Dailyhunt Logo
  • Light mode
    Follow system
    Dark mode
    • Play Story
    • App Story
ಜಗತ್ತನ್ನು ಬದಲಿಸಲಿರುವ ಇಂಧನ ಬಿಕ್ಕಟ್ಟು

ಜಗತ್ತನ್ನು ಬದಲಿಸಲಿರುವ ಇಂಧನ ಬಿಕ್ಕಟ್ಟು

ಶ್ರೀಲಂಕಾ ಮತ್ತು ಮ್ಯಾನ್ಮಾರ್‌ ಇಂಧನವನ್ನು ಈಗ ಪಡಿತರದ ರೀತಿ ವಿತರಿಸಲು ಆರಂಭಿಸಿವೆ. ಪೆಟ್ರೋಲ್‌ (ಗ್ಯಾಸೋಲಿನ್‌) ಮತ್ತು ವಿದ್ಯುತ್‌ ಉಳಿಸುವುದಕ್ಕಾಗಿ ಫಿಲಿಪ್ಪೀನ್ಸ್‌ ವಾರದಲ್ಲಿ ನಾಲ್ಕು ದಿನ ಮಾತ್ರ ಕೆಲಸ ಮಾಡುವ ನಿಯಮವನ್ನು ಜಾರಿಗೆ ತಂದಿದೆ. ಮನೆಗಳು ಮತ್ತು ಉದ್ದಿಮೆಗಳಿಗೆ ವಿದ್ಯುತ್‌ ಪೂರೈಸುವುದಕ್ಕಾಗಿ ಬಾಂಗ್ಲಾದೇಶವು ತನ್ನ ವಿಶ್ವವಿದ್ಯಾಲಯಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ಭಾರತದಾದ್ಯಂತ ಕುಟುಂಬಗಳು ಮತ್ತು ರೆಸ್ಟೋರೆಂಟ್‌ಗಳು ಅನಿಲ ಸಿಗದೆ ಇರುವ ಕಾರಣದಿಂದ ಸೌದೆ, ಉರುವಲನ್ನು ಅಡುಗೆಗೆ ಬಳಸುತ್ತಿವೆ. ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸುತ್ತಿವೆ.

ಅಮೆರಿಕ-ಇಸ್ರೇಲ್‌ ಮತ್ತು ಇರಾನ್‌ ನಡುವೆ ನಡೆದ ಯುದ್ಧದ ಮೊದಲ ಹಂತದಲ್ಲಿ ಸೃಷ್ಟಿಯಾಗಿರುವ ಇಂಧನ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ತೆರೆದಿಟ್ಟಿರುವ ಸಂಕಟಕರ ಸನ್ನಿವೇಶ ಇದು. ಭವಿಷ್ಯದಲ್ಲಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಿರಲಿದೆ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆಯ (ಇಂಟರ್‌ನ್ಯಾಷನಲ್‌ ಎನರ್ಜಿ ಏಜೆನ್ಸಿ- ಐಇಎ) ಮುಖ್ಯಸ್ಥ ಫಾತ್ಹೀ ಬಿರೋಲ್‌ ಅವರು ಈ ಬಿಕ್ಕಟ್ಟನ್ನು, '‌ಪ್ರಪಂಚದ ಇತಿಹಾಸದಲ್ಲೇ ಜಾಗತಿಕ ಇಂಧನ ಭದ್ರತೆಗೆ ಒಡ್ಡಿರುವ ಅತ್ಯಂತ ದೊಡ್ಡ ಬೆದರಿಕೆ' ಎಂದು ಕರೆದಿದ್ದಾರೆ. 1970ರ ದಶಕದ ತೈಲ ಬಿಕ್ಕಟ್ಟಿಗಿಂತಲೂ, ಕೋವಿಡ್‌ ಸಾಂಕ್ರಾಮಿಕ ಅಥವಾ 2022ರಲ್ಲಿ ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ಅತಿಕ್ರಮಣದ ಸಂದರ್ಭದಲ್ಲಿ ಕಂಡುಬಂದಿದ್ದಕ್ಕಿಂತಲೂ ಹೆಚ್ಚು ತೀವ್ರವಾದ ಬಿಕ್ಕಟ್ಟು ಇದು ಎಂಬುದು ಅವರ ಪ್ರತಿಪಾದನೆ.

ಈಗಿನ ಸಂಘರ್ಷವು ಜಾಗತಿಕ ತೈಲ ಮತ್ತು ನೈಸರ್ಗಿಕ ಅನಿಲ ವ್ಯಾಪಾರವನ್ನೇ ಅಸ್ತವ್ಯಸ್ತಗೊಳಿಸಿದೆ. ಇಂಧನ ಪೂರೈಕೆಯಲ್ಲಿ ಉಂಟಾಗಿರುವ ಅಂತರ/ಕೊರತೆಯನ್ನು ತುಂಬಲು ತಕ್ಷಣಕ್ಕೆ ಮಾರ್ಗಗಳೂ ಇಲ್ಲದಂತಾಗಿವೆ.

ನೈಸರ್ಗಿಕ ಅನಿಲದ ಬೆಲೆ ಹೆಚ್ಚಾಗಿದೆ. ಇದರಿಂದಾಗಿ ಎದುರಾಗಿರುವ ಪರಿಸ್ಥಿತಿಯನ್ನು ನಿಭಾಯಿಸಲು ಭಾರತ, ಇಂಡೊನೇಷ್ಯಾ ಮತ್ತು ವಿಯೆಟ್ನಾಂನಂತಹ ರಾಷ್ಟ್ರಗಳು ಕಲ್ಲಿದ್ದಲನ್ನು ಹೆಚ್ಚು ಬಳಸುತ್ತಿವೆ. ಈ ಇಂಧನ ಬಿಕ್ಕಟ್ಟು ನೀಡಿರುವ ಆಘಾತವು ದೀರ್ಘ ಅವಧಿಯಲ್ಲಿ ಏಷ್ಯಾ ಮತ್ತು ಯುರೋಪ್‌ ಖಂಡಗಳ ದೇಶಗಳು ಶುದ್ಧ ಇಂಧನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಪ್ರಕ್ರಿಯೆಗೆ ವೇಗ ನೀಡಲಿವೆ.

ತೈಲ ಮತ್ತು ಅನಿಲಕ್ಕೆ ಪರ್ಯಾಯವಾಗಿರುವ ಸೌರ ಫಲಕಗಳು, ಗಾಳಿ ಟರ್ಬೈನ್‌ಗಳು, ಎಲೆಕ್ಟ್ರಿಕ್‌ ವಾಹನಗಳು ಮತ್ತು ಬ್ಯಾಟರಿಗಳು ಕಡಿಮೆ ಬೆಲೆಗೆ ಹಾಗೂ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಾಗ ಉಂಟಾಗಿರುವ ಮೊದಲ ತೈಲ ಬಿಕ್ಕಟ್ಟು ಇದು.

ಇಂಧನದ ಪೂರೈಕೆಯಲ್ಲಿ ಆಗಿರುವ ವ್ಯತ್ಯಯವು ಈಗಾಗಲೇ ಗ್ರಾಹಕರು ಶುದ್ಧ ಇಂಧನ ತಂತ್ರಜ್ಞಾನಗಳನ್ನು ಅಪ್ಪಿಕೊಳ್ಳುವಂತೆ ಮಾಡಿದೆ. ಫಿಲಿಪ್ಪೀನ್ಸ್‌ ಸರ್ಕಾರ ಮಾರ್ಚ್‌ 24ರಂದು ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ ಕೂಡಲೇ, ಮನಿಲಾದ ಗ್ರಾಹಕರು ಎಲೆಕ್ಟ್ರಿಕ್‌ ಕಾರುಗಳನ್ನು ಖರೀದಿಸಲು ಚೀನಾದ ಕಾರು ತಯಾರಿಕಾ ಕಂಪನಿ ಬಿವೈಡಿಯ ಶೋರೂಂಗಳ ಮುಂದೆ ಜಮಾಯಿಸಿದರು. ಜರ್ಮನಿಯಲ್ಲಿ ಗ್ರಾಹಕರು ಸೌರಶಕ್ತಿಯ ಉಪಕರಣಗಳ ಅಳವಡಿಕೆಗೆ ಆಸಕ್ತಿ ತೋರಿದ್ದು, ಅಲ್ಲಿ ಸೌರಶಕ್ತಿ ಉಪಕರಣಗಳ ಮಾರಾಟಗಾರರಿಗೆ ವ್ಯಾಪಾರ ಮತ್ತು ಅವುಗಳನ್ನು ಅಳವಡಿಸುವವರಿಗೂ ಕೆಲಸ ಹೆಚ್ಚಾಯಿತು. ಬ್ರಿಟನ್‌ನಲ್ಲಿ ಹೀಟ್‌ ಪಂಪ್‌ಗಳ ಅಳವಡಿಕೆ ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಎಲೆಕ್ಟ್ರಿಕ್‌ ರಿಕ್ಷಾಗಳ ಮಾರಾಟ ಏರಿಕೆ ಕಂಡಿದೆ. ಭಾರತದಲ್ಲಿ ಇ-ಕಾಮರ್ಸ್‌ ವೇದಿಕೆಗಳಲ್ಲಿ ಇಂಡಕ್ಷನ್‌ ಸ್ಟೌಗಳ ಮಾರಾಟ ಜಾಸ್ತಿಯಾಗಿದೆ. ವಿಯೆಟ್ನಾಂನಲ್ಲಿ ದೇಶದ ಅತ್ಯಂತ ದೊಡ್ಡ ದ್ರವೀಕೃತ ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪನೆಗೆ ಹೊರಟಿದ್ದ ಉದ್ದಿಮೆಗಳ ಸಮೂಹವೊಂದು ಈಗ ಆ ಯೋಜನೆಯನ್ನು ಕೈಬಿಟ್ಟು, ಅದರ ಬದಲಿಗೆ ನವೀಕರಿಸಬಹುದಾದ ಇಂಧನ ಆಧಾರಿತ ವಿದ್ಯುತ್‌ ಉತ್ಪಾದನಾ ಘಟಕ ಮತ್ತು ವಿದ್ಯುತ್‌ ಅನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸುವ ಯೋಜನೆ ಕೈಗೆತ್ತಿಕೊಳ್ಳಲು ಯೋಚಿಸುತ್ತಿದೆ.

ಯುದ್ಧ ಆರಂಭಗೊಂಡ ನಂತರ ಚೀನಾದ ಮೂರು ಬಹುದೊಡ್ಡ ಬ್ಯಾಟರಿ ಕಂಪನಿಗಳ ಷೇರು ಮಾರುಕಟ್ಟೆ ಮೌಲ್ಯ ತಲಾ ಅಂದಾಜು ಶೇ 20ರಷ್ಟು ಅಥವಾ ಒಟ್ಟಾಗಿ 7,000 ಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ.

ಶುದ್ಧ ಇಂಧನದತ್ತ ತ್ವರಿತವಾಗಿ ಮುಖಮಾಡಬೇಕು ಎಂದು ಬಯಸುವ ಸರ್ಕಾರಗಳಿಗೆ ಪಾಕಿಸ್ತಾನದ ಇತ್ತೀಚಿನ ಇತಿಹಾಸದಲ್ಲಿ ಹಲವು ಪಾಠಗಳು ಸಿಗಬಹುದು. 2022ರಲ್ಲಿ ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿದಾಗ ಪಾಕಿಸ್ತಾನವು ಇಂಧನದ ಆಘಾತಕ್ಕೆ ಒಳಗಾಗಿತ್ತು. ಅನಿಲದ ಬೆಲೆ ದಿಢೀರ್‌ ಹೆಚ್ಚಳವಾದಾಗ ಖರೀದಿ ಮಾಡುವ ಸಾಮರ್ಥ್ಯ ಅದಕ್ಕಿರಲಿಲ್ಲ. ಪಾಕಿಸ್ತಾನಕ್ಕೆ ಬರಬೇಕಾದ, ಹಡಗುಗಳಲ್ಲಿ ತುಂಬಿದ್ದ ಅನಿಲವನ್ನು ಯುರೋಪಿನ ಶ್ರೀಮಂತರು ಖರೀದಿಸಿದರು.

ಆದರೆ, ಅದೇ ಹೊತ್ತಿನಲ್ಲಿ ಅಗ್ಗದ ಸೌರ ಫಲಕಗಳು ಚೀನಾದಿಂದ ಭರಪೂರವಾಗಿ ಪೂರೈಕೆಯಾದವು. ಇದು ಪಾಕಿಸ್ತಾನದ ಇಂಧನ ವ್ಯವಸ್ಥೆಯನ್ನೇ ಬದಲಾಯಿಸಿತು. ಈಗ ಉಂಟಾಗಿರುವ ದ್ರವೀಕೃತ ನೈಸರ್ಗಿಕ ಅನಿಲ ಕೊರತೆಯ ಸವಾಲನ್ನು ಎದುರಿಸಲೂ ಅದಕ್ಕೆ ಇದರಿಂದ ಸಾಧ್ಯವಾಗಿದೆ. ಪಾಕಿಸ್ತಾನ ಉತ್ಪಾದಿಸುವ ಒಟ್ಟು ವಿದ್ಯುತ್‌ನಲ್ಲಿ ಸುಮಾರು ಶೇ 30ರಷ್ಟನ್ನು ಸೂರ್ಯನ ಬೆಳಕಿನಿಂದ ಉತ್ಪಾದಿಸುತ್ತಿದೆ. 2020ಕ್ಕೆ ಹೋಲಿಸಿದರೆ ಇದರ ಪ್ರಮಾಣ ಶೇ 3ರಷ್ಟು ಹೆಚ್ಚಾಗಿದೆ. ಪಾಕಿಸ್ತಾನದಲ್ಲಿ ಸೌರಶಕ್ತಿಯ ಬಳಕೆಯಲ್ಲಿ ಆಗುತ್ತಿರುವ ಹೆಚ್ಚಳವು ಈ ವರ್ಷ ಅದು 700 ಕೋಟಿ ಡಾಲರ್‌ ಮೌಲ್ಯದ ಪಳೆಯುಳಿಕೆ ಇಂಧನ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಲಿದೆ. ಇದು ಪಾಕಿಸ್ತಾನಿಯರಿಗೆ ಇಂಧನದ ಕೊರತೆಯಾಗುವುದರಿಂದ ರಕ್ಷಣೆ ನೀಡಲಿದೆ ಎಂದು 'ಸೆಂಟರ್‌ ಫಾರ್‌ ರಿಸರ್ಚ್ ಆಯಂಡ್‌ ಕ್ಲೀನ್‌ ಏರ್‌' ಅಂದಾಜಿಸಿದೆ.

'ಸೌರಶಕ್ತಿಯನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಆರಂಭಿಸಿದರೆ ಕೆಲವೇ ವರ್ಷಗಳಲ್ಲಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ' ಎಂಬುದು ರಿಸರ್ಚ್‌ ಸೆಂಟರ್‌ನ ಮುಖ್ಯ ವಿಶ್ಲೇಷಕರಾದ ಲೌರಿ ಮಿಲ್ಲಿವಿರ್ತಾ ಅವರ ಅಭಿಪ್ರಾಯ.

ಇಂಧನ ಭದ್ರತೆಯನ್ನು ಸಾಧಿಸುವುದು ಈ ಕ್ಷಣದ ತುರ್ತಾಗಿದೆ. ಅದರ ಅರ್ಥ ಹೆಚ್ಚು ಗಾಳಿ, ಸೌರಶಕ್ತಿ ಮತ್ತು ಬ್ಯಾಟರಿಗಳನ್ನು ಅಳವಡಿಸುವುದಲ್ಲ; ದೇಶೀಯ ಶುದ್ಧ ಇಂಧನ ಮೂಲಗಳ ಉತ್ಪಾದನಾ ಸಾಮರ್ಥ್ಯ ಬೆಳೆಸುವುದು ಮತ್ತು ಮನೆಗಳಲ್ಲಿ ಮತ್ತು ಸಾರಿಗೆಗೆ ವಿದ್ಯುತ್ ಉಪಕರಣ ಮತ್ತು ತಂತ್ರಜ್ಞಾನವನ್ನು ಬಳಸುವುದು. ಇಂಧನ ಸ್ವಾಯತ್ತೆಯು ಹೆಚ್ಚಾದಂತೆ, ಅಧಿಕ ರಾಷ್ಟ್ರಗಳು ಆರೋಗ್ಯ ಕೆಡಿಸುವ ವಾಯುಮಾಲಿನ್ಯ ಮತ್ತು ವಾತಾವರಣದ ಉಷ್ಣತೆ ಹೆಚ್ಚಿಸುವ ಹೊರಸೂಸುವಿಕೆಗಳನ್ನು ನಿರ್ಣಾಯಕವಾಗಿ ತಡೆಯಲು ಸಾಧ್ಯ.

ಈ ವಿಚಾರದಲ್ಲಿ ಚೀನಾ ಹೆಚ್ಚು ಪ್ರಗತಿ ಸಾಧಿಸಿದೆ; ಕಳೆದ ದಶಕದಲ್ಲಿ ಅದು ತನ್ನ ಸಾರಿಗೆ ಮತ್ತು ಕೈಗಾರಿಕಾ ವಲಯದ ಹೆಚ್ಚಿನ ಭಾಗವನ್ನು ವಿದ್ಯುತ್ ಆಧಾರಿತವಾಗಿ ರೂಪಿಸಿತು ಮತ್ತು ತನ್ನ ತೈಲ ಬಳಕೆಯಲ್ಲಿ ದಿನಕ್ಕೆ ಹತ್ತು ಲಕ್ಷ ಬ್ಯಾರಲ್‌ಗಳಷ್ಟು ಕಡಿಮೆ ಮಾಡಿತು. ಇದೇ ಪ್ರಸ್ತುತ ಯುದ್ಧದ ಬಿಕ್ಕಟ್ಟಿನಲ್ಲಿ ಚೀನಾವನ್ನು ಕಾಪಾಡಿರುವುದು. ಚೀನಾದ ಕಂಪನಿಗಳು ವಿವಿಧ ರಾಷ್ಟ್ರಗಳಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆ, ಚಾರ್ಜರ್, ಬ್ಯಾಟರಿ, ಸೌರಶಕ್ತಿ, ಪವನ ವಿದ್ಯುತ್ ಮತ್ತು ಇತರ ಶುದ್ಧ ಇಂಧನ ತಂತ್ರಜ್ಞಾನ ಕ್ಷೇತ್ರದಲ್ಲಿ 22,700 ಕೋಟಿ ಡಾಲರ್‌ಗಿಂತಲೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಲು ಮುಂದಾಗಿವೆ ಎಂದು ಜಾನ್ಸ್ ಹಾಪ್ಕಿನ್ಸ್‌ನ ಸಹಾಯ್ ಲ್ಯಾಬ್ ವರದಿ ತಿಳಿಸಿದೆ.

ಚೀನಾಕ್ಕೆ ಯುದ್ಧಕಾಲದ ಇಂಧನ ಬಿಕ್ಕಟ್ಟು ಅಷ್ಟಾಗಿ ತಾಗದಿರಲು ಕಾರಣ, ಅದರ ಮುಂಜಾಗ್ರತೆ ಮತ್ತು ದೀರ್ಘಕಾಲದ ಸಿದ್ಧತೆ. ಸಹಾಯ್ ಹೇಳುವಂತೆ, 2003ರಲ್ಲಿ ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿದಾಗ, ತೈಲ ದರಗಳು ಬಹುಕಾಲದವರೆಗೆ ಏರಿಕೆ ಕಂಡಿದ್ದವು. ಅದರಿಂದ ಎಚ್ಚೆತ್ತುಕೊಂಡಿದ್ದ ಚೀನಾ, ಪರ್ಯಾಯಗಳನ್ನು ರೂಪಿಸಿಕೊಂಡಿತು. ಮುಂದಿನ ದಿನಮಾನಗಳಲ್ಲಿಯೂ ಇಂಧನದ ಆಘಾತಗಳು ಎದುರಾಗುತ್ತಲೇ ಇರುತ್ತವೆ. 'ಆ ಆಘಾತಕ್ಕೆ ವಿದ್ಯುತ್ ಆಧಾರಿತ ವ್ಯವಸ್ಥೆ ರೂಪಿಸುವುದೇ ಮದ್ದು' ಎಂದು ಅವರು ಹೇಳುತ್ತಾರೆ.

ಈ ಆಯ್ಕೆ ಅಮೆರಿಕದ ಗ್ರಾಹಕರಿಗೂ ಇದೆ. ಇ.ವಿ(ವಿದ್ಯುತ್‌ ಚಾಲಿತ ವಾಹನ) ಮತ್ತು ಹೀಟ್‌ ಪಂಪ್‌ಗಳು ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಸಿಗಲು ಅವಕಾಶ ಕಲ್ಪಿಸಿದ್ದ ಪ್ರೋತ್ಸಾಹ ಕ್ರಮಗಳನ್ನು ಟ್ರಂಪ್ ಆಡಳಿತವು ನಿಲ್ಲಿಸಿದೆ. ಹಾಗಿದ್ದರೂ, ಅಮೆರಿಕನ್ನರು ಶೀಘ್ರ ಇ.ವಿಗಳು ಮತ್ತು ಹೀಟ್ ಪಂಪ್‌ಗಳ ಬಗ್ಗೆ ಗಮನ ಹರಿಸುವ ಸಾಧ್ಯತೆ ಇದೆ.

ಕಳೆದ ವಾರ, ಜಗತ್ತಿನ ಅತಿ ದೊಡ್ಡ ವಾರ್ಷಿಕ ಇಂಧನ ಸಮಾವೇಶದಲ್ಲಿ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರು ಮಾತನಾಡಿದ್ದನ್ನು ನಾನು ಕೇಳಿದೆ. ತೈಲ ಮತ್ತು ಅನಿಲ ಉತ್ಪಾದನೆಯನ್ನು ಪ್ರೋತ್ಸಾಹಿಸುವ ಟ್ರಂಪ್ ಆಡಳಿತದ ಪ್ರಯತ್ನಗಳನ್ನು ಅವರು ಮಾನವೀಯತೆಯ ಯೋಜನೆ ಎನ್ನುವಂತೆ ಬಣ್ಣಿಸಿದರು. 'ಸತ್ಯ ಸರಳವಾಗಿದೆ; ಇಂಧನವೇ ಜೀವನ ಮತ್ತು ಜಗತ್ತಿಗೆ ಅದು ಬೃಹತ್ ಪ್ರಮಾಣದಲ್ಲಿ ಬೇಕು' ಎಂದು ಅವರು ಘೋಷಿಸಿದರು.

ಇಲ್ಲಿ ಒಂದು ದುರಂತದ ಛಾಯೆಯುಳ್ಳ ವ್ಯಂಗ್ಯವಿದೆ. ಟ್ರಂಪ್ ಆಡಳಿತವು ಯುದ್ಧವನ್ನು ಆರಂಭಿಸಿದ್ದರಿಂದ ಜಗತ್ತಿನ ಪ್ರತಿ ಮೂಲೆಯಲ್ಲೂ ಇಂಧನವು ದುಬಾರಿಯಾಗಿದ್ದು, ಅಪಾಯಕಾರಿ ಮಟ್ಟ ಮುಟ್ಟಿದೆ. ಇದು ಜನರ ಅನಗತ್ಯ ನರಳಿಕೆಗೆ ಕಾರಣವಾಗಿದೆ. ಇಂಧನ ಮತ್ತು ಅನಿಲಕ್ಕಾಗಿ ಇತರ ದೇಶಗಳನ್ನು ಅವಲಂಬಿಸುವುದು ಎಷ್ಟು ಅಪಾಯಕಾರಿ ಎನ್ನುವುದನ್ನು ಇತ್ತೀಚಿನ ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಪಳೆಯುಳಿಕೆ ಇಂಧನಸ್ನೇಹಿ ಸರ್ಕಾರವು ಸಾಬೀತುಪಡಿಸಿದೆ ಮತ್ತು ಶುದ್ಧ, ವಿದ್ಯುತ್ ಆಧಾರಿತ ಭವಿಷ್ಯದೆಡೆಗೆ ಹೆಜ್ಜೆ ಹಾಕುವುದರಲ್ಲಿ ಇಂಧನ ಭದ್ರತೆ ಅಡಗಿದೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani