ಕ್ರಿಕೆಟ್
IPL 2021: ಏಪ್ರಿಲ್ 9ರಿಂದ ಐಪಿಎಲ್ ಕ್ರಿಕೆಟ್ ಆರಂಭ, ಪ್ರೇಕ್ಷಕರಿಗಿಲ್ಲ ಪ್ರವೇಶ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ ಟಿ20 ಕ್ರಿಕೆಟ್ ಟೂರ್ನಿಯು ಏಪ್ರಿಲ್ 9 ರಿಂದ ಮೇ 30ವರೆಗೆ ಭಾರತದಲ್ಲಿಯೇ ನಡೆಯಲಿದೆ.
ಭಾನುವಾರ ನಡೆದ ಐಪಿಎಲ್ ಆಡಳಿತ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಯಿತು. ವೇಳಾಪಟ್ಟಿಯನ್ನೂ ಬಿಡುಗಡೆ ಮಾಡಲಾಯಿತು. ಬೆಂಗಳೂರು, ಮುಂಬೈ, ಅಹಮದಾಬಾದ್, ಚೆನ್ನೈ, ದೆಹಲಿ ಮತ್ತು ಕೋಲ್ಕತ್ತ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಮೇ 30ರಂದು ಅಹಮದಾಬಾದಿನ ಮೊಟೇರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಪ್ರೇಕ್ಷಕರಿಗಿಲ್ಲ ಅವಕಾಶ: ಕೋವಿಡ್ ಪ್ರಸರಣ ತಡೆ ನಿಯಮದ ಕಾರಣ ಐಪಿಎಲ್ ಪಂದ್ಯಗಳು ನಡೆಯುವ ಆರು ಸ್ಥಳಗಳಲ್ಲಿಯೂ ಪ್ರೇಕ್ಷಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯು ಪ್ರತಿದಿನ ಹೆಚ್ಚಾಗುತ್ತಿವೆ. ಆದರೆ ಎಲ್ಲ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದ್ದು ಪಂದ್ಯಗಳನ್ನು ನಡೆಸಲು ಸದ್ಯ ತೀರ್ಮಾನಿಸಲಾಗಿದೆ. ಪರಿಸ್ಥಿತಿಯ ಕುರಿತು ಅವಲೋಕಿಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಸಂಜೆಯ ಪಂದ್ಯದ ಸಮಯದಲ್ಲಿಯೂ ಬದಲಾವಣೆ ಮಾಡಲಾಗಿದೆ. ಈ ಮೊದಲು ಇದ್ದ ರಾತ್ರಿ 8 ಗಂಟೆ ಬದಲು 7.30ಕ್ಕೆ ಪಂದ್ಯಗಳು ಆರಂಭವಾಗಲಿವೆ. ಮಧ್ಯಾಹ್ನದ ಪಂದ್ಯಗಳು 3.30ಕ್ಕೆ ನಡೆಯಲಿವೆ. ಹೋದ ವರ್ಷ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದ ಕಾರಣ, ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಆಯೋಜಿಸಲಾಗಿತ್ತು.
🚨 BCCI announces schedule for VIVO IPL 2021 🚨
The season will kickstart on 9th April in Chennai and the final will take place on May 30th at the Narendra Modi Stadium, Ahmedabad.
More details here - https://t.co/yKxJujGGcD #VIVOIPL pic.twitter.com/qfaKS6prAJ
- IndianPremierLeague (@IPL) March 7, 2021