ಬೆಂಗಳೂರು: 'ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಶಿಫಾರಸುಗಳನ್ನು ಜಾರಿಗೆ ತಂದು ಎಲ್ಲಾ ವರ್ಗದವರಿಗೂ ಸಾಮಾಜಿಕ ನ್ಯಾಯ ಒದಗಿಸಲು ಬದ್ಧ' ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು.
ಇಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಒಬಿಸಿ ಮಹಾಸಂಘದ 11ನೇ ರಾಷ್ಟ್ರೀಯ ಮಹಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನರು ಅಧಿಕಾರಕ್ಕೆ ಬಂದಂತೆ. ದೇಶದಲ್ಲಿ ಶೇಕಡ 52ರಷ್ಟು ಹಿಂದುಳಿದ ವರ್ಗದವರು ಇದ್ದಾರೆ. ಬ್ರಿಟಿಷರ ಕಾಲದಲ್ಲೇ ಸಮಾನತೆಯ ಚರ್ಚೆ ಇತ್ತು. ಹೀಗಾಗಿ 1931ರಲ್ಲೇ ಜಾತಿ ಗಣತಿ ಮಾಡಲಾಗಿತ್ತು. ನಮ್ಮ ಸಚಿವ ಸಂಪುಟದಲ್ಲಿ ಮೂರನೇ ಎರಡು ಭಾಗದಷ್ಟು ಹಿಂದುಳಿದವರು, ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡಲಾಗಿದೆ' ಎಂದು ಹೇಳಿದರು.
'ಸ್ಥಳೀಯ ಸಂಸ್ಥೆಗಳಲ್ಲೂ ಮೀಸಲಾತಿ ನೀಡಲಾಗುತ್ತಿದೆ. 73-74ನೇ ತಿದ್ದುಪಡಿ ವೇಳೆ ರಾಜೀವ್ ಗಾಂಧಿ ಅವರಿಗೆ ಈ ತಿದ್ದುಪಡಿ ಯಾಕೆ ಎಂದು ಕೇಳಿದ್ದೆ. ಅದಕ್ಕೆ ಅವರು ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೂ ನಾಯಕರನ್ನು ತಯಾರು ಮಾಡಬೇಕು. ನಾಯಕರನ್ನು ತಯಾರು ಮಾಡುವವನೇ ನಿಜವಾದ ನಾಯಕ ಎಂದಿದ್ದರು. ಸಮಾಜದ ಎಲ್ಲಾ ವರ್ಗದ ಜನರು ನಾಯಕರಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಕೇಂದ್ರ ಸರ್ಕಾರ ಜನಗಣತಿಗೆ ಮುಂದಾಗಿದ್ದು, ಇದರ ಮೂಲಕ ಅಂತರವನ್ನು ಕಡಿಮೆ ಮಾಡಬೇಕು' ಎಂದು ತಿಳಿಸಿದರು.
'ಬಬನ್ ರಾವ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಒಬಿಸಿ ಮಹಾಸಂಘವು ರಾಜಕೀಯ ಆಕಾಂಕ್ಷೆ ಇಲ್ಲದೇ ಹಕ್ಕಿಗಾಗಿ ಶ್ರಮಿಸುತ್ತಿದೆ. ಒಬಿಸಿ ಮಹಾಸಂಘಟನೆ ಬೇಡಿಕೆಗಳಿಗೆ ಮನ್ನಣೆ ಸಿಗಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು' ಎಂದು ಮನವಿ ಮಾಡಿದರು.
ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮಾತನಾಡಿ, 'ಮೀಸಲಾತಿಯಿಂದ ಅಭಿವೃದ್ಧಿಗೆ ಹಿನ್ನಡೆ ಎಂದು ಪಟ್ಟಭದ್ರಹಿತಾಸಕ್ತಿಗಳು ಅಪಪ್ರಚಾರ ನಡೆಸುತ್ತಾರೆ. ತಮಿಳುನಾಡಿನಲ್ಲಿ ಶೇಕಡ 69ರಷ್ಟು ಮೀಸಲಾತಿ ಇದೆ. ಇಡೀ ದೇಶದಲ್ಲಿ ತಮಿಳುನಾಡು ಮಾದರಿ ರಾಜ್ಯವಾಗಿದೆ. ಉತ್ತರ ಪ್ರದೇಶ, ರಾಜಸ್ಥಾನ ಸೇರಿ ಉತ್ತರ ಭಾರತದ ರಾಜ್ಯಗಳು ಮೀಸಲಾತಿಯನ್ನು ಕಡಿಮೆ ನೀಡುತ್ತಿವೆ. ಹಾಗಾದರೆ ಅಭಿವೃದ್ಧಿಯಲ್ಲಿ ಯಾಕೆ ಹಿಂದೆ ಬಿದ್ದಿದೆ. ದಕ್ಷಿಣ ಭಾರತದ ರಾಜ್ಯಗಳು ಮೀಸಲಾತಿಯನ್ನು ಶೇಕಡ ಐವತ್ತರಷ್ಟು ನೀಡಿಯೂ ದೇಶಕ್ಕೆ ಮಾದರಿ ರಾಜ್ಯಗಳಾಗಿವೆ' ಎಂದರು.
'ಒಬಿಸಿಗಳು ತಮ್ಮ ಜನಸಂಖ್ಯೆ ಮತ್ತು ಹಿಂದುಳಿದಿರುವಿಕೆಯ ದತ್ತಾಂಶದ ಆಧಾರದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕೇಳಿದಾಗ ತಕ್ಷಣ ಶೇ 50ರ ಮಿತಿಯನ್ನು ಮುಂದಿಡಲಾಗುತ್ತದೆ. ಆದರೆ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರ ಮೀಸಲಾತಿ ನೀಡಲು 103ನೇ ಸಂವಿಧಾನ ತಿದ್ದುಪಡಿ ತಂದು ಮೀಸಲಾತಿಯ ಮೂಲ ಆಶಯವನ್ನೇ ನಾಶ ಮಾಡಲಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.
'ರಾಹುಲ್ ಗಾಂಧಿ ಹೋರಾಟದ ಫಲವಾಗಿ ದೇಶದಲ್ಲಿ ಜಾತಿಜನಗಣತಿ ನಡೆಯುತ್ತಿದೆ. ಇದರ ವರದಿ ಜಾರಿಗಾಗಿ ಹಾಗೂ ಹಕ್ಕಿಗಾಗಿ ಹೋರಾಟ ನಡೆಸಬೇಕು' ಎಂದು ಕರೆ ನೀಡಿದರು.
ಸಿದ್ದರಾಮಯ್ಯಸಮೀಕ್ಷೆಯ ಹಿನ್ನೆಲೆ ಮುನ್ನೆಲೆ
* ರಾಜ್ಯದ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ವಿವರಗಳನ್ನು ಕಲೆಹಾಕುವ ಉದ್ದೇಶದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು 2025ರ ಸೆಪ್ಟೆಂಬರ್ 22ರಿಂದ 2025ರ ಅಕ್ಟೋಬರ್ 31ರವರೆಗೆ ಸಮೀಕ್ಷೆ ನಡೆಸಿತ್ತು
* ರಾಜ್ಯದ ಒಟ್ಟು 6.85 ಕೋಟಿ ಜನರ ವಿವರಗಳನ್ನು ಕಲೆಹಾಕುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 6.13 ಕೋಟಿ ಜನರ ಮಾಹಿತಿಯನ್ನು ಕಲೆ ಹಾಕಲು ಸಾಧ್ಯವಾಗಿತ್ತು
* ಒಟ್ಟು 72 ಲಕ್ಷ ಜನರ ಮಾಹಿತಿ ಕಲೆ ಹಾಕಿರಲಿಲ್ಲ. 4.2 ಲಕ್ಷಕ್ಕೂ ಹೆಚ್ಚು ಕುಟುಂಬದವರು, 'ತಾವು ಹಿಂದುಳಿದ ಜಾತಿಯವರಲ್ಲ. ಹೀಗಾಗಿ ಸಮೀಕ್ಷೆಗೆ ಮಾಹಿತಿ ನೀಡುವುದಿಲ್ಲ' ಎಂದು ಮಾಹಿತಿ ನೀಡಲು ನಿರಾಕರಿಸಿದ್ದರು
* ಸಮೀಕ್ಷೆಗೆ ಒಟ್ಟಾರೆ ₹253 ಕೋಟಿ ವೆಚ್ಚ ಮಾಡಲಾಗಿತ್ತು
* ಸಮೀಕ್ಷೆ ಆಧಾರದಲ್ಲಿ ಆಯೋಗವು 13 ಅಧ್ಯಾಯಗಳ 280 ಪುಟಗಳ ವರದಿಯನ್ನು ಸಿದ್ಧಪಡಿಸಿತ್ತು. ಅದನ್ನು ಇದೇ ಮೇನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು
* ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 42ರಷ್ಟಕ್ಕೆ ಹೆಚ್ಚಿಸಬೇಕು ಎಂದು ಆಯೋಗವು ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು
ಬಿ.ಕೆ.ಹರಿಪ್ರಸಾದ್ ಕೆಪಿಸಿಸಿ ಅಧ್ಯಕ್ಷಕೆಲವು ಶಕ್ತಿಗಳು ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತವೆ. ನಮ್ಮ ಹಕ್ಕುಗಳನ್ನು ನಾವು ಪಡೆಯಲು ಯಾವ ಹೋರಾಟಕ್ಕೂ ಸಿದ್ದರಾಗಬೇಕಿದೆ. ಸಂವಿಧಾನ ಬದಲಾವಣೆ ಮಾಡಲು ಹೊರಟರೆ ರಕ್ತಕ್ರಾಂತಿಯೇ ಆಗುತ್ತದೆವರದಿ ಅನುಷ್ಠಾನಕ್ಕೆ ಹೋರಾಟ ಅಗತ್ಯ: ಸಿದ್ದರಾಮಯ್ಯ
'ಹಿಂದುಳಿದ ವರ್ಗಗಳ ಆಯೋಗವು ನೀಡಿದ ವರದಿಯನ್ನು ನಾನು ಸ್ವೀಕಾರ ಮಾಡಿದ್ದೇನೆ. ಅದರ ಜಾರಿಗೆ ಹೋರಾಟ ಅಗತ್ಯ' ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ ಹೇಳಿದರು. ಇಲ್ಲಿ ನಡೆದ ಸಾಮಾಜಿಕ ನ್ಯಾಯ ದಿನಾಚರಣೆ ಮತ್ತು ಮಂಡಲ್ ವರದಿ ಜಾರಿಯ 36ನೇ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. 'ಕಾಕಾ ಕಾಲೇಲ್ಕರ್ ವರದಿ ಮಂಡಲ್ ವರದಿ ಬಗ್ಗೆ ಆಗ ಮಾತನಾಡಲು ಜಾರಿಯಾಗಬೇಕೆಂದು ಒತ್ತಾಯಿಸಲು ಹಿಂದುಳಿದ ವರ್ಗದವರಿಗೆ ವಿದ್ಯಾಭ್ಯಾಸ ಕಡಿಮೆ ಇತ್ತು. ಸಂಘಟನೆ ಇರಲಿಲ್ಲ. ಆದರೆ ಈಗ ಶಿಕ್ಷಣ ಸಂಘಟನೆ ಎಲ್ಲ ಇದೆ. ಆದರೂ ಸುಮ್ಮನಿದ್ದೀರಲ್ಲ. ಕಾಂತರಾಜ ವರದಿಗೆ 10 ವರ್ಷ ಆಗಿದೆ ಎಂದು ವಿರೋಧಿಸಿದ್ದರಿಂದ ಮಧುಸೂದನ್ ನಾಯಕ್ ಅಧ್ಯಕ್ಷತೆಯಲ್ಲಿ ಸಮೀಕ್ಷೆ ನಡೆಸಲಾಯಿತು. ಅವರ ವರದಿ ಅನುಷ್ಠಾನಕ್ಕಾಗಿ ಹೋರಾಟ ಮಾಡಬೇಕಲ್ಲ' ಎಂದು ತಿಳಿಸಿದರು. 'ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಕೇಂದ್ರ ಸರ್ಕಾರದ ಉದ್ಯೋಗದಲ್ಲಿ ಹಿಂದುಳಿದ ವರ್ಗದವರ ಪ್ರಾತಿನಿಧ್ಯ ಶೇ 21ರಷ್ಟು ಮಾತ್ರ ಇದೆ. ಮಂಡಲ್ ಆಯೋಗವು ಶೇ 52ರಷ್ಟು ಇರುವ ಒಬಿಸಿಗಳಿಗೆ ಶೇ 27ರಷ್ಟು ಮೀಸಲಾತಿ ಶಿಫಾರಸು ಮಾಡಿದ್ದರು. ಈಗ ಎಚ್ಚೆತ್ತುಕೊಳ್ಳಬೇಕು. ಶೇ 52ರಷ್ಟು ಮೀಸಲಾತಿ ಬೇಕು ಎಂದು ಹೋರಾಟ ಮಾಡಬೇಕು. ವಿಧಾನಸಭೆ ವಿಧಾನ ಪರಿಷತ್ ಲೋಕಸಭೆ ರಾಜ್ಯಸಭೆಗಳಲ್ಲಿಯೂ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಬೇಕು. ಕಾರ್ಯಾಂಗ ಶಾಸಕಾಂಗ ಮಾತ್ರವಲ್ಲ ನ್ಯಾಯಾಂಗದಲ್ಲಿಯೂ ಎಸ್ಸಿ ಎಸ್ಟಿ ಒಬಿಸಿಗಳಿಗೆ ಮೀಸಲಾತಿ ಇರಬೇಕು' ಎಂದು ಪ್ರತಿಪಾದಿಸಿದರು.
ಎರಡು ಬಾರಿ ಸಮೀಕ್ಷೆ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಮೊದಲ ಅವಧಿಯಲ್ಲಿ 2014ರಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿದ್ದರು. ಕಾಂತರಾಜ ಅಧ್ಯಕ್ಷತೆಯ ಆಯೋಗವು ಸಮೀಕ್ಷೆ ನಡೆಸಿತ್ತು. ಸಮೀಕ್ಷೆ ಪೂರ್ಣಗೊಂಡು ವರದಿ ಸಲ್ಲಿಸುವ ಮೊದಲೇ ಸರ್ಕಾರ ಬದಲಾಗಿತ್ತು. ಕಾಂತರಾಜ ಆಯೋಗದ ಸಮೀಕ್ಷೆಯನ್ನು ಆಧರಿಸಿ ಜಯಪ್ರಕಾಶ ಹೆಗ್ಡೆ ಅಧ್ಯಕ್ಷತೆಯ ಆಯೋಗವು ವರದಿಯನ್ನು ಸಿದ್ಧಪಡಿಸಿತ್ತು. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮೀಕ್ಷಾ ವರದಿಯನ್ನು ಸ್ವೀಕರಿಸಿ ಅನುಷ್ಠಾನಕ್ಕೆ ಮುಂದಾಗಿದ್ದರು. ಆದರೆ ಕಾಂಗ್ರೆಸ್ನಲ್ಲಿರುವ ಒಕ್ಕಲಿಗ ಹಾಗೂ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಈ ವರದಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೇ ವರದಿ ತಿರಸ್ಕರಿಸಲು ಸಿದ್ದರಾಮಯ್ಯನವರಿಗೆ ಸೂಚಿಸಿ ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ದೆಹಲಿಗೆ ಕರೆಯಿಸಿಕೊಂಡ ಆ ಪಕ್ಷದ ವರಿಷ್ಠರು ವರದಿ ಸ್ವೀಕಾರಕ್ಕೆ ತಡೆಯೊಡ್ಡಿದರು. ಹೀಗಾಗಿ ಸರ್ಕಾರ ಮತ್ತೆ ಹೊಸ ಸಮೀಕ್ಷೆ ನಡೆಸಿತು.

