Dailyhunt Logo
  • Light mode
    Follow system
    Dark mode
    • Play Story
    • App Story
ಜಾತಿ ವ್ಯವಸ್ಥೆಯ ಕರಾಳತೆ ಜೀವಂತ: ಸಚಿವ ಕೆ.ಎಸ್‌. ಬಸವಂತಪ್ಪ ಬೇಸರ

ಜಾತಿ ವ್ಯವಸ್ಥೆಯ ಕರಾಳತೆ ಜೀವಂತ: ಸಚಿವ ಕೆ.ಎಸ್‌. ಬಸವಂತಪ್ಪ ಬೇಸರ

ದಾವಣಗೆರೆ: 'ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಭಾಷಣ ಮಾಡಿದ ಉತ್ತರಾಖಂಡದ ರಾಮಲೀಲಾ ಮೈದಾನವನ್ನು ಶುದ್ಧೀಕರಿಸಿದ್ದು ಜಾತಿ ವ್ಯವಸ್ಥೆಯ ಕರಾಳ ಮುಖ ಜೀವಂತವಾಗಿರುವುದಕ್ಕೆ ಸಾಕ್ಷಿ' ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೆ.ಎಸ್‌.

ಬಸವಂತಪ್ಪ ಬೇಸರ ವ್ಯಕ್ತಪಡಿಸಿದರು.

'ದೇಶದ ಯಾರೊಬ್ಬರಿಗೂ ಈ ಸ್ಥಿತಿ ಎದುರಾಗಬಾರದು. ಇಂತಹ ಮನಸ್ಥಿತಿ ಹೊಂದಿದವರು ಆತ್ಮಾವಲೋಕನ ಮಾಡಿಕೊಳ್ಳಬೇಕು' ಎಂದು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

'ಸಾಂವಿಧಾನಿಕ ಮೌಲ್ಯಗಳನ್ನು ಸ್ವೀಕರಿಸಿ ಎಲ್ಲರನ್ನು ಗೌರವದಿಂದ ಕಂಡಾಗ ಮಾತ್ರ ದೇಶದಲ್ಲಿ ಸಮಾನತೆ ನೆಲೆಸಲು ಸಾಧ್ಯ. ಬಾಹ್ಯ ಒತ್ತಡದಿಂದ ಸುಧಾರಣೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅಂತರಾಳದಿಂದ ಬದಲಾಗಬೇಕು' ಎಂದು ಅಭಿಪ್ರಾಯಪಟ್ಟರು.

'ಮಾಯಕೊಂಡ ತಾಲ್ಲೂಕು: ಪ್ರಯತ್ನ'

'ಮಾಯಕೊಂಡವನ್ನು ಪ್ರತ್ಯೇಕ ತಾಲ್ಲೂಕು ಮಾಡುವ ಬೇಡಿಕೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಸಚಿವನಾಗಿರುವ ಕಾರಣಕ್ಕೆ ಕ್ಷೇತ್ರದ ಜನರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಾಧಕ-ಬಾಧಕಗಳ ವರದಿ ಪಡೆದು, ಕುಲಂಕಷವಾಗಿ ಪರಿಶೀಲಿಸಿ ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇನೆ. ತಾಲ್ಲೂಕು ಮಾನ್ಯತೆ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

'ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ 22 ಕೆರೆಗಳನ್ನು ತುಂಬಿಸುವ ಯೋಜನೆ ತಾಂತ್ರಿಕ ತೊಡಕಿನಿಂದ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ಹೊಸ ಪೈಪ್‌ಲೈನ್‌ ನಿರ್ಮಾಣಕ್ಕೆ ಅಗತ್ಯ ಅನುದಾನ ಮಂಜೂರಾಗಿದೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಎಲ್ಲ ಕೆರೆಗಳನ್ನು ಭರ್ತಿ ಮಾಡಲಾಗುವುದು' ಎಂದರು.

ಜಿಲ್ಲಾ ಆಸ್ಪತ್ರೆ ಸುಧಾರಣೆಗೆ ಯತ್ನ: 'ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ನವೀಕರಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಸಾವಿರ ಹಾಸಿಗೆ ಸಾಮರ್ಥ್ಯದ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ವೈದ್ಯಕೀಯ ಸೇವೆಯಲ್ಲಿ ಸುಧಾರಣೆ ತರಲಾಗುವುದು' ಎಂದು ಬಸವಂತಪ್ಪ ಮಾಹಿತಿ ನೀಡಿದರು.

'ಅಧಿಕಾರಿಗಳ ತಪ್ಪು ನಿರ್ಧಾರದಿಂದ ಎಂಆರ್‌ಐ ಸ್ಕ್ಯಾನಿಂಗ್‌ ಸೌಲಭ್ಯ ಜಿಲ್ಲೆಯ ಜನರ ಕೈತಪ್ಪಿದೆ. ನರರೋಗ ತಜ್ಞರು ಸೇರಿದಂತೆ ಅಗತ್ಯ ವೈದ್ಯಕೀಯ ಸೌಲಭ್ಯಗಳಿದ್ದರೂ ಎಂಆರ್‌ಐ ಸ್ಕ್ಯಾನಿಂಗ್‌ ವ್ಯವಸ್ಥೆ ಜಿಲ್ಲಾ ಆಸ್ಪತ್ರೆಯಲ್ಲಿ ಇಲ್ಲ. ಹೊಸ ಯಂತ್ರಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಈ ಸೌಲಭ್ಯವನ್ನು ಒದಗಿಸಲಾಗುವುದು' ಎಂದರು.

ಕೆ.ಎಸ್‌.ಬಸವಂತಪ್ಪ, ಸಚಿವಗ್ರಾಮೀಣ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಸಿಗಬೇಕು. ಹಾಸ್ಟೆಲ್‌ ಸೌಲಭ್ಯ ಪ್ರತಿಯೊಬ್ಬರಿಗೂ ದೊರಕಬೇಕು. ಮೂಲಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಒತ್ತು ಕೊಡಬೇಕು
Dailyhunt
Disclaimer: This content has not been generated, created or edited by Dailyhunt. Publisher: Prajavani