ಮಾಯಕೊಂಡ: 'ಅಡ್ಡಡ್ಡ ಮಳೆ ಬಂದು ದೊಡ್ಡ ದೊಡ್ಡ ಕೆರೆ ತುಂಬಿ, ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ, ಜೋಕುಮಾರ... ಮಡಿವಾಳ ಕೇರಿ ಹೊಕ್ಕಾನ ಜೋಕುಮಾರ... ಮುಡಿ ತುಂಬಾ ಹೂವ ಮುಡಿದಂತ ಚೆಲುವಿ ತನ್ನ ಮಡದಿಯೆಂದಾ ಜೋಕುಮಾರ' ಹೀಗೆ ಸುಶ್ರಾವ್ಯವಾಗಿ ಹಾಡುತ್ತಾ ಜೋಕುಮಾರರನ್ನು ಆರಾಧಿಸುವ ಜನಪದೀಯರ ಹಬ್ಬ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆಗಟ್ಟಿದೆ.
ಕೊಡಗನೂರು ಗ್ರಾಮದಲ್ಲಿ ಗಂಗಾಮತ ವಂಶಸ್ಥರಾದ ತಿಪ್ಪಣ್ಣ ಅವರ ಮನೆಯಲ್ಲಿ ಜೋಕುಮಾರಸ್ವಾಮಿ (ಜೋಕಪ್ಪ) ಜನನವಾಗಿದ್ದು, ಆತನನ್ನು ಗಂಗಾಮತ ಸಮುದಾಯದ ಮಹಿಳೆಯರು ಬೇವಿನ ಸೊಪ್ಪಿನಿಂದ ಕೂಡಿದ ಬುಟ್ಟಿಯಲ್ಲಿಟ್ಟು ಗ್ರಾಮದ ಮನೆ ಮನೆಗೂ ಭೇಟಿ ಕೊಟ್ಟು ದವಸ- ಧಾನ್ಯ ಪಡೆಯುತ್ತಾರೆ.
ಕಪ್ಪು ಮಣ್ಣಿನಿಂದ ಅಗಲವಾದ ಮುಖ, ದೊಡ್ಡ ಕಣ್ಣುಗಳು, ಉದ್ದಮೀಸೆ ಹಾಗೂ ಬಾಯಿಗೆ ಬೆಣ್ಣೆ ಹಚ್ಚಿದ ಮೂರ್ತಿಯನ್ನು ತಯಾರಿಸಲಾಗುತ್ತದೆ.
ಭಾದ್ರಪದ ಮಾಸದಲ್ಲಿ ಗಣೇಶ ವಿಸರ್ಜನೆಯ ನಂತರ ಈ ಜನಪದ ಹಬ್ಬವನ್ನು ಸಡಗರದಿಂದ ಆಚರಿಸ ಲಾಗುತ್ತದೆ. ಜನಪದ ಕಥೆಗಳ ಪ್ರಕಾರ ಜೋಕುಮಾರಸ್ವಾಮಿಯ ಆಯುಷ್ಯ ಕೇವಲ 7 ದಿನಗಳು. ಈ ಏಳು ದಿನಗಳಲ್ಲಿಯೇ ಅವನ ಜನನ, ಯೌವನ, ಮೆರವಣಿಗೆ ಮತ್ತು ಅಂತ್ಯ ಸಂಭವಿಸುತ್ತದೆ.
ಜೋಕುಮಾರಸ್ವಾಮಿಯನ್ನು ಪೂಜಿಸುವುದರಿಂದ ಕೃಷಿ ಭೂಮಿಗೆ ಉತ್ತಮ ಮಳೆಯಾಗುತ್ತದೆ ಮತ್ತು ಬೆಳೆಗಳಿಗೆ ಬಂದ ರೋಗರುಜಿನಗಳು ದೂರವಾಗುತ್ತವೆ ಎಂಬ ನಂಬಿಕೆ ಗ್ರಾಮೀಣ ಜನರಲ್ಲಿದೆ.
'ಭಾದ್ರಪದ ಅಷ್ಟಮಿಯ ದಿನದಿಂದ ಆರಂಭವಾಗುವ ಜೋಕುಮಾರಸ್ವಾಮಿ ಹಬ್ಬ, ಜನಪದ ಸಂಸ್ಕೃತಿಯ ವಿಶಿಷ್ಟ ಆಚರಣೆ. ಜೋಕುಮಾರನನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿದರೆ ಮಳೆ, ಬೆಳೆ ಸಮೃದ್ಧಿಯಾಗಿ ಆಗುತ್ತದೆ' ಎಂಬ ನಂಬಿಕೆ ಕೃಷಿಕರಲ್ಲಿ ಹಾಸು ಹೊಕ್ಕಾಗಿದೆ.
'ಪ್ರತಿ ವರ್ಷವೂ ವಿಶಿಷ್ಟವಾಗಿ, ಅರ್ಥಪೂರ್ಣವಾಗಿ ಜೋಕುಮಾರ ಸ್ವಾಮಿ ಹಬ್ಬ ಆಚರಿಸಲಾಗುತ್ತದೆ. ಮಳೆ- ಬೆಳೆ ಸಮೃದ್ಧಿಯ ಸಂಕೇತವಾಗಿದೆ' ಎನ್ನುತ್ತಾರೆ ಕೊಡಗನೂರು ಗ್ರಾಮದ ಶಿವಕುಮಾರ್.

260920-43-1723241478

