ವಾಷಿಂಗ್ಟನ್: ಇರಾನ್‌ಗೆ ಪರಮಾಣು ಶಸ್ತ್ರಾಸ್ತ್ರ ಹೊಂದಲು ಬಿಡುವುದಿಲ್ಲ ಎಂದು ಪುನರುಚ್ಛರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅದರ ಹಿಂದಿರುವ ಕಾರಣವನ್ನು ತಿಳಿಸಿದ್ದಾರೆ.
ಶುಕ್ರವಾರ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದುವುದು ಜಾಗತಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದಿದ್ದಾರೆ.
'ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಸಾಧ್ಯವಿಲ್ಲ. ಒಂದು ವೇಳೆ ಇರಾನ್ ಪರಮಾಣು ಶಸ್ತ್ರಾಸ್ತ್ರ ಹೊಂದಲು ಅವಕಾಶ ನೀಡಿದರೆ, ತಕ್ಷಣ ಅದನ್ನು ಇಸ್ರೇಲ್ ಮೇಲೆ ಪ್ರಯೋಗಿಸುತ್ತಾರೆ. ನಂತರ ಪಶ್ಚಿಮ ಏಷ್ಯಾದ ಮೇಲೆ ಬಳಸುತ್ತಾರೆ. ಅದರ ನಂತರ ಯುರೋಪ್ ಅವರ ಗುರಿಯಾಗಿರುತ್ತದೆ. ಕೊನೆಯಲ್ಲಿ ನಾವು(ಅಮೆರಿಕ) ಎಂದು ಭಾವಿಸುತ್ತೇನೆ' ಎಂದು ಹೇಳಿದ್ದಾರೆ.
'ಅದೆಲ್ಲ ಸಂಭವಿಸಲು ಸಾಧ್ಯವಿಲ್ಲ. ಅವರ ಬಳಿ 159 ಹಡಗುಗಳಿದ್ದವು. ಪ್ರತಿಯೊಂದು ಹಡಗು ಈಗ ಸಮುದ್ರದ ತಳದಲ್ಲಿದೆ' ಎಂದು ಲೇವಡಿ ಮಾಡಿದ್ದಾರೆ.
ಫೆ.28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ವೈಮಾನಿಕ ದಾಳಿ ಮಾಡಿದ್ದವು. ಇದಕ್ಕೆ ಪ್ರತೀಕಾರವಾಗಿ ಕೊಲ್ಲಿ ರಾಷ್ಟ್ರಗಳ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ನಡೆಸಿತ್ತು. ಯುದ್ಧದಿಂದ ಇಸ್ರೇಲ್ ಮತ್ತು ಇರಾನ್‌ನಲ್ಲಿ ಅಪಾರ ಹಾನಿಯಾಗಿದೆ.
ಏ.7ರಂದು ಇರಾನ್ ಮತ್ತು ಅಮೆರಿಕ ನಡುವೆ ಕದನ ವಿರಾಮ ಏರ್ಪಟ್ಟಿದ್ದು, ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

