Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಗಂಭೀರ ಚಿಂತನೆ: ವರದಿ

ಇರಾನ್ ವಿರುದ್ಧ ಹೊಸದಾಗಿ ದಾಳಿ ನಡೆಸಲು ಡೊನಾಲ್ಡ್ ಟ್ರಂಪ್ ಗಂಭೀರ ಚಿಂತನೆ: ವರದಿ

ವಾಷಿಂಗ್ಟನ್: 'ಶಾಂತಿ ಒಪ್ಪಂದ ಕುರಿತಾದ ಮಾತುಕತೆಗಳು ವಿಫಲವಾದರೆ, ಇರಾನ್ ವಿರುದ್ಧ ಹೊಸದಾಗಿ ವಾಯುದಾಳಿ ನಡೆಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗಂಭೀರವಾಗಿ ಚಿಂತನೆ ನಡೆಸಿದ್ದಾರೆ' ಎಂದು ಅಮೆರಿಕದ ಮಾಧ್ಯಮ ಸಂಸ್ಥೆ 'ಆಕ್ಸಿಯೋಸ್‌' ಶನಿವಾರ ವರದಿ ಮಾಡಿದೆ.

ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಟೆಹರಾನ್‌ಗೆ ಭೇಟಿ ನೀಡಿ, ಒಪ್ಪಂದವೊಂದನ್ನು ರೂಪಿಸುವ ಕೊನೆಯ ಕ್ಷಣದ ಪ್ರಯತ್ನವಾಗಿ ಕತಾರ್‌ನ ನಿಯೋಗದೊಂದಿಗೆ ಕೈಜೋಡಿಸಿರುವ ಬೆನ್ನಲ್ಲೇ, ಟ್ರಂಪ್ ಅವರು ಇರಾನ್ ಮೇಲಿನ ಯುದ್ಧದ ಕುರಿತು ಚರ್ಚಿಸಲು ರಾಷ್ಟ್ರೀಯ ಭದ್ರತಾ ತಂಡದೊಂದಿಗೆ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಶಾಂತಿ ಒಪ್ಪಂದ ಕುರಿತಾದ ಮಾತುಕತೆಯಲ್ಲಿ ಯಾವುದೇ ಮಹತ್ವದ ಪ್ರಗತಿ ಕಾಣದ ಹೊರತು, ಇರಾನ್ ವಿರುದ್ಧ ಹೊಸದಾಗಿ ವಾಯುದಾಳಿ ನಡೆಸಲು ಟ್ರಂಪ್ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮುನೀರ್ ಅವರು ಶನಿವಾರ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ (ಐಆರ್‌ಜಿಸಿ) ಕಮಾಂಡರ್ ಮತ್ತು ಇರಾನ್‌ನ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಜನರಲ್ ಅಹ್ಮದ್ ವಾಹಿದಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

ಇರಾನ್ ಜತೆಗಿನ ಮಾತುಕತೆಗಳು ಅತ್ಯಂತ ಕಷ್ಟಕರವಾಗಿವೆ ಮತ್ತು ಹೆಚ್ಚಿನ ಪ್ರಗತಿಯಿಲ್ಲದೆ ಪ್ರತಿದಿನ ಕರಡು ಪ್ರತಿಗಳು ಅತ್ತಿಂದಿತ್ತ ವಿನಿಮಯವಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ 'ಆಕ್ಸಿಯೋಸ್‌' ವರದಿ ಮಾಡಿದೆ.

ಶ್ವೇತಭವನದಲ್ಲಿ ಶುಕ್ರವಾರ ಟ್ರಂಪ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಸಿಐಎ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.

'ಇರಾನ್ ಒಪ್ಪಂದ ಮಾಡಿಕೊಳ್ಳಲು ಹಾತೊರೆಯುತ್ತಿದೆ. ಏನಾಗುತ್ತದೆ ಎಂದು ಕಾದುನೋಡೋಣ. ಆದರೆ, ನಾವು ಇರಾನ್‌ ಮೇಲೆ ಬಲವಾದ ದಾಳಿ ನಡೆಸಿದ್ದೇವೆ. ನಮಗೆ ಬೇರೆ ಆಯ್ಕೆ ಇರಲಿಲ್ಲ. ಏಕೆಂದರೆ, ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದುವಂತಿಲ್ಲ' ಎಂದು ಟ್ರಂಪ್ ಹೇಳಿದ್ದರು.

ಭಾರತಕ್ಕೆ ಬಂದಿಳಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊರನ್ನು ಭೇಟಿ ಮಾಡಿದ ಜೈಶಂಕರ್‌
Dailyhunt
Disclaimer: This content has not been generated, created or edited by Dailyhunt. Publisher: Prajavani