Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ಮುಂದಿಟ್ಟ ಪ್ರಸ್ತಾವಕ್ಕೆ ಟ್ರಂಪ್‌ ಕಿಡಿ: ಶಾಂತಿ ಒಪ್ಪಂದ ಮತ್ತೆ ಅನಿಶ್ಚಿತ

ಇರಾನ್‌ ಮುಂದಿಟ್ಟ ಪ್ರಸ್ತಾವಕ್ಕೆ ಟ್ರಂಪ್‌ ಕಿಡಿ: ಶಾಂತಿ ಒಪ್ಪಂದ ಮತ್ತೆ ಅನಿಶ್ಚಿತ

ದುಬೈ/ವಾಷಿಂಗ್ಟನ್‌/ಪ್ಯಾರಿಸ್‌/ಟೆಹರಾನ್‌: ಪಶ್ಚಿಮ ಏಷ್ಯಾದಲ್ಲಿನ ಯುದ್ಧ ಕೊನೆಗಾಣಿಸುವ ಕುರಿತಂತೆ ಇರಾನ್‌ ಮುಂದಿಟ್ಟಿರುವ ಒಪ್ಪಂದದ ರೂಪವನ್ನು ಒಪ್ಪಲು ಸಾಧ್ಯ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಹರಿಹಾಯ್ದಿದ್ದಾರೆ.

ಇರಾನ್‌ ಈಗ ಮುಂದಿಟ್ಟಿರುವ ಒಪ್ಪಂದವು ಅದು ಈ ಮೊದಲು ಮಂಡಿಸಿದ್ದ ಪ್ರಸ್ತಾವಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಇನ್ನೊಂದೆಡೆ, 'ಅಮೆರಿಕ ಮತ್ತು ಇರಾನ್‌ ನಡುವಿನ ಮಾತುಕತೆಯು ಶಾಂತಿ ಒಪ್ಪಂದವನ್ನು ಅಂತಿಮಗೊಳಿಸುವ ಹಂತವನ್ನು ತಲುಪಿರಲೇ ಇಲ್ಲ' ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಹೇಳಿದ್ದಾರೆ.

ಎರಡೂ ದೇಶಗಳು ತಮ್ಮ ಭಿನ್ನ ನಿಲುವುಗಳನ್ನು ಸ್ಷಪ್ಟವಾಗಿ ಹೇಳಿರುವ ಕಾರಣ ಶಾಂತಿ ಒಪ್ಪಂದದ ವಿಚಾರವಾಗಿ ಮತ್ತೆ ಅನಿಶ್ಚಿತತೆ ಮೂಡಿದೆ.

'ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಕೈಬಿಡಬೇಕು ಎಂಬುದು ಅಮೆರಿಕದ ಒತ್ತಾಯವಾಗಿತ್ತು. ಇದಕ್ಕೆ ಇರಾನ್‌ ಸಮ್ಮತಿಸಿತ್ತು. ಆದರೆ, ಈಗ ಅದು ಮುಂದಿಟ್ಟಿರುವ ಪ್ರಸ್ತಾವವು ಇದಕ್ಕೆ ವ್ಯತಿರಿಕ್ತವಾಗಿದೆ' ಎಂದು ಟ್ರಂಪ್‌ ಅವರು ಸಾಮಾಜಿಕ ಜಾಲತಾಣ 'ಟ್ರೂಥ್‌ ಸೋಷಿಯಲ್‌'ನಲ್ಲಿ ಬರೆದುಕೊಂಡಿದ್ದಾರೆ.

ಹೊರ್ಮುಜ್‌ ಜಲಸಂಧಿ ಮೇಲೆ ತನ್ನ ನಿಯಂತ್ರಣ ಅಬಾಧಿತವಾಗಿರಲಿದೆ. ಯುರೇನಿಯಂ ಸಮೃದ್ಧೀಕರಣಗೊಳಿಸುವುದು ತನ್ನ ಹಕ್ಕು ಎಂಬುದಾಗಿ ಇರಾನ್ ಹೇಳಿದೆ.

ಪಶ್ಚಿಮ ಏಷ್ಯಾ ಸಂಘರ್ಷವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್‌ ನಡುವಿನ ಶಾಂತಿ ಒಪ್ಪಂದಕ್ಕೆ ಭಾನುವಾರದೊಳಗೆ ಸಹಿ ಹಾಕುವ ನಿರೀಕ್ಷೆ ಇದೆ. ಶನಿವಾರದೊಳಗೆ ಒಪ್ಪಂದದ ಕರಡನ್ನು ಅಂತಿಮಗೊಳಿಸಲು ಉದ್ದೇಶಿಸಲಾಗಿದೆ. ಒಪ್ಪಂದಕ್ಕೆ ಸಹಿ ಹಾಕುವ ಸ್ಥಳ ಇನ್ನೂ ನಿಗದಿಯಾಗಿಲ್ಲ. ಆದರೆ, ಜಿನೀವಾದಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಈ ಮೊದಲು ಮೂಲಗಳು ತಿಳಿಸಿದ್ದವು.

ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್‌ ಮತ್ತು ಇರಾನ್‌ ಸಂಸತ್ತಿನ ಸ್ಪೀಕರ್‌ ಮೊಹಮ್ಮದ್‌ ಬಾಖಿರ್‌ ಖಾಲೀಬಾಫ್‌ ಅವರು ಈ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಇವೇ ಮೂಲಗಳು ಹೇಳಿದ್ದವು.

'ಯುದ್ಧ ಅಂತ್ಯ': ಇದಕ್ಕೂ ಮುನ್ನ, 'ಇರಾನ್‌ ಜತೆಗಿನ ಯುದ್ಧವನ್ನು ಅಂತ್ಯಗೊಳಿಸಲಾಗಿದೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಘೋಷಿಸಿದ್ದರು.

ಇರಾನ್‌ ಮೇಲೆ ಭೀಕರ ದಾಳಿ ನಡೆಸುವುದಾಗಿ ಹಾಗೂ ತೈಲ ರಫ್ತು ಕೇಂದ್ರವಾದ ಖಾರ್ಗ್‌ ದ್ವೀಪವನ್ನು ವಶಪಡಿಸಿಕೊಳ್ಳುವುದಾಗಿ ಟ್ರಂಪ್‌ ಬೆದರಿಕೆ ಹಾಕಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ, ಇರಾನ್‌ ಮೇಲಿನ ಸೇನಾ ದಾಳಿಯನ್ನು ಹಿಂಪಡೆದಿದ್ದರು.

ಓವಲ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್‌, 'ಎಂದಿಗೂ ಅಣ್ವಸ್ತ್ರಗಳನ್ನು ಹೊಂದುವುದಿಲ್ಲ ಎಂದು ಇರಾನ್‌ ಒಪ್ಪಿಕೊಂಡಿದೆ. ಜತೆಗೆ, ಯಾವುದೇ ರೀತಿಯಲ್ಲಿ ಅಣ್ವಸ್ತ್ರ ಖರೀದಿಸುವುದಿಲ್ಲ, ಅಭಿವೃದ್ಧಿಪಡಿಸುವುದಿಲ್ಲ, ರೂಪಿಸುವುದಿಲ್ಲ ಎಂದು ತಿಳಿಸಿದೆ. ಒಟ್ಟಾರೆ ಅದರ ಬಳಿ ಅಣ್ವಸ್ತ್ರ ಇರುವುದಿಲ್ಲ' ಎಂದು ತಿಳಿಸಿದ್ದರು.

'ಇರಾನ್‌ ಭೀಕರ ಹೊಡೆತ ಅನುಭವಿಸಿದೆ. ನಮಗಿಂತ ಹೆಚ್ಚಾಗಿ ಇರಾನ್‌ ಈ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ' ಎಂದೂ ಹೇಳಿದ್ದರು.

-ಇಸ್ಮಾಯಿಲ್‌ ಬಕಾಯ್‌, ವಿದೇಶಾಂಗ ಸಚಿವಾಲಯದ ವಕ್ತಾರಶಾಂತಿ ಒಪ್ಪಂದದ ಕುರಿತು ಅಂತಿಮ ತೀರ್ಮಾನಕ್ಕೆ ಇರಾನ್‌ ಬಂದಿಲ್ಲ-ಡೊನಾಲ್ಡ್‌ ಟ್ರಂಪ್, ಅಮೆರಿಕ ಅಧ್ಯಕ್ಷ ಒಪ್ಪಂದ ಕುರಿತಂತೆ ಇರಾನ್‌ ಹೇಳುತ್ತಿರುವುದಕ್ಕೂ ವಾಸ್ತವವಾಗಿ ಅದು ನಡೆದುಕೊಳ್ಳುತ್ತಿರುವುದಕ್ಕೂ ಸಂಬಂಧವೇ ಇಲ್ಲ. ಅವರು ನಂಬಿಕೆಗೆ ಅರ್ಹರಲ್ಲ-ಅಬ್ಬಾಸ್‌ ಅರಾಘ್ಚಿ, ಇರಾನ್‌ ವಿದೇಶಾಂಗ ಸಚಿವಅಮೆರಿಕ-ಇರಾನ್‌ ನಡುವೆ ಶಾಂತಿ ಒಪ್ಪಂದ ಅಂತಿಮವಾಗಿಲ್ಲ. ಮಾಧ್ಯಮಗಳು ಈ ಕುರಿತು ಕಪೋಲಕಲ್ಪಿತ ಸುದ್ದಿಗಳನ್ನು ಬಿತ್ತರಿಸಬಾರದು.-ಜೆ.ಡಿ.ವ್ಯಾನ್ಸ್‌, ಅಮೆರಿಕ ಉಪಾಧ್ಯಕ್ಷಅಮೆರಿಕದ ಜೊತೆಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಾತ್ರಕ್ಕೆ ಇಲ್ಲವೇ ಈ ಕುರಿತ ಸಭೆಗೆ ಹಾಜರಾದರೆ ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್‌ನ ನಿಧಿಗಳನ್ನು ಬಿಡುಗಡೆ ಮಾಡುವುದಿಲ್ಲ. ಎಲ್ಲ ಷರತ್ತುಗಳನ್ನು ಈಡೇರಿಸಿದರೆ ಮಾತ್ರ ಇರಾನ್‌ಗೆ ಎಲ್ಲ ಪ್ರಯೋಜನಗಳು ಸಿಗಲಿವೆ ಎಂಬ ರೀತಿಯಲ್ಲಿ ಒಪ್ಪಂದವನ್ನು ರೂಪಿಸಲಾಗಿದೆ

'ಹೊರ್ಮುಜ್‌ ಮೇಲಿನ ನಿಯಂತ್ರಣ ಬಿಟ್ಟುಕೊಡುವುದಿಲ್ಲ'

ಟೆಹರಾನ್‌: ಹೊರ್ಮುಜ್‌ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಬಿಟ್ಟುಕೊಡುವುದಿಲ್ಲ. ಅಮೆರಿಕದೊಂದಿಗಿನ ಶಾಂತಿ ಒಪ್ಪಂದದ ಕರಡು ಪ್ರತಿಯಲ್ಲೂ ಈ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಇರಾನ್‌ ಸ್ಪಷ್ಟಪಡಿಸಿದೆ.

'ಅಮೆರಿಕ ಮತ್ತು ಇಸ್ರೇಲ್‌ನ ಸೇನಾ ದಾಳಿಗಿಂತ ಮೊದಲು ಇದ್ದ ಪರಿಸ್ಥಿತಿಯ ಪುನರ್‌ಸ್ಥಾಪನೆ ಅಥವಾ ಜಲಸಂಧಿಯ ನಿರ್ವಹಣೆಯನ್ನು ಬಿಟ್ಟುಕೊಡುವ ಅಂಶಗಳನ್ನು ಕರಡು ಪ್ರತಿಯಲ್ಲಿ ಇರಾನ್‌ ಸೇರಿಸಿಲ್ಲ' ಎಂದು ಪ್ರಸ್ತುತ ಅಂತಿಮಗೊಳ್ಳುತ್ತಿರುವ ಕರಡನ್ನು ಉಲ್ಲೇಖಿಸಿ ಇಸ್ಲಾಮಿಕ್‌ ರಿಪಬ್ಲಿಕ್‌ ನ್ಯೂಸ್‌ ಏಜೆನ್ಸಿ (ಐಆರ್‌ಎನ್‌ಎ) ವರದಿ ಮಾಡಿದೆ.

'ಇಸ್ಲಾಮಿಕ್‌ ಗಣರಾಜ್ಯದ ಮೂಲಭೂತ ತತ್ವಗಳ ಚೌಕಟ್ಟಿನೊಳಗೆ ಮಾತ್ರ ಪರಮಾಣು ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸುತ್ತದೆ. ಸಮೃದ್ಧೀಕರಿಸಿದ ಯುರೇನಿಯಂ ಹಕ್ಕನ್ನು ತನ್ನಲ್ಲೇ ಉಳಿಸಿಕೊಳ್ಳುವ ಅಂಶವನ್ನು ಅಂತಿಮ ಒಪ್ಪಂದದಲ್ಲಿ ಸೇರಿಸಲು ಇರಾನ್‌ ಆದ್ಯತೆ ನೀಡುತ್ತದೆ' ಎಂದು ಹೇಳಿದೆ.

ಫೆಬ್ರುವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ನೊಂದಿಗೆ ಯುದ್ಧ ಆರಂಭವಾದಾಗಿನಿಂದ ಹೊರ್ಮುಜ್‌ ಜಲಸಂಧಿಯ ಮೇಲೆ ಇರಾನ್‌ ನಿಯಂತ್ರಣ ಸಾಧಿಸಿದೆ. ಈ ಮಾರ್ಗದ ಮೂಲಕ ಹಡಗುಗಳು ಹಾದು ಹೋಗಬೇಕಾದರೆ ಸೇನೆಯ ಒಪ್ಪಿಗೆ ಪಡೆಯಬೇಕು ಎಂದು ಇರಾನ್‌ ಹೇಳಿತ್ತು.

'ಶಾಂತಿ ಒಪ್ಪಂದದ ಕರಡನ್ನು ಅಂತಿಮಗೊಳಿಸಲಾಗುತ್ತಿದೆ' ಎಂದು ಇರಾನ್‌ನ ಸಮಾಲೋಚನಾ ತಂಡದವರ ಮೂಲವನ್ನು ಉಲ್ಲೇಖಿಸಿ 'ಮೆಹರ್‌' ಸುದ್ದಿ ಸಂಸ್ಥೆ ವರದಿ ಮಾಡಿದೆ.

'ಆ ಕರಡು ಪ್ರತಿಯು ಲೆಬನಾನ್‌ ಸೇರಿದಂತೆ ಎಲ್ಲ ಯುದ್ಧವನ್ನು ಕೊನೆಗೊಳಿಸುತ್ತದೆ. ಇರಾನ್‌ನ ತಡೆಹಿಡಿಯಲಾದ 24 ಬಿಲಿಯನ್‌ ಡಾಲರ್‌ (ಸುಮಾರು ₹2.28 ಲಕ್ಷ ಕೋಟಿ) ಮೊತ್ತದ ಆಸ್ತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಪರಮಾಣು ಕಾರ್ಯಕ್ರಮದ ಕುರಿತು ಮಾತುಕತೆ ನಡೆಸಲು 60 ದಿನಗಳ ಅವಧಿಯನ್ನು ನಿಗದಿಪಡಿಸುತ್ತದೆ' ಎಂದು ಅದು ಹೇಳಿದೆ.

'ಇದು ಇರಾನ್‌ನ ತೈಲ ಮತ್ತು ಪೆಟ್ರೋಕೆಮಿಕಲ್‌ ಉತ್ಪನ್ನಗಳ ಮಾರಾಟದ ಮೇಲಿನ ನಿರ್ಬಂಧಗಳ ಅಮಾನತು ಮತ್ತು ಏಪ್ರಿಲ್‌ 13ರಿಂದ ಜಾರಿಯಲ್ಲಿದ್ದ ಇರಾನ್‌ನ ಬಂದರುಗಳ ಮೇಲಿನ ಅಮೆರಿಕದ ನೌಕಾಪಡೆಯ ದಿಗ್ಬಂಧನವನ್ನು ಸಂಪೂರ್ಣವಾಗಿ ತೆಗೆದುಹಾಕುವುದನ್ನು ಒಳಗೊಂಡಿದೆ' ಎಂದು ತಿಳಿಸಿದೆ.

'ಯುದ್ಧದಿಂದ ಉಂಟಾದ ಹಾನಿಗಾಗಿ ಇರಾನ್‌ಗೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಪರಿಹಾರವನ್ನು ನೀಡಬೇಕು. ಇರಾನ್‌ಗಾಗಿ ಕನಿಷ್ಠ 300 ಬಿಲಿಯನ್‌ ಡಾಲರ್‌ (ಸುಮಾರು 28.52 ಲಕ್ಷ ಕೋಟಿ) ಮೊತ್ತದ ಪುನರ್‌ನಿರ್ಮಾಣ ಯೋಜನೆಗಳನ್ನು ಘೋಷಿಸುವ ಅಂಶಗಳು ಸಹ ಕರಡು ಪ್ರತಿಯಲ್ಲಿವೆ' ಎಂದು ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani