ದುಬೈ: ಇರಾನ್ ಮತ್ತು ಅಮೆರಿಕ ನಡುವಣ ಯುದ್ಧ ಅಂತ್ಯಗೊಳಿಸಲು ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನವು ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಟೆಹರಾನ್‌ಗೆ ಭೇಟಿ ನೀಡಿದ್ದು, ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಇರಾನ್ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ಯುದ್ಧ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯಲು ಮತ್ತು ಕೊನೆಗೊಳಿಸುವ ನಿಟ್ಟಿನಲ್ಲಿ, ರಾಜತಾಂತ್ರಿಕ ಉಪಕ್ರಮಗಳ ಕುರಿತು ಶುಕ್ರವಾರ ತಡರಾತ್ರಿಯವರೆಗೆ ಮಾತುಕತೆ ನಡೆದಿದೆ ಎಂದು ತಿಳಿಸಲಾಗಿದೆ.
ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಫೆಬ್ರುವರಿ 28ರಂದು ದಾಳಿ ನಡೆಸಿದ್ದವು. ಇದರಿಂದ ಕೆರಳಿದ ಇರಾನ್ ಪ್ರತಿದಾಳಿಗಿಳಿದಿತ್ತು. ಅಮೆರಿಕ ಮತ್ತು ಇಸ್ರೇಲ್ ಮಾತ್ರವಲ್ಲದೆ, ಅವುಗಳ ಮಿತ್ರರಾಷ್ಟ್ರಗಳ ಮೇಲೂ ದಾಳಿ ನಡೆಸಿತ್ತು. ಹೀಗಾಗಿ, ಪಶ್ಚಿಮ ಏಷ್ಯಾದಾದ್ಯಂತ ಸಂಘರ್ಷ ಉಲ್ಬಣಗೊಂಡಿವೆ.
ಅಮೆರಿಕದ ಅತಿಯಾದ ಬೇಡಿಕೆಗಳಿಂದಲೇ ಶಾಂತಿ ಮಾತುಕತೆಗೆ ಅಡ್ಡಿ: ಇರಾನ್ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಅನ್ನೂ ನಿರ್ಬಂಧಿಸುವ ಮೂಲಕ, ವಿಶ್ವ ಆರ್ಥಿಕತೆ ಮೇಲೂ ಒತ್ತಡ ಹೇರಿತು.
ಯುದ್ಧ ಕೊನೆಗೊಳಿಸುವಂತೆ ಅಂತರರಾಷ್ಟ್ರೀಯ ಸಮುದಾಯದಿಂದ ಒತ್ತಡ ಹೆಚ್ಚಾದ ಕಾರಣ, ಅಮೆರಿಕ ಹಾಗೂ ಇರಾನ್, ಏಪ್ರಿಲ್ 7ರಂದು ಕದನ ವಿರಾಮ ಘೋಷಿಸಿದ್ದವು.
ಬಳಿಕ ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ನಡೆದ ಎರಡು ಸುತ್ತಿನ ಮಾತುಕತೆ ಸಫಲವಾಗಿರಲಿಲ್ಲ.

