Dailyhunt Logo
  • Light mode
    Follow system
    Dark mode
    • Play Story
    • App Story
ಜಾನಕಿ ಉಸಿರಲ್ಲಿ ಉಸಿರಾದ ಮೈಸೂರು: ಅಭಿಮಾನಕ್ಕಾಗಿ  ಇಲ್ಲಿಯೇ ಉಳಿದಿದ್ದ ಗಾನಕೋಗಿಲೆ

ಜಾನಕಿ ಉಸಿರಲ್ಲಿ ಉಸಿರಾದ ಮೈಸೂರು: ಅಭಿಮಾನಕ್ಕಾಗಿ ಇಲ್ಲಿಯೇ ಉಳಿದಿದ್ದ ಗಾನಕೋಗಿಲೆ

ಮೈಸೂರು: ಎತ್ತಣ ಗಾನಕೋಗಿಲೆ ಎಸ್. ಜಾನಕಿ, ಎತ್ತಣ ಮೈಸೂರು. ಇವೆರಡಕ್ಕೂ ಸಂಬಂಧ ಬೆಸೆದದ್ದು ಮಾತ್ರ ಅಭಿಮಾನಿಗಳ ನಂಟು!

ಭಾರತದ ಮೇರು ಗಾಯಕಿಯರಲ್ಲಿ ಒಬ್ಬರಾದ ಎಸ್. ಜಾನಕಿ ಮೂಲತಃ ಆಂಧ್ರಪ್ರದೇಶದವರು. ವೃತ್ತಿಜೀವನದ ಕಾರಣಕ್ಕೆ ಒಂದಿಷ್ಟು ಕಾಲ ಚೆನ್ನೈನಲ್ಲಿ ನೆಲೆ ನಿಂತರೂ ಬದುಕಿನ ಸಂಧ್ಯಾಕಾಲದ ಹೆಚ್ಚಿನ ಸಮಯ ಕಳೆದದ್ದು ಇಲ್ಲಿಯೇ.

ಸದ್ಯ ಅಭಿಮಾನಿಯೊಬ್ಬರ ಮನೆಯಲ್ಲಿ ವಾಸವಿದ್ದ ಅವರು ಇಲ್ಲಿಯೇ ಸ್ವಂತಕ್ಕೊಂದು ಚೆಂದದ ಮನೆಯ ಹುಡುಕಾಟದಲ್ಲಿಯೂ ಇದ್ದರು. ನಾಲ್ಕಾರು ಮನೆಗಳನ್ನು ನೋಡಿದ್ದು, ಅದರಲ್ಲಿ ಒಂದನ್ನು ಅಂತಿಮಗೊಳಿಸಬೇಕಿತ್ತು. ಅಷ್ಟರಲ್ಲಾಗಲೇ ಬದುಕಿನ ಪಯಣ ಮುಗಿಸಿ ಹೊರಟುಹೋಗಿದ್ದಾರೆ.

ಹೈದರಾಬಾದ್‌ನಲ್ಲಿ ಭವ್ಯ ಬಂಗಲೆಯಲ್ಲಿದ್ದರೂ ಜಾನಕಿ ಅವರಿಗೆ ಮೈಸೂರು ಇಷ್ಟವಾಗಲು ಮುಖ್ಯ ಕಾರಣ ಇಲ್ಲಿನವರ ಅಭಿಮಾನ ಹಾಗೂ ಈ ನಗರದ ಪ್ರಶಾಂತತೆ. ಯಾವಾಗ ಬಂದರೂ ಅಕ್ಕರೆಯಿಂದ ನೋಡಿಕೊಂಡು ಪ್ರೀತಿ-ಅಭಿಮಾನ ತೋರಿದ್ದವರನ್ನು ಕಂಡ ಜಾನಕಿ ಕಡೆಗೆ ಇಲ್ಲಿಯೇ ನೆಲಸುವ ನಿರ್ಧಾರವನ್ನೂ ಮಾಡಿದ್ದರು.

ವರ್ಷಗಟ್ಟಲೆ ಉಳಿದರು: ವರ್ಷ ಕಳೆದಂತೆಲ್ಲ ಮೈಸೂರಿನ ಅಭಿಮಾನಿಗಳ ಜೊತೆ ಜಾನಕಮ್ಮನ ನಂಟು ಹೆಚ್ಚುತ್ತಲೇ ಹೋಯಿತು. 2019ರ ಒಂದು ದಿನ ಮೈಸೂರಿನಲ್ಲೇ ಒಂದೆರಡು ತಿಂಗಳು ಉಳಿಯುವ ಆಸೆಯಿಂದ ಬಂದವರು ಮಹದೇವಪುರ ರಸ್ತೆಯಲ್ಲಿನ ಅಭಿಮಾನಿಯ ಮನೆಯಲ್ಲಿ ತಂಗಿದ್ದರು. ಅಲ್ಲಿ ಆಕಸ್ಮಿಕವಾಗಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡರು. ಹೀಗಾಗಿ ವಿಶ್ರಾಂತಿಗೆಂದು ಇನ್ನಷ್ಟು ತಿಂಗಳು ತಂಗಬೇಕಾಯಿತು. ನಂತರದಲ್ಲಿ ಕೋವಿಡ್ ಲಾಕ್‌ಡೌನ್‌ನಿಂದ ವರ್ಷಗಟ್ಟಲೆ ಇಲ್ಲೇ ಉಳಿದರು. ಇಲ್ಲಿನ ಪರಿಸರ ಅವರಿಗೆ ತುಂಬಾ ಪ್ರಿಯವಾಯಿತು. ಕಡೆಗೆ ಇಲ್ಲಿಯೇ ಉಳಿಯುವ ನಿರ್ಧಾರ ಮಾಡಿದರು ಎಂದು ಸ್ಮರಿಸುತ್ತಾರೆ ಅವರ ಆಪ್ತ ಮೈಸೂರಿನ ನವೀನ್.

ಅಂಗಡಿಗೂ ಅವರದ್ದೇ ಹೆಸರು!: 2006ರಲ್ಲಿ ಪೀಠೋಪಕರಣ ಮಾರಾಟ ಅಂಗಡಿ ತೆರೆಯಲು ಮುಂದಾದ ಮೈಸೂರಿನ ನವೀನ್‌, ಅದಕ್ಕೆ ತಮ್ಮ ನೆಚ್ಚಿನ ಗಾಯಕಿಯ ಹೆಸರನ್ನೇ ಇಡಲು ನಿರ್ಧರಿಸಿ ಅದಕ್ಕೆ ಅವರ ಒಪ್ಪಿಗೆ ಕೇಳಿದರು. 'ನನ್ನ ಬದಲಿಗೆ ನಿಮ್ಮ ತಂದೆ,ತಾಯಿ ಇಲ್ಲವೇ ಮನೆದೇವರ ಹೆಸರು ಇಡಪ್ಪ' ಎಂದು ಜಾನಕಿ ಹೇಳಿದರಾದರೂ ಕಡೆಗೆ ಅಭಿಮಾನಕ್ಕೆ ಕಟ್ಟುಬಿದ್ದು ಸಮ್ಮತಿಸಿದರು. ಅಂಗಡಿ ಉದ್ಘಾಟನೆಗೆ ಇನ್ನೆರಡು ದಿನ ಬಾಕಿ ಇದ್ದಾಗ ಅಚ್ಚರಿಯ ಭೇಟಿ ಕೊಟ್ಟು ಎಲ್ಲರನ್ನೂ ಖುಷಿಗೊಳಿಸಿದರು. ಈಗಲೂ ಇಲ್ಲಿನ ಬೋಗಾದಿಯಲ್ಲಿ 'ಎಸ್. ಜಾನಕಿ ಫರ್ನಿಚರ್ಸ್‌' ವಹಿವಾಟು ನಡೆಸುತ್ತಿದೆ.

ಹಾಡೇ ಅವರ ಉಸಿರು: 2017ರಲ್ಲಿ ಮೈಸೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಡಿದ್ದೇ ಅವರ ಕೊನೆಯ ಪ್ರದರ್ಶನ. ನಂತರದಲ್ಲಿ ಹಾಡುವುದಿಲ್ಲ ಎಂದು ಘೋಷಿಸಿದ್ದರಾದರೂ ಮನೆಯೊಳಗೆ ಸದಾ ಗುನುಗುತ್ತಲೇ ಇದ್ದರು. ಕೆಲವೊಮ್ಮೆ ತಾವೇ ರಾಗ ಸಂಯೋಜಿಸುವುದು, ಹಾಡಿದ್ದನ್ನು ರೆಕಾರ್ಡ್ ಮಾಡುವುದನ್ನೂ ಮಾಡಿಕೊಳ್ಳುತ್ತಿದ್ದರು. ಆಗಾಗ್ಗೆ ಪುಸ್ತಕವೂ ಕೈಯಲ್ಲಿರುತ್ತಿತ್ತು. ಚಿತ್ರರಂಗದ ಸಾಕಷ್ಟು ಮಂದಿ, ಅಭಿಮಾನಿಗಳು ಅವರನ್ನು ಕಾಣಲು ಆಗಾಗ್ಗೆ ಬರುತ್ತಲೇ ಇದ್ದರು.

'ತಾಯಿಯೊಂದಿಗೇ ವಾಸವಿದ್ದ ಜಾನಕಿ ಪುತ್ರ ಮುರಳಿಕೃಷ್ಣ ಇದೇ ವರ್ಷ ಜನವರಿ 22ರಂದು ಹೃದಯಾಘಾತದಿಂದ ತೀರಿಕೊಂಡಿದ್ದರು. ತೀವ್ರ ದುಃಖಿತರಾಗಿದ್ದ ಅವರು ನಂತರದಲ್ಲಿ ಅಂತರ್ಮುಖಿ ಆಗಿದ್ದರು. ಮೈಸೂರು ಬಿಟ್ಟು ಹೊರಗೆ ಎಲ್ಲಿಯೇ ಹೋದರೂ ಹೆಚ್ಚು ದಿನ ಉಳಿಯುತ್ತಿರಲಿಲ್ಲ. ಮತ್ತೆ ಇಲ್ಲಿಗೇ ಅವರ ಮನ ಮಿಡಿಯುತ್ತಿತ್ತು. ಮೈಸೂರು ಅವರ ಉಸಿರಾಗಿತ್ತು' ಎಂದು ಅಭಿಮಾನಿಗಳು ನೆನೆಯುತ್ತಾರೆ.

'ನಾನಂತು ಬಾಲ್ಯದಿಂದಲೂ ಜಾನಕಮ್ಮನವರ ಅಭಿಮಾನಿ. ಅವರು ಎಲ್ಲಿ ಬರುತ್ತಾರೆ ಎಂದು ಸುದ್ದಿ ಸಿಕ್ಕರೂ ಅಲ್ಲಿ ಹಾಜರು. ಹೀಗೆಯೇ ಬೆಂಗಳೂರಿಗೆ ಹೋಗಿ ಅವರನ್ನು ನೋಡಲಾಗದೇ ವಾಪಸ್ ಆಗಿದ್ದು ಉಂಟು. ನಂತರ ವಿಳಾಸ ಸಿಕ್ಕಿ ಪತ್ರಗಳ ಮೂಲಕ ಅವರೊಂದಿಗೆ ಸಂವಹನ ಆರಂಭವಾಯಿತು. ಅವರ ದೂರವಾಣಿ ಸಂಖ್ಯೆಗೆ ಹತ್ತಾರು ಬಾರಿ ಕರೆ ಮಾಡಿದ್ದುಂಟು. ಒಮ್ಮೆ ಜಾನಕಮ್ಮ ಚೆನ್ನೈನ ಮನೆಯಲ್ಲಿ ಭೇಟಿಯ ಅವಕಾಶ ನೀಡಿದರು. ಆದರೆ ಹೋಗಲು ನಮ್ಮಲ್ಲಿ ಹಣವಿಲ್ಲ. ಕಡೆಗೆ ಅಮ್ಮನ ಚಿನ್ನಾಭರಣ ಅಡವಿಟ್ಟು, ಆ ಹಣದಲ್ಲಿ ಟಿಕೆಟ್ ಖರೀದಿಸಿ ರೈಲಿನಲ್ಲಿ ಚೆನ್ನೈ ತಲುಪಿದ್ದೆ. ಆಗ ನನಗೆ ಬರೀ 13 ವರ್ಷ. ನನ್ನನ್ನು ಕಂಡು ಸ್ವತಃ ಗಾನಕೋಗಿಲೆಗೆ ಅಚ್ಚರಿ ಆಗಿತ್ತು' ಎಂದು ಸ್ಮರಿಸುತ್ತಾರೆ ಮೈಸೂರಿನ ನವೀನ್‌.ಚಿನ್ನ ಅಡವಿಟ್ಟು ಚೆನ್ನೈಗೆ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260714-4-1532798532

Dailyhunt
Disclaimer: This content has not been generated, created or edited by Dailyhunt. Publisher: Prajavani