ನವದೆಹಲಿ: ಉದ್ದೇಶಿತ ಜಾತಿಗಣತಿ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷವು ಶುಕ್ರವಾರ ಹರಿಹಾಯ್ದಿದೆ.
'ಈ ವಿಚಾರವಾಗಿ ರಾಜಕೀಯ ಪಕ್ಷಗಳೊಂದಿಗೆ ಸರ್ಕಾರ ಯಾವುದೇ ಸಮಾಲೋಚನೆ ನಡೆಸಿಲ್ಲ. ಹೀಗಾಗಿ, ಜಾತಿಗಣತಿ ನಡೆಸುವ ಸರ್ಕಾರದ ಉದ್ದೇಶದ ಬಗ್ಗೆಯೇ ಸಂಶಯ ಮೂಡುತ್ತಿದೆ' ಎಂದು ಟೀಕಿಸಿದೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, 'ಈ ಹಿಂದೆ ತೆಲಂಗಾಣ ಮತ್ತು ಬಿಹಾರದಲ್ಲಿ ನಡೆದ ಸಮೀಕ್ಷೆ ವೇಳೆ ಜಾತಿಗಳ ಪಟ್ಟಿ ಹಾಗೂ ಪ್ರಶ್ನಾವಳಿ ಸಿದ್ಧಪಡಿಸಲಾಗಿತ್ತು. ಜನ ನೀಡಿದ ಉತ್ತರವನ್ನು ಗುರುತು ಮಾಡಲಾಗುತ್ತಿತ್ತು. ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರ ಕೂಡ ಗಣತಿ ನಡೆಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ' ಎಂದು ಹೇಳಿದ್ದಾರೆ.
ಜಾತಿಗಣತಿ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ವರ್ಷ ಮೇ 5ರಂದು ಬರೆದಿದ್ದ ಪತ್ರದ ಪ್ರತಿಯನ್ನು ಜೈರಾಮ್ ತಮ್ಮ ಪೋಸ್ಟ್‌ನೊಂದಿಗೆ ಹಂಚಿಕೊಂಡಿದ್ದಾರೆ.
'ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರದಲ್ಲಿ ಖರ್ಗೆಯವರು ಕೆಲ ಸಲಹೆಗಳನ್ನು ನೀಡಿದ್ದರು. ತೆಲಂಗಾಣ ಮಾದರಿಯಲ್ಲಿ ಗಣತಿ ನಡೆಸಬೇಕು ಹಾಗೂ ಈ ವಿಚಾರವಾಗಿ ಎಲ್ಲ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದರು. ಗಣತಿಗೆ ಸಂಬಂಧಿಸಿ ಸಮರ್ಪಕ ಪ್ರಶ್ನಾವಳಿ ಸಿದ್ಧಪಡಿಸಬೇಕು. ಜಾತಿವಾರು ಜನಸಂಖ್ಯೆಯ ಮಾಹಿತಿ ಸಂಗ್ರಹವಷ್ಟೇ ಗಣತಿಯ ಉದ್ದೇಶವಾಗಿರದೆ, ಸಾಮಾಜಿಕ- ಆರ್ಥಿಕ ಸಾಧನೆಯೇ ಗುರಿಯಾಗಿರಬೇಕು ಎಂದು ಖರ್ಗೆ ಪತ್ರದಲ್ಲಿ ಪ್ರತಿಪಾದಿಸಿದ್ದರು. ಈ ಸಲಹೆಗಳನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ' ಎಂದು ದೂರಿದ್ದಾರೆ.
'ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೇ ತೆಲಂಗಾಣದಲ್ಲಿ ಇತ್ತೀಚೆಗೆ ಜಾತಿ ಸಮೀಕ್ಷೆ ನಡೆಸಲಾಗಿತ್ತು. ಹೀಗಾಗಿ, ಪ್ರಸಕ್ತ ಗಣತಿಗೆ ಸಂಬಂಧಿಸಿ ಪ್ರಶ್ನಾವಳಿ ಅಂತಿಮಗೊಳಿಸುವಾಗ ತೆಲಂಗಾಣದಲ್ಲಿ ಅನುಸರಿಸಿದ್ದ ವಿಧಾನ ಮತ್ತು ಪ್ರಶ್ನೆಗಳನ್ನು ಪರಿಗಣಿಸಬೇಕು ಎಂದೂ ಖರ್ಗೆ ಪತ್ರದಲ್ಲಿ ವಿವರಿಸಿದ್ದರು' ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

