ದುಬೈ/ಜೆರುಸಲೇಂ: ಈದ್ ಉಲ್ ಫಿತ್ರ್ ಹಬ್ಬದ ದಿನವಾದ ಶನಿವಾರ ಜೆರುಸಲೇಂ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಅಲ್ಲಿನ ಅಲ್- ಅಕ್ಸಾ ಮಸೀದಿಗೆ ಕೇವಲ ನೂರು ಮೀಟರ್ ಅಂತರದಲ್ಲಿ ಈ ದಾಳಿ ನಡೆದಿದೆ.
ಮುಸ್ಲಿಮರು, ಕ್ರಿಶ್ಚಿಯನ್ನರು ಮತ್ತು ಯಹೋದಿಗಳ ಪವಿತ್ರ ಸ್ಥಳಗಳಿಂದ ಕೆಲವೇ ಮೀಟರ್ ದೂರದಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು ಇಸ್ರೇಲ್ ಶನಿವಾರ ಹೇಳಿದೆ.
ಇರಾಕ್ ಗುಪ್ತಚರ ಅಧಿಕಾರಿ ಹತ: ಇರಾಕ್ ರಾಜಧಾನಿ ಬಾಗ್ದಾದ್‌ನ ಗುಪ್ತಚರ ಸೇವೆಗಳ ಕಟ್ಟಡವನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಇರಾಕ್‌ನ ಗುಪ್ತಚರ ಅಧಿಕಾರಿಯೊಬ್ಬರು ಹತರಾಗಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಇನ್ನೊಂದು ಡ್ರೋನ್ ಇಲ್ಲಿನ ಪ್ರಸಿದ್ಧ ಖಾಸಗಿ ಕ್ರೀಡಾ ಕ್ಲಬ್‌ಗೆ ಅಪ್ಪಳಿಸಿದೆ. ಆದರೆ ಈ ದಾಳಿಗಳ ಜವಾಬ್ದಾರಿಯನ್ನು ಯಾವುದೇ ಗುಂಪು ಅಥವಾ ದೇಶ ವಹಿಸಿಕೊಂಡಿಲ್ಲ.
ಬೈರೂತ್ ದಕ್ಷಿಣ ಉಪ ನಗರಗಳಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ಇಸ್ರೇಲ್ ಶನಿವಾರ ಮುಂಜಾನೆ ದಾಳಿ ನಡೆಸಿದ್ದು, ಭಾರಿ ಸ್ಪೋಟ, ಬೆಂಕಿ, ಹೊಗೆ ಕಾಣಿಸಿಕೊಂಡಿದೆ.
ಪ್ರವಾಸಿ ತಾಣಗಳನ್ನು ಗುರಿಯಾಗಿಸುತ್ತೇವೆ: 'ವಿಶ್ವಾದಾದ್ಯಂತ ಇರುವ ಪ್ರಮುಖ ಉದ್ಯಾನಗಳು, ಮನರಂಜನಾ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳನ್ನು ಗುರಿಯಾಗಿಸುತ್ತೇವೆ. ಅಲ್ಲಿ ದೇಶದ ಶತ್ರುಗಳು ಸುರಕ್ಷಿತವಾಗಿರಲು ಬಿಡುವುದಿಲ್ಲ' ಎಂದು ಇರಾನ್ ಸೇನೆಯ ಹಿರಿಯ ವಕ್ತಾರ ಜನರಲ್ ಅಬೋಲ್‌ಫಾಜ್ಲ್ ಶೇಕಾರ್ಚ್ ಎಚ್ಚರಿಕೆ ನೀಡಿದ್ದಾರೆ.
ಪಶ್ಚಿಮ ಏಷ್ಯಾದ ಆಚೆಗೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ ಒತ್ತಡ ತಂತ್ರವನ್ನು ಇರಾನ್ ಬಳಸಬಹುದು ಎಂಬ ಕಳವಳ ಇದರಿಂದ ವ್ಯಕ್ತವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಗುರಿ ತಲುಪುವ ಹಂತದಲ್ಲಿದ್ದೇವೆ: ಟ್ರಂಪ್
'ನಾವು ನಮ್ಮ ಗುರಿಗಳನ್ನು ತಲುಪುವ ಹಂತದಲ್ಲಿದ್ದೇವೆ. ಹೀಗಾಗಿ ಇರಾನ್ ಮೇಲಿನ ಸೇನಾ ಕಾರ್ಯಾಚರಣೆ ಕೊನೆಗೊಳಿಸುವ ಕುರಿತು ಪರಿಶೀಲಿಸುತ್ತಿದ್ದೇವೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದ್ದಾರೆ.
ಇರಾನ್‌ಗೆ ಭೂಸೇನೆಯನ್ನು ಕಳುಹಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದಿರುವ ಟ್ರಂಪ್, 'ಎಲ್ಲ ಆಯ್ಕೆಗಳು ನಮ್ಮ ಮುಂದಿವೆ' ಎಂದೂ ಪ್ರತಿಪಾದಿಸಿದ್ದಾರೆ.
ಇನ್ನೊಂದೆಡೆ, ಇದಕ್ಕೆ ವ್ಯತಿರಿಕ್ತ ಎಂಬಂತೆ ಅಮೆರಿಕವು ಭೂಮಿ ಮತ್ತು ಜಲದಲ್ಲಿ ಚಲಿಸಬಹುದಾದ ಮೂರು ಹಡಗುಗಳನ್ನು ಮತ್ತು 2,500ಕ್ಕೂ ಹೆಚ್ಚು ಸಿಬ್ಬಂದಿಯನ್ನು ಪಶ್ಚಿಮ ಏಷ್ಯಾಕ್ಕೆ ನಿಯೋಜಿಸುತ್ತಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಇರಾನ್ ತೈಲದ ಮೇಲಿನ ನಿರ್ಬಂಧ ಸಡಿಲಿಕೆ
ವಾಷಿಂಗ್ಟನ್: ಇರಾನ್ ಕಚ್ಚಾ ತೈಲವು ಹಡಗುಗಳಿಗೆ ಭರ್ತಿಯಾಗಿ, ಸಮುದ್ರ ಮಾರ್ಗದಲ್ಲಿ ಇದ್ದರೆ ಆ ಕಚ್ಚಾ ತೈಲಕ್ಕೆ ತಾತ್ಕಾಲಿಕ ಅವಧಿಗೆ ನಿರ್ಬಂಧಗಳು ಅನ್ವಯವಾಗುವುದಿಲ್ಲ ಎಂದು ಅಮೆರಿಕವು ಶನಿವಾರ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯನ್ನು ತಡೆಯುವ ಯತ್ನವಾಗಿ ಅದು ಈ ಕ್ರಮ ಕೈಗೊಂಡಿದೆ.
ತಾತ್ಕಾಲಿಕವಾದ ಈ ಕ್ರಮದ ಪರಿಣಾಮವಾಗಿ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಗೆ ಇರಾನ್ 14 ಕೋಟಿ ಬ್ಯಾರಲ್‌ನಷ್ಟು ತೈಲ ಲಭ್ಯವಾಗಲಿದೆ ಎಂದು ಅಮೆರಿಕದ ವಾಣಿಜ್ಯ ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.
'ತಾತ್ಕಾಲಿಕವಾದ, ಅಲ್ಪಾವಧಿಯ ಈ ಕ್ರಮವು ಈಗಾಗಲೇ ಹಡಗಿಗೆ ಭರ್ತಿಯಾಗಿ, ಸಮುದ್ರ ಮಾರ್ಗದಲ್ಲಿ ಇರುವ ಕಚ್ಚಾ ತೈಲಕ್ಕೆ ಅನ್ವಯವಾಗುತ್ತದೆ. ಇದು ಹೊಸ ಖರೀದಿಗಳಿಗೆ, ಹೊಸ ಉತ್ಪಾದನೆಗೆ ಅವಕಾಶ ಮಾಡಿಕೊಡುವುದಿಲ್ಲ' ಎಂದು ಅವರು ಎಕ್ಸ್ ಮೂಲಕ ತಿಳಿಸಿದ್ದಾರೆ. ಯುದ್ಧ ಶುರುವಾಗುವುದಕ್ಕೂ ಮೊದಲು ಬ್ರೆಂಟ್ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರಲ್‌ಗೆ 70 ಡಾಲರ್ ಇದ್ದಿದ್ದು, 119 ಡಾಲರ್‌ವರೆಗೂ ಹೆಚ್ಚಳ ಆಗಿದೆ.
ನಿರ್ಬಂಧ ಸಡಿಲಿಕೆಯ ತಾತ್ಕಾಲಿಕ ಕ್ರಮವು ಶುಕ್ರವಾರ ದಿಂದ ಜಾರಿಗೆ ಬಂದಿದ್ದು, ಏ. 19ರವರೆಗೆ ಜಾರಿಯಲ್ಲಿರಲಿದೆ.
ದಿನದ ಮಹತ್ವದ ಬೆಳವಣಿಗೆಗಳು
ವಿವಾದಿತ ದ್ವಿಪಗಳಾದ ಅಬು ಮೂಸಾ ಮತ್ತು ಗ್ರೇಟರ್ ಟನ್ಬ್ ಮೇಲೆ ಯುಎಇ ತನ್ನ ನೆಲೆಗಳಿಂದ ದಾಳಿ ಮಾಡಲು ಅವಕಾಶ ಕಲ್ಪಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಇರಾನ್ ಯುಎಇಗೆ ಎಚ್ಚರಿಸಿದೆ
ಇರಾನ್ ನಾಯಕರು ಮತ್ತು ಜನರಿಗೆ ಹೊಸ ವರ್ಷವಾದ ನೌರುಜ್‌ನ ಶುಭಾಶಯವನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ತಿಳಿಸಿದ್ದಾರೆ. ಅಲ್ಲದೆ ಟೆಹರಾನ್‌ಗೆ ಮಾಸ್ಕೊದ ಬೆಂಬಲವನ್ನೂ ವ್ಯಕ್ತಪಡಿಸಿದ್ದಾರೆ
ಸಿರಿಯಾದ ಸೇನಾ ಶಿಬಿರಗಳ ಮೇಲಿನ ಇಸ್ರೇಲ್ ದಾಳಿಯನ್ನು ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯ ತೀವ್ರವಾಗಿ ಖಂಡಿಸಿದೆ. ಅರಬ್‌ನ ಇತರ ದೇಶಗಳು, ಟರ್ಕಿ ಜತೆಗೂಡಿ ಅಂತರರಾಷ್ಟ್ರೀಯ ಸಮುದಾಯದ ಮಧ್ಯ ಪ್ರವೇಶಕ್ಕೆ ಕರೆ ನೀಡಿವೆ
ಟೆಹರಾನ್ ಮೇಲೆ ಇಸ್ರೇಲ್ ಕೆಲವು ಸಾರಿ ಕ್ಷಿಪಣಿ ದಾಳಿ ನಡೆಸಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ
ಸೌದಿ ಮತ್ತು ಕುವೈತ್ ಮೇಲೆ ಇರಾನ್ ಡ್ರೋನ್ ದಾಳಿಗಳನ್ನು ನಡೆಸಿದೆ. ಆದರೆ ಈ ದಾಳಿಗಳನ್ನು ತಮ್ಮ ರಕ್ಷಣಾ ವ್ಯವಸ್ಥೆಗಳು ಸಮರ್ಥವಾಗಿ ತಡೆದಿವೆ ಎಂದು ಅಲ್ಲಿನ ಸೇನೆಗಳು ಹೇಳಿಕೊಂಡಿವೆ
ಇಂಧನ ಮಾರ್ಗಗಳನ್ನು ಸುರಕ್ಷಿತಗೊಳಿಸುವ ಕುರಿತು ಟೆಹರಾನ್ ಜತೆ ಮಾತನಾಡುತ್ತಿರುವುದಾಗಿ ದಕ್ಷಿಣ ಕೊರಿಯಾ ಹೇಳಿದೆ

