ಜೇವರ್ಗಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಪ್ರತಿ ಮಂಗಳವಾರ ವಾರದ ಸಂತೆ ನಡೆಯುವುದರಿಂದ ವಾಹನ ದಟ್ಟಣೆ ಉಂಟಾಗುತ್ತಿದೆ. ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದರೂ ಸಂತೆ ಸ್ಥಳಾಂತರಿಸುವ ಕಾರ್ಯ ನಡೆದಿಲ್ಲ.
ಪಟ್ಟಣ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, 23 ವಾರ್ಡ್‌ಗಳಿವೆ.
ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಮಾರುವ-ಕೊಳ್ಳುವವರಿಗೆ ಸೌಲಭ್ಯಗಳಿಲ್ಲ. ಮಳೆ ಬಂದರೆ ಗೋಳು ಹೇಳತೀರದು.
ಇಲ್ಲಿನ ಡಾ.ಅಂಬೇಡ್ಕರ್ ಸರ್ಕಲ್‌ನಿಂದ ಕನಕದಾಸ ಚೌಕ್‌ವರೆಗಿನ ಮುಖ್ಯರಸ್ತೆ ಮೇಲೆ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಗೆ ಜೇವರ್ಗಿ ಸೇರಿ ಸುತ್ತಲಿನ ಅನೇಕ ಹಳ್ಳಿಗಳ ರೈತರು ಮತ್ತು ಮಾರಾಟಗಾರರು ತರಕಾರಿ ಮಾರಾಟಕ್ಕೆ ಬರುತ್ತಾರೆ.
ತರಕಾರಿ ಕೊಳ್ಳಲು ಸಾವಿರಾರು ಸಂಖ್ಯೆಯ ಗ್ರಾಹಕರು ಬರುತ್ತಾರೆ. ಆದರೆ, ಈವರೆಗೂ ವಾರದ ಸಂತೆಗೆ ಸ್ಥಳೀಯ ಅಥವಾ ತಾಲ್ಲೂಕು ಆಡಳಿತ ಕಾಯಂ ಜಾಗ ಗುರುತಿಸಿಲ್ಲ. ಇದ್ದ ಜಾಗದಲ್ಲಿ ಸಂತೆ ನಡೆಯುತ್ತಿದ್ದರೂ ಕುಡಿಯುವ ನೀರು, ಶೌಚಾಲಯ ಸೇರಿ ಬೇರೆ ಸೌಲಭ್ಯಗಳಿಲ್ಲ. ತ್ಯಾಜ್ಯ ಹಾಕಲು ಸ್ಥಳವಿಲ್ಲ. ಇಕ್ಕಟ್ಟಾದ ಸ್ಥಳ, ಸಂತೆಗೆ ಬಂದು ಹೋಗುವವರಿಗೆ ವಾಹನಗಳ ತೊಂದರೆ ಇಲ್ಲಿ ತಪ್ಪಿದ್ದಲ್ಲ. ದ್ವಿಚಕ್ರ ವಾಹನ ಸವಾರರಿಗೆ ವಾಹನ ನಿಲುಗಡೆಗೆ ಸರಿಯಾದ ಜಾಗವಿಲ್ಲ.
ಸಂತೆ ಮುಗಿದ ಬಳಿಕ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು, ಹಂದಿಗಳ ಹಾವಳಿ ಹೆಚ್ಚಾಗಿದೆ.
ಕಸ ಮತ್ತು ನಿಂತ ನೀರಿನಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗಿದೆ. ಸಂತೆ ದಿನ ಅಂಗಡಿಗಳಿಂದ ಪ್ರತಿವಾರ ಸುಂಕ ವಸೂಲಿ ಮಾಡಲಾಗುತ್ತಿದೆ. ಆದರೆ, ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಅಥವಾ ಮೂಲ ಸೌಕರ್ಯ ಒದಗಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇಷ್ಟೆಲ್ಲ ತೊಂದರೆ ಇದ್ದರೂ ಸಂತೆ ಜಾಗದ ಕುರಿತು ಯಾರೂ ಚಿಂತೆ ಮಾಡುತ್ತಿಲ್ಲ ಎಂಬುದು ವ್ಯಾಪಾರಿಗಳ ಅಳಲಾಗಿದೆ.
ಪಟ್ಟಣದಲ್ಲಿ ನಡೆಯುವ ವಾರದ ಸಂತೆಯಿಂದ ವ್ಯಾಪಾರಿಗಳು, ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಸಂತೆ ಸ್ಥಳಾಂತರ ಮಾಡಬೇಕು ಎನ್ನುತ್ತಾರೆ ಯನಗುಂಟಿ ನಿವಾಸಿ ಗುರುಲಿಂಗಯ್ಯಸ್ವಾಮಿ.
2018ರಲ್ಲಿ ಅಂದಿನ ತಹಶೀಲ್ದಾರ್ ಬಸಲಿಂಗಪ್ಪ ನಾಯ್ಕೋಡಿ ಅವರು ವಾಹನ ದಟ್ಟಣೆಯನ್ನು ಮನಗಂಡು ವಾರದ ಸಂತೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸಿದ್ದರು. ಗ್ರಾಹಕರ ಕೊರತೆ ಸೇರಿದಂತೆ ಹಲವು ಕಾರಣ ಒಡ್ಡಿದ್ದ ವ್ಯಾಪಾರಿಗಳು, ನಾಯ್ಕೋಡಿ ಅವರ ವರ್ಗಾವಣೆ ಬಳಿಕ ಹೆದ್ದಾರಿ ಬದಿಯಲ್ಲೇ ಮತ್ತೆ ಸಂತೆ ಆರಂಭಿಸಿದರು. ಎಪಿಎಂಸಿಗೆ ವಾರದ ಸಂತೆಯನ್ನು ಸ್ಥಳಾಂತರಿಸಲು ಕ್ರಮ ಕೈಗೊಂಡರೆ ಸಮಸ್ಯೆ ಶಾಶ್ವತವಾಗಿ ಪರಿಹರಿಸಲು ಸಾಧ್ಯ ಎಂಬುದು ಸ್ಥಳೀಯರ ಅಂಬೋಣ.
ಮಲ್ಲಣ್ಣ ಯಲಗೋಡ, ತಹಶೀಲ್ದಾರ್ಸಂತೆ ಸ್ಥಳಾಂತರದ ಕುರಿತು ಶಾಸಕರ ಜತೆ ಚರ್ಚಿಸಿ ಕ್ರಮವಹಿಸಲಾಗುವುದು. ಸ್ವಚ್ಛತೆಗೆ ಅಗತ್ಯ ಕ್ರಮ ವಹಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಮಹಿಮೂದ್ ನೂರಿ ಉಪಾಧ್ಯಕ್ಷ ಟಿಎಪಿಸಿಎಂಎಸ್ ಜೇವರ್ಗಿಹೆದ್ದಾರಿಯಲ್ಲಿ ಸಂತೆ ನಡೆಯುವುದರಿಂದ ಸಮಸ್ಯೆ ಉಂಟಾಗಿದೆ. ಎಲ್ಲರ ಅನುಕೂಲಕ್ಕಾಗಿ ಶಾಶ್ವತ ಮಾರುಕಟ್ಟೆ ನಿರ್ಮಿಸಬೇಕುಸುತ್ತಮುತ್ತ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿರುವ ಕಾರಣ ಸಂತೆಯಲ್ಲಿನ ವ್ಯಾಪಾರಿಗಳ ಕಿರುಚಾಟ, ಗದ್ದಲದಿಂದ ಶಾಲಾ ಮಕ್ಕಳು, ಕಚೇರಿ ಸಿಬ್ಬಂದಿ ಬೇಸತ್ತು ಹೋಗಿದ್ದಾರೆ. ಪಟ್ಟಣದಲ್ಲಿ ಪ್ರಮುಖ ಎರಡು ಹೆದ್ದಾರಿಗಳು ಹಾದು ಹೋಗಿರುವುದರಿಂದ ನಿತ್ಯ ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಇದರ ನಡುವೆ ಜೀವ ಕೈಯಲ್ಲಿಡಿದು ವ್ಯಾಪಾರ ಮಾಡಬೇಕಾದ ಅನಿವಾರ್ಯತೆ ಹಲವರಿಗೆ ಎದುರಾಗಿದೆ.ಸಂತೆ ಗದ್ದಲದಲ್ಲಿ ಶಾಲೆ!ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-31-446315762

