Dailyhunt Logo
  • Light mode
    Follow system
    Dark mode
    • Play Story
    • App Story
ಜೈ ಮಹಾರಾಷ್ಟ್ರ ಎಂದ ಮಾಜಿ ಶಾಸಕ ದಿಗಂಬರ ಪಾಟೀಲರಿಂದ ಕನ್ನಡ ಅವಮಾನ

ಜೈ ಮಹಾರಾಷ್ಟ್ರ ಎಂದ ಮಾಜಿ ಶಾಸಕ ದಿಗಂಬರ ಪಾಟೀಲರಿಂದ ಕನ್ನಡ ಅವಮಾನ

ಖಾನಾಪುರ: ಮಾಜಿ ಶಾಸಕ ದಿಗಂಬರ ಪಾಟೀಲ ಅವರು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವ ಮೂಲಕ ಕನ್ನಡ ನಾಡು ನುಡಿಯನ್ನು ಅವಮಾನಿಸಿದ ಘಟನೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ನಡೆದಿದೆ.

'ಸ್ವಾತಂತ್ರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಈ ಘಟನೆ ನಡೆದಿದೆ. ರಾಜ್ಯ ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಮಾಜಿ ಶಾಸಕರು ನಾಡವಿರೋಧಿ ಘೋಷಣೆ ಕೂಗಿದರೂ ಸಭೆಯಲ್ಲಿದ್ದ ತಹಶೀಲ್ದಾರ್ ದುಂಡಪ್ಪ ಕೋಮಾರ ಆಕ್ಷೇಪ ವ್ಯಕ್ತಪಡಿಸದೇ ಮೌನ ವಹಿಸುವ ಮೂಲಕ ಮಾಜಿ ಶಾಸಕರ ನಾಡವಿರೋಧಿ ಘೋಷಣೆಗೆ ಪರೋಕ್ಷ ಬೆಂಬಲ ನೀಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಆರೋಪಿಸಿವೆ.

'ಕನ್ನಡ ನಾಡು ನುಡಿಯ ವಿಷಯದಲ್ಲಿ ಉದಾಸೀನ ವ್ಯಕ್ತಪಡಿಸಿದ ತಹಶೀಲ್ದಾರ್ ಅವರ ಈ ಧೋರಣೆಯ ವಿರುದ್ಧ ತಾಲ್ಲೂಕಿನ ವಿವಿಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಮಾಜಿ ಶಾಸಕರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿವೆ.

ಮಾಜಿ ಶಾಸಕರು ಜೈ ಮಹಾರಾಷ್ಟ್ರ ಘೋಷಣೆಯನ್ನು ಕೂಗಿದ ಕೂಡಲೇ ಸಭೆಯಲ್ಲಿದ್ದ ಕರ್ನಾಟಕ ಯುವ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಪಾಂಡುರಂಗ ಗೂಳಣ್ಣವರ ಆಕ್ಷೇಪ ವ್ಯಕ್ತಪಡಿಸಿ ತಹಶೀಲ್ದಾರ್‌ ಕಚೇರಿಯಲ್ಲಿ ನಡೆಯುತ್ತಿರುವ ಸರ್ಕಾರದ ಸಭೆಯಲ್ಲಿ ಇಂತಹ ನಾಡವಿರೋಧಿ ಘೋಷಣೆ ಸೂಕ್ತವಲ್ಲ ಎಂದು ಆಕ್ಷೇಪಿಸಿದರು.

ಸಭೆಯಲ್ಲಿದ್ದ ಶಾಸಕ ವಿಠ್ಠಲ ಹಲಗೇಕರ ಸೇರಿದಂತೆ ಇತರೆ ಅಧಿಕಾರಿಗಳು, ಮುಖಂಡರು ಮೌನ ವಹಿಸುವ ಮೂಲಕ ಮಾಜಿ ಶಾಸಕರ ನಾಡವಿರೋಧಿ ಘೋಷಣೆಗೆ ಪರೋಕ್ಷ ಬೆಂಬಲ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, 'ಆ.15ರ ಸ್ವಾತಂತ್ರ ದಿನಾಚರಣೆ ಅಂಗವಾಗಿ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸ್ವಚ್ಛತಾ ಆಭಿಯಾನ ಆಯೋಜಿಸಲಾಗುವುದು. ಈಗ ಎಲ್ಲೆಡೆ ಅಂತರ್ಜಲ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮಳೆ ನೀರಿನ ಕೊಯ್ಲು ವಿಷಯ ಆಧರಿತ ಮಾದರಿಗಳನ್ನು ಸಿದ್ಧಪಡಿಸಿ ಆ.15ರ ಒಳಗೆ ಹಾಜರು ಪಡಿಸಬೇಕು. ಇದರಲ್ಲಿ ಉತ್ತಮ ಮಾದರಿ ಪ್ರಸ್ತುತ ಪಡಿಸುವವರಿಗೆ ಬಹುಮಾನ ನೀಡಲಾಗುತ್ತದೆ. ನಿವೃತ್ತಿ ಹೊಂದಿದ ಭಾರತೀಯ ಸೈನಿಕರನ್ನು ತಾಲ್ಲೂಕು ಆಡಳಿತದಿಂದ ಸನ್ಮಾನಿಸಲಾಗುತ್ತದೆ' ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260803-21-708008508

Dailyhunt
Disclaimer: This content has not been generated, created or edited by Dailyhunt. Publisher: Prajavani