ಲೇಹ್ (ಲಡಾಖ್): ಪಶ್ಚಿಮ ಏಷ್ಯಾ ಸಂಘರ್ಷದಿಂದ ಸಂತ್ರಸ್ತರಾಗಿರುವ ಇರಾನ್‌ನ ಜನರಿಗೆ ನೆರವು ನೀಡಲು ಕಾಶ್ಮೀರ ಮತ್ತು ಲಡಾಖ್ ನಿವಾಸಿಗಳು ಅಭಿಯಾನ ಆರಂಭಿಸಿದ್ದಾರೆ.
ಇರಾನ್ ಸಂತ್ರಸ್ತರಿಗಾಗಿ ಒಂದು ಕೋಳಿ ಮೊಟ್ಟೆಯನ್ನು ಬರೋಬ್ಬರಿ ₹25 ಸಾವಿರಕ್ಕೆ ಹರಾಜು ಹಾಕಲಾಗಿದೆ.
ಹೌದು, ಲೇಹ್ ಜಿಲ್ಲೆಯ ಜನರು ಇರಾನ್ ಸಂತ್ರಸ್ತರಿಗಾಗಿ ವಿವಿಧ ರೀತಿಯ ದೇಣಿಗೆಗಳನ್ನು ನೀಡುತ್ತಿದ್ದಾರೆ. ಇದೇ ವೇಳೆ ಒಂದು ಮೊಟ್ಟೆಯು ಬರೋಬ್ಬರಿ ₹25 ಸಾವಿರಕ್ಕೆ ಹರಾಜಾಗಿದೆ.
'ಒಂದು ಮೊಟ್ಟೆಯ ಬೆಲೆ ₹10 ಇದೆ ಎಂದು ಎಲ್ಲರಿಗೂ ತಿಳಿದಿದೆ. ನನ್ನ ಬಳಿ ಹಣವಿದೆ ಎಂಬ ಕಾರಣಕ್ಕೆ ನಾನು ₹25 ಸಾವಿರ ಕೊಟ್ಟು ಮೊಟ್ಟೆ ಖರೀದಿಸಿಲ್ಲ... ಇರಾನ್‌ನಲ್ಲಿ ಮಕ್ಕಳು ಎಷ್ಟೊಂದು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂಬ ಸಂದೇಶ ಇದು ನಮಗೆ ನೀಡುತ್ತದೆ. ಆದ್ದರಿಂದಲೇ ಅವರಿಗಾಗಿ ನಾನು ₹25 ಸಾವಿರ ಪಾವತಿಸಿದ್ದೇನೆ' ಎಂದು ಸ್ಥಳೀಯ ನಿವಾಸಿಯಾದ ಶಬೀರ್ ಹುಸೇನ್ ಹೇಳಿಕೊಂಡಿದ್ದಾರೆ.
'ನಾವು ಪ್ರಾಣ ನೀಡಲು ಸಿದ್ಧರಿದ್ದೇವೆ. ನಾವು ಈ ಸಮುದಾಯಕ್ಕಾಗಿ ಬದುಕಿದ್ದೇವೆ. ನಮ್ಮ ನಾಯಕರು ನಮಗೆ ಏನು ಹೇಳುತ್ತಾರೋ ಅದನ್ನು ನಾವು ಪಾಲಿಸಬೇಕು. ಇದುವರೆಗೆ ನಮ್ಮ ನಾಯಕರು ನಮಗೆ ಯಾವುದೇ ಆದೇಶ ನೀಡಿಲ್ಲ' ಎಂದೂ ಅವರು ತಿಳಿಸಿದ್ದಾರೆ.
ಈಚೆಗೆ ಲಡಾಖ್ ಪ್ರಾಂತ್ಯದ ಕಾರ್ಗಿಲ್‌ನ ಸಪಿ ಗ್ರಾಮದ ವಿಲ್ಲಾಯತ್ ಆಲಿ, ಹುಂಡೈಐ20 ಕಾರನ್ನು ಇರಾನ್ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದರು. ಇದು ಈ ಪ್ರದೇಶದಲ್ಲಿ ಸಂತ್ರಸ್ತ ಇರಾನ್‌ಗೆ ನೀಡಿದ ಬಹುದೊಡ್ಡ ಉಡುಗೊರೆಯಾಗಿದೆ ಎಂದು ವರದಿಯಾಗಿತ್ತು. ಇದು ಹಲವರನ್ನು ದೇಣಿಗೆ ನೀಡಲು ಪ್ರೇರೇಪಿಸಿದೆ. ಕಳೆದ ಎರಡು ದಿನಗಳಲ್ಲಿ ಕಾರ್ಗಿಲ್‌ನಲ್ಲಿ ಮತ್ತೊಬ್ಬರು ಕಾರನ್ನು ದಾನ ಮಾಡಿದ್ದಾರೆ ಎಂದು ಸ್ಥಳೀಯ ಸಂಘಟಕರೊಬ್ಬರು ತಿಳಿಸಿದ್ದರು.
ಕಾಶ್ಮೀರದಲ್ಲೂ ನೆರವಿನ ಅಭಿಯಾನ...
ಕಾರು, ಮೋಟಾರ್ ಸೈಕಲ್‌ಗಳಿಂದ ಹಿಡಿದು ಚಿನ್ನಾಭರಣಗಳು ಮತ್ತು ಹಳೆಯ ತಾಮ್ರದ ಪಾತ್ರೆಗಳವರೆಗೆ ಸಾರ್ವಜನಿಕರು ದೇಣಿಗೆ ನೀಡುತ್ತಿದ್ದಾರೆ. ಕಣಿವೆ ನಾಡಿನಲ್ಲಿ ಈಗ ಸಾರ್ವಜನಿಕ ದೇಣಿಗೆಗಳ ಅಲೆಯೇ ಬೀಸುತ್ತಿದೆ. ಬಿಕ್ಕಟ್ಟಿನಿಂದ ಬಳಲುತ್ತಿರುವ ಇರಾನ್‌ಗೆ ಸಹಾಯಾಸ್ತ ಚಾಚುತ್ತಿದ್ದಾರೆ.
ಶಿಯಾ ಪಂಗಡದವರೇ ಬಹುಸಂಖ್ಯಾತರಾಗಿರುವ ಕಾಶ್ಮೀರ ಕಣಿವೆ ಮತ್ತು ಕಾರ್ಗಿಲ್‌ನಲ್ಲಿ ನೆರವಿನ ಅಭಿಯಾನಗಳು ನಡೆಯುತ್ತಿವೆ. ಕೆಲವರು ವೈಯಕ್ತಿಕವಾಗಿ ಬೆಲೆಬಾಳುವ ವಸ್ತುಗಳನ್ನು ನೀಡುತ್ತಿದ್ದಾರೆ. ಮಸೀದಿಗಳು, ಇಮಾಂಬರ್ಗಾಗಳು ಮತ್ತು ಸರ್ಕಾರೇತರ ಸಂಸ್ಥೆಗಳು ದೇಣಿಗೆಯ ಸಂಗ್ರಹ ಕೇಂದ್ರಗಳಾಗಿ ಮಾರ್ಪಟ್ಟಿವೆ. ಮಹಿಳೆಯರು ಆಭರಣಗಳನ್ನು ದಾನ ಮಾಡುತ್ತಿದ್ದಾರೆ. ಮಕ್ಕಳು ತಮ್ಮ ಉಳಿತಾಯದ ಹಣವನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
ಕಾಶ್ಮೀರದಾದ್ಯಂತ ದೇಣಿಗೆಯ ಸಂಗ್ರಹಿಸುವ ಕೇಂದ್ರಗಳು, ನಗದು, ಚಿನ್ನದ ಆಭರಣಗಳು, ಚರಾಸ್ತಿಗಳು ಮತ್ತು ಸಾಂಪ್ರದಾಯಿಕ ತಾಮ್ರದ ಪಾತ್ರೆಗಳಿಂದ ತುಂಬಿ ಹೋಗಿವೆ. ಇನ್ನು ಹಲವರು ಭೂಮಿ ಮತ್ತು ಇತರ ಹೆಚ್ಚು ಮೌಲ್ಯವಿರುವ ಆಸ್ತಿಗಳನ್ನೂ ದಾನ ಮಾಡಲು ಪ್ರತಿಜ್ಞೆ ಮಾಡಿದ್ದಾರೆ. ಇದು ಕಾಶ್ಮೀರಿಗರಲ್ಲಿರುವ ನೆರವಿನ ಭಾವತೀವ್ರತೆಯನ್ನು ಒತ್ತಿಹೇಳುತ್ತದೆ.
'ಕಾಶ್ಮೀರಿಗರು ನೆರವಿನ ಪ್ರಕ್ರಿಯೆಯನ್ನು ಕೇವಲ ದಾನವೆಂದು ನೋಡುವುದಿಲ್ಲ. ಇದು ಕಾಶ್ಮೀರ ಮತ್ತು ಇರಾನ್ ನಡುವಿನ ಶತಮಾನದಷ್ಟು ಹಳೆಯದಾದ ಐತಿಹಾಸಿಕ, ಸಾಂಸ್ಕೃತಿ ಮತ್ತು ಧಾರ್ಮಿಕ ಸಂಬಂಧಗಳ ಪ್ರತಿಬಿಂಬ' ಎಂದು ಈ ಪ್ರಕ್ರಿಯೆಯನ್ನು ಗಮನಿಸಿದವರು ಬಣ್ಣಿಸಿದ್ದಾರೆ.

