Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ಮೇಲೆ ಅಮೆರಿಕ ದಾಳಿ:ಯುದ್ಧ ಉಲ್ಬಣಗೊಳಿಸದಂತೆ ಟ್ರಂಪ್‌ಗೆ ಸೌದಿ ಯುವರಾಜ ಮನವಿ

ಇರಾನ್ ಮೇಲೆ ಅಮೆರಿಕ ದಾಳಿ:ಯುದ್ಧ ಉಲ್ಬಣಗೊಳಿಸದಂತೆ ಟ್ರಂಪ್‌ಗೆ ಸೌದಿ ಯುವರಾಜ ಮನವಿ

ವಾಷಿಂಗ್ಟನ್: ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದೂರವಾಣಿ ಕರೆ ನಡೆಸಿದ್ದು, ಇರಾನ್ ಜೊತೆಗಿನ ಸಂಘರ್ಷವನ್ನು ಅಮೆರಿಕ ಮತ್ತಷ್ಟು ಉಲ್ಬಣಗೊಳಿಸುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಅಮೆರಿಕವು ಇರಾನ್‌ನ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡರೆ ಅಥವಾ ಇತರ ಪ್ರಮುಖ ಮೂಲಸೌಕರ್ಯಗಳ ಮೇಲೆ ಭಾರಿ ದಾಳಿ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಇರಾನ್, ಸೌದಿ ಅರೇಬಿಯಾ ಹಾಗೂ ಇತರ ಕೊಲ್ಲಿ ದೇಶಗಳ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಬಹುದು ಎಂದು ಸೌದಿ ಅರೇಬಿಯಾ ಆತಂಕಗೊಂಡಿದೆ ಎಂದು ವರದಿಯಾಗಿದೆ.

ಇರಾನ್ ವಿರುದ್ಧ ಕೈಗೊಳ್ಳಲು ಆಲೋಚಿಸುತ್ತಿರುವ ಹೊಸ ಕ್ರಮಗಳ ಕುರಿತು ಶನಿವಾರದ(ಆ.1) ಕರೆಯಲ್ಲಿ ಮೊಹಮ್ಮದ್ ಬಿನ್ ಸಲ್ಮಾನ್ ಅವರು, ಟ್ರಂಪ್ ಅವರಿಂದ ಸ್ಪಷ್ಟನೆ ಕೋರಿದ್ದಾರೆ.

ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಬೇಕೇ ಬೇಡವೇ ಎಂಬುದನ್ನು ಟ್ರಂಪ್ ಪರಿಗಣಿಸುತ್ತಿರುವ ವೇಳೆಯಲ್ಲೇ ಈ ಚರ್ಚೆ ನಡೆದಿದೆ. ಆದರೆ ಈ ಕುರಿತು ಶ್ವೇತಭವನವು ತಕ್ಷಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸೌದಿ ಅರೇಬಿಯಾ ಈ ವಾರದ ಆರಂಭದಲ್ಲಿ ಇರಾಕ್‌ನಲ್ಲಿ ಇರಾನ್ ಬೆಂಬಲಿತ ಬಂಡುಕೋರರು ಬಳಸುತ್ತಿದ್ದ ವಿವಿಧ ಸಾಗಣೆ ಮತ್ತು ಶಸ್ತ್ರಾಸ್ತ್ರ ನೆಲೆಗಳ ಮೇಲೆ ದಾಳಿ ಮಾಡಲು ಅಮೆರಿಕದೊಂದಿಗೆ ಕೈಜೋಡಿಸಿತ್ತು. ಆದರೆ, ಕಳೆದ ಐದು ತಿಂಗಳಿನಿಂದ ನಡೆಯುತ್ತಿರುವ ಈ ಸಂಘರ್ಷಕ್ಕೆ ಅಂತ್ಯವಾಡಲು ಅಮೆರಿಕ ಮತ್ತು ಇರಾನ್ ಮತ್ತೆ ಮಾತುಕತೆಗೆ ಬರಬೇಕೆಂದು ಸೌದಿ ಒತ್ತಾಯಿಸುತ್ತಿದೆ.

ಇದರ ಜೊತೆಗೆ, ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇರಾನ್ ಕುರಿತ ತಂತ್ರಗಳ ಬಗ್ಗೆ ಚರ್ಚಿಸಲು ಸೌದಿ ರಕ್ಷಣಾ ಸಚಿವ ಖಾಲಿದ್ ಬಿನ್ ಸಲ್ಮಾನ್ ಅವರನ್ನು ಅಧ್ಯಕ್ಷ ಟ್ರಂಪ್ ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರೊಂದಿಗೆ ಪ್ರತ್ಯೇಕ ಸಭೆಗಳಿಗಾಗಿ ಈ ವಾರದ ಆರಂಭದಲ್ಲೇ ವಾಷಿಂಗ್ಟನ್‌ಗೆ ಕಳುಹಿಸಿಕೊಟ್ಟಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani