ವಿಶ್ವಸಂಸ್ಥೆ: ಕೊಲ್ಲಿ ಸಹಕಾರ ಮಂಡಳಿಯ ರಾಷ್ಟ್ರಗಳು ಮತ್ತು ಜೋರ್ಡಾನ್ ಮೇಲೆ ಇರಾನ್ ನಡೆಸಿದ ಭೀಕರ ದಾಳಿಗಳನ್ನು ಖಂಡಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ಸಹ-ಪ್ರಾಯೋಜಕತ್ವ ನೀಡಿದೆ.
ಇರಾನ್ ತಕ್ಷಣವೇ ತನ್ನೆಲ್ಲಾ ದಾಳಿಗಳನ್ನು ನಿಲ್ಲಿಸಬೇಕು ಮತ್ತು ಹೊರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಬೆದರಿಕೆ ಒಡ್ಡುವುದನ್ನು ನಿಲ್ಲಿಸಬೇಕು ಎಂದು ನಿರ್ಣಯದಲ್ಲಿ ಪ್ರಮುಖವಾಗಿ ಒತ್ತಾಯಿಸಲಾಗಿದೆ.
ಪ್ರಸ್ತುತ ಅಮೆರಿಕ ಅಧ್ಯಕ್ಷತೆಯಲ್ಲಿರುವ 15 ರಾಷ್ಟ್ರಗಳ ಭದ್ರತಾ ಮಂಡಳಿಯು ಬುಧವಾರ ಈ ನಿರ್ಣಯವನ್ನು ಅಂಗೀಕರಿಸಿತು. ನಿರ್ಣಯದ ಪರವಾಗಿ 13 ಮತಗಳು ಬಂದವು. ವಿರುದ್ಧವಾಗಿ ಯಾರೂ ಮತ ಹಾಕಲಿಲ್ಲ. ಚೀನಾ ಮತ್ತು ರಷ್ಯಾ ದೇಶಗಳು ಮತದಾನದಲ್ಲಿ ಭಾಗವಹಿಸದೆ ತಟಸ್ಥವಾಗಿದ್ದವು.
ಬಹರೇನ್ ನೇತೃತ್ವದ ಈ ನಿರ್ಣಯ ಭಾರತ ಸೇರಿ ಒಟ್ಟು 135 ಸಹ-ಪ್ರಾಯೋಜಕರನ್ನು ಹೊಂದಿತ್ತು. ನಿರ್ಣಯವು ಬಹರೇನ್, ಕುವೈತ್, ಒಮನ್, ಕತಾರ್, ಸೌದಿ ಅರೇಬಿಯಾ, ಯುಎಇ ಮತ್ತು ಜೋರ್ಡಾನ್‌ಗಳ ಪ್ರಾದೇಶಿಕ ಸಮಗ್ರತೆ, ಸಾರ್ವಭೌಮತ್ವ ಮತ್ತು ರಾಜಕೀಯ ಸ್ವಾತಂತ್ರ್ಯಕ್ಕೆ ತನ್ನ ಬೆಂಬಲವನ್ನು ಪುನರುಚ್ಚರಿಸಿತು.
ಅನ್ಯಾಯ ಮತ್ತು ಕಾನೂನುಬಾಹಿರ: ಇರಾನ್
ಇರಾನ್ ವಿರುದ್ಧ ಭದ್ರತಾ ಮಂಡಳಿ ಮಂಡಿಸಿದ ಕ್ರಮವನ್ನು ಇರಾನ್ ವಿರೋಧಿಸಿದೆ. ವಿಶ್ವಸಂಸ್ಥೆಗೆ ಇರಾನ್‌ನ ಕಾಯಂ ಪ್ರತಿನಿಧಿ ಅಮೀರ್ ಸಯೀದ್ ಈರವನಿ ಅವರು, 'ನಿರ್ಣಯವು ವಿಶ್ವಸಂಸ್ಥೆಯ ಸನ್ನದು ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಹೊಂದಿಕೆ ಆಗುವುದಿಲ್ಲ' ಎಂದು ಹೇಳಿದ್ದಾರೆ.
'ಯಾವುದೇ ತಪ್ಪು ಮಾಡಬೇಡಿ. ಇಂದು ಇರಾನ್, ನಾಳೆ ಈ ಸ್ಥಾನದಲ್ಲಿ ಬೇರೆ ಯಾವುದೆ ಸಾರ್ವಭೌಮ ರಾಷ್ಟ್ರ ಇರಲಿದೆ' ಎಂದು ಈರವನಿ ಅವರು ಎಚ್ಚರಿಸಿದ್ದಾರೆ.

