ಬೆಂಗಳೂರು: ವಿದ್ಯುತ್‌ಚಾಲಿತ ದ್ವಿಚಕ್ರ (ಇ.ವಿ) ವಾಹನೋದ್ಯಮಕ್ಕೆ ಉತ್ತೇಜನ ನೀಡಲು ಉದ್ಯಮದ ಪ್ರಮುಖರ ಜತೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಸಭೆ ನಡೆಸಿದರು.
ದೇಶದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳನ್ನು ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಉತ್ಪಾದಿಸುವುದು ಇಂದಿನ ಅಗತ್ಯವಾಗಿದೆ.
ಆರಂಭಿಕ ಮಟ್ಟದಲ್ಲಿಯೇ ಇಂಗಾಲ ಹೊರಸೂವಿಕೆಯನ್ನು ಶೂನ್ಯಕ್ಕೆ ತರಬೇಕು ಎಂದು ಸಚಿವರು ಸಭೆಯಲ್ಲಿ ಹೇಳಿದರು.
ಪಿಎಂ ಇ-ಡ್ರೈವ್ ಯೋಜನೆ ವ್ಯಾಪ್ತಿಯನ್ನು ವಿಸ್ತರಿಸಬೇಕು ಮತ್ತು ಉದ್ಯಮದ ಅಗತ್ಯಕ್ಕೆ ತಕ್ಕಂತೆ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಆಟೊ ಯೋಜನೆಯನ್ನು ಪರಿಷ್ಕರಿಸುವಂತೆ ಉದ್ಯಮದ ಪ್ರಮುಖರು ಸಚಿವರಿಗೆ ಮನವಿ ಮಾಡಿದರು.
ಭಾರತವನ್ನು ವಿದ್ಯುತ್‌ಚಾಲಿತ ದ್ವಿಚಕ್ರ ವಾಹನಗಳ ಪ್ರಮುಖ ಜಾಗತಿಕ ತಯಾರಿಕಾ ಕೇಂದ್ರವಾಗಿಸುವ ತಮ್ಮ ದೃಷ್ಟಿಕೋನವನ್ನು ಸಚಿವರು ಹಂಚಿಕೊಂಡರು.
ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆಯನ್ನು ವೇಗಗೊಳಿಸುವುದು, ಚಾರ್ಜಿಂಗ್ ಕೇಂದ್ರಗಳ ನಿರ್ಮಾಣ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು ಮತ್ತು ವಾಹನಗಳ ರಫ್ತನ್ನು ಹೆಚ್ಚಿಸಲು ಇರುವ ಅವಕಾಶಗಳ ಬಗ್ಗೆ ಚರ್ಚಿಸಲಾಯಿತು.

