಮನೆತನದಿಂದ ದೂರವಾದ ಬಳಿಕ ಕುಟುಂಬದ ಭದ್ರತೆ, ಬ್ರಿಟಿಷ್‌ ಟ್ಯಾಬ್ಲಾಯ್ಡ್‌ಗಳೊಂದಿಗಿನ ಸಂಘರ್ಷ ಮತ್ತು ಕುಟುಂಬದೊಳಗಿನ ಬಿರುಕುಗಳು ಅವರನ್ನು ತಮ್ಮ ತಾಯ್ನಾಡಿನಿಂದಲೇ ದೂರವಿಟ್ಟಿದ್ದವು.

ತಾನು ಬ್ರಿಟನ್‌ನಲ್ಲಿಯೇ ಹುಟ್ಟಿ ಬೆಳೆದಿದ್ದರೂ, ಪತ್ನಿ ಹಾಗೂ ಮಕ್ಕಳಿಗೆ ಅದು ಸುರಕ್ಷಿತವಾದ ನೆಲೆಯೆಂಬ ವಿಶ್ವಾಸ ಹ್ಯಾರಿಗೆ ಇರಲಿಲ್ಲ.

ಈಗ ಪರಿಸ್ಥಿತಿ ಬದಲಾಗಿದೆ. ಹ್ಯಾರಿ ತಮ್ಮ ಪತ್ನಿ ಮೇಘನ್‌ ಮತ್ತು ಮಕ್ಕಳಾದ ಆರ್ಚಿ ಲಿಲಿಬೆಟ್‌ ಅವರೊಂದಿಗೆ ಬ್ರಿಟನ್‌ಗೆ ಮರಳುತ್ತಿದ್ದಾರೆ. ಆರು ವರ್ಷಗಳ ಹಿಂದೆ ತೊರೆದ ದೇಶ ಈಗ ಮತ್ತೆ ಅವರ ಜೀವನದ ಭಾಗವಾಗುತ್ತಿದೆ. ಮಕ್ಕಳು ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ನ ಶಾಲೆಗೆ ಸೇರುವ ನಿರೀಕ್ಷೆಯಿದೆ. ಲಂಡನ್‌ನ ಹೊರಭಾಗದಲ್ಲಿರುವ ಖಾಸಗಿ ನಿವಾಸದಲ್ಲಿ ಅವರು ವಾಸಿಸಲಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.

ಅವರು ಮರಳಿ ಬರುತ್ತಿರುವುದು ಹುಟ್ಟೂರಿಗೆ ಹೊರತು ರಾಜಮನೆತನಕ್ಕೆ ಅಲ್ಲ ಎನ್ನುವುದು ಗಮನಾರ್ಹ. ಅವರು ಮತ್ತೆ 'ವರ್ಕಿಂಗ್‌ ರಾಯಲ್ಸ್‌' ಆಗುವುದಿಲ್ಲ. ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳುವುದಿಲ್ಲ. ಅರಮನೆಯಲ್ಲೂ ವಾಸ ಮಾಡುವುದಿಲ್ಲ. ಆರು ವರ್ಷಗಳ ಹಿಂದೆ ತೊರೆದ ಬದುಕಿಗೆ ಮರಳುವುದಕ್ಕಿಂತ, ಬ್ರಿಟನ್‌ನಲ್ಲಿ ತಮಗಿಷ್ಟದ ಹೊಸ ಜೀವನ ಕಟ್ಟಿಕೊಳ್ಳುವ ನಿರ್ಧಾರ ಅವರದು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ


ಹ್ಯಾರಿ-ಮೇಘನ್‌ ಮತ್ತೆ ಬ್ರಿಟನ್‌ಗೆ: ಹಳೆಯ ಬಿರುಕುಗಳ ನಡುವೆ ಹೊಸ ಅಧ್ಯಾಯವೇ?

ಒಂದು ಸಾಲಿನಲ್ಲಿಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ದಂಪತಿ ರಾಜಮನೆತನದ ಕರ್ತವ್ಯಗಳಿಂದ ದೂರವಿದ್ದು, ತಮ್ಮ ಮಕ್ಕಳ ಭವಿಷ್ಯ ಹಾಗೂ ಬ್ರಿಟನ್‌ನೊಂದಿಗಿನ ನಂಟನ್ನು ಉಳಿಸಿಕೊಳ್ಳಲು ಮತ್ತೆ ಬ್ರಿಟನ್‌ಗೆ ಮರಳುತ್ತಿದ್ದಾರೆ.

ಏನು? ಏಕೆ? ಹೇಗೆ?


ಹ್ಯಾರಿ-ಮೇಘನ್ ದಂಪತಿ ಮತ್ತೆ ಬ್ರಿಟನ್‌ಗೆ ಮರಳುತ್ತಿರುವುದು ಏಕೆ?

ತಮ್ಮ ಮಕ್ಕಳಿಗೆ ತಂದೆಯ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪರಿಚಯ ಮಾಡಿಕೊಡುವುದು ಮತ್ತು ದೊರೆ ಮೂರನೇ ಚಾರ್ಲ್ಸ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಕುಟುಂಬದೊಂದಿಗೆ ಬಾಂಧವ್ಯ ಬೆಳೆಸುವುದು ಅವರ ಮುಖ್ಯ ಉದ್ದೇಶವಾಗಿದೆ.


ಅವರು ರಾಜಮನೆತನದ ಅಧಿಕೃತ ಕಾರ್ಯಗಳಲ್ಲಿ ತೊಡಗುತ್ತಾರೆಯೇ?

ಇಲ್ಲ, ಅವರು ಬ್ರಿಟನ್‌ಗೆ ಮರಳುತ್ತಿರುವುದು ಸಾಮಾನ್ಯ ನಾಗರಿಕರಂತೆ ಜೀವನ ನಡೆಸಲು ಹೊರತು ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳಲು ಅಥವಾ ಅರಮನೆಯಲ್ಲಿ ವಾಸಿಸಲು ಅಲ್ಲ.


ಹ್ಯಾರಿ ಮತ್ತು ವಿಲಿಯಂ ನಡುವಿನ ಸಂಬಂಧದ ಪ್ರಸ್ತುತ ಸ್ಥಿತಿಯೇನು?

ತಂದೆ ಚಾರ್ಲ್ಸ್ ಅವರೊಂದಿಗೆ ಮಾತುಕತೆಗೆ ಬಾಗಿಲು ತೆರೆದಿದ್ದರೂ, ಅಣ್ಣ ಪ್ರಿನ್ಸ್ ವಿಲಿಯಂ ಅವರೊಂದಿಗೆ ಹ್ಯಾರಿ ಹೊಂದಿರುವ ಭಿನ್ನಾಭಿಪ್ರಾಯಗಳು ಮತ್ತು ಬಿರುಕುಗಳು ಇನ್ನೂ ಹಾಗೆಯೇ ಉಳಿದಿವೆ.


ಹ್ಯಾರಿ-ಮೇಘನ್ ಅವರ ವಾಪಸಾತಿಯಲ್ಲಿರುವ ಭದ್ರತಾ ಸವಾಲುಗಳೇನು?

ರಾಜಮನೆತನದ ವಿಶೇಷ ಭದ್ರತೆ ಕಳೆದುಕೊಂಡಿರುವ ದಂಪತಿಗೆ, ಕುಟುಂಬ ಸಮೇತ ಬ್ರಿಟನ್‌ನಲ್ಲಿ ನೆಲೆಸುವಾಗ ಅಗತ್ಯವಿರುವ ಭದ್ರತಾ ವ್ಯವಸ್ಥೆಗಳು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ಅದು ಅವರ ಮುಂದಿರುವ ಪ್ರಮುಖ ಪ್ರಶ್ನೆಯಾಗಿದೆ.


ಕಳೆದ ಆರು ವರ್ಷಗಳಲ್ಲಿ ಅವರ ಬದುಕಿನಲ್ಲಿ ಆಗಿರುವ ಬದಲಾವಣೆಗಳೇನು?

ರಾಜಮನೆತನದ ನಿಯಮಗಳಿಂದ ಹೊರಬಂದು ಅಮೆರಿಕದಲ್ಲಿ ಸ್ವತಂತ್ರ ಜೀವನ ಕಟ್ಟಿಕೊಂಡಿದ್ದ ದಂಪತಿ, ಈಗ ತಮ್ಮ ವೃತ್ತಿಪರ ಜೀವನವನ್ನು ಮುಂದುವರಿಸುತ್ತಲೇ ಬ್ರಿಟನ್‌ನೊಂದಿಗೆ ಹೊಸ ರೀತಿಯ ಸಂಬಂಧವನ್ನು ಬೆಳೆಸಲು ನಿರ್ಧರಿಸಿದ್ದಾರೆ.

ಪ್ರಮುಖ ಅಂಕಿಅಂಶಗಳು

2020ರ ಜನವರಿಹ್ಯಾರಿ ದಂಪತಿ ರಾಜಮನೆತನದ ಕರ್ತವ್ಯಗಳಿಂದ ಹಿಂದೆ ಸರಿದ ಸಮಯ2018ಹ್ಯಾರಿ ಮತ್ತು ಮೇಘನ್ ವಿವಾಹವಾದ ವರ್ಷ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಬದಲಾಗಿದ್ದೇನು?

ಇದಕ್ಕೆ ಕಾರಣ ಹಲವು. ದೊರೆ ಮೂರನೇ ಚಾರ್ಲ್ಸ್‌ ಅವರ ಅನಾರೋಗ್ಯ, ತಂದೆ-ಮಗನ ನಡುವೆ ಮೂಡಿದ ಹೊಂದಾಣಿಕೆ, ಮಕ್ಕಳು ಬೆಳೆದು ಶಾಲೆಗೆ ಹೋಗುವ ವಯಸ್ಸಿಗೆ ಬಂದಿರುವುದು, ಅವರಿಗೆ ತಂದೆಯ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಪರಿಚಯ ಮಾಡಿಸಬೇಕೆಂಬ ಬಯಕೆ ಹಾಗೂ ಅಮೆರಿಕದಲ್ಲಿ ಕಳೆದ ಆರು ವರ್ಷಗಳ ಅನುಭವ ಇವೆಲ್ಲವೂ ಬದಲಾವಣೆಗೆ ಕಾರಣವಾಗಿದೆ.

'ಹೊಸ ಯುಗ'ದ ನಿರೀಕ್ಷೆಯಿಂದ ಬಿಕ್ಕಟ್ಟಿನವರೆಗೆ

2018ರಲ್ಲಿ ಹ್ಯಾರಿ ಮತ್ತು ಮೇಘನ್‌ ವಿವಾಹವಾದಾಗ, ಬ್ರಿಟಿಷ್‌ ರಾಜಮನೆತನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎನ್ನುವ ನಿರೀಕ್ಷೆ ಉದಯಿಸಿತ್ತು. ಅಮೆರಿಕದ ನಟಿಯಾಗಿದ್ದ ಮೇಘನ್‌ ಅವರ ರಾಜಮನೆತನಕ್ಕೆ ಸೊಸೆಯಾಗಿ ಬರುವುದು ಬದಲಾಗುತ್ತಿರುವ ಸಮಾಜಕ್ಕೆ ಅರಮನೆ ಹೊಂದಿಕೊಳ್ಳುತ್ತಿದೆ ಎನ್ನುವುದರ ಸಂಕೇತ ಎಂದು ಹಲವರು ವಿಶ್ಲೇಷಿಸಿದ್ದರು.

ಆದರೆ ಮದುವೆ ಬಳಿಕ ಎಲ್ಲವೂ ಬದಲಾದವು. ಮೇಘನ್‌ ಅವರನ್ನು ಟೀಕಿಸಿ ಬ್ರಿಟಿಷ್‌ ಟ್ಯಾಬ್ಲಾಯ್ಡ್‌ ಪತ್ರಿಕೆಗಳು ವರದಿ ಮಾಡಿದವು. ಅವರ ವೈಯಕ್ತಿಕ ಬದುಕು, ಕುಟುಂಬದೊಂದಿಗಿನ ಸಂಬಂಧ ಮತ್ತು ಸಾರ್ವಜನಿಕ ಜೀವನದ ಪ್ರತಿಯೊಂದು ಹೆಜ್ಜೆಯನ್ನೂ ಮಾಧ್ಯಮಗಳು ವಿಮರ್ಶೆಗೆ ಒಳಪಡಿಸಿದವು. ಇದರಿಂದ ಮೇಘನ್ ಮಾನಸಿಕವಾಗಿ ಖಿನ್ನರಾಗಿದ್ದರು. ಮೇಘನ್‌ ಅವರ ಮಾನಸಿಕ ಆರೋಗ್ಯ ಹದಗೆಡುತ್ತಿದ್ದ ಸಂದರ್ಭದಲ್ಲಿ ರಾಜಮನೆತನದಿಂದ ಬೆಂಬಲ ಕೂಡ ಸಿಗಲಿಲ್ಲ. ಮಾಧ್ಯಮದ ಒತ್ತಡ ಮತ್ತು ಕುಟುಂಬದೊಳಗಿನ ಭಿನ್ನಾಭಿಪ್ರಾಯಗಳು ತೀವ್ರವಾದವು.

2020ರ ಜನವರಿಯಲ್ಲಿ ತಾವು ರಾಜಮನೆತನದ ಹಿರಿಯ ಕಾರ್ಯನಿರ್ವಹಣಾ ಸದಸ್ಯರಾಗಿ ತಮ್ಮ ಕರ್ತವ್ಯಗಳಿಂದ ಹಿಂದೆ ಸರಿಯುವುದಾಗಿ ಹ್ಯಾರಿ ಮತ್ತು ಮೇಘನ್‌ ಘೋಷಿಸಿದರು. ಆರಂಭದಲ್ಲಿ ಅವರ ಉದ್ದೇಶ ಸಂಪೂರ್ಣವಾಗಿ ಬ್ರಿಟನ್‌ ತೊರೆಯುವುದಾಗಿರಲಿಲ್ಲ. ಬ್ರಿಟನ್‌ ಮತ್ತು ಉತ್ತರ ಅಮೆರಿಕ ನಡುವೆ ಸಮಯ ಹಂಚಿಕೊಂಡು, ರಾಜಮನೆತನದೊಂದಿಗೆ ಸಂಪರ್ಕ ಉಳಿಸಿಕೊಂಡೇ ಹೆಚ್ಚು ಸ್ವತಂತ್ರ ಜೀವನ ನಡೆಸುವ ಯೋಜನೆ ಅವರದ್ದಾಗಿತ್ತು. ಅದರೆ ಅದೂ ಹೆಚ್ಚು ದಿನ ಉಳಿಯಲಿಲ್ಲ. ಕೆಲವೇ ದಿನಗಳಲ್ಲಿ ಅಧಿಕೃತ ರಾಜಮನೆತನದ ಕರ್ತವ್ಯಗಳಿಂದ ದಂಪತಿ ಹಿಂದೆ ಸರಿದರು. ಅವರಿಗೆ ಸಿಗುತ್ತಿದ್ದ ಹಣಕಾಸಿನ ನೆರವನ್ನು ತ್ಯಜಿಸಿ, ಅಮೆರಿಕದಲ್ಲಿ ನೆಲಸಲು ತೀರ್ಮಾನಿಸಿದರು. ಅವರ ಈ ನಿರ್ಗಮನವನ್ನು ಬ್ರಿಟಿಷ್‌ ಟ್ಯಾಬ್ಲಾಯ್ಡ್‌ಗಳು 'Megxit' (ಮೆಕ್ಸಿಟ್) ಎಂದು ಬಣ್ಣಿಸಿದವು.

ಅಮೆರಿಕದಲ್ಲಿ ಹೊಸ ಬದುಕು

ಅಮೆರಿಕಕ್ಕೆ ತೆರಳಿದ ನಂತರ ಹ್ಯಾರಿ ದಂಪತಿ ರಾಜಮನೆತನದ ನಿಯಮಗಳು ಮತ್ತು ಅಧಿಕೃತ ಕರ್ತವ್ಯಗಳ ಹೊರಗೆ ತಮ್ಮದೇ ಆದ ವೃತ್ತಿಪರ ಹಾಗೂ ಆರ್ಥಿಕ ಬದುಕನ್ನು ಕಟ್ಟಿಕೊಂಡರು. ನೆಟ್‌ಫ್ಲಿಕ್ಸ್‌ ಜತೆಗಿನ ಒಪ್ಪಂದ, ಹ್ಯಾರಿಯ ಆತ್ಮಚರಿತ್ರೆ ಸೇರಿದಂತೆ ಹಲವು ಮಾಧ್ಯಮ ಚಟುವಟಿಕೆಗಳ ಮೂಲಕ ದಂಪತಿ ತಮ್ಮದೇ ಆದ ಸಾರ್ವಜನಿಕ ಗುರುತನ್ನು ರೂಪಿಸಿಕೊಂಡರು.

2021ರಲ್ಲಿ 'ಓಪ್ರಾ ವಿನ್‌ಫ್ರೇ'ಗೆ ಸಂದರ್ಶನ ನೀಡಿದ್ದ ಮೇಘನ್‌, ಬ್ರಿಟನ್‌ನಲ್ಲಿ ಅನುಭವಿಸಿದ ಮಾನಸಿಕ ಸಂಕಷ್ಟದ ಬಗ್ಗೆ ಮಾತನಾಡಿದರು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯೂ ಮಾಡಿದ್ದಾಗಿ ಅವರು ಹೇಳಿದ್ದರು. ತಮ್ಮ ಮಗುವಿನ ಚರ್ಮದ ಬಣ್ಣದ ಬಗ್ಗೆ ರಾಜಮನೆತನದ ಸದಸ್ಯರೊಬ್ಬರು ಆತಂಕ ವ್ಯಕ್ತಪಡಿಸಿದ್ದರು ಎಂದಿದ್ದರು. ಈ ಹೇಳಿಕೆಗಳು ಬ್ರಿಟಿಷ್‌ ರಾಜಮನೆತನದೊಳಗಿನ ವರ್ಣಭೇದ ಮತ್ತು ಸಂಸ್ಥೆಯ ಸಂಸ್ಕೃತಿಯ ಬಗ್ಗೆ ವಿಶ್ವದಾದ್ಯಂತ ಚರ್ಚೆಗೆ ಕಾರಣವಾದವು.

ನಂತರ ನೆಟ್‌ಫ್ಲಿಕ್ಸ್‌ ಸರಣಿಯ ಮೂಲಕ ದಂಪತಿ ತಮ್ಮ ಅನುಭವಗಳನ್ನು ಮತ್ತಷ್ಟು ವಿವರಿಸಿದರು. 2023ರಲ್ಲಿ ಹ್ಯಾರಿಯವರ ಆತ್ಮಚರಿತ್ರೆ 'ಸ್ಪೇರ್' ಪ್ರಕಟವಾದಾಗ ಕುಟುಂಬದೊಳಗಿನ ಸಂಘರ್ಷ ಮತ್ತಷ್ಟು ಬಹಿರಂಗವಾಯಿತು. ತಮ್ಮ ಅಣ್ಣ ಪ್ರಿನ್ಸ್‌ ವಿಲಿಯಂ ಜತೆಗಿನ ಸಂಬಂಧದ ಬಗ್ಗೆ ಹ್ಯಾರಿ ಹಲವು ವೈಯಕ್ತಿಕ ವಿವರಗಳನ್ನು ದಾಖಲಿಸಿದರು. ವಿಲಿಯಂ ತಮ್ಮ ಮೇಲೆ ಹಲ್ಲೆ ನಡೆಸಿ, ನೆಲಕ್ಕೆ ತಳ್ಳಿದ್ದಾಗಿ ಆರೋಪಿಸಿದ ಅವರು, 'ನನ್ನ ಪ್ರೀತಿಯ ಸಹೋದರ, ನನ್ನ ಪರಮ ಶತ್ರು' ಎಂಬ ರೀತಿಯಲ್ಲಿ ಬಣ್ಣಿಸಿದರು. ಪರಿಣಾಮವ ವಿಲಿಯಂ ಜತೆಗಿನ ಸಂಬಂಧ ಇನ್ನಷ್ಟು ಹದಗೆಟ್ಟಿತು. ಹ್ಯಾರಿ ಮತ್ತು ಮೇಘನ್‌ ರಾಜಮನೆತನದಿಂದ ದೂರವಾದರೂ, ರಾಜಮನೆತನದ ಕಥೆ ಅವರ ಬದುಕಿನಿಂದ ದೂರವಾಗಲಿಲ್ಲ.

ತಂದೆಯ ಅನಾರೋಗ್ಯ…

ಹ್ಯಾರಿ ಮತ್ತು ರಾಜಮನೆತನದ ಸಂಬಂಧದಲ್ಲಿ ದೊಡ್ಡ ತಿರುವು ತಂದದ್ದು 2024ರಲ್ಲಿ. ದೊರೆ ಮೂರನೇ ಚಾರ್ಲ್ಸ್‌ ಅವರಿಗೆ ಕ್ಯಾನ್ಸರ್‌ ಇರುವುದು ಗೊತ್ತಾದಾಗ, ಹ್ಯಾರಿ ಬ್ರಿಟನ್‌ಗೆ ತೆರಳಿ ಅವರನ್ನು ಭೇಟಿಯಾದರು. ವರ್ಷಗಳ ಅಸಮಾಧಾನದ ನಡುವೆ ನಡೆದ ಭೇಟಿ, ತಂದೆ-ಮಗನ ಸಂಬಂಧ ಸಂಪೂರ್ಣವಾಗಿ ಮುರಿದುಹೋಗಿಲ್ಲ ಎಂಬುದನ್ನು ತೋರಿಸಿತು.

2025ರ ಬಿಬಿಸಿ ಸಂದರ್ಶನದಲ್ಲಿ ಕುಟುಂಬದೊಂದಿಗೆ ಮತ್ತೆ ಒಂದಾಗುವ ಬಯಕೆಯನ್ನು ಹ್ಯಾರಿ ವ್ಯಕ್ತಪಡಿಸಿದರು. 'ನನ್ನ ತಂದೆ ಇನ್ನೆಷ್ಟು ದಿನ ಬದುಕಲಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ' ಎಂದಿದ್ದರು. ಅದೇ ವರ್ಷ ಹ್ಯಾರಿ ಮತ್ತು ಚಾರ್ಲ್ಸ್‌ ಲಂಡನ್‌ನಲ್ಲಿ ಭೇಟಿಯಾದರು. ಅದು ರಾಜಮನೆತನದ ಕಾರ್ಯಕ್ರಮವಾಗಿದಿದ್ದರೂ, ಹಲವು ವರ್ಷಗಳ ನಂತರ ತಂದೆ-ಮಗ ಖಾಸಗಿಯಾಗಿ ಭೇಟಿಯಾಗಿದ್ದು, ಸಂಬಂಧ ಸುಧಾರಣೆಯ ಸೂಚನೆ ಎಂದು ವಿಶ್ಲೇಷಿಸಲಾಗಿತ್ತು. ಎಲ್ಲವೂ ಸರಿಯಾಗಿದೆ ಎಂದಲ್ಲ; ಆದರೆ ಮಾತುಕತೆಗೆ ಬಾಗಿಲು ತೆರೆದಿತ್ತು.

2026ರ ಜುಲೈನಲ್ಲಿ ಹ್ಯಾರಿ ಮತ್ತು ಮೇಘನ್‌ ತಮ್ಮ ಮಕ್ಕಳೊಂದಿಗೆ ಬ್ರಿಟನ್‌ಗೆ ಭೇಟಿದ್ದು ಸಂಬಂಧ ಸುಧಾರಣೆಯ ಮತ್ತೊಂದು ಭಾಗ. ಹೈಗ್ರೋವ್‌ ಹೌಸ್‌ನಲ್ಲಿ ಚಾರ್ಲ್ಸ್‌ ಮತ್ತು ರಾಣಿ ಕ್ಯಾಮಿಲಾ ಅವರನ್ನು ಆರ್ಚಿ ಮತ್ತು ಲಿಲಿಬೆಟ್‌ ಖಾಸಗಿಯಾಗಿ ಭೇಟಿಯಾದರು. ಹಲವು ವರ್ಷಗಳ ಬಳಿಕ ಮಕ್ಕಳು ತಮ್ಮ ಅಜ್ಜನೊಂದಿಗೆ ಸಮಯ ಕಳೆದರು.

ಬ್ರಿಟನ್ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಆಯಂಡಿ ಬರ್ನ್‌ಹ್ಯಾಮ್‌

ಮಕ್ಕಳಿಗೆ ಬ್ರಿಟನ್‌ ಏಕೆ?

ಆರು ವರ್ಷಗಳ ಹಿಂದೆ ಹ್ಯಾರಿ ಮತ್ತು ಮೇಘನ್‌ ಬ್ರಿಟನ್‌ ತೊರೆದಾಗ ಅವರ ಮಕ್ಕಳು ಇನ್ನೂ ಇರಲಿಲ್ಲ. ಈಗ ಆರ್ಚಿ ಮತ್ತು ಲಿಲಿಬೆಟ್‌ ಇಬ್ಬರೂ ಶಾಲೆಗೆ ಹೋಗುವ ವಯಸ್ಸಿನಲ್ಲಿದ್ದಾರೆ. ಅವರ ಬಾಲ್ಯದ ಬಹುಪಾಲು ಅಮೆರಿಕದಲ್ಲೇ ಕಳೆದಿದೆ. ಆರ್ಚಿ ಬ್ರಿಟನ್‌ನಲ್ಲಿ ಜನಿಸಿದರೂ ಅಮೆರಿಕದಲ್ಲಿ ಬೆಳೆದಿದ್ದಾರೆ, ಲಿಲಿಬೆಟ್‌ ಅಮೆರಿಕದಲ್ಲಿ ಜನಿಸಿದ್ದಾರೆ.

ಬ್ರಿಟನ್‌ ತಮ್ಮ ಮಕ್ಕಳ ಪರಂಪರೆಯ ಪ್ರಮುಖ ಭಾಗ ಎಂದು ಹ್ಯಾರಿ ಹೇಳಿಕೊಂಡು ಬಂದಿದ್ದಾರೆ. 2023ರಲ್ಲಿ ತಮ್ಮ ಮಕ್ಕಳಿಗೆ ತಂದೆಯ ದೇಶದೊಂದಿಗೆ ನಂಟು ಇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಈಗ ಆರ್ಚಿ ಮತ್ತು ಲಿಲಿಬೆಟ್‌ ಅವರನ್ನು ಬ್ರಿಟನ್‌ನಲ್ಲಿ ಶಾಲೆಗೆ ಸೇರಿಸಲು ಮುಂದಾಗಿದ್ದಾರೆ. ಹ್ಯಾರಿಯ ಪಾಲಿಗೆ ಬ್ರಿಟನ್‌ ಕೇವಲ ರಾಜಮನೆತನವಲ್ಲ; ಅದು ಅವರ ಬಾಲ್ಯ, ಕುಟುಂಬ ಮತ್ತು ಅವರ ತಾಯಿ ರಾಜಕುಮಾರಿ ಡಯಾನಾ ಅವರ ನೆನಪುಗಳೊಂದಿಗೆ ಬೆಸೆದುಕೊಂಡಿರುವ ದೇಶ. ಆ ಪರಂಪರೆಯನ್ನು ತಮ್ಮ ಮಕ್ಕಳಿಗೂ ಪರಿಚಯಿಸುವ ಬಯಕೆ ಈ ವಾಪಸಾತಿ ಹಿಂದಿರುವ ಪ್ರಮುಖ ಕಾರಣಗಳಲ್ಲಿ ಒಂದಾಗಿರಬಹುದು ಎಂದು ವಿಶ್ಲೆಷಿಸಲಾಗಿದೆ.

ಅಣ್ಣನೊಂದಿಗೆ ಇನ್ನೂ ಬಿರುಕು…

ತಂದೆ ಚಾರ್ಲ್ಸ್‌ ಜತೆಗಿನ ಸಂಬಂಧದಲ್ಲಿ ಸುಧಾರಣೆ ಕಂಡುಬಂದಿದ್ದರೂ, ಅಣ್ಣ ವಿಲಿಯಂ ಜೊತೆಗಿನ 'ಸಂಘರ್ಷ' ಹಾಗೇ ಇದೆ. 'ಸ್ಪೇರ್'ನಲ್ಲಿ ಹ್ಯಾರಿ ಮಾಡಿದ ಆರೋಪಗಳು ವಿಲಿಯಂ ಜೊತೆಗಿನ ವಿಶ್ವಾಸಕ್ಕೆ ದೊಡ್ಡ ಹೊಡೆತ ನೀಡಿವೆ. ಹಲವು ವರ್ಷಗಳ ಸಾರ್ವಜನಿಕ ಸಂಘರ್ಷವೂ ಅದನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಹ್ಯಾರಿಯೊಂದಿಗೆ ಸಂಬಂಧ ಸರಿಪಡಿಸುವ ಹಂತದಲ್ಲಿಲ್ಲ ಎಂದು ರಾಜಮನೆತನದ ಬಗ್ಗೆ ಅರಿವಿರುವವರು ಹೇಳುತ್ತಾರೆ.

ಹೀಗಾಗಿ ಹ್ಯಾರಿ ಬ್ರಿಟನ್‌ಗೆ ಮರಳುತ್ತಿದ್ದಾರೆ ಎಂಬುದನ್ನು ರಾಜಮನೆತನದ ಸಂಪೂರ್ಣ ಪುನರ್ಮಿಲನದ ಆರಂಭವೆಂದು ನೋಡುವುದು ಸರಿಯಲ್ಲ. ಚಾರ್ಲ್ಸ್‌ ಮತ್ತು ಹ್ಯಾರಿ ನಡುವೆ ಸಂಭಾಷಣೆಗೆ ಅವಕಾಶ ಮತ್ತೆ ಮೂಡಿದೆ. ಆದರೆ ವಿಲಿಯಂ ಮತ್ತು ಹ್ಯಾರಿ ನಡುವಿನ ಬಿರುಕು ಇನ್ನೂ ಹಾಗೆಯೇ ಇದೆ.

ಇನ್ನೂ ಹಾಗೆ ಇರುವ ಹಳೆಯ ಸಮಸ್ಯೆ

ಹ್ಯಾರಿಯವರ ಬ್ರಿಟನ್‌ ವಾಪಸಾತಿಯೊಂದಿಗೆ ಭದ್ರತೆಯ ಪ್ರಶ್ನೆಯೂ ಮತ್ತೆ ಮುನ್ನೆಲೆಗೆ ಬರಲಿದೆ. ರಾಜಮನೆತನ ತೊರೆದ ಬಳಿಕ ಅವರಿಗೆ ಸಿಗುತ್ತಿದ್ದ ಪೊಲೀಸ್‌ ಭದ್ರತೆಯಲ್ಲಿ ಬದಲಾವಣೆಯಾಗಿದೆ. ಕುಟುಂಬ ಸಮೇತ ಬ್ರಿಟನ್‌ಗೆ ಮರಳಲು ಈಗಿರುವ ವ್ಯವಸ್ಥೆ ಸಾಕಾಗುವುದಿಲ್ಲ ಎಂದು ಹ್ಯಾರಿ ಹೇಳಿದ್ದರು. ಈ ವಿಚಾರವಾಗಿ ನಡೆಸಿದ ಕಾನೂನು ಹೋರಾಟದಲ್ಲಿ ಈ ವರ್ಷ ಅವರು ಸೋತರೂ, ಈಗ ಕುಟುಂಬ ಸಮೇತ ಬ್ರಿಟನ್‌ಗೆ ಮರಳಲು ನಿರ್ಧರಿಸಿದ್ದಾರೆ. ಅವರು ಮರಳಿದ ನಂತರ ಅವರಿಗೆ ಇರುವ ಭದ್ರತಾ ವ್ಯವಸ್ಥೆಗಳು ಹೇಗಿರಲಿವೆ ಎನ್ನುವ ವಿವರಗಳು ಬಹಿರಂಗವಾಗಿಲ್ಲ. ಅದು ಕುಟುಂಬದ ಖಾಸಗಿ ವಿಚಾರ ಎಂದು ಪ್ರಧಾನಿ ಆಂಡಿ ಬರ್ನ್‌ಹ್ಯಾಮ್‌ ಹೇಳಿದ್ದಾರೆ. ಹೀಗಾಗಿ ಭದ್ರತಾ ಪ್ರಶ್ನೆ ಸಂಪೂರ್ಣ ಬಗೆಹರಿದಿದೆ ಎಂದು ಹೇಳಲಾಗದಿದ್ದರೂ, ಹಿಂದೆ ವಾಪಸಾತಿಗೆ ಪ್ರಮುಖ ಅಡ್ಡಿಯಾಗಿದ್ದ ವಿಚಾರದ ನಡುವೆಯೂ ಅವರು ಮರಳುತ್ತಿರುವುದು ಗಮನಾರ್ಹ.

ಮಾಧ್ಯಮದ ಸವಾಲು ಕೂಡ ಕಡಿಮೆಯಾಗಿಲ್ಲ. ಬ್ರಿಟಿಷ್‌ ಟ್ಯಾಬ್ಲಾಯ್ಡ್‌ಗಳ ವಿರುದ್ಧ ವರ್ಷಗಳಿಂದ ಕಾನೂನು ಹೋರಾಟ ನಡೆಸಿರುವ ಹ್ಯಾರಿ, ಫೋನ್‌ ಹ್ಯಾಕಿಂಗ್‌ ಮತ್ತು ಖಾಸಗಿತನದ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಜಯ ಗಳಿಸಿದರೂ, ಎಲ್ಲ ಹೋರಾಟಗಳೂ ಮುಗಿದಿಲ್ಲ.. ಈಗ ಕುಟುಂಬ ಮತ್ತೆ ಬ್ರಿಟನ್‌ನಲ್ಲಿ ವಾಸಿಸಲಿರುವುದರಿಂದ, ಹ್ಯಾರಿ-ಮೇಘನ್‌ ಅವರ ಖಾಸಗಿ ಬದುಕು ಮತ್ತು ಮಕ್ಕಳ ಕುರಿತ ಮಾಧ್ಯಮದ ಕಣ್ಣು ಮತ್ತೆ ಹೆಚ್ಚುವ ಸಾಧ್ಯತೆಯಿದೆ.

ಮರಳುತ್ತಿರುವುದು ರಾಜಮನೆತನಕ್ಕಲ್ಲ..

ಹ್ಯಾರಿ ಮತ್ತು ಮೇಘನ್‌ ಮರಳುತ್ತಿರುವುದು ಬ್ರಿಟನ್‌ಗೆ ಹೊರತೆ ಹಳೆಯ ರಾಜಮನೆತನಕ್ಕಲ್ಲ. ರಾಜಮನೆತನದ ಅಧಿಕೃತ ಕರ್ತವ್ಯಗಳನ್ನು ವಹಿಸಿಕೊಳ್ಳುವುದಿಲ್ಲ. ಅರಮನೆಯಲ್ಲಿ ವಾಸಿಸುವುದೂ ಇಲ್ಲ. ಖಾಸಗಿಯಾಗಿ ಬ್ರಿಟನ್‌ನಲ್ಲಿ ನೆಲಸಲಿದ್ದಾರೆ. ಆರು ವರ್ಷಗಳ ಹಿಂದಿನ ನಿರ್ಧಾರ ತಪ್ಪಾಗಿತ್ತು ಎಂದು ಒಪ್ಪಿಕೊಂಡು ಮರಳುತ್ತಿಲ್ಲ. ರಾಜಮನೆತನದಿಂದ ಪಡೆದ ಅಂತರ ಮತ್ತು ಸ್ವಾತಂತ್ರ್ಯವನ್ನು ಉಳಿಸಿಕೊಂಡೇ ಬ್ರಿಟನ್‌ನಲ್ಲಿ ಬದುಕಲು ಹೊರಟಿದ್ದಾರೆ. ಅಂದರೆ, ಅಮೆರಿಕದ ಜೀವನವನ್ನು ಸಂಪೂರ್ಣವಾಗಿ ಬಿಟ್ಟುಬಿಡುವುದಕ್ಕಿಂತ, ತಮ್ಮ ಬದುಕಿನಲ್ಲಿ ಬ್ರಿಟನ್‌ಗೂ ಮತ್ತೊಂದು ಸ್ಥಾನ ನೀಡುತ್ತಿದ್ದಾರೆ.

ಆರು ವರ್ಷಗಳಲ್ಲಿ ಬದಲಾಗಿದ್ದು ಏನು?

ಬಹುಶಃ ಎಲ್ಲಕ್ಕಿಂತ ಹೆಚ್ಚು ಬದಲಾಗಿರುವುದು ಹ್ಯಾರಿ ಮತ್ತು ಮೇಘನ್‌ ಅವರ ಆದ್ಯತೆಗಳು. 2020ರಲ್ಲಿ ಅವರಿಗೆ ಮುಖ್ಯವಾಗಿದ್ದು ರಾಜಮನೆತನದಿಂದ ಸ್ವಾತಂತ್ರ್ಯ ಪಡೆಯುವುದು. ಈಗ ಅವರ ಮುಂದಿರುವ ಪ್ರಶ್ನೆಗಳು ಬೇರೆ. ತಂದೆ ಎಷ್ಟು ದಿನ ಬದುಕಿರಬಲ್ಲರು? ತಮ್ಮ ಮಕ್ಕಳಿಗೆ ತಂದೆಯ ದೇಶದೊಂದಿಗೆ ಯಾವ ರೀತಿಯ ಸಂಬಂಧ ಇರಬೇಕು? ಆರು ವರ್ಷಗಳಿಂದ ದೂರವಿರುವ ಕುಟುಂಬದೊಂದಿಗೆ ಯಾವ ಮಟ್ಟಿಗೆ ಮತ್ತೆ ಸಂಪರ್ಕ ಬೆಳೆಸಬಹುದು?

ಚಾರ್ಲ್ಸ್‌ ಅವರ ಅನಾರೋಗ್ಯ ಈ ಪ್ರಶ್ನೆಗಳನ್ನು ಮತ್ತಷ್ಟು ಕಾಡತೊಡಗಿದೆ. ತಂದೆ-ಮಗನ ನಡುವಿನ ಖಾಸಗಿ ಭೇಟಿಗಳು ಹಲವು ವರ್ಷಗಳ ಬಳಿಕ ಮತ್ತೆ ಮಾತುಕತೆಗೆ ಅವಕಾಶ ಕಲ್ಪಿಸಿದವು. ಇದೇ ವೇಳೆ ಆರ್ಚಿ ಮತ್ತು ಲಿಲಿಬೆಟ್‌ ಬೆಳೆದು ಶಾಲೆಗೆ ಹೋಗುವ ವಯಸ್ಸಿಗೆ ಬಂದಿದ್ದಾರೆ. ಹೀಗಾಗಿ ಮಕ್ಕಳ ಭವಿಷ್ಯ ಅವರ ಆದ್ಯತೆಯಾಗಿದೆ.

ಸಮಸ್ಯೆಗಳು ಹಾಗೇ ಇವೆ. ಹೀಗಾಗಿ ಇದು ಮತ್ತೆ ಹಳೆಯ ಬದುಕಿಗೆ ಮರಳುವುದು ಎನ್ನಲಾಗದು. ಆರು ವರ್ಷಗಳ ಅನುಭವದ ನಂತರ ಬ್ರಿಟನ್‌ ಜತೆಗಿನ ಸಂಬಂಧವನ್ನು ಹೊಸ ರೀತಿಯಲ್ಲಿ ಕಟ್ಟಿಕೊಳ್ಳುವ ಪ್ರಯತ್ನ ಎನ್ನಬಹುದು.

ನನಗೆ ಹೊಡೆದು ನೆಲಕ್ಕೆ ಕೆಡವಿದ್ದರು: ಅಣ್ಣ ವಿಲಿಯಂ ವಿರುದ್ಧ ಹ್ಯಾರಿ ಸ್ಫೋಟಕ ಆರೋಪಬ್ರಿಟನ್ ರಾಜಮನೆತನದ ಒಳಜಗಳ: ಪ್ರಿನ್ಸ್ ಹ್ಯಾರಿ ಪುಸ್ತಕದಲ್ಲಿ ಸ್ಫೋಟಕ ಅಂಶಗಳು
Dailyhunt
Disclaimer: This content has not been generated, created or edited by Dailyhunt. Publisher: Prajavani