ಕೂಡ್ಲಿಗಿ (ವಿಜಯನಗರ ಜಿಲ್ಲೆ): ಜನರ ಕಷ್ಟ ಕೇಳಿ, ಸಮಸ್ಯೆ ಬಗೆಹರಿಸಲು ಆರಂಭಿಸಿದ ಪ್ರಜಾಸೇವೆ ಇಲಾಖೆಯ ಮುಖ್ಯ ಧ್ಯೇಯವೇ ಜನರ ಮನೆಬಾಗಿಲಿಗೆ ಸರ್ಕಾರವನ್ನು ಕೊಂಡೊಯ್ಯುವುದು. ಇನ್ನು ಮುಂದೆ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೆ ಎರಡು ಬಾರಿ ಅವರ ಜಿಲ್ಲೆಗಳಿಗೆ ಭೇಟಿ ನೀಡಿ ಜನರ ಕಷ್ಟ ಆಲಿಸುವುದು ಕಡ್ಡಾಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಶನಿವಾರ ನೂತನ ಪ್ರಜಾಸೇವಾ ಇಲಾಖೆಯ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯದ ಎಲ್ಲಾ 224 ತಾಲ್ಲೂಕುಗಳಲ್ಲೂ ಪ್ರಜಾಸೇವೆ ಅಭಿಯಾನ ಅರಂಭವಾಗಿದೆ. ಸಚಿವರು ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಹಾಗೂ ಶಾಸಕರು ಪಂಚಾಯಿತಿ ಮಟ್ಟದಲ್ಲಿ ಈ ಕಾರ್ಯಕ್ರಮವನ್ನು ಮುನ್ನಡೆಸಬೇಕು. ಶಾಸಕರು ಉಪಸ್ಥಿತರಿಲ್ಲದಿದ್ದರೆ ಅಧಿಕಾರಿಗಳೇ ಪಂಚಾಯಿತಿ ಕೇಂದ್ರಗಳಿಗೆ ತೆರಳಿ, ಸಣ್ಣ ಸಭೆಗಳನ್ನು ನಡೆಸಿ, ಸಾರ್ವಜನಿಕರಿಂದ ಬಂದ ಅಹವಾಲುಗಳನ್ನು ಸ್ವೀಕರಿಸಿ ಸಮಸ್ಯೆ ಬಗೆಹರಿಸಬೇಕು ಎಂದರು.
'ಜನರ ಬದುಕಿನಲ್ಲಿ ಬದಲಾವಣೆ ತರುವ ಕೆಲಸ ಮಾಡಲಿದ್ದೇವೆ. ಇಲ್ಲಿ ಪಕ್ಷ, ಜಾತಿ ಧರ್ಮದ ಭೇದವಿಲ್ಲ. ಜನ ಸೇವೆಯೇ ಇಲ್ಲಿ ಪ್ರಮುಖ ಧ್ಯೇಯ. ಸರ್ಕಾರದ ಸೇವೆ ನಿಮ್ಮ ಹಕ್ಕು. ಅದನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಆಲೋಚನೆ' ಎಂದರು.
ಉಚಿತವಾಗಿ ವಕೀಲರ ಸೇವೆ: ಪಿಂಚಣಿ, ಭೂಮಿ ವ್ಯಾಜ್ಯ, ಸರ್ಕಾರದ ಸೌಲಭ್ಯಗಳು, ಖಾತೆ ಬದಲಾವಣೆ, ಗ್ಯಾರಂಟಿ ಯೋಜನೆಗಳು ಹಾಗೂ ಮನೆ-ನಿವೇಶನಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪರಿಶೀಲಿಸಿ ಪರಿಹಾರ ಒದಗಿಸಲಾಗುವುದು. ಬಡವರು ಹಾಗೂ ಶೋಷಿತರಿಗೆ ತಹಶೀಲ್ದಾರ್, ಎಸಿ ಅಥವಾ ಡಿಸಿ ಮಟ್ಟದ ವ್ಯಾಜ್ಯಗಳಲ್ಲಿ ಹೋರಾಡಲು ಉಚಿತವಾಗಿ ವಕೀಲರ ಸೇವೆ ಒದಗಿಸಿ ಕಾನೂನು ನೆರವು ನೀಡಲಾಗುವುದು. ಅರ್ಜಿ ತಿರಸ್ಕೃತಗೊಂಡರೆ ಅದಕ್ಕೆ ಕಾರಣವನ್ನು ತಿಳಿಸಲಾಗುವುದು. ಅರ್ಜಿದಾರರಿಗೆ ಸಂಪೂರ್ಣ ಪರಿಹಾರ ಸಿಗುವವರೆಗೂ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಯಶಸ್ಸಿನ ಮಾನದಂಡ: 'ಸರ್ಕಾರದ ಯಶಸ್ಸು ಜಾಹೀರಾತಿನಲ್ಲಿ ಇರುವುದಿಲ್ಲ. ಜನರ ಮುಖದಲ್ಲಿ ನಗು ಮೂಡಿದೆ ಎಂಬುದೇ ಯಶಸ್ಸಿನ ಮಾನದಂಡ. ಜನ ಸೇವೆಯೇ ಜನಾರ್ದನ ಸೇವೆ ಎಂದು ಭಾವಿಸಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಸೇವೆ ಮಾಡಲು 136 ಸೀಟು ನೀಡಿ ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸಲು ಅವಕಾಶ ಕೊಟ್ಟಿದ್ದೀರಿ. ಇದು ಕೇವಲ ಸರ್ಕಾರ ಕಾರ್ಯಕ್ರಮ ಅಲ್ಲ. ಜನ ಸರ್ಕಾರದ ಬಳಿ ಹೋಗುವ ಕಾಲ ಹೋಗಿ, ಸರ್ಕಾರ ಜನರ ಬಳಿಗೆ ಹೋಗುವ ಕಾಲ ಬಂದಿದೆ' ಎಂದು ಸಿಎಂ ಹೇಳಿದರು.
'ಇಡೀ ರಾಜ್ಯಕ್ಕೆ ವಿಜಯ ಸಿಗಬೇಕು ಎಂದು ಈ ಕಾರ್ಯಕ್ರಮವನ್ನು ಪವಿತ್ರವಾದ ಕೃಷ್ಣದೇವರಾಯನ ಭೂಮಿ ವಿಜಯನಗರ ಆಯ್ಕೆ ಮಾಡಿರುವೆ. ಇಲ್ಲಿ ಎಷ್ಟು ಜನ ಬಂದಿದ್ದಾರೆ, ಎಷ್ಟು ಸಮಸ್ಯೆ ಅರ್ಜಿ ಕೊಟ್ಟಿದ್ದಾರೆ ಎಂಬುದಕ್ಕಿಂತ, ಎಷ್ಟು ಜನರ ಸಮಸ್ಯೆ ಬಗೆಹರಿದಿದೆ ಎಂಬುದು ಈ ಕಾರ್ಯಕ್ರಮದ ಯಶಸ್ಸನ್ನು ತಿಳಿಸುತ್ತದೆ' ಎಂದರು.
ಮಾದರಿಯಾಗಲಿದೆ: 'ಪ್ರಧಾನಿಯಿಂದ ಹಿಡಿದು ಇಡೀ ದೇಶ ನಮ್ಮ ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡಿದವು. ಇದನ್ನು ಸಾಧ್ಯವಾಗಿಸಿದ್ದು ಕಾಂಗ್ರೆಸ್ ಸರ್ಕಾರ. ಈಗ ಆ ಟೀಕೆಗಳು ಏನಾದವು? ಗ್ಯಾರಂಟಿ ಯೋಜನೆಗಳಂತೆ ಈ ಪ್ರಜಾಸೇವೆ ಕೂಡ ಕರ್ನಾಟಕ ಮಾದರಿಯಾಗಿ ಹೊರಹೊಮ್ಮಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕರಿಗೆ 'ಟಿಆರ್' ಗೌರವ: ಶಿಕ್ಷಕರ ದಿನಾಚರಣೆ ಪ್ರಯುಕ್ತ ಎಸ್.ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಅರ್ಪಿಸಿದ ಅವರು, ದೇಶದ ಅಭಿವೃದ್ಧಿಗೆ ಸೈನಿಕ, ಕಾರ್ಮಿಕ ಹಾಗೂ ಕೃಷಿಕರಷ್ಟೇ ಶಿಕ್ಷಕರ ಕೊಡುಗೆಯೂ ಪ್ರಮುಖವಾಗಿದೆ. ಹೀಗಾಗಿ ಇನ್ನು ಮುಂದೆ ಶಿಕ್ಷಕರು ತಮ್ಮ ಹೆಸರಿನ ಮುಂದೆ 'Tr" ಎಂಬ ಬಿರುದು ಹಾಕಿಕೊಳ್ಳಬಹುದು. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ಭೂಮಿ ಗ್ಯಾರಂಟಿ: 'ಭೂಮಿ ಗ್ಯಾರಂಟಿ ನಮ್ಮ ಆರನೇ ಗ್ಯಾರಂಟಿ. ಪ್ರತಿಯೊಬ್ಬರ ಆಸ್ತಿ ಇ ಖಾತೆ ಮಾಡಿ, ಅವರ ಮನೆಗೆ ತಲುಪಿಸುವ ಕೆಲಸ ಶುರುವಾಗಿದೆ' ಎಂದ ಅವರು, ಗ್ರಾಮಗಳ ಪ್ರತಿಭೆಗಳಿಗೆ ಉತ್ತೇಜನ ನೀಡಲು ಪ್ರತಿ ಪಂಚಾಯಿತಿ ಮಟ್ಟದಲ್ಲಿ ಭಾರತದ ಜೋಡೋ ಸಂಘ ರಚಿಸಲಾಗುತ್ತಿದೆ ಎಂದರು.
ವಿಡಿಯೊ ಕಾನ್‌ಫರೆನ್ಸ್: ಮುಖ್ಯಮಂತ್ರಿ ಅವರು ತಮ್ಮ ಭಾಷಣದ ಬಳಿಕ ತುಮಕೂರು, ಧಾರವಾಡ, ಹಾಸನ, ಕಲಬುರ್ಗಿ, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಶಾಸಕರು, ಅಧಿಕಾರಿಗಳೊಂದಿಗೆ ವಿಡಿಯೊ ಕಾನ್‌ಫರೆನ್ಸ್ ಮೂಲಕ ಮಾತನಾಡಿದರು. ಜಿಲ್ಲೆಗಳಲ್ಲಿ ನಡೆದ ಪ್ರಜಾಸೇವಾ ಅಭಿಯಾನದಲ್ಲಿ ಪಾಲ್ಗೊಂಡ ಜನರತ್ತ ಕ್ಯಾಮೆರಾ ಫೋಕಸ್ ಮಾಡಲು ತಿಳಿಸಿ, ಉತ್ತಮವಾಗಿ ಜನ ಸೇರಿದ್ದನ್ನು ಕಂಡು ಖುಷಿಕೊಂಡರು. ಕಲಬುರ್ಗಿ ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಅಭಿಯಾನದಲ್ಲಿ ಪಾಲ್ಗೊಂಡ ವೃದ್ಧೆ ಶೇಖಮ್ಮ ಅವರ ಕಷ್ಟ ಆಲಿಸಿದರು.
ಮಧ್ಯಾಹ್ನ 1.45ರಿಂದ ಸಂಜೆ 3.45ರವರೆಗೆ ಖುದ್ದಾಗಿ ಜನರ ಅಹವಾಲು ಆಲಿಸಿದ ಸಿಎಂ, ಅದರ ನಡುವೆಯೇ ವೇದಿಕೆಯಲ್ಲೇ ಊಟವನ್ನೂ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ, ಸಂಸದ ಜಿ.ಸಿ.ಚಂದ್ರಶೇಖರ್, ಸಂಸದ ಇ.ತುಕಾರಾಂ, ಸ್ಥಳೀಯ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿದರು. ವಿಧಾನಸಭೆ ಉಪಾಧ್ಯಕ್ಷ ಮಂಕಾಳು ವೈದ್ಯ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ.ಪರಮೇಶ್ವರ ನಾಯ್ಕ, ಜಿಲ್ಲೆಯ ಎಲ್ಲಾ ಶಾಸಕರು, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಇತರರು ಇದ್ದರು.
ಗ್ರಾಮೀಣ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಆಂತರಿಕ ಮೀಸಲಾತಿ
ಗ್ರಾಮೀಣ ಭಾಗದಲ್ಲಿ ಓದುವ ಮಕ್ಕಳಿಗೆ ಪ್ರೋತ್ಸಾಹ ನೀಡಲು ಶೇ 15ರಷ್ಟು ಗ್ರಾಮೀಣ ಮೀಸಲಾತಿ ಈಗಾಗಲೇ ಜಾರಿಯಲ್ಲಿದೆ. ಇನ್ನು ಮುಂದೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ಮಾತ್ರ ವಿದ್ಯಾಭ್ಯಾಸ ಮಾಡಿದವರಿಗೆ ಈ ಮೀಸಲಾತಿಯೊಳಗೆ ಶೇ 7.5ರಷ್ಟು ಆಂತರಿಕ ಮೀಸಲಾತಿ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರಿ ಶಾಲೆಗಳಲ್ಲೇ ಓದುವಂತೆ ಪ್ರೇರೇಪಿಸಲು ಸರ್ಕಾರ ಈ ಹೆಜ್ಜೆ ಇಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅಭಿಯಾನ: ಏನು? ಎತ್ತ?
ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಆಯಾ ಜಿಲ್ಲಾ ವ್ಯಾಪ್ತಿಯ ಶಾಸಕರು ಪ್ರತಿ ಶನಿವಾರ ತಾಲ್ಲೂಕು ಕಚೇರಿಗಳಲ್ಲಿ ಪ್ರಜಾಸೇವೆ ಅಭಿಯಾನ ಸಭೆಗಳನ್ನು ನಡೆಸಬೇಕು. ಸಭೆಯಲ್ಲಿ ಸ್ವೀಕೃತವಾಗುವ ಅರ್ಜಿಗಳನ್ನು ಡಿಜಿಟಲೀಕರಿಸಲು, ಸ್ಥಳದಲ್ಲಿಯೇ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳನ್ನು ತೆರೆಯಬೇಕು ಎಂದು ಮಾರ್ಗಸೂಚಿ ಹೇಳುತ್ತದೆ. ಜತೆಗೆ ಜನರಿಂದ ಸ್ವೀಕರಿಸಲಾಗುವ ದೂರುಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನೂ ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ
* ಸಾರ್ವಜನಿಕರ ದೂರು ಮತ್ತು ಕುಂದುಕೊರತೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಒತ್ತು ನೀಡಬೇಕು. ಇತ್ಯರ್ಥಪಡಿಸಲಾಗದ ಸಂದರ್ಭದಲ್ಲಿ ಮುಂದಿನ ಕ್ರಮಕ್ಕೆ ರವಾನಿಸಬೇಕು
* ಹೊಸದಾಗಿ ಸ್ವೀಕೃತವಾಗುವ ದೂರುಗಳನ್ನು, ಹಳೆಯ ಮತ್ತು ಇತ್ಯರ್ಥವಾಗದ ದೂರುಗಳನ್ನು ಪ್ರತ್ಯೇಕವಾಗಿ ಇರಿಸಬೇಕು. ಎರಡನ್ನೂ ಪ್ರತ್ಯೇಕವಾಗಿಯೇ ನಿರ್ವಹಿಸಬೇಕು
* ಶನಿವಾರದಂದು ಸ್ವೀಕರಿಸಲಾದ ದೂರು ಅಥವಾ ಅರ್ಜಿಯ ಸ್ಥಿತಿಗತಿಯನ್ನು ನಂತರದ ಮೊದಲ ಬುಧವಾರದಂದು ಪರಿಶೀಲಿಸಬೇಕು. ಬೆಳಿಗ್ಗೆ 9ರಿಂದ 11ರವರೆಗೆ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, 11ರಿಂದ 1ರವರೆಗೆ ಸಹಾಯಕ ಆಯುಕ್ತರು, ಮಧ್ಯಾಹ್ನ 3ರಿಂದ 5ರವರೆಗೆ ಜಿಲ್ಲಾಧಿಕಾರಿ ಮಟ್ಟದಲ್ಲಿ ಪರಿಶೀಲಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಬೇಕು
* ದೂರಿನ ವಿಲೇವಾರಿ ಕುರಿತು ದೂರುದಾರರಿಗೆ ಅಸಮಾಧಾನವಿದ್ದಲ್ಲಿ, ಅಂಥವರು ಖುದ್ದು ಹಾಜರಾಗಿ ಮತ್ತೆ ಅಹವಾಲು ಮಂಡಿಸಬಹುದು
(2ನೇ ಮತ್ತು 4ನೇ ಶನಿವಾರದ ರಜಾದಿನದಂದು ಕಾರ್ಯನಿರ್ವಹಿಸುವ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಸಿಬ್ಬಂದಿಗೆ ಜಿಲ್ಲಾಧಿಕಾರಿ ಮಟ್ಟದಲ್ಲಿಯೇ ಬೇರೊಂದು ದಿನ ಪರಿಹಾರಾತ್ಮಕ ರಜೆ ಮಂಜೂರು ಮಾಡಬಹುದು. ಗ್ರೂಪ್ ಬಿ ಮತ್ತು ಗ್ರೂಪ್ ಎ ಅಧಿಕಾರಿಗಳಿಗೆ ರಜೆ ನೀಡುವ ಸಂಬಂಧ ಇನ್ನಷ್ಟೇ ಆದೇಶ ಬರಬೇಕಿದೆ)

