Dailyhunt Logo
  • Light mode
    Follow system
    Dark mode
    • Play Story
    • App Story
ಜನಗಣತಿ ತರಬೇತಿಗೆ ಜಿಲ್ಲಾಧಿಕಾರಿ ಜಿ. ಪ್ರಭು ಚಾಲನೆ

ಜನಗಣತಿ ತರಬೇತಿಗೆ ಜಿಲ್ಲಾಧಿಕಾರಿ ಜಿ. ಪ್ರಭು ಚಾಲನೆ

ಚಿಕ್ಕಬಳ್ಳಾಪುರ: ಇಲ್ಲಿನ ಜಿಲ್ಲಾ ಪಂಚಾಯಿತಿಯ ಸರ್ ಎಂ.ವಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮಂಗಳವಾರ ಗಣತಿದಾರರಿಗೆ ಆಯೋಜಿಸಿದ್ದ ಜನಗಣತಿ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಜನಗಣತಿಯು ದೇಶದ ಅಭಿವೃದ್ಧಿಯ ಯೋಜನೆಗಳು ಹಾಗೂ ಸರ್ಕಾರದ ವಿವಿಧ ಜನಕಲ್ಯಾಣ ಕಾರ್ಯಕ್ರಮಗಳ ರೂಪಿಸುವಲ್ಲಿ ಮಹತ್ವದ ಆಧಾರವಾಗಿದೆ.

ಜನಗಣತಿಯ ಮೂಲಕ ಸಂಗ್ರಹಿಸುವ ನಿಖರ ಮಾಹಿತಿಯು ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಹಕಾರಿ ಎಂದು ತಿಳಿಸಿದರು.

ದೇಶದಲ್ಲಿ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಮೊಬೈಲ್ ಆಧಾರಿತ ಡಿಜಿಟಲ್ ಜನಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿದ್ದು, ಇದೀಗ 2027ರ ಜನಗಣತಿ ಕಾರ್ಯವನ್ನು ಆಧುನಿಕ ತಂತ್ರಜ್ಞಾನದ ನೆರವಿನಿಂದ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಈ ಬಾರಿ ಜನಗಣತಿ ಕಾರ್ಯದಲ್ಲಿ ಯಾವುದೇ ಲಿಖಿತ ದಾಖಲೆಗಳ ಬಳಕೆಯಿಲ್ಲದೆ ಮೊಬೈಲ್‌ಅಪ್ಲಿಕೇಶನ್ ಮೂಲಕವೇ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರಿಂದ ಮಾಹಿತಿಯ ನಿಖರತೆ, ವೇಗ ಹಾಗೂ ಕಾರ್ಯದಕ್ಷತೆ ಹೆಚ್ಚಲಿದೆ. ಜನಗಣತಿ ಕಾರ್ಯವನ್ನು ವ್ಯವಸ್ಥಿತವಾಗಿ ನಿರ್ವಹಿಸಲುಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ ಎಂದು ವಿವರಿಸಿದರು.

ಜನಗಣತಿ ಕಾರ್ಯವನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿಮನೆಪಟ್ಟಿ ಮತ್ತು ವಸತಿ ಗಣತಿ ಕಾರ್ಯ ಕೈಗೊಳ್ಳಲಾಗಿದೆಜಿಲ್ಲೆಯಲ್ಲಿ 2026ರ ಏಪ್ರಿಲ್ 16ರಿಂದ ಮೇ 15ರವರೆಗೆ ಈ ಕಾರ್ಯ ನಡೆದಿತ್ತು. ಎರಡನೇ ಹಂತವಾದ ಜನಸಂಖ್ಯಾ ಗಣತಿ ಕಾರ್ಯವು2027ರ ಜನವರಿ 10 ರಿಂದ 24 ರವರೆಗೆ ಸ್ವಯಂ ಗಣತಿ, ಜನವರಿ 25 ರಿಂದ ಫೆಬ್ರವರಿ 28ರವರೆಗೆ ಮನೆ ಮನೆ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಈ ಹಂತದಲ್ಲಿ ಪ್ರತಿ ಕುಟುಂಬದ ಸದಸ್ಯರ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ವಿವರಗಳನ್ನು ಸಂಗ್ರಹಿಸಲಾಗುತ್ತದೆ. ಪ್ರತಿ ವ್ಯಕ್ತಿಯ ಸಮಗ್ರ ಮಾಹಿತಿಯನ್ನು ದಾಖಲಿಸುವ ಈ ಪ್ರಕ್ರಿಯೆಯು ದೇಶದ ಜನಸಂಖ್ಯೆಯ ನಿಖರವಾದ ಲೆಕ್ಕಾಚಾರಕ್ಕೆ ಸಹಕಾರಿ ಆಗಲಿದೆ ಎಂದು ತಿಳಿಸಿದರು.

ಜನಗಣತಿ ಕಾರ್ಯಾಚರಣೆಯ ಯಶಸ್ಸಿನಲ್ಲಿ ತರಬೇತಿಯು ಪ್ರಮುಖ ಪಾತ್ರ ವಹಿಸುತ್ತದೆ. ಗಣತಿದಾರರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಮೊಬೈಲ್ ಅಪ್ಲಿಕೇಶನ್ ಬಳಕೆ ಹಾಗೂ ಮಾಹಿತಿ ಸಂಗ್ರಹಣೆ ವಿಧಾನಗಳ ಕುರಿತು ತಿಳಿವಳಿಕೆ ಪಡೆದುಕೊಳ್ಳಬೇಕು. ಯಾವುದೇ ಮಾಹಿತಿಯಲ್ಲಿ ಅಸ್ಪಷ್ಟ ಅಥವಾ ಗೊಂದಲವಿದ್ದಲ್ಲಿ ತರಬೇತಿದಾರನ್ನು ಕೇಳಿ ಪರಿಹರಿಸಿಕೊಳ್ಳಬೇಕು. ಜನಗಣತಿ ಕಾರ್ಯದಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಪ್ರತಿ ಕುಟುಂಬದ ಮಾಹಿತಿಯನ್ನು ನಿಖರವಾಗಿ ಸಂಗ್ರಹಿಸುವ ಮೂಲಕ ಮುಂದಿನ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದರು.

ಜನಗಣತಿ ನಿರ್ದೇಶನಾಲಯದ ಉಪನಿರ್ದೇಶಕಿ ಟಿ.ವಿ.ಧನ್ಯ, ಚಿಕ್ಕಬಳ್ಳಾಪುರ ಜಿಲ್ಲಾನೋಡಲ್ ಅಧಿಕಾರಿ ಅಶ್ವತಿಗೋಪಾಲ್ ಹಾಗೂ ತಾಂತ್ರಿಕ ಅಧಿಕಾರಿ ಅಕ್ಷಯ್ ಗಣತಿದಾರರಿಗೆ ವಿಸ್ತಾರವಾಗಿ ತರಬೇತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಶೋಭಿತಾ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅತಿಕ್ ಪಾಷಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಗಣತಿದಾರರು, ಮೇಲ್ವಿಚಾರಕರು ಪಾಲ್ಗೊಂಡಿದ್ದರು.

261104-16-1833942465

Dailyhunt
Disclaimer: This content has not been generated, created or edited by Dailyhunt. Publisher: Prajavani