Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ನಲ್ಲಿ ಸಿಲುಕಿದ್ದ ಯೋಧನನ್ನು ಅಮೆರಿಕ ಪಾರು ಮಾಡಿದ್ದು ಹೇಗೆ? ಇಲ್ಲಿದೆ ವಿವರ

ಇರಾನ್‌ನಲ್ಲಿ ಸಿಲುಕಿದ್ದ ಯೋಧನನ್ನು ಅಮೆರಿಕ ಪಾರು ಮಾಡಿದ್ದು ಹೇಗೆ? ಇಲ್ಲಿದೆ ವಿವರ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಇರಾನ್‌ನಲ್ಲಿ ಸಿಲುಕಿದ್ದ ಯೋಧನನ್ನು ಅಮೆರಿಕ ಪಾರು ಮಾಡಿದ್ದು ಹೇಗೆ? ಇಲ್ಲಿದೆ ವಿವರ

ಒಂದು ಸಾಲಿನಲ್ಲಿಇರಾನ್‌ನಲ್ಲಿ ಪತನಗೊಂಡಿದ್ದ ಎಫ್‌-15 ವಿಮಾನದ ಪೈಲಟ್ ಅನ್ನು ಅಮೆರಿಕ ಸೇನೆ ಅತ್ಯಂತ ಸಾಹಸಮಯ ಹಾಗೂ ಯಶಸ್ವಿ ರಕ್ಷಣಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಪಾರುಮಾಡಿದೆ.

ಪ್ರಮುಖ ಅಂಶಗಳು• ತಂತ್ರ ಮತ್ತು ಸಾಹಸಮಯ ನಿರ್ವಹಣೆಪೈಲಟ್ ಗಾಯಗೊಂಡಿದ್ದರೂ 7 ಸಾವಿರ ಅಡಿ ಎತ್ತರದ ಬೆಟ್ಟ ಏರಿ ಅಡಗಿಕೊಂಡಿದ್ದರು; ಸಿಐಎ ಮತ್ತು ವಿಶೇಷ ತಂಡಗಳು ಸುಧಾರಿತ ತಂತ್ರಜ್ಞಾನ ಬಳಸಿ ಆತನನ್ನು ಪತ್ತೆ ಹಚ್ಚಿದವು.ಪ್ರಮುಖ ಅಂಕಿಅಂಶಗಳುಮಾರ್ಚ್‌ 3ದಾಳಿ ನಡೆದ ದಿನಾಂಕ7 ಸಾವಿರ ಅಡಿಪೈಲಟ್ ಏರಿದ ಬೆಟ್ಟದ ಎತ್ತರ₹800 ಕೋಟಿನಾಶಪಡಿಸಿದ ವಿಮಾನಗಳ ಬೆಲೆ (ತಲಾ)ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ವಾಷಿಂಗ್ಟನ್: ಭರ್ಜರಿ ರಕ್ಷಣಾ ಕಾರ್ಯಾಚರಣೆ ನಡೆಸುವ ಮೂಲಕ ಇರಾನ್‌ನಲ್ಲಿ ಪತನಗೊಂಡಿದ್ದ 'ಎಫ್‌-15 ಈಗಲ್‌' ಯುದ್ಧ ವಿಮಾನದ ಎರಡನೇ ಪೈಲಟ್ ಅನ್ನು ರಕ್ಷಿಸುವಲ್ಲಿ ಅಮೆರಿಕ ಸೇನೆ ಯಶಸ್ವಿಯಾಗಿದೆ. ಈ ಕಾರ್ಯಾಚರಣೆಯನ್ನು 'ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ರಕ್ಷಣಾ ಕಾರ್ಯಾಚರಣೆ' ಎಂದು ಬಣ್ಣಿಸಲಾಗಿದೆ.

ಕೊಗೆಲೂಯೆ ಮತ್ತು ಬೊಯೆರ್‌ ಅಹಮ್ಮದ್ ಪ್ರಾಂತ್ಯದಲ್ಲಿ ಅಮೆರಿಕದ 'ಎಫ್‌-15 ಇ' ಜೆಟ್‌ ವಿಮಾನ ಪತನಗೊಂಡಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಕೆಳಕ್ಕೆ ಜಿಗಿದಿದ್ದರು. ಕೂಡಲೇ ಒಬ್ಬರನ್ನು ರಕ್ಷಿಸಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದರು.

ಅಮೆರಿಕ ಹಾಗೂ ಇಸ್ರೇಲ್‌ ಪಡೆಗಳು ಇರಾನ್‌ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ನಡೆಸಿದ್ದವು. ಯುದ್ಧ ಆರಂಭವಾದ ಬಳಿಕ ಇರಾನ್‌ನ ವಾಯುಪ್ರದೇಶದಲ್ಲಿ ಅಮೆರಿಕವು ತನ್ನ ವಿಮಾನವನ್ನು ಕಳೆದುಕೊಂಡದ್ದು ಇದೇ ಮೊದಲು.

'ಅಮೆರಿಕದ ಯುದ್ಧ ವಿಮಾನವನ್ನು ಇರಾನ್‌ ಹೊಡೆದುರುಳಿಸಿದ ಬಳಿಕ ನಾಪತ್ತೆಯಾಗಿದ್ದ ಪೈಲಟ್‌ ಅನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ' ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 'ಟ್ರೂಥ್‌ ಸೋಷಿಯಲ್‌'ನಲ್ಲಿ ಖಚಿತಪಡಿಸಿದ್ದಾರೆ.

'ನಮ್ಮ ಅದ್ಭುತ ಸಿಬ್ಬಂದಿಯಲ್ಲಿ ಒಬ್ಬರಾದ ಕರ್ನಲ್ ಅವರನ್ನು ರಕ್ಷಿಸಲು ಅಮೆರಿಕ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಕಾರ್ಯಾಚರಣೆಯನ್ನು ನಡೆಸಿದೆ. ಅವರು ಈಗ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ' ಎಂದು ಟ್ರಂಪ್ ತಿಳಿಸಿದ್ದಾರೆ.

'ಧೈರ್ಯಶಾಲಿ ಯೋಧ ಶತ್ರುರಾಷ್ಟ್ರ ಇರಾನ್‌ನ ಅಪಾಯಕಾರಿ ಪರ್ವತಗಳಲ್ಲಿ ಸಿಲುಕಿದ್ದರು. ಶತ್ರುಗಳಿಗೆ ತೀರಾ ಸಮೀಪದಲ್ಲಿ ಇದ್ದರು. ಆದರೂ ಬದುಕಿಗಾಗಿ ಹೋರಾಟ ಬಿಡಲಿಲ್ಲ. ಯೋಧ ಗಾಯಗೊಂಡಿದ್ದರೂ, ಸುರಕ್ಷಿತವಾಗಿದ್ದಾರೆ. ಯಾವುದೇ ನಷ್ಟವಿಲ್ಲದೆ ಅಮೆರಿಕ ಈ 'ಪವಾಡ ಸದೃಶ ಕಾರ್ಯಾಚರಣೆ' ನಡೆಸಿದೆ ಎಂದು ಟ್ರಂಪ್‌ ಬರೆದುಕೊಂಡಿದ್ದಾರೆ.

ರಕ್ಷಣಾ ಪಡೆಗೆ ಪ್ರತಿಷ್ಠೆ: ಪೈಲಟ್‌ ನಾಪತ್ತೆಯಾದದ್ದು ಖಾತರಿಯಾಗುತ್ತಿದ್ದಂತೆಯೇ, ಅವರನ್ನು ರಕ್ಷಿಸುವುದು ಅಮೆರಿಕ ರಕ್ಷಣಾ ಪಡೆಗೂ ಪ್ರತಿಷ್ಠೆಯಾಗಿತ್ತು. ಇರಾನ್‌ನ ವಾಯುಪ್ರದೇಶದ ಒಳಗೆ ನುಗ್ಗಿ, ತೀವ್ರ ಕ್ಷಿಪಣಿ ದಾಳಿಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿರುವುದು 'ಪವಾಡ' ಎಂದು ಟ್ರಂಪ್‌ ಬಣ್ಣಿಸಿದ್ದಾರೆ.

ಘೋರ ಆಯುಧಗಳು, ಡಜನ್‌ಗಟ್ಟಲೆ ವಿಮಾನಗಳು

ಅಮೆರಿಕದ ಯುದ್ಧ ವಿಮಾನವನ್ನು ಶುಕ್ರವಾರ ಇರಾನ್‌ ಹೊಡೆದುರುಳಿಸಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಕೆಳಕ್ಕೆ ಜಿಗಿದಿದ್ದರು. ಒಬ್ಬರನ್ನು ರಕ್ಷಿಸಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದರು. ಶತ್ರುದೇಶದ ಪೈಲಟ್‌ ಅನ್ನು ಹಿಡಿದರೆ, ದೊಡ್ಡ ಮೊತ್ತದ ಬಹುಮಾನ ನೀಡಲಾಗುವುದು ಎಂದು ಇರಾನ್‌ ಘೋಷಿಸಿತ್ತು. ಪೈಲಟ್‌ ಪತ್ತೆಗಾಗಿ ಅಮೆರಿಕ ಮತ್ತು ಇರಾನ್ ತೀವ್ರ ಹುಡುಕಾಟ ನಡೆಸಿದ್ದವು.

ಇರಾನ್‌ನ ಇಸ್ಫಾಹಾನ್ ಪ್ರಾಂತ್ಯದಲ್ಲಿ ಅಮೆರಿಕದ ಸಿ-130 ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದು ಉರುಳಿಸಿರುವುದಾಗಿ ಇರಾನ್ ಮಿಲಿಟರಿ ಪ್ರತಿಪಾದಿಸಿದೆ. ಆದರೆ, ಅಮೆರಿಕ ಮಾತ್ರ ತನ್ನ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದೆ.

ಶೋಧ ನಡೆದಿದ್ದು ಹೇಗೆ?

'ವಿಮಾನದಿಂದ ಹಾರಿದ 24 ಗಂಟೆಗಳಲ್ಲಿಯೇ ಪೈಲಟ್‌ ಇರುವ ಸ್ಥಳವನ್ನು ಅಮೆರಿಕ ಸೇನೆ ಪತ್ತೆಹಚ್ಚಿತ್ತು. ಅವರ ಹತ್ತಿರ ಸುಳಿಯದಂತೆ, ಇರಾನ್ ಪಡೆಗಳನ್ನು ಗುರಿಯಾಗಿರಿಸಿ ಎಫ್‌-35 ಯುದ್ಧ ವಿಮಾನ, ಡ್ರೋನ್‌ಗಳ ಮೂಲಕ ದೊಡ್ಡ ಪ್ರಮಾಣದ ಬಾಂಬ್‌ ದಾಳಿ ನಡೆಸಿತ್ತು. ವಿಶೇಷ ರಕ್ಷಣಾ ಕಾರ್ಯಾಚರಣೆಯ ಯೋಧರು 'ಎಚ್‌ಎಚ್‌-60 ಜಾಲಿ ಗ್ರೀನ್‌' ಸರಣಿಯ ಹೆಲಿಕಾಪ್ಟರ್‌ ಬಳಸಿಕೊಂಡು ಪೈಲಟ್‌ ಇದ್ದ ಜಾಗಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. 'ಎ-10 ವಾರ್ತ್‌ಹಾಗ್‌' ಜೆಟ್‌ಗಳು ರಕ್ಷಣಾ ತಂಡಗಳಿಗೆ ಅಗತ್ಯ ಭದ್ರತೆ ಒದಗಿಸಿವೆ' ಎಂದು 'ನ್ಯೂಯಾರ್ಕ್‌ ಟೈಮ್ಸ್‌' ವರದಿ ಮಾಡಿದೆ.

'ವಿಮಾನದಿಂದ ಹಾರಿದ್ದ ಪೈಲಟ್‌, ಶತ್ರುಗಳಿಂದ ತಪ್ಪಿಸಿಕೊಳ್ಳಲು ಗಾಯದ ನಡುವೆಯೇ ಹ್ಯಾಂಡ್‌ಗನ್‌ ಹಿಡಿದುಕೊಂಡು 7 ಸಾವಿರ ಅಡಿ ಎತ್ತರದ ಬೆಟ್ಟ ಏರಿದ್ದರು' ಎಂದು ತಿಳಿಸಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನೇತೃತ್ವದಲ್ಲಿ ಪೆಂಟಗಾನ್‌ನೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಯುದ್ಧಭೂಮಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ನಡೆದ ಅತ್ಯಂತ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಇದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ ಕೈಗೆ ಸಿಗದಂತೆ ವಿಮಾನ ನಾಶಪಡಿಸಿದ ಅಮೆರಿಕ...

ರಕ್ಷಣಾ ಕಾರ್ಯಾಚರಣೆಯಲ್ಲಿ ಅಮೆರಿಕ ಸೇನೆಯ ಐದು ಸರಕು ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಈ ಪೈಕಿ ಎರಡು ವಿಮಾನಗಳು ಇರಾನ್‌ನಿಂದ ಹಾರಲು ಸಾಧ್ಯವಾಗಲಿಲ್ಲ. ಅವುಗಳು ಇರಾನ್‌ ಕೈಗೆ ಸಿಗದಂತೆ ತಡೆಯುವ ನಿಟ್ಟಿನಲ್ಲಿ ಅಮೆರಿಕದ ಸೈನಿಕರೇ ಅದನ್ನು ನಾಶಪಡಿಸಿದ್ದಾರೆ ಎಂದು 'ಸಿಬಿಎಸ್‌' ನ್ಯೂಸ್‌ ವರದಿ ಮಾಡಿದೆ.

ನಾಶಪಡಿಸಿದ ಸರಕು ವಿಮಾನಗಳ ಬೆಲೆ ತಲಾ 100 ಮಿಲಿಯನ್‌ ಡಾಲರ್‌ (₹800 ಕೋಟಿ) ಎಂದು ಹೇಳಲಾಗಿದೆ.

'ಅಮೆರಿಕ ಸೇನೆಯ ಪಾಲಿಗೆ ನಿಜವಾಗಿಯೂ ಇದೊಂದು ಸತ್ವಪರೀಕ್ಷೆಯಾಗಿತ್ತು. ದೇಶದ ಯಾವುದೇ ಸೈನಿಕನನ್ನು ಶತ್ರುರಾಷ್ಟ್ರದ ವಶಕ್ಕೆ ಒಪ್ಪಿಸಲು ಅದು ಸಿದ್ಧವಿರಲಿಲ್ಲ' ಎಂದು ಆಸ್ಟ್ರೇಲಿಯಾ ರಾಷ್ಟ್ರೀಯ ವಿಶ್ವವಿದ್ಯಾಲಯದ ಪಶ್ಚಿಮ ಏಷ್ಯಾ-ಮಧ್ಯ ಏಷ್ಯಾ ಅಧ್ಯಯನಗಳ ವಿಭಾಗದ ಪ್ರಾಧ್ಯಾಪಕ ಅಮೀನ್‌ ಸೈಕಲ್‌ 'ಅಲ್‌ ಜಜೀರಾ' ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಅಮೆರಿಕ ಯೋಧನ ರಕ್ಷಣಾ ಕಾರ್ಯಾಚರಣೆ ನಡೆದದ್ದು ಹೇಗೆ?

1. ಯೋಧರನ್ನು ಪತ್ತೆ ಮಾಡಲು ಅನುಕೂಲವಾಗುವಂಥ ಉಡುಪನ್ನು ಅಮೆರಿಕದ ವಾಯುಸೇನೆಯ ಯೋಧರು ಧರಿಸುತ್ತಾರೆ. ಇದರಲ್ಲಿ ಜಿಪಿಎಸ್‌ ಮತ್ತು ರೇಡಿಯೊ ವ್ಯವಸ್ಥೆ ಇದೆ. ಉಡುಪಿನಲ್ಲಿ ನೀರು, ಆಹಾರ, ಪ್ರಥಮ ಚಿಕಿತ್ಸೆ ಕಿಟ್‌ ಕೂಡ ಇರುತ್ತದೆ.

2. ಸ್ಥಳೀಯರ ಕೈಗೆ ಸಿಲುಕಿಕೊಳ್ಳದೇ ಯೋಧ ಅಡಗಿಕೊಂಡಿದ್ದರು. ಬಳಿಕ, 7 ಸಾವಿರ ಅಡಿ ಎತ್ತರ ಬೆಟ್ಟ ಹತ್ತಿದ್ದರು.

3. ಸಿಐಎ ಯೋಧನನ್ನು ಪತ್ತೆ ಹಚ್ಚಿತು. ಈಗಾಗಲೇ ಯೋಧ ನಮಗೆ ಸಿಕ್ಕಿದ್ದಾನೆ ಎಂದು ಹೇಳಿಕೆ ನೀಡಿ ಇರಾನ್‌ನ ಗಮನ ಬೇರೆಡೆ ಸೆಳೆಯುವ ಯತ್ನ ಮಾಡಲಾಯಿತು.

4. ಯೋಧನ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ನೌಕಾಪಡೆ ಕಮಾಂಡರ್‌ಗಳಿಗೆ ನೀಡಲಾಯಿತು. ಕಾರ್ಯಾಚರಣೆಯಲ್ಲಿ ಹಲವಾರು ಯುದ್ಧ ವಿಮಾನಗಳು, ನೂರಾರು ಸಿಬ್ಬಂದಿಯನ್ನು ಬಳಕೆ ಮಾಡಲಾಗಿದೆ.

5. ಇರಾನ್‌ ಪಡೆಗಳ ಕಣ್ತಪ್ಪಿಸಿ ಯೋಧನನ್ನು ರಕ್ಷಿಸಲಾಯಿತು.

6. 2ಸಿ- 130 ಸಾಗಣೆ ವಿಮಾನದ ಮೂಲಕ ಯೋಧನನ್ನು ಬೆಟ್ಟದ ತುದಿಯಿಂದ ರಕ್ಷಿಸಲಾಯಿತು.

7. ಇರಾನ್‌ ನೆಲದಲ್ಲಿ ಸಿಲುಕಿದ್ದ ತಮ್ಮ ವಿಮಾನವನ್ನು ಅಮೆರಿಕದ ಸೈನಿಕರೇ ಸ್ಫೋಟಿಸಿದ್ದಾರೆ. ತಮ್ಮ ವಿಮಾನವು ಇರಾನ್‌ ಸೈನಿಕರಿಗೆ ಸಿಗಬಾರದು ಎಂದು ಹೀಗೆ ಮಾಡಿದ್ದಾರೆ. ಆನಂತರವೇ ಅಲ್ಲಿಂದ ಹೊರಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani