ನವದೆಹಲಿ: ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಶುಕ್ರವಾರದಂದು ಏಳನೇ ವಾರಕ್ಕೆ ಕಾಲಿಟ್ಟಿದೆ. ಜೆನ್-ಝೀಗಳಿಂದ ಶುರುವಾದ ಪ್ರತಿಭಟನೆಗೆ ಇದೀಗ ಹಿರಿಯ ನಾಗರಿಕರು (ಬೂಮರ್ಸ್-1946 ರಿಂದ 1964ರ ಅವಧಿಯಲ್ಲಿ ಜನಿಸಿದವರು) ಕೂಡ ಬೆಂಬಲ ಸೂಚಿಸುತ್ತಿದ್ದು, ಇದು ದೇಶದ ಯುವಜನರ ಭವಿಷ್ಯವನ್ನು ನಿರ್ಧರಿಸುವ ಹೋರಾಟ ಎಂದಿದ್ದಾರೆ.
ಸಾವಿರಾರು ಜೆನ್-ಝೀ ಪ್ರತಿಭಟನಕಾರರ ನಡುವೆ 50,60,70ರ ಹರೆಯದ ಹಿರಿಯ ನಾಗರಿಕರೂ ಸೇರಿಕೊಂಡಿದ್ದು, ವಿದ್ಯಾರ್ಥಿಗಳ ಪಕ್ಕ ಕುಳಿತು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೇ, ಪ್ರತಿಭಟನಾ ಸ್ಥಳದಲ್ಲಿ ನಡೆಯುತ್ತಿರುವ ಸಭೆಗಳಲ್ಲೂ ಪಾಲ್ಗೊಂಡು ಸಾರ್ವತ್ರಿಕ ಪರೀಕ್ಷೆಗಳಲ್ಲಿ ಸುಧಾರಣೆ ತರಬೇಕು ಎಂಬ ಬೇಡಿಕೆಗಳಿಗೂ ಬೆಂಬಲ ಸೂಚಿಸಿದ್ದಾರೆ.
ಉತ್ತರ ಪ್ರದೇಶದ ರಾಯ್‌ಬರೇಲಿ ನಿವಾಸಿ ದೇವ್‌ನಾಥ್ ಮೌರ್ಯ (64) ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, 'ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಬೆಂಬಲಿಸಲು ಸತತ 12 ಗಂಟೆ ಪ್ರಯಾಣಿಸಿ 30 ಜನರ ತಂಡವಾಗಿ ನಾವು ರಾಷ್ಟ್ರ ರಾಜಧಾನಿಗೆ ಬಂದಿದ್ದೇವೆ. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಯುವಜನರು ಪ್ರಯತ್ನಿಸುತ್ತಿರುವಾಗ ನೀವು ಏನು ಮಾಡುತ್ತಿದ್ದೀರಿ ಎಂದು ನಮ್ಮ ಮೊಮ್ಮಕ್ಕಳು ಪ್ರಶ್ನಿಸಿದರೆ ನಾನು ಅವರಿಗೆ ಯಾವ ಮುಖ ತೋರಿಸಲಿ? ಈ ಯುವಜನರೇ ನಮ್ಮ ದೇಶದ ಭವಿಷ್ಯ. ಅವರನ್ನು ಬೆಂಬಲಿಸಲೆಂದೇ ನಾವು ಬಂದಿದ್ದೇವೆ' ಎಂದಿದ್ದಾರೆ.
ಓಂ ಪ್ರಸಾದ್ (58) ಎಂಬವರು ಪ್ರತಿಕ್ರಿಯಿಸಿ, 1990ರಲ್ಲಿ ಮಂಡಲ್ ಆಯೋಗದ ಆಂದೋಲನದಲ್ಲಿ ನಾನು ಭಾಗಿಯಾಗಿದ್ದೆ. 2011ರಲ್ಲಿ 'ಭ್ರಷ್ಟಾಚಾರದ ವಿರುದ್ಧ ಭಾರತ' ಎಂಬ ಚಳವಳಿಯಲ್ಲಿ ಪಲ್ಗೊಳ್ಳಲು ದೆಹಲಿಗೆ ಬಂದಿದ್ದೆ. ಈ ಹಿಂದಿನ ಪ್ರತಿಭಟನೆಗಳಂತೆ ಇದೂ ಪ್ರಮುಖ ಪ್ರತಿಭಟನೆ. ಕೋಟ್ಯಂತರ ಯುವ ಭಾರತೀಯರ ಭವಿಷ್ಯ ಅಪಾಯದಲ್ಲಿದೆ' ಎಂದಿದ್ದಾರೆ.
ಹಿರಿಯ ನಾಗರಿಕರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಜೆನ್-ಝೀಗಳು ಸ್ವಾಗತಿಸಿದ್ದು, ಇದರಿಂದ ತಮ್ಮ ಮನೋಸ್ಥೈರ್ಯ ಹೆಚ್ಚುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260725-51-1230412809

