Dailyhunt Logo
  • Light mode
    Follow system
    Dark mode
    • Play Story
    • App Story
ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!


ಇತ್ತಿಹಾದ್ ರೈಲು: ಅಬುಧಾಬಿ-ಫುಜೈರಾ ನಡುವೆ ಕೇವಲ 90 ನಿಮಿಷಗಳ ಪ್ರಯಾಣ!


ಬುಧಾಬಿ, ದುಬೈ ಹಾಗೂ ಫುಜೈರಾ ನಡುವೆ ಪ್ರತಿದಿನ ಗಂಟೆಗಟ್ಟಲೆ ಕಾರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಲಕ್ಷಾಂತರ ಜನರಿಗೆ ಹೊಸ ಸುದ್ದಿ. ಇನ್ನು ಮುಂದೆ ಕೇವಲ 50 ರಿಂದ 90 ನಿಮಿಷಗಳಲ್ಲಿ ನೀವು ಬಯಸಿದ ಸ್ಥಳ ತಲುಪಬಹುದು.

ಯುಎಇ ನಲ್ಲಿ ನೆಲೆಸಿರುವ ಲಕ್ಷಾಂತರ ಜನರ ಬಹುದಿನದ ಕನಸು ಈಗ ನನಸಾಗಿದೆ. 'ಇತ್ತಿಹಾದ್ ರೈಲು' (Etihad Rail) ಜೂನ್ 30, 2026 ರಂದು ಅಧಿಕೃತವಾಗಿ ತನ್ನ ಕಾರ್ಯಚರಣೆ ಆರಂಭಿಸಲಿದೆ. ಯುಎಇಯಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಇದು ನಿಜಕ್ಕೂ ಒಂದು ಐತಿಹಾಸಿಕ ಕ್ಷಣ.

ಇತ್ತಿಹಾದ್ ರೈಲು ಯೋಜನೆ ಮೊದಲ ಬಾರಿಗೆ 2009ರಲ್ಲಿ ಯುಎಇ ಫೆಡರಲ್ ಕಾನೂನು ಸಂಖ್ಯೆ 2ರ ಅಡಿ ಸ್ಥಾಪನೆಯಾಯಿತು. ಯುಎಇ ದೇಶದ ಏಳು ಎಮಿರೇಟ್‌ಗಳನ್ನು ಒಂದೇ ರೈಲು ನೆಟ್ವರ್ಕ್ ಸಂಪರ್ಕಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿತ್ತು. 2016 ರ ಜನವರಿಯಲ್ಲಿ ಮೊದಲ ಹಂತದ 264 ಕಿ. ಮೀ ಸರಕು ರೈಲು ಮಾರ್ಗ ಆರಂಭವಾಯಿತು. ನಂತರ 2023ರ ಫೆಬ್ರವರಿ 28ರಂದು ಎರಡನೇ ಹಂತದ 605 ಕಿ.ಮೀ ರೂಲು ಮಾರ್ಗ ಉದ್ಘಾಟನೆಯಾಯಿತು. ಈ ಮಾರ್ಗವು ಸೌದಿ ಅರೇಬಿಯಾ ಗಡಿಯ ಗುವೈಫತ್‌ನಿಂದ ಹಿಡಿದು ಫುಜೈರಾ ತನಕ ವ್ಯಾಪಿಸಿದೆ. ಈ ಇಡೀ ರೈಲು ಮಾರ್ಗ ಸಂಪೂರ್ಣಗೊಂಡಾಗ ಸುಮಾರು 1,200 ಕಿ.ಮೀ ಉದ್ದದ ಮಾರ್ಗವಾಗಲಿದೆ.

ಇತ್ತಿಹಾದ್ ರೈಲು

ಶೇಖ್ ತಯ್ಯಾಬ್ ಬಿನ್ ಮೊಹಮದ್ ಅಧ್ಯಕ್ಷರಾಗಿರುವ ಇತ್ತಿಹಾದ್‌ ರೈಲಿನ ಆಪರೇಷನ್ ಜವಾಬ್ದಾರಿಯನ್ನು ಫ್ರಾನ್ಸ್‌ನ ಕಿಯೊಲಿಸ್ ಕಂಪೆನಿ (Keolis) ಜೊತೆ ಜಂಟಿಯಾಗಿ ನಡೆಸಲಾಗುತ್ತಿದೆ. ಈ ಕಂಪನಿಯು ದುಬೈ ಆರ್ ಟಿ ಎ ಸಹಭಾಗಿತ್ವದೊಂದಿಗೆ ದುಬೈ ಮೆಟ್ರೋ ಆಪರೇಷನ್‌ ನಡೆಸುತ್ತಿದೆ.

2026 ಜೂನ್ 23 ರಂದು ಅಬುಧಾಬಿಯ ಮೊಹಮ್ಮದ್ ಬಿನ್ ಝಾಯದ್ ಸಿಟಿ ರೈಲು ನಿಲ್ದಾಣವನ್ನು ಅಬುಧಾಬಿ ರಾಜಕುಮಾರ ಶೇಖ್ ಖಾಲಿದ್ ಬಿನ್ ಮೊಹಮ್ಮದ್ ಉದ್ಘಾಟಿಸಿದರು. ಅದೇ ದಿನ ಟಿಕೆಟ್ ಕಾಯ್ದಿರಿಸುವಿಕೆಗೆ ಚಾಲನೆ ನೀಡಲಾಗಿತ್ತು. ಜೂನ್ 30ರಂದು ಮೊದಲ ರೈಲು ಅಬುಧಾಬಿ-ಫುಜೈರಾ ಮಾರ್ಗದಲ್ಲಿ ಕಾರ್ಯಚರಣೆ ಆರಂಭಿಸಲಿದೆ ಎಂದು ಅಧಿಕೃತವಾಗಿ ಅವರು ಘೋಷಿಸಿದರು.

ಅಬುಧಾಬಿಯಿಂದ ಫೂಜೈರಾವರೆಗಿನ ಪ್ರಯಾಣವು ಬರೋಬ್ಬರಿ 3 ಗಂಟೆಯಾಗಿತ್ತು. ಇನ್ಮುಂದೆ ರೈಲು ಪ್ರಯಾಣವು ಪ್ರಯಾಣದ ಸಮಯವು 90 ನಿಮಿಷಕ್ಕಿಳಿಸಲಿದೆ. ಆರಂಭಿಕ ಹಂತದಲ್ಲಿ ಈ ರೈಲು ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು ಮುಂಬರುವ ದಿನಗಳಲ್ಲಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಕಾರ್ಯಾಚರಿಸಲಿದೆ.

ಈಗಾಗಲೇ ಹಂತ ಹಂತವಾಗಿ ಪ್ರತಿ ನಿಲ್ದಾಣಗಳನ್ನು ತೆರೆಯಲಾಗುತ್ತಿದೆ. ಜೂನ್ 30ಕ್ಕೆ ಅಬುಧಾಬಿ ಮತ್ತು ಫುಜೈರಾ ನಿಲ್ದಾಣಗಳು ಕಾರ್ಯಾರಂಭ ಮಾಡಿದ್ದರೆ, ಸೆಪ್ಟೆಂಬರ್ 30 ರಂದು ದುಬೈ ಮತ್ತು ಅಲ್ ಧೈದ್ ನಿಲ್ದಾಣಗಳು, ಡಿಸೆಂಬರ್ 30ಕ್ಕೆ ಅಲ್ ಧಾಫ್ರಾ ಮತ್ತು 2027ರ ಮಾರ್ಚ್ 30ಕ್ಕೆ ಶಾರ್ಜಾ ನಿಲ್ದಾಣ ತೆರೆಯಲಿದ್ದು, ಯುಎಇಯ ಒಟ್ಟು 11 ನಗರಗಳನ್ನು ಸಂಪರ್ಕಿಸಲಿದೆ.

ಟಿಕೆಟ್ ದರ ತೀರಾ ಕೈಗೆಟಕುವ ರೀತಿಯಲ್ಲಿದೆ. ಅಬುಧಾಬಿ-ಫುಜೈರಾ ಕಂಫರ್ಟ್ ಕ್ಲಾಸ್‌ಗೆ ಕೇವಲ 55 ದಿರ್ಹಂ (ಸುಮಾರು ₹1,300), ಪ್ರೀಮಿಯಂ ಕ್ಲಾಸ್‌ಗೆ 120 ದಿರ್ಹಂ (ಸುಮಾರು ₹2,800). ಉದ್ಘಾಟನೆ ಸಂದರ್ಭದಲ್ಲಿ ಶೇ 50 ರಿಯಾಯಿತಿ ಕೂಡ ಘೋಷಿಸಲಾಗಿದೆ.

ಆರಂಭ ಹಂತದ ಚಾಲನೆಯಲ್ಲಿ 13 ಆಧುನಿಕ ರೈಲುಗಳು ಸಂಚರಿಸಲಿದೆ. ಪ್ರತಿ ರೈಲು 400 ಪ್ರಯಾಣಿಕರನ್ನು ಹೊರಬಲ್ಲದು. ಎಕಾನಮಿ, ಫ್ಯಾಮಿಲಿ ಮತ್ತು ಫಸ್ಟ್ ಕ್ಲಾಸ್ ಒಳಗೊಂಡ ಈ ರೈಲಿನಲ್ಲಿ. ಹೈ ಸ್ಪೀಡ್‌ ಉಚಿತ ವೈಫೈ, ಇನ್‌ಫೋಟೇನ್‌ಮೆಂಟ್ ಸ್ಕ್ರೀನ್, ಚಾರ್ಜಿಂಗ್ ಪಾಯಿಂಟ್, ಊಟ-ತಿಂಡಿ ಸೇವೆ ಮತ್ತು ಐಷಾರಾಮಿ ಸೀಟಿಂಗ್ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಇಟಲಿಯ ಪ್ರತಿಷ್ಠಿತ ಹಾಸ್ಪಿಟಾಲಿಟಿ ಕಂಪನಿ ʼಆರ್ಸೆನೇಲ್ʼ ಇಂಟೀರಿಯರ್ ಡಿಸೈನ್ ಮಾಡಿದ್ದು, ಪ್ರಯಾಣಿಕರಿಗೆ ಐಶಾರಾಮಿ ಪ್ರಯಾಣದ ಅನುಭವ ನೀಡಲಿದೆ.

ಪ್ಯಾಸೇಂಜರ್‌ ರೈಲು ಚಾಲನೆಗೆ ಮುನ್ನುಡಿಯಾಗಿ ಕಮರ್ಷಿಯಲ್‌ ರೈಲುಗಳನ್ನು ಚಾಲನೆ ನಡೆಸಿದೆ. ರಸಾಯನಿಕ, ತೈಲ, ಬಂದರು ಕಾರ್ಗೋ ಮತ್ತು ಕೈಗಾರಿಕಾ ಉತ್ಪನ್ನಗಳನ್ನು ರಸ್ತೆ ಬದಲಿಗೆ ರೈಲಿನಲ್ಲಿ ಸಾಗಿಸುವುದರಿಂದ ವೆಚ್ಚ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಒಟ್ಟಾಗಿ ಮುಂಬರುವ ದಿನಗಳಲ್ಲಿ ಉತ್ತಮ ಆರ್ಥಿಕ ಲಾಭ ತರಲಿದೆ ಎಂದು ಅಂದಾಜಿಸಲಾಗಿದೆ.

ಭವಿಷ್ಯದಲ್ಲಿ ಎತಿಹಾದ್ ರೈಲ್ ಕೇವಲ ಯುಎಇಗೆ ಸೀಮಿತವಾಗದೇ ನೆರೆ ರಾಷ್ಟ್ರ ಸೌದಿ ಅರೇಬಿಯಾ ಮೂಲಕ ಒಟ್ಟು 6 ಗಲ್ಫ್ ರಾಷ್ಟ್ರಗಳನ್ನು ಸಂಪರ್ಕಿಸುವ ಜಿಸಿಸಿ ರೈಲ್ವೆ ನೆಟ್‌ವರ್ಕ್‌ನ ಭಾಗವಾಗಲಿದೆ. ದುಬೈ ಮಕ್ತೂಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೂ ಸಂಪರ್ಕ ಕಲ್ಪಿಸುವ ಚರ್ಚೆಯು ಪ್ರಗತಿಯಲ್ಲಿದೆ.


ಇತ್ತಿಹಾದ್ ರೈಲು ಯಾವಾಗ ಆರಂಭವಾಗುತ್ತಿದೆ?

ಪ್ರಯಾಣಿಕರ ಸೇವೆ ಜೂನ್ 30, 2026ರಿಂದ ಆರಂಭವಾಗಲಿದೆ.

ಮೊದಲ ಮಾರ್ಗ ಯಾವುದು?

ಅಬುಧಾಬಿ-ಫುಜೈರಾ

ಪ್ರಯಾಣಕ್ಕೆ ಎಷ್ಟು ಸಮಯ ಬೇಕು?

ಸುಮಾರು 1 ಗಂಟೆ 45 ನಿಮಿಷ

ಟಿಕೆಟ್ ದರ ಎಷ್ಟು?

ಕಂಫರ್ಟ್ ಕ್ಲಾಸ್‌ಗೆ 55 ದಿರ್ಹಂ ಹಾಗೂ ಪ್ರೀಮಿಯಂ ಕ್ಲಾಸ್‌ಗೆ 120 ದಿರ್ಹಂನಿಂದ ಆರಂಭವಾಗುತ್ತದೆ.

ಟಿಕೆಟ್ ಬುಕ್ ಮಾಡುವುದು ಹೇಗೆ?

ಇತ್ತಿಹಾದ್ ರೈಲಿನ ಅಧಿಕೃತ ವೆಬ್‌ಸೈಟ್ ಹಾಗೂ ಮೊಬೈಲ್ ಆಯಪ್ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ರೈಲು ಎಷ್ಟು ವೇಗದಲ್ಲಿ ಸಂಚರಿಸುತ್ತದೆ?

ಆರಂಭಿಕ ಹಂತದಲ್ಲಿ ಗಂಟೆಗೆ 200 ಕಿ.ಮೀ. ವೇಗದಲ್ಲಿ ಕಾರ್ಯಾಚರಿಸಲಿದೆ.

ರೈಲಿನಲ್ಲಿ ಯಾವ ಸೌಲಭ್ಯಗಳಿವೆ?

ಉಚಿತ ವೈಫೈ, ಚಾರ್ಜಿಂಗ್ ಪಾಯಿಂಟ್, ಆಹಾರ ಮತ್ತು ಪಾನೀಯ ಸೇವೆ, ವಿಶಾಲ ಆಸನ ವ್ಯವಸ್ಥೆ, ಲಗೇಜ್ ಸ್ಥಳ ಹಾಗೂ ಅಂಗವಿಕಲ ಸ್ನೇಹಿ ಸೌಲಭ್ಯಗಳನ್ನು ಒದಗಿಸಲಾಗಿದೆ.

ಒಟ್ಟು ಎಷ್ಟು ನಿಲ್ದಾಣಗಳಿವೆ?

ಯೋಜನೆಯಡಿ ಒಟ್ಟು 11 ಪ್ರಯಾಣಿಕರ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅವುಗಳನ್ನು ಹಂತ ಹಂತವಾಗಿ ಸಾರ್ವಜನಿಕ ಸೇವೆಗೆ ತೆರೆಯಲಾಗುತ್ತದೆ.

ಸಂಕ್ಷಿಪ್ತ ನೋಟ

  • ಯೋಜನೆ ಆರಂಭ: 2009

  • ಮೊದಲ ಸರಕು ರೈಲು ಸೇವೆ: 2016

  • ಪ್ರಯಾಣಿಕರ ಸೇವೆ ಆರಂಭ: 30 ಜೂನ್ 2026

  • ಮೊದಲ ಮಾರ್ಗ: ಅಬುಧಾಬಿ-ಫುಜೈರಾ

  • ಪ್ರಯಾಣದ ಅವಧಿ: ಸುಮಾರು 1 ಗಂಟೆ 45 ನಿಮಿಷ

  • ಗರಿಷ್ಠ ಕಾರ್ಯಾಚರಣೆ ವೇಗ: ಗಂಟೆಗೆ 200 ಕಿ.ಮೀ.

  • ರೈಲುಗಳ ಸಂಖ್ಯೆ: 13

  • ಪ್ರತಿ ರೈಲಿನ ಸಾಮರ್ಥ್ಯ: 400 ಪ್ರಯಾಣಿಕರು

  • ಆರಂಭಿಕ ಟಿಕೆಟ್ ದರ: 55 ದಿರ್ಹಂ

  • ಪ್ರೀಮಿಯಂ ದರ: 120 ದಿರ್ಹಂ

  • ಒಟ್ಟು ಪ್ರಸ್ತಾವಿತ ನಿಲ್ದಾಣಗಳು: 11

  • ಭವಿಷ್ಯದ ಗುರಿ: ಯುಎಇಯ ಪ್ರಮುಖ ನಗರಗಳನ್ನು ರಾಷ್ಟ್ರೀಯ ರೈಲು ಜಾಲದ ಮೂಲಕ ಸಂಪರ್ಕಿಸುವುದು

ಲೇಖಕ: ದುಬೈನ ಖಾಸಗಿ ಕಂಪನಿಯಲ್ಲಿ ಸರ್ಕಾರಿ ಸಂಪರ್ಕಾಧಿಕಾರಿ

Dailyhunt
Disclaimer: This content has not been generated, created or edited by Dailyhunt. Publisher: Prajavani