Dailyhunt Logo
  • Light mode
    Follow system
    Dark mode
    • Play Story
    • App Story
'ಇ20 ಪೆಟ್ರೋಲ್: ಶೇ 5ರವರೆಗೆ ಮೈಲೇಜ್‌ ಕುಸಿತ ';  ಕೇಂದ್ರ ‍ಪೆಟ್ರೋಲಿಯಂ

'ಇ20 ಪೆಟ್ರೋಲ್: ಶೇ 5ರವರೆಗೆ ಮೈಲೇಜ್‌ ಕುಸಿತ '; ಕೇಂದ್ರ ‍ಪೆಟ್ರೋಲಿಯಂ

ನವದೆಹಲಿ (ಪಿಟಿಐ): ಶೇ 20ರಷ್ಟು ಎಥೆನಾಲ್ ಮಿಶ್ರಣವಿರುವ ಪೆಟ್ರೋಲ್‌ (ಇ20) ಬಳಕೆಯಿಂದ ಕೆಲವು ವಾಹನಗಳ ಇಂಧನ ದಕ್ಷತೆಯ (ಮೈಲೇಜ್) ಸಾಮರ್ಥ್ಯವು ಶೇಕಡ 3ರಿಂದ ಶೇ 5ರಷ್ಟು ಕಡಿಮೆ ಆಗಬಹುದು ಎಂದು ಕೇಂದ್ರ ‍ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ.

ಆದರೆ, ಇ20 ಪೆಟ್ರೋಲ್‌ ಬಳಕೆಯಿಂದ ವಾಹನಗಳಲ್ಲಿ ಇಂಧನದ ದಹನಶಕ್ತಿ ಹೆಚ್ಚಾಗಿ, ಕಾರ್ಯಕ್ಷಮತೆಯೂ ಹೆಚ್ಚುತ್ತದೆ. ಎಂಜಿನ್‌ ಕಾರ್ಯಾಚರಣೆ ಸುಗಮವಾಗುವುದರ ಜೊತೆಗೆ ಇಂಗಾಲ ಹೊರಸೂಸುವಿಕೆ ತಗ್ಗುವುದರಿಂದ ಪರಿಸರದ ಮೇಲಿನ ಹೊರೆಯೂ ಕಡಿಮೆ ಆಗುತ್ತದೆ ಎಂದು ತಿಳಿಸಿದೆ.

ಇ20 ಇಂಧನದ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯ ಮಾಹಿತಿ ಪ್ರಕಟಿಸಿರುವ ಸಚಿವಾಲಯ, 'ಇ10 ಅಥವಾ ಶುದ್ಧ ಪೆಟ್ರೋಲ್‌ಗಿಂತಲೂ ಇ20 ಪೆಟ್ರೋಲ್ ಹೆಚ್ಚು ಶುದ್ಧವಾಗಿದೆ. ಉತ್ತಮ ಗುಣಮಟ್ಟ ಮತ್ತು ಅಧಿಕ ಇಂಧನ ದಕ್ಷತೆ ಹೊಂದಿದೆ. ವೈಜ್ಞಾನಿಕ ಪರೀಕ್ಷೆ, ವಾಹನ ತಯಾರಕ ಕಂಪನಿಗಳೊಂದಿಗೆ ಸಮಾಲೋಚನೆ ನಡೆಸಿ, ದೇಶದಲ್ಲಿ ಎಥೆನಾಲ್ ಉತ್ಪಾದನೆ ಹೆಚ್ಚಳವಾದ ಬಳಿಕವೇ ಈ ಇಂಧನವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದೆ.

ಎಥೆನಾಲ್ ಮಿಶ್ರಣ ಯೋಜನೆಯನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎನ್ನುವ ಆರೋಪವನ್ನು ನಿರಾಕರಿಸಿರುವ ಸಚಿವಾಲಯವು, 2001ರಲ್ಲಿ ಎಥೆನಾಲ್ ಮಿಶ್ರಣದ ಪ್ರಾಯೋಗಿಕ ಯೋಜನೆಗಳು ಆರಂಭವಾಗಿದ್ದವು. 2014ರವರೆಗೆ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಶೇ 1.5ರಷ್ಟಿತ್ತು. 2018ರಲ್ಲಿ ಕೇಂದ್ರ ಸರ್ಕಾರವು, ಜೈವಿಕ ಇಂಧನದ ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಿದ ಬಳಿಕ ಎಥೆನಾಲ್ ಉತ್ಪಾದನೆ ಹೆಚ್ಚಳವಾಯಿತು. 2022ರಲ್ಲಿ ದೇಶದಲ್ಲಿ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಶೇ 10ಕ್ಕೆ ತಲುಪಿತು. 2025-26ರ ವೇಳೆಗೆ ಶೇ 20ಕ್ಕೆ ತಲುಪಿದೆ ಎಂದು ಹೇಳಿದೆ.

ಇ20 ಪೆಟ್ರೋಲ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು ಎಂಜಿನ್ ಬಾಳಿಕೆ, ಇಂಧನ ವ್ಯವಸ್ಥೆ, ತುಕ್ಕು ನಿರೋಧಕತೆ, ಚಾಲನಾ ಸಾಮರ್ಥ್ಯ ಸೇರಿದಂತೆ ವ್ಯಾಪಕ ಪರೀಕ್ಷೆಗೆ ಒಳಪಡಿಸಲಾಗಿದೆ. ಮಾರುತಿ ಸುಜುಕಿ, ಹೀರೊ ಮೋಟೊಕಾರ್ಪ್‌ ಸೇರಿದಂತೆ ವಿವಿಧ ವಾಹನ ತಯಾರಿಕಾ ಕಂಪನಿಗಳ ಪ್ರತಿಕ್ರಿಯೆ ಪಡೆಯಲಾಗಿದೆ. ಅವರು ಈ ಇಂಧನದಿಂದ ಈಗಾಗಲೇ ಬಳಕೆಯಲ್ಲಿರುವ ವಾಹನಗಳಲ್ಲಿ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದೆ.‌

ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಇ-20 ಇಂಧನ ದರವು ಅಗ್ಗವಾಗಿಲ್ಲ. ಏಕೆಂದರೆ, ರೈತರಿಗೆ ಬೆಂಬಲ ನೀಡಲು ನಿಗದಿಪಡಿಸಿದ ಲಾಭದಾಯಕ ಬೆಲೆಗೆ ಎಥೆನಾಲ್ ಖರೀದಿಸಲಾಗುತ್ತದೆ. ಇದರಿಂದ ರೈತರಿಗೆ ನೆರವಾಗಲಿದೆ ಎಂದಿದೆ.

'ಇ20 ಇಂಧನದ ಬಗ್ಗೆ ಇರುವ ತಪ್ಪು ಮಾಹಿತಿಗಳನ್ನು ನಾಗರಿಕರು ನಂಬಬೇಡಿ. ವಾಹನ ತಯಾರಿಕಾ ಕಂಪನಿಗಳು, ಪರೀಕ್ಷಾ ಏಜೆನ್ಸಿಗಳು, ತೈಲೋತ್ಪನ್ನ ಮಾರುಕಟ್ಟೆ ಕಂಪನಿಗಳು ದೃಢಪಡಿಸಿದ ಬಳಿಕವೇ ಈ ಇಂಧನವನ್ನು ದೇಶದಾದ್ಯಂತ ಬಳಸಲಾಗುತ್ತಿದೆ' ಎಂದು ಹೇಳಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani