Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ಮೇಲೆ ಕ್ಷಿಪಣಿ ದಾಳಿ ಆರಂಭಿಸಿ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್

ಇರಾನ್‌ ಮೇಲೆ ಕ್ಷಿಪಣಿ ದಾಳಿ ಆರಂಭಿಸಿ ತುರ್ತು ಪರಿಸ್ಥಿತಿ ಘೋಷಿಸಿದ ಇಸ್ರೇಲ್

ಜೆರುಸಲೇಮ್‌: 'ಇರಾನ್ ಮೇಲೆ ಮುನ್ನೆಚ್ಚರಿಕೆಯ ದಾಳಿ ನಡೆಸಿರುವ ಇಸ್ರೇಲ್‌, ಮುಂಜಾಗ್ರತಾ ಕ್ರಮವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ' ಎಂದು ಅಲ್ಲಿನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಶನಿವಾರ ಹೇಳಿದ್ದಾರೆ.

ಇಸ್ರೇಲ್‌ಗೆ ಬೆದರಿಕೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇರಾನ್‌ ಮೇಲೆ ದಾಳಿ ಮಾಡಿರುವುದಾಗಿ ಕಾಟ್ಜ್‌ ಹೇಳಿದ್ದಾರೆ.

ದಾಳಿ ಆರಂಭಕ್ಕೂ ಮೊದಲು ದೇಶದಲ್ಲಿ ಸೈರನ್ ಮೊಳಗಿತು. ದೇಶದ ನಾಗರಿಕರು ಬಾಂಬ್‌ ಶೆಲ್ಟರ್‌ಗಳ ಬಳಿಯೇ ಇರುವಂತೆ ಹಾಗೂ ಅನಗತ್ಯವಾಗಿ ಓಡಾಡದಂತೆ ಇಸ್ರೇಲ್ ಸೇನೆಯ ಅಧಿಕಾರಿ ದೇಶದ ನಾಗರಿಕರಿಗೆ ಸೂಚನೆ ನೀಡಿದ್ದಾರೆ.

'ದೇಶದತ್ತ ಕ್ಷಿಪಣಿಗಳು ತೂರಿಬರುವ ಸಾಧ್ಯತೆ ಇದ್ದು, ಮುಂಜಾಗ್ರತಾ ಕ್ರಮವಾಗಿ ನಾಗರಿಕರನ್ನು ಸನ್ನದ್ಧಗೊಳಿಸುವ ಪ್ರಕ್ರಿಯೆ ಇದಾಗಿದೆ. ಸದ್ಯಕ್ಕೆ ಆಶ್ರಯ ತಾಣಗಳಿಗೆ ತೆರಳುವ ಅಗತ್ಯವಿಲ್ಲ. ಆದರೆ ಅದರ ಸಮೀಪವೇ ಇರುವಂತೆ ಎಚ್ಚರವಹಿಸುವುದು ಸೂಕ್ತ' ಎಂದು ಸೇನೆ ಹೇಳಿದೆ.

ಇದೇ ಸಂದರ್ಭದಲ್ಲಿ ಟೆಲ್‌ ಅವೀವ್‌ನಿಂದ ದೆಹಲಿಗೆ ಪ್ರಯಾಣ ಬೆಳೆಸಲು ಸಜ್ಜಾಗಿದ್ದ ಏರ್‌ ಇಂಡಿಯಾ ವಿಮಾನ ಎಐ 140 ಏರಲು ಸಿದ್ಧರಾಗುತ್ತಿದ್ದ ಪ್ರಯಾಣಿಕರು ತಮ್ಮ ವಸ್ತುಗಳನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು, ಬಾಂಬ್ ಶೆಲ್ಟರ್‌ಗಳಿಗೆ ದೌಡಾಯಿಸಿದರು ಎಂದು ವರದಿಯಾಗಿದೆ.

'ಎಲ್ಲವನ್ನೂ ಮರೆತುಬಿಡಿ, ತಕ್ಷಣ ಬಾಂಬ್ ಶೆಲ್ಟರ್‌ಗೆ ತೆರಳಿ' ಎಂಬ ಸೂಚನೆ ಬಂತು ಎಂದು ಪ್ರಯಾಣಿಕರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಭಾರತ ಮೂಲದ ವಿಮಾನಯಾನ ಸಂಸ್ಥೆಯು ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ಒಂದು ವಾರ ತನ್ನ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಅದರ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದ್ದರಿಂದ ಟೆಹರಾನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದ್ದನ್ನು ಎಎನ್‌ಐ ವರದಿ ಮಾಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani