Dailyhunt Logo
  • Light mode
    Follow system
    Dark mode
    • Play Story
    • App Story
ಇದು ಬರೀ ಶಾಲೆಯಲ್ಲ 'ಮಕ್ಕಳ ಮನೆ': ಗ್ರಾಮಸ್ಥರಿಂದ ಮರುಜೀವ ಪಡೆದಿದ್ದು ಹೇಗೆ?

ಇದು ಬರೀ ಶಾಲೆಯಲ್ಲ 'ಮಕ್ಕಳ ಮನೆ': ಗ್ರಾಮಸ್ಥರಿಂದ ಮರುಜೀವ ಪಡೆದಿದ್ದು ಹೇಗೆ?

ಶಿವಮೊಗ್ಗ: ಆಗುಂಬೆಯಿಂದ ಕೂಗಳತೆಯಲ್ಲಿರುವ ಸಹ್ಯಾದ್ರಿ ಸೆರಗಿನ ಪುಟ್ಟ ಗ್ರಾಮ ಹೊನ್ನೇತಾಳು. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕೇವಲ 18ಕ್ಕೆ ಇಳಿದು, ಬಹುತೇಕ ಮುಚ್ಚುವ ಹಂತಕ್ಕೆ ಬಂದಿತ್ತು.

ಆ ಹೊತ್ತಿನಲ್ಲಿ ಶಾಲಾಭಿವೃದ್ಧಿ ಸಮಿತಿಯ ರೂಪದಲ್ಲಿ ಗ್ರಾಮಸ್ಥರು ಕೈ ಹಿಡಿದು ಮುನ್ನಡೆಸಿದ್ದರು.

ಈಗ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಅತಿಹೆಚ್ಚು ಮಕ್ಕಳು ದಾಖಲಾದ ಶಾಲೆಗಳಲ್ಲೊಂದು ಎಂಬ ಶ್ರೇಯಕ್ಕೆ ಪಾತ್ರವಾಗಿದೆ. 1ರಿಂದ 7ನೇ ತರಗತಿವರೆಗೆ ಈ ವರ್ಷ 134 ವಿದ್ಯಾರ್ಥಿಗಳು ಸೇರಿದ್ದಾರೆ.

ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಬದಲು ತಮ್ಮೂರಿನ ಸರ್ಕಾರಿ ಶಾಲೆಯನ್ನೇ ಖಾಸಗಿಯವರಿಗಿಂತ ಮಿಗಿಲಾಗಿ ರೂಪಿಸುವ ಕನಸು ಹೊತ್ತ ಊರಿನ ಯುವ ಪಡೆಯ ಬೆನ್ನಿಗೆ ಹಿರಿಯರು ನಿಂತರು. ಜೊತೆಗೆ ಶಾಲೆಯ ಶಿಕ್ಷಕರ ಪಡೆಯೂ ಕೈಜೋಡಿಸಿತು. ಅದರ ಫಲವಾಗಿ ಈಗ ಗುಣಮಟ್ಟದ ಶಿಕ್ಷಣ, ಕಲೆ, ಸಂಸ್ಕೃತಿಯ ಮೆರುಗನ್ನು ಹೊದ್ದು ಹೊನ್ನೆತಾಳು ಶಾಲೆ ಮಾದರಿಯಾಗಿ ರೂಪುಗೊಂಡಿದೆ.

ಎಸ್‌ಡಿಎಂಸಿ ನೇತೃತ್ವ: ಆರಂಭದಲ್ಲಿ ಶಾಲೆಯ ಪುನಶ್ಚೇತನಕ್ಕೆ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಜಿ.ನಿತ್ಯಾನಂದ ಅವರ ಮುಂದಾಳತ್ವದಲ್ಲಿ ಊರಿನವರನ್ನು ಮತ್ತು ದಾನಿಗಳನ್ನು ಒಟ್ಟುಗೂಡಿಸಲಾಯಿತು. ಕೇವಲ ಸರ್ಕಾರದ ಅನುದಾನ ನಂಬಿ ಕೂತರೆ ಶಾಲೆಯ ಸಮಗ್ರ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಊರಿನವರಿಗೆ ಮನದಟ್ಟು ಮಾಡಿ, ಸ್ವಂತ ಬಲದ ಮೇಲೆ ಶಾಲೆಯನ್ನು ಹೇಗೆ ಮುನ್ನಡೆಸಬಹುದು ಎಂಬುದರ ಕುರಿತು ರೂಪುರೇಷೆ ಸಿದ್ಧಪ‍ಡಿಸಿದರು.

ಊರಿನವರು, ಸಂಘ-ಸಂಸ್ಥೆಗಳ ದೇಣಿಗೆಯ ಫಲವಾಗಿ ಶಾಲೆಗೆ ಹೆಚ್ಚುವರಿ ಶಿಕ್ಷಕರ ನೇಮಕಾತಿಯ ಜೊತೆಗೆ ಅಚ್ಚುಕಟ್ಟಾದ ಕಟ್ಟಡವೊಂದನ್ನು ನಿರ್ಮಾಣ ಮಾಡಿ ಅಲ್ಲಿ ವಿದ್ಯಾರ್ಥಿಗಳಿಗೆ ನೃತ್ಯ, ಯೋಗ, ಸಂಗೀತ, ಕಂಪ್ಯೂಟರ್ ಕಲಿಕೆ, ಸ್ಮಾರ್ಟ್ ಕ್ಲಾಸ್ ಹೀಗೆ ಬೇರೆ ಬೇರೆ ರಚನಾತ್ಮಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಶಾಲೆಯ ನೈರ್ಮಲೀಕರಣಕ್ಕೆ ಒತ್ತು ಕೊಟ್ಟಿದ್ದಾರೆ.

ನಸುಕಿನಲ್ಲೇ ಶಾಲೆಯ ಸಂಪರ್ಕ: ಶಾಲೆಯ ವಿದ್ಯಾರ್ಥಿಗಳು ನಸುಕಿನಲ್ಲಿಯೇ ಓದಿನತ್ತ ಗಮನ ಹರಿಸಲು ಮುಂಜಾನೆ 6 ಗಂಟೆಗೆ ಪೋಷಕರಿಗೆ ಕರೆ ಮಾಡಿ ಮಕ್ಕಳನ್ನು ಎಬ್ಬಿಸಿ ಓದಿಗೆ ಹಚ್ಚಲಾಗುತ್ತದೆ. ಯಾವುದೇ ಮಗು ಶಾಲೆಗೆ ಬಾರದಿದ್ದಲ್ಲಿ ಸೀದಾ ಅವರ ಮನೆಗೆ ತೆರಳುವ ಎಸ್‌ಡಿಎಂಸಿ ಅಧ್ಯಕ್ಷ ನಿತ್ಯಾನಂದ, ಪೋಷಕರ ಮನವೊಲಿಸಿ ಶಾಲೆಗೆ ಕರೆತರುವ ಕೆಲಸ ಮಾಡುತ್ತಾರೆ. ಮಧ್ಯಾಹ್ನದ ಬಿಸಿಯೂಟಕ್ಕೆ ಸರ್ಕಾರ ಪೂರೈಸುವ ತರಕಾರಿಯ ಜೊತೆಗೆ ಸ್ಥಳೀಯವಾಗಿ ದಾನಿಗಳ ನೆರವಿನಿಂದ ಹೆಚ್ಚುವರಿಯಾಗಿ ತರಕಾರಿ ಪಡೆದು ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ ಕೊಡುವುದು ಇಲ್ಲಿನ ವಿಶೇಷ.

​ಶಾಲೆಯ ಸಾಧನೆಯು ಕೇವಲ ಸುಂದರ ಕಟ್ಟಡ ಅಥವಾ ಮೂಲ ಸೌಕರ್ಯಕ್ಕೆ ಸೀಮಿತವಾಗಿಲ್ಲ. ಬದಲಿಗೆ ಗುಣಮಟ್ಟದ ಶಿಕ್ಷಣವೂ ಇಲ್ಲಿನ ಹೆಚ್ಚುಗಾರಿಕೆ. ಶಾಲೆಯ ಮುಖ್ಯ ಶಿಕ್ಷಕಿ ಎನ್.ಎಸ್. ಶಿಲ್ಪಾ ಅವರು ಸ್ವತಃ ಇದೇ ಶಾಲೆಯ ಹಳೆಯ ವಿದ್ಯಾರ್ಥಿನಿ. ಹೀಗಾಗಿ ದಶಕಗಳಿಂದ ಶಾಲೆಯ ಪ್ರತಿ ಹಂತದ ಏರಿಳಿತಗಳನ್ನು ಹತ್ತಿರದಿಂದ ಕಂಡಿದ್ದಾರೆ. ಈಗ ಶಾಲೆಯ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದ್ದಾರೆ.

ಶಾಲೆಯ ಬೆಂಬಲಕ್ಕೆ ಹಳೆಯ ವಿದ್ಯಾರ್ಥಿಗಳು

ಹೊನ್ನೇತಾಳು ಶಾಲೆಯ ಅನೇಕ ಹಳೆಯ ವಿದ್ಯಾರ್ಥಿಗಳು ದಿನಕ್ಕೆ ₹10ರಂತೆ ತಿಂಗಳಿಗೆ ₹300 ದೇಣಿಗೆ ಕೊಡುತ್ತಿದ್ದಾರೆ. ಅಕ್ಷರ ಕಲಿಸಿ ಜಗತ್ತನ್ನು ಪರಿಚಯಿಸಿದ ಶಾಲೆಯ ಋಣ ತೀರಿಸುವ ಈ ಪುಟ್ಟ ಪ್ರಯತ್ನವೇ ಚಾಲಕ ಶಕ್ತಿಯಾಗಿದೆ.

ಹೀಗೆ ಸಂಗ್ರಹವಾದ ಹಣದಿಂದ ಅಕ್ಕಪಕ್ಕದ ಕುಗ್ರಾಮ, ಒಂಟಿ ಮನೆಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ರಿಯಾಯಿತಿ ದರದಲ್ಲಿ ವಾಹನ ಓಡಿಸಲಾಗುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿ, ಕೃಷಿಕರೂ ಆಗಿರುವ ಚಂದ್ರಹಾಸ ಅವರು ಇದೊಂದು ಧ್ಯಾನದಂತೆ ಮಕ್ಕಳನ್ನು ವಾಹನದಲ್ಲಿ ನಿತ್ಯ ಶಾಲೆಗೆ ಕರೆತರುತ್ತಾರೆ.

'ಮನೆಯಿಂದ ದೂರ ಇರುವ ಶಾಲೆಗೆ ಬರಲು ಸಾಧ್ಯವಾಗದೇ ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಬಾರದು ಎಂಬ ಆಶಯ ನಮ್ಮದು' ಎಂದು ಎಸ್‌ಡಿಎಂಸಿ ಅಧ್ಯಕ್ಷ ಎ.ಜಿ.ನಿತ್ಯಾನಂದ ಹೇಳುತ್ತಾರೆ.

ಶಾಲೆಯ ಅತ್ಯುತ್ತಮ ನಿರ್ವಹಣೆ ಗುರುತಿಸಿ ರಾಜ್ಯ ಸರ್ಕಾರ ಈಚೆಗೆ ರಾಜ್ಯದ ಅತ್ಯುತ್ತಮ ಶಾಲಾ ನಿರ್ವಹಣಾ ಸಮಿತಿಗಳಲ್ಲೊಂದು ಎಂದು ಗೌರವಿಸಿದೆ.

ಎನ್.ಎಸ್. ಶಿಲ್ಪಾ, ಮುಖ್ಯ ಶಿಕ್ಷಕಿ, ಹೊನ್ನೇತಾಳು ಸ.ಹಿ.ಪ್ರಾ.ಶಾಲೆನಮ್ಮಲ್ಲಿ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯು ಖಾಸಗಿ ಶಾಲೆಗಳಿಗಿಂತ ಕಡಿಮೆ ಇಲ್ಲ. ಪೋಷಕರಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆಯ ಮೇಲಿದ್ದ ಅಪನಂಬಿಕೆ ಹೋಗಲಾಡಿಸಲು ಸಹೋದ್ಯೋಗಿಗಳ ಸಹಕಾರ, ಶಾಲಾಭಿವೃದ್ಧಿ ಸಮಿತಿಯ ಬೆಂಬಲ ಕಾರಣ. ಎ.ಜಿ.ನಿತ್ಯಾನಂದ, ಹೊನ್ನೇತಾಳು ಶಾಲೆ ಎಸ್‌ಡಿಎಂಸಿ ಅಧ್ಯಕ್ಷಊರ ಮಕ್ಕಳ ಹಿತದ ಈ ಕಾರ್ಯಕ್ಕೆ ಹೊನ್ನೇತಾಳು ಗ್ರಾಮಸ್ಥರು ಜಾತಿ, ಧರ್ಮ, ಬೇಧವಿಲ್ಲದೇ ಬೆಂಬಲ ನೀಡಿದ್ದಾರೆ. ತಾಲ್ಲೂಕಿನಲ್ಲಿಯೇ ಮಾದರಿ ಶಾಲೆಯ ಈ ಶ್ರೇಯ ಹೀಗೆಯೇ ಮುಂದುವರಿಯಲಿ ಎಂಬುದು ನಮ್ಮ ಆಶಯ.
Dailyhunt
Disclaimer: This content has not been generated, created or edited by Dailyhunt. Publisher: Prajavani