ಕೈರೊ (ಎಪಿ): ಇರಾನ್ ಹಾಗೂ ಅಮೆರಿಕ ನಡುವಿನ ಯುದ್ಧ ಕೊನೆಗೊಳಿಸಿ, ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ನಿಟ್ಟಿನಲ್ಲಿ ಸಂಧಾನಕಾರರು ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂವರು ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮುಂದಿನ ಸೋಮವಾರ ಈ ಸಂಬಂಧ ಮಾತುಕತೆ ಮತ್ತೆ ಆರಂಭಗೊಳ್ಳುವ ನಿರೀಕ್ಷೆಯಿದೆ.
ಉಭಯ ರಾಷ್ಟ್ರಗಳ ನಡುವಿನ ಯುದ್ಧವು 8ನೇ ತಿಂಗಳಿಗೆ ಕಾಲಿಟ್ಟಿದ್ದು, ಜಾಗತಿಕ ಮಟ್ಟದಲ್ಲಿ ತೀವ್ರ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಜಾಗತಿಕವಾದ ಅತ್ಯಂತ ಪ್ರಮುಖವಾದ ಜಲಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಮತ್ತೆ ಹಡಗುಗಳ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ವೇಗ ಪಡೆದುಕೊಂಡಿವೆ.
ಒಂದೊಮ್ಮೆ ಇರಾನ್ ಬಂದರುಗಳ ಮೇಲೆ ನಿರ್ಬಂಧ, ಇರಾನ್‌ಗೆ ಸೇರಿದ ಆಸ್ತಿಗಳ ಮುಟ್ಟುಗೋಲು ಹಾಗೂ ಇರಾನ್‌ನ ತೈಲ ಮಾರಾಟಕ್ಕೆ ವಿಧಿಸಿರುವ ನಿರ್ಬಂಧವನ್ನು ಹಿಂದಕ್ಕೆ ಪಡೆದರೆ, ಜಲಸಂಧಿ ತೆರೆಯಲಾಗುವುದು ಎಂದು ಇರಾನ್ ತಿಳಿಸಿದೆ. ಆದರೆ, ಈ ಪ್ರಸ್ತಾವವನ್ನು ಸ್ಪಷ್ಟವಾಗಿ ತಿರಸ್ಕರಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಳೆದ ವಾರವಷ್ಟೇ ಪತ್ರಕರ್ತರಿಗೆ ತಿಳಿಸಿದ್ದರು. ಹೀಗಾಗಿ, ಮತ್ತೆ ಅನಿಶ್ಚಿತತೆ ಮುಂದುವರಿದಿದೆ.
ಇರಾನ್‌ನ ವಿದೇಶಾಂಗ ಸಚಿವರು ಈಗಲೂ ನ್ಯೂಯಾರ್ಕ್‌ನಲ್ಲಿಯೇ ಇದ್ದು, ಮಧ್ಯವರ್ತಿಗಳ ಉತ್ತರಕ್ಕಾಗಿ ಎದುರು ನೋಡುತ್ತಿದ್ದಾರೆ. ಉಭಯ ರಾಷ್ಟ್ರಗಳ ನಡುವೆ ಕತಾರ್ ಮಧ್ಯಸ್ಥಿಕೆ ವಹಿಸಿದೆ.
ಆಯತೊಲ್ಲಾ ಮೊಜ್ತಬಾ ಖಮೇನಿ
