ಚೆನ್ನೈ: ಇಲ್ಲಿ ಮುಕ್ತಾಯಗೊಂಡ 2026ರ ಐಪಿಎಲ್‌ನ 44 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿದೆ. ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ 'ಇದು ನಮ್ಮ ಸೀಸನ್ ಅಲ್ಲ' ಎಂದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಗಳಿಸಿತು. ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ,' ಇದು ನಮ್ಮ ಸೀಸನ್ ಆಗಿಲ್ಲ. ಎದುರಾಳಿ ತಂಡದವರು ನಮಗಿಂತಲೂ ಉತ್ತಮವಾಗಿ ಆಡಿದರು. ಉತ್ತಮವಾಗಿ ಬೌಲಿಂಗ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಮಾಡಿದರು' ಎಂದು ಹಾರ್ದಿಕ್ ಹೇಳಿದ್ದಾರೆ.
'ಮೊದಲು ಬ್ಯಾಟಿಂಗ್ ಮಾಡಿದ ನಾವು 180-190 ಮೊತ್ತವನ್ನು ಕಲೆಹಾಕಬೇಕಿತ್ತು. ಆದರೆ ಆ ಮೊತ್ತವನ್ನು ಸಾಧಿಸಲಾಗಲಿಲ್ಲ. ಸಿಎಸ್‌ಕೆ ತಂಡದ ಬೌಲಿಂಗ್ ಉತ್ತಮವಾಗಿತ್ತು. ನಮ್ಮ ಬ್ಯಾಟಿಂಗ್ ವೈಫಲ್ಯ ಸೋಲಿನ ಕಾರಣಗಳಲ್ಲಿ ಒಂದಾಗಿದೆ. ಎದುರಾಳಿಗಳ ವಿಕೆಟ್ ಪಡೆಯಲು ಅದ್ಭುತವಾದ ಬೌಲಿಂಗ್ ಮಾಡುವುದಷ್ಟೇ ಆಯ್ಕೆಯಾಗಿತ್ತು. ಅವರು ಉತ್ತಮ ಆಟವಾಡಿದರು' ಎಂದಿದ್ದಾರೆ.
ಪಂದ್ಯದ ಬಳಿಕ ಮುಂಬೈ ಇಂಡಿಯನ್ಸ್ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 9 ಸ್ಥಾನಕ್ಕೆ ಕುಸಿದಿದೆ. ಈವರೆಗೆ ಆಡಿದ 9 ಪಂದ್ಯಗಳಲ್ಲಿ 2 ರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಸದ್ಯ ಪ್ಲೇಆಫ್ ರೇಸ್‌ನಿಂದ ಭಾಗಶಃ ಹೊರಬಿದ್ದಿದೆ.

