Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ತೈಲ ಮಾರಾಟ ಮಾಡಬಹುದು, ಆದರೆ ಷರತ್ತುಗಳು ಅನ್ವಯ ಎಂದ ಅಮೆರಿಕ ಅಧಿಕಾರಿ

ಇರಾನ್ ತೈಲ ಮಾರಾಟ ಮಾಡಬಹುದು, ಆದರೆ ಷರತ್ತುಗಳು ಅನ್ವಯ ಎಂದ ಅಮೆರಿಕ ಅಧಿಕಾರಿ

ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಹಾಗೂ ಯುದ್ಧದ ಪರಿಸ್ಥಿತಿಯನ್ನು ಕೊನೆಗಾಣಿಸಲು ಉಭಯ ದೇಶಗಳು ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಅದರ ಅಡಿಯಲ್ಲಿ, ಇರಾನ್‌ಗೆ ತಕ್ಷಣವೇ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಮತ್ತು ಇಂಧನ ಮಾರಾಟ ಮಾಡಲು ವಾಷಿಂಗ್ಟನ್ ಅನುಮತಿ ನೀಡಲಿದೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಮಂಗಳವಾರ (ಜೂನ್ 16) ತಿಳಿಸಿದ್ದಾರೆ.

ಇದೇ ವಾರ ಉಭಯ ದೇಶಗಳ ನಡುವೆ ಈ ಐತಿಹಾಸಿಕ ಒಪ್ಪಂದಕ್ಕೆ ಅಧಿಕೃತ ಸಹಿ ಬೀಳಲಿದ್ದು, ತಕ್ಷಣವೇ ಇರಾನ್ ತೈಲ ಮಾರಾಟದ ಮೇಲಿದ್ದ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಲಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಅಲ್ಲದೆ, ತೈಲ ವ್ಯಾಪಾರವನ್ನು ಸುಲಭಗೊಳಿಸಲು ಬ್ಯಾಂಕಿಂಗ್, ಸಾರಿಗೆ ಮತ್ತು ವಿಮೆ ಸೇರಿದಂತೆ ಇತರ ಪ್ರಮುಖ ಸೇವೆಗಳ ಮೇಲಿನ ನಿಷೇಧವನ್ನೂ ಈ ಒಪ್ಪಂದದ ಅಡಿಯಲ್ಲಿ ಹಿಂಪಡೆಯಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದರ ಜೊತೆಗೆ ಈ ಸಡಿಲಿಕೆಗಳು ಉಚಿತವಾಗಿ ಸಿಗುತ್ತಿಲ್ಲ ಮತ್ತು ಈ ಒಪ್ಪಂದಕ್ಕೆ ಕಠಿಣ ಷರತ್ತುಗಳನ್ನು ಅನ್ವಯಿಸಲಾಗಿದೆ ಎಂದು ಅಧಿಕಾರಿ ಎಚ್ಚರಿಸಿದ್ದಾರೆ.‌

ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕದ ಹಿರಿಯ ಅಧಿಕಾರಿ, 'ಇದು ಸಂಪೂರ್ಣವಾಗಿ ಇರಾನ್‌ನ ನಡವಳಿಕೆ ಮತ್ತು ಕಾರ್ಯಕ್ಷಮತೆಯನ್ನು ಆಧರಿಸಿದ ಒಪ್ಪಂದವಾಗಿದೆ. ಈ ಒಪ್ಪಂದದ ವೇಳೆ ಇರಾನ್ ಒಪ್ಪಿಕೊಂಡಿರುವ ಎಲ್ಲಾ ಪ್ರಮುಖ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ಯಾವುದೇ ಪ್ರಯೋಜನಗಳನ್ನು ಪಡೆಯಲು ಅದಕ್ಕೆ ಅವಕಾಶವಿರುತ್ತದೆ' ಎಂದಿದ್ದಾರೆ

'ಪ್ರಮುಖವಾಗಿ ಇರಾನ್ ಯಾವುದೇ ಪರಮಾಣು ಅಸ್ತ್ರಗಳನ್ನು ಹೊಂದಬಾರದು, ತನ್ನಲ್ಲಿರುವ ಪುಷ್ಟೀಕರಿಸಿದ ಪರಮಾಣು ವಸ್ತುಗಳನ್ನು ನಿಷ್ಕ್ರಿಯಗೊಳಿಸಬೇಕು ಮತ್ತು ಹೊರ್ಮುಜ್ ಜಲಸಂಧಿಯಲ್ಲಿ ಜಾಗತಿಕ ಹಡಗುಗಳ ಮುಕ್ತ ಸಂಚಾರಕ್ಕೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂಬ ಕಠಿಣ ನಿಯಮಗಳನ್ನು ವಿಧಿಸಲಾಗಿದೆ' ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani