ವಾಷಿಂಗ್ಟನ್: ಇಸ್ರೇಲ್ ಮತ್ತು ಹಿಜ್ಬುಲ್ಲಾ ಬಂಡುಕೋರರ ನಡುವೆ ಕದನ ವಿರಾಮವನ್ನು ಮೂರು ವಾರಗಳ ಕಾಲ ವಿಸ್ತರಿಸಲು ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
ಶ್ವೇತಭವನದಲ್ಲಿ ಗುರುವಾರ ನಡೆದ ಮಾತುಕತೆ ಬಳಿಕ ಕದನ ವಿರಾಮ ವಿಸ್ತರಣೆಗೆ ಸಮ್ಮತಿ ದೊರೆತಿದೆ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ಇಸ್ರೇಲ್ ಮತ್ತು ಲೆಬನಾನ್ ರಾಯಭಾರಿಗಳ ನಡುವೆ ಎರಡನೇ ಬಾರಿಗೆ ಸಭೆಯು ತುಂಬಾ ಚೆನ್ನಾಗಿ ನಡೆಯಿತು ಮತ್ತು ಫಲಪ್ರದವಾಯಿತು ಎಂದು ಅವರು ತಿಳಿಸಿದರು.
'ಮುಂದಿನ ಎರಡು ವಾರಗಳಲ್ಲಿ ನಾನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ಲೆಬನಾನ್‌ನ ಅಧ್ಯಕ್ಷ ಜೋಸೆಫ್ ಔನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವ ಸಾಧ್ಯತೆಯಿದೆ' ಎಂದು ಅವರು ಓವಲ್ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಹಿಜ್ಬುಲ್ಲಾ ಗುಂಡು ಹಾರಿಸಿದರೆ, ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್‌ಗೆ ಇದೆ. ಆ ದೇಶದವರು ಅದನ್ನು ಮಾಡುತ್ತಾರೆ' ಎಂದು ಟ್ರಂಪ್ ಪ್ರತಿಕ್ರಿಯಿಸಿದರು. ಈ ವೇಳೆ ಇಸ್ರೇಲ್, ಲೆಬನಾನ್ ರಾಯಭಾರಿಗಳು, ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಇದ್ದರು.
ಈ ವೇಳೆ ಪ್ರತಿಕ್ರಿಯಿಸಿದ ಇಸ್ರೇಲ್ ರಾಯಭಾರಿ ಯೆಶೀಲ್ ಲೀಟರ್, 'ನಿಮ್ಮ ನಾಯಕತ್ವದಲ್ಲಿ ನಾವು ಒಟ್ಟಾಗಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಶಾಂತಿ ಸ್ಥಾಪಿಸಬಹುದು ಎಂದು ಭಾವಿಸುತ್ತೇವೆ' ಎಂದರು.
ಲೆಬನಾನ್ ರಾಯಭಾರಿ ನಾದಾ ಹಮಾದೆ ಮೋವಾದ್, 'ಲೆಬನಾನ್‌ಗೆ ನೆರವು ನೀಡಲು ಮಾಡಿದ ನಿಮ್ಮ ಪ್ರಯತ್ನಗಳಿಗಾಗಿ ಧನ್ಯವಾದ ಅರ್ಪಿಸುತ್ತೇವೆ' ಎಂದು ಟ್ರಂಪ್‌ಗೆ ತಿಳಿಸಿದರು.
'ಹಿಜ್ಬುಲ್ಲಾದಿಂದ ತನ್ನನ್ನು ರಕ್ಷಿಸಿಕೊಳ್ಳಲು ಲೆಬನಾನ್ ಜತೆ ಅಮೆರಿಕ ಕೆಲಸ ಮಾಡಲಿದೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಮಾತುಕತೆಗೂ ಒಂದು ದಿನ ಮುನ್ನ ಹೇಳಿಕೆ ಬಿಡುಗಡೆ ಮಾಡಿದ್ದ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್, 'ಇಸ್ರೇಲ್ ದಾಳಿಗಳನ್ನು ಕೂಡಲೇ ನಿಲ್ಲಿಸಬೇಕು. ಅಲ್ಲದೆ, ಲೆಬನಾನ್‌ನಿಂದ ತನ್ನ ಪಡೆಗಳನ್ನು ಹಿಂತೆಗೆದುಕೊಳ್ಳಬೇಕು. ಇಸ್ರೇಲ್ ಬಂಧಿಸಿರುವ ಲೆಬನಾನ್ ಕೈದಿಗಳನ್ನು ಬಿಡುಗಡೆ ಮಾಡಬೇಕು' ಎಂದು ಆಗ್ರಹಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರು, 'ಹಿಜ್ಬುಲ್ಲಾವನ್ನು ನಿಶ್ಶಸ್ತ್ರಗೊಳಿಸಲು ಇಸ್ರೇಲ್ ಜತೆಗೆ ಲೆಬನಾನ್ ಕೆಲಸ ಮಾಡಬೇಕು' ಎಂದು ಕರೆ ನೀಡಿದ್ದರು.
ಇರಾನ್ ಬೆಂಬಲಿತ ಬಂಡುಕೋರ ಗುಂಪಾದ ಹಿಜ್ಬುಲ್ಲಾ, ಕಳೆದ ವಾರ ನಡೆದಿದ್ದ ಕದನ ವಿರಾಮ ಮಾತುಕತೆಗಳನ್ನು ವಿರೋಧಿಸಿತ್ತು. ಅಲ್ಲದೆ ಕದನ ವಿರಾಮ ಜಾರಿಗೆ ಬಂದ ನಂತರ ಎರಡೂ ಕಡೆಯಿಂದ ಅನೇಕ ಬಾರಿ ಅದರ ಉಲ್ಲಂಘನೆಗಳಾಗಿದ್ದವು.
ಅಮೆರಿಕ-ಇರಾನ್: 2ನೇ ಸುತ್ತಿನ ಮಾತುಕತೆ ಸನ್ನಿಹಿತ
ಇಸ್ಲಾಮಾಬಾದ್/ದುಬೈ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು ಶುಕ್ರವಾರ ರಾತ್ರಿ ಇಸ್ಲಾಮಾಬಾದ್‌ಗೆ ತೆರಳಲಿದ್ದು ಅಮೆರಿಕದ ಜತೆಗೆ ಎರಡನೇ ಸುತ್ತಿನ ಶಾಂತಿ ಮಾತುಕತೆಯ ನಿರೀಕ್ಷೆ ಮೂಡಿಸಿದೆ. 'ಇರಾನ್‌ನ ವಿದೇಶಾಂಗ ಸಚಿವರ ನೇತೃತ್ವದ ತಂಡ ಪಾಕಿಸ್ತಾನಕ್ಕೆ ಮಾತುಕತೆಗಾಗಿ ತೆರಳುತ್ತಿದೆ' ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಶುಕ್ರವಾರ ದೃಢಪಡಿಸಿದೆ. ಅರಾಘ್ಚಿ ಅವರ ಪ್ರವಾಸ ಶುಕ್ರವಾರ ರಾತ್ರಿಯಿಂದ ಆರಂಭವಾಗಲಿದೆ. ಪ್ರಾದೇಶಿಕ ಬೆಳವಣಿಗೆಗಳ ಕುರಿತು ದ್ವಿಪಕ್ಷೀಯ ಮಾತುಕತೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇರಾನ್ ವಿರುದ್ಧ ಅಮೆರಿಕ ಇಸ್ರೇಲ್ ಸಾರಿರುವ ಯುದ್ಧ ಮತ್ತು ಈಚಿನ ಪರಿಸ್ಥಿತಿಗಳನ್ನು ಕೇಂದ್ರೀಕರಿಸಿ ಅವರು ಚರ್ಚೆ ನಡೆಸಲಿದ್ದಾರೆ ಎಂದು ಅದು ಹೇಳಿದೆ. ಬಳಿಕ ಅರಾಘ್ಚಿ ಅವರು ಒಮಾನ್ ಮತ್ತು ರಷ್ಯಾಕ್ಕೂ ತೆರಳಲಿದ್ದಾರೆ ಎಂದು ಅದು ತಿಳಿಸಿದೆ. ಈಗಾಗಲೇ ಅಮೆರಿಕದ ಲಾಜಿಸ್ಟಿಕ್ಸ್ ಮತ್ತು ಭದ್ರತಾ ತಂಡ ಇಸ್ಲಾಮಾಬಾದ್‌ನಲ್ಲಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಶಾಂತಿ ಮಾತುಕತೆ ಕುರಿತು ಅರಾಘ್ಚಿ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರ ಜತೆ ಶುಕ್ರವಾರ ದೂರವಾಣಿ ಮೂಲಕ ಮಾತನಾಡಿ ಕೆಲ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದರು. ಅದಾದ ಕೆಲ ಗಂಟೆಗಳಲ್ಲಿಯೇ ಅವರ ಈ ಬೆಳವಣಿಗೆ ನಡೆದಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜತೆಗಿನ ಎರಡನೇ ಸುತ್ತಿನ ಮಾತುಕತೆ ಶುಕ್ರವಾರದಿಂದ ಆರಂಭವಾಗಬಹುದು ಎಂದು ಇತ್ತೀಚೆಗೆ ಹೇಳಿದ್ದರು. ಏಪ್ರಿಲ್ 11 ಮತ್ತು 12ರಂದು ಅಮೆರಿಕ-ಒರಾನ್ ನಡುವೆ ನಡೆದ ಮಾತುಕತೆ ವಿಫಲವಾಗಿತ್ತು. ಮಾತುಕತೆಗೆ ಪಾಕ್ ಸಿದ್ಧತೆ: ತನ್ನ ಮಧ್ಯಸ್ಥಿಕೆಯಲ್ಲಿ ಅಮೆರಿಕ- ಇರನ್ ನಡುವೆ ಎರಡನೇ ಸುತ್ತಿನ ಮಾತುಕತೆ ಆಯೋಜಿಸಲು ಪಾಕಿಸ್ತಾನ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಸ್ಲಾಮಾಬಾದ್ ಬರುವ ಅಮೆರಿಕ- ಇರಾನ್‌ನ ಹಿರಿಯ ನಾಯಕರ ಭದ್ರತೆಗಾಗಿ ಅಗತ್ಯ ಭದ್ರತಾ ಸಿಬ್ಬಂದಿಯನ್ನು ಪಾಕ್ ನಿಯೋಜಿಸಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಅವಳಿ ನಗರ ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಯ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು 10000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಐದು ದಿನಗಳಿಂದ ಈ ಭಾಗದ ಪ್ರಮುಖ ರಸ್ತೆ ಸಂಪರ್ಕ ರಸ್ತೆಗಳು ಮಾರುಕಟ್ಟೆಗಳು ಬ್ಯಾಂಕ್‌ಗಳು ಹಳೆ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಿದೆ.
ಪರಮಾಣು ಬಳಸಲ್ಲ: ಟ್ರಂಪ್ ಪುನರುಚ್ಚಾರ
ವಾಷಿಂಗ್ಟನ್/ದುಬೈ: ಇರಾನ್ ವಿರುದ್ಧದ ಯುದ್ಧದಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದರು. 'ಪರಮಾಣು ಶಸ್ತ್ರಾಸ್ತ್ರವನ್ನು ನಾನೇಕೆ ಬಳಸಲಿ? ಸಾಂಪ್ರದಾಯಿಕ ಮಾದರಿ ಯುದ್ಧದಲ್ಲಿಯೇ ಮೇಲುಗೈ ಸಾಧಿಸಿದ್ದೇವೆ. ಎದುರಾಳಿಯನ್ನು ನಾಶಮಾಡಿದ್ದೇವೆ' ಎಂದು ಅವರು ಶ್ವೇತಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು. 'ನಾನು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವುದಿಲ್ಲ. ಅದನ್ನು ಯಾರೂ ಎಂದಿಗೂ ಬಳಸಲು ಅನುಮತಿಸಬಾರದು' ಎಂದು ಅವರು ಪ್ರತಿಕ್ರಿಯಿಸಿದರು. ಇರಾನ್ ಜತೆಗಿನ ದೀರ್ಘಾವಧಿಯ ಶಾಂತಿ ಒಪ್ಪಂದಕ್ಕೆ ಎಷ್ಟು ಸಮಯ ಬೇಕಾಬಹುದು ಎಂದು ಕೇಳಿದಾಗ 'ಅದಕ್ಕಾಗಿ ಆತುರ ಮಾಡಬೇಡಿ' ಎಂದು ಉತ್ತರಿಸಿದರು. 'ಎರಡು ವಾರಗಳ ಕದನ ವಿರಾಮದ ಅವಧಿಯಲ್ಲಿ ಇರಾನ್ ತನ್ನ ಶಸ್ತ್ರಾಸ್ತ್ರಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸಜ್ಜುಗೊಳಿಸಿರಬಹುದು. ಆದರೆ ಅಮೆರಿಕ ಸೇನೆ ಅದನ್ನು ಒಂದು ದಿನದಲ್ಲಿಯೇ ನಾಶಪಡಿಸುವ ಸಾಮರ್ಥ್ಯ ಹೊಂದಿದೆ. ಈಗಾಗಲೇ ಅವರ ನೌಕಾಪಡೆ ವಾಯುಪಡೆಯನ್ನು ನಾಶಪಡಿಸಿದ್ದೇವೆ' ಎಂದು ಅವರು ಹೇಳಿದರು. 'ನಾನು ಉತ್ತಮ ಒಪ್ಪಂದವನ್ನು ಬಯಸುತ್ತಿದ್ದೇನೆ. ಬೇಕಾದರೆ ಈಗಲೇ ಒಪ್ಪಂದ ಮಾಡಿಕೊಳ್ಳಬಹುದು ಆದರೆ ಅದು ಶಾಶ್ವತವಾಗಿರಬೇಕು ಎಂದು ಬಯಸುತ್ತೇನೆ' ಎಂದು ಟ್ರಂಪ್ ತಿಳಿಸಿದರು. ಹೆಚ್ಚಿದ ಉದ್ವಿಗ್ನ ಕಣ್ಗಾವಲು: ಹೊರ್ಮುಜ್ ಜಲಸಂಧಿ ಬಳಿ ಇರಾನ್‌ನ ಸಣ್ಣ ದೋಣಿಗಳು ಸಾಗುವುದು ಕಂಡರೂ ಗುಂಡು ಹೊಡೆಯಿರಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶಿಸಿದ ಬೆನ್ನಲ್ಲೇ ಹೊರ್ಮುಜ್ ಜಲಸಂಧಿಯಲ್ಲಿ ಕಣ್ಗಾವಲು ತೀವ್ರಗೊಂಡಿದೆ. ಇದರಿಂದ ಅಮೆರಿಕ- ಇರಾನ್ ನಡುವೆ ಉದ್ವಿಗ್ನತೆ ಇನ್ನಷ್ಟು ಹೆಚ್ಚಾಗಿದೆ. ಇರಾನ್ ನಾಯಕತ್ವದಲ್ಲಿ ಬಿರುಕು ಮೂಡಿದೆ ಎಂಬ ಟ್ರಂಪ್ ಹೇಳಿಕೆಯನ್ನು ಇರಾನ್ ತಳ್ಳಿಹಾಕಿದೆ. 'ಇರಾನ್‌ನಲ್ಲಿ ತೀವ್ರವಾದಿಗಳು ಅಥವಾ ಮಂದಗಾಮಿಗಳು ಎಂದೇನಿಲ್ಲ. ನಾವೆಲ್ಲರೂ ಇರಾನಿಯನ್ನರು ಮತ್ತು ಕ್ರಾಂತಿಕಾರಿಗಳು' ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಮತ್ತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

