Dailyhunt Logo
  • Light mode
    Follow system
    Dark mode
    • Play Story
    • App Story

ಇರಾನ್‌ ವಿರುದ್ಧ ಅಮೆರಿಕ ಅವಮಾನಕರ ಸೋಲು ಅನುಭವಿಸಿದೆ: ಮೊಜ್ತಬಾ ಖಮೇನಿ

ಟೆಹರಾನ್‌, ಇರಾನ್ : 'ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದೀರ್ಘಕಾಲಿಕ ದಿಗ್ಬಂಧನಗಳನ್ನುಧಿಕ್ಕರಿಸಿದ್ದರಿಂದ ಇರಾನ್‌ ವಿರುದ್ಧ ಅಮೆರಿಕ ಅವಮಾನಕರ ಸೋಲು ಅನುಭವಿಸಿದೆ' ಎಂದು ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಮೊಜ್ತಬಾ ಖಮೇನಿ ಅವರು ಲಿಖಿತ ಸಂದೇಶದಲ್ಲಿ ತಿಳಿಸಿದ್ದಾರೆ.

'ಅಮೆರಿಕ ನಡೆಸಿದ ಅತಿ ದೊಡ್ಡ ಸೇನಾ ಜಮಾವಣೆ ಹಾಗೂ ಆಕ್ರಮಣ ಶೀಲತೆಯ ನಂತರವೂ ಅದು ತನ್ನ ಯೋಜನೆಯಲ್ಲಿ ಅತ್ಯಂತ ಹೀನಾಯವಾಗಿ ಸೋತಿದೆ. ಗಲ್ಫ್‌ ಕೊಲ್ಲಿ ಹಾಗೂ ಹೊರ್ಮುಜ್‌ ಜಲಸಂಧಿಯಲ್ಲಿ ಹೊಸ ಅಧ್ಯಾಯವೊಂದು ಆರಂಭಗೊಂಡಿದೆ' ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯಲ್ಲಿ ಬಿತ್ತರಗೊಂಡ ಖಮೇನಿ ಸಂದೇಶದಲ್ಲಿ ತಿಳಿಸಲಾಗಿದೆ.

ಮಾರ್ಚ್‌ 9ರಂದು ಅವರನ್ನು ದೇಶದ ಪರಮೋಚ್ಚ ನಾಯಕ ಎಂದು ಘೋಷಣೆ ಮಾಡಿದ್ದರೂ, ಮೊಜ್ತಬಾ ಖಮೇನಿ ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಪರ್ಷಿಯನ್‌ ಕೊಲ್ಲಿಯ ವಾರ್ಷಿಕ ರಾಷ್ಟ್ರೀಯ ದಿನದಂದು ಈ ಸಂದೇಶ ಬಿತ್ತರಿಸಲಾಗಿದೆ.

ಅಮೆರಿಕ ಹಾಗೂ ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ಫೆಬ್ರುವರಿ 28ರಂದು ನಡೆಸಿದ ಸೇನಾ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೋಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಇದಾದ ಬಳಿಕ ಮೊಜ್ತಬಾ ಖಮೇನಿ ಅವರನ್ನು ಪರಮೋಚ್ಚ ನಾಯಕರನ್ನಾಗಿ ಘೋಷಣೆ ಮಾಡಲಾಗಿದೆ.

'ಸೇನೆ ನಡೆಸಿದ ದಾಳಿಯಲ್ಲಿ ಮೊಜ್ತಬಾ ಖಮೇನಿ ತೀವ್ರವಾಗಿ ಗಾಯಗೊಂಡಿದ್ದಾರೆ, ಆದರೆ ಮಾನಸಿಕವಾಗಿ ಅತ್ಯಂತ ಸದೃಢ ವಾಗಿದ್ದಾರೆ' ಎಂದು ಇರಾನ್‌ನ ಉನ್ನತ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ಅಮೆರಿಕದ ದೈನಿಕ 'ನ್ಯೂಯಾರ್ಕ್‌ ಟೈಮ್ಸ್‌' ಕಳೆದ ವಾರ ವರದಿ ಮಾಡಿತ್ತು.

ಇದರ ಬೆನ್ನಲ್ಲೇ, ಸಂದೇಶ ನೀಡಿರುವ ಖಮೇನಿ, 'ಬೇರೆ ದೇಶಗಳಲ್ಲಿರುವ ತನ್ನ ಸೇನಾ ನೆಲೆಗಳಿಗೆ ಸೂಕ್ತ ರಕ್ಷಣೆ ನೀಡಲು ಅಮೆರಿಕಕ್ಕೆ ಸಾಧ್ಯವಾಗಿಲ್ಲ. ಹೀಗಿರುವಾಗ ಮಿತ್ರಪಡೆ ಗಳಿಗೆ ರಕ್ಷಣೆ ಒದಗಿಸುವ ಯಾವುದೇ ಭರವಸೆ ನೀಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ಮೊಜ್ತಬಾ ಖಮೇನಿ, ಇರಾನ್‌ನ ಪರಮೋಚ್ಚ ನಾಯಕಇರಾನ್‌ ತನ್ನ ಪರಮಾಣು ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ರಕ್ಷಿಸಿಕೊಂಡಿದ್ದು, ಅವು ದೇಶದ ಆಸ್ತಿಯಾಗಿದೆ
Dailyhunt
Disclaimer: This content has not been generated, created or edited by Dailyhunt. Publisher: Prajavani