ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿದ್ದು, ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ.
ಪೂಂಛ್ ಜಿಲ್ಲೆಯ ಸೂರನ್‌ಕೋಟ್ ತಾಲ್ಲೂಕಿನಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ.
ಅಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸಿವೆ. ಕಾಣೆಯಾದವರ ಪತ್ತೆಗಾಗಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರವಾಹದ ರಭಸಕ್ಕೆ ರಸ್ತೆ, ಸೇತುವೆ ಸೇರಿದಂತೆ ಅನೇಕ ಮನೆಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೂರನ್‌ಕೋಟ್‌ನ ಮುರ್‍ರಾ ಗ್ರಾಮದಲ್ಲಿ ಭಾನುವಾರ ಮುಂಜಾನೆ ಭೂಕುಸಿತ ಉಂಟಾಗಿ ಮನೆಯೊಂದು ನೆಲಸಮಗೊಂಡಿದೆ. ಅವಶೇಷದಡಿ ಸಿಲುಕಿದ್ದ ಎಂಟು ಮಂದಿಯ ಪೈಕಿ ಎರಡು ವರ್ಷದ ಬಾಲಕ ಸೇರಿದಂತೆ ಐವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಉಳಿದವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಜೌರಿ ಮತ್ತು ಪೂಂಛ್ ಜಿಲ್ಲೆಗಳಲ್ಲಿ ಮನೆ ಕುಸಿದು ಮೂವರು ಮೃತಪಟ್ಟಿದ್ದಾರೆ. ಹೊಳೆಗೆ ಬಿದ್ದು, ಬಾಲಕಿ ಸೇರಿದಂತೆ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದೆ ಮತ್ತು ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಜಮ್ಮು ಮತ್ತು ರಜೌರಿ ಜಿಲ್ಲೆಗಳಲ್ಲಿ ಉಕ್ಕಿ ಹರಿಯುತ್ತಿದ್ದ ನದಿಗಳಲ್ಲಿ ಸಿಲುಕಿದ್ದ ಐವರು ಮಕ್ಕಳನ್ನು ಸೇರಿದಂತೆ ಕನಿಷ್ಠ 14 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ನೂರಾರು ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅನೇಕ ವಾಹನಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಗೆ ತೆರಳಿದ್ದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪರಿಸ್ಥಿತಿ ಅರಿತು ತಮ್ಮ ಭೇಟಿಯನ್ನು ಮೊಟಕುಗೊಳಿಸಿ, ಜಮ್ಮುವಿಗೆ ತೆರಳಲು ನಿರ್ಧರಿಸಿದರು. ಪ್ರವಾಹಪೀಡಿತ ಪ್ರದೇಶಗಳ ಸ್ಥಿತಿಗತಿಗಳನ್ನು ಪರಿಶೀಲಿಸಿದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಅಮರನಾಥ, ವೈಷ್ಣೋದೇವಿ ಯಾತ್ರೆ ತಾತ್ಕಾಲಿಕ ಸ್ಥಗಿತ
ಶ್ರೀನಗರ/ಜಮ್ಮು: ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ ಬಳಿಕ, ಕಾಶ್ಮೀರದಲ್ಲಿ ಅಮರನಾಥ ಹಾಗೂ ಜಮ್ಮುವಿನಲ್ಲಿ ಮಾತಾ ವೈಷ್ಣೋದೇವಿ ಮತ್ತು ಶಿವ ಖೋರಿ ದೇವಾಲಯಗಳಿಗೆ ತೀರ್ಥಯಾತ್ರೆಗಳನ್ನು ತಾತ್ಕಾಲಿಕವಾಗಿ ಭಾನುವಾರ ಸ್ಥಗಿತಗೊಳಿಸಲಾಗಿದೆ.
ಯಾತ್ರಿಕರ ಸುರಕ್ಷತೆಯ ದೃಷ್ಟಿಯಿಂದಾಗಿ ಪಹಲ್ಗಾಮ್ ಮತ್ತು ಬಾಲ್‌ಟಾಲ್ ಮಾರ್ಗಗಳು ಸೇರಿದಂತೆ ಎಲ್ಲಾ ಮೂಲ ಶಿಬಿರಗಳಿಂದ ಅಮರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಮಾತಾ ವೈಷ್ಣೋದೇವಿ ಮತ್ತು ಶ್ರೀ ಶಿವ ಖೋರಿ ದೇವಾಲಯಗಳಿಗೆ ತೀರ್ಥಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜುಲೈ 19ರಿಂದ 23ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮತ್ತಷ್ಟು ಪ್ರವಾಹ, ಭೂಕುಸಿತದ ಎಚ್ಚರಿಕೆ ನೀಡಿದೆ.
ನಾಗಾಲ್ಯಾಂಡ್: ಭೂಕುಸಿತದಿಂದ ಮೂವರು ಮೃತ
ಕೊಹಿಮಾ: ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಠಾತ್ ಪ್ರವಾಹವಾಗಿದೆ. ಭೂಕುಸಿತದಿಂದಾಗಿ ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಮನೆಗಳು ರಸ್ತೆಗಳು ಕೊಚ್ಚಿಹೋಗಿದ್ದು ಅನೇಕರು ಅವಶೇಷಗಳಡಿ ಸಿಲುಕಿದ್ದು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಾಖಂಡ: ಸಿಡಿಲಿಗೆ ಇಬ್ಬರು ಬಲಿ
ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ. ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು 10 ಜಿಲ್ಲೆಗಳಿಗೆ ಭಾನುವಾರ 'ರೆಡ್' ಮತ್ತು 'ಆರೆಂಜ್' ಅಲರ್ಟ್ ಘೋಷಿಸಲಾಗಿದೆ. ಮೃತರನ್ನು ನವೀನ್ ಸಿಂಗ್ (33) ರಣಧೀರ್ ಸಿಂಗ್ (45) ಎಂದು ಗುರುತಿಸಲಾಗಿದೆ. ನಿರಂತರ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ಎರಡು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 84 ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ. ಮುಂದಿನ ಕೆಲವು ದಿನಗಳವರೆಗೆ ರಾಜ್ಯ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ನೀಡಿದೆ.

