Dailyhunt Logo
  • Light mode
    Follow system
    Dark mode
    • Play Story
    • App Story
ಜಿಬಿಎ ವ್ಯಾ‍ಪ್ತಿಯಲ್ಲಿ ಆಸ್ತಿ ವಿಭಜನೆ: ಶೇ 45ರಷ್ಟು ಭೂಮಿ ಸರ್ಕಾರಕ್ಕೆ

ಜಿಬಿಎ ವ್ಯಾ‍ಪ್ತಿಯಲ್ಲಿ ಆಸ್ತಿ ವಿಭಜನೆ: ಶೇ 45ರಷ್ಟು ಭೂಮಿ ಸರ್ಕಾರಕ್ಕೆ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾ‍ಪ್ತಿಯಲ್ಲಿ ಹೆಚ್ಚು ಭೂಮಿ ಹೊಂದಿರುವ ಕುಟುಂಬದ ಸದಸ್ಯರು, ಆಸ್ತಿಯನ್ನು ವಿಭಜನೆ (ಪಾಲು) ಮಾಡಿಕೊಳ್ಳಲು ಮುಂದಾದರೆ ರಾಜ್ಯ ಸರ್ಕಾರಕ್ಕೆ ಶೇ 45ರಷ್ಟು ಪಾಲು ಕೊಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

'ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ -2015'ರ ಸೆಕ್ಷನ್‌ 13-ಇಗೆ ತಿದ್ದುಪಡಿ ತಂದು, ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರ ವಲಯ ನಿಯಮಗಳನ್ನು 'ಜಿಬಿಎ ಯೋಜನಾ ಪ್ರದೇಶಕ್ಕೆ (ತಿದ್ದುಪಡಿ) ನಿಯಮಗಳು-2026 ಎಂಬುದಾಗಿ 2026ರ ಜೂನ್‌ 4ರಂದು ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಅದ
ರಂತೆ, 2,000 ಚದರ ಮೀಟರ್‌ಗಿಂತ ಹೆಚ್ಚಿನ ಭೂಮಿ ಅಥವಾ ನಿರ್ಮಿತ ಪ್ರದೇಶವನ್ನು ಕುಟುಂಬದ ಸದಸ್ಯರು ವಿಭಜನೆ ಮಾಡಿಕೊಳ್ಳ ಬೇಕಾದರೆ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

ಈ ತಿದ್ದುಪಡಿಯು, ರಿಯಲ್‌ ಎಸ್ಟೇಟ್‌ ಹಾಗೂ ಡೆವಲಪರ್ಸ್‌ಗಳಿಗೆ ಅನುಕೂಲ ಕಲ್ಪಿಸಿದ್ದು, ಹೆಚ್ಚು ಭೂಮಿ ಹೊಂದಿರುವ ಮಾಲೀಕರು ಅಥವಾ ಕುಟುಂಬದ ಸದಸ್ಯರು ಭೂಮಿ ಕಳೆದುಕೊಳ್ಳುವ ಬದಲು ಅದನ್ನು ಮಾರಿಕೊಳ್ಳುವ ಪರಿಸ್ಥಿತಿ ಸೃಷ್ಟಿಸಿದೆ ಎಂದು ಭೂಮಾಲೀಕರು ದೂರಿದ್ದಾರೆ.

ನಗರದ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನಿವೇಶನ ವಿಭಜನೆ ಹಾಗೂ ವಿಲೀನ ಪ್ರಕ್ರಿಯೆಯನ್ನು ನಿಲ್ಲಿಸಲಾಗಿತ್ತು. ಅದಕ್ಕೆ ಅವಕಾಶ ಕಲ್ಪಿಸಲು ಹೊಸ ನಿಯಮಗಳನ್ನು ರೂಪಿಸಲಾಗಿದ್ದು, ಎ-ಖಾತಾ/ ಇ-ಖಾತಾ ಹೊಂದಿರುವ ಗರಿಷ್ಠ 2,000 ಚದರ ಮೀಟರ್‌ ನಿವೇಶನ/ ನಿರ್ಮಿತ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಬಹುದಾಗಿದೆ. ಆದರೆ, 2,000 ಚದರ ಮೀಟರ್‌ಗಿಂತ ಹೆಚ್ಚಿನ ನಿವೇಶನ ಅಥವಾ ಆಸ್ತಿಯನ್ನು ಕುಟುಂಬದ ಸದಸ್ಯರೇ ವಿಭಜನೆ ಮಾಡಿಕೊಳ್ಳಬೇಕಾದರೆ, ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015ರ (ಆರ್‌ಎಂಪಿ) ವಲಯ ನಿಯಮಗಳ ಚಾಪ್ಟರ್‌ 6 ಅನ್ವಯವಾಗಲಿದೆ.

ಇದರ ಪ್ರಕಾರ, ಬಡಾವಣೆ ನಿರ್ಮಿಸಲು ನಿಗದಿಪಡಿಸಲಾಗಿರುವ ನಿಯಮಗಳು ಅನ್ವಯವಾಗಲಿವೆ. ಅಂದರೆ, ಒಟ್ಟಾರೆ ಭೂಮಿಯಲ್ಲಿ ಶೇ 55
ರಷ್ಟನ್ನು ಮಾತ್ರ ವಸತಿ ಉಪಯೋಗಕ್ಕಾಗಿ ಬಳಸಿಕೊಳ್ಳಬೇಕು. ಉಳಿದ ಶೇ 45ರಷ್ಟು ಭೂಮಿಯಲ್ಲಿ ರಸ್ತೆ, ಉದ್ಯಾನ, ತೆರೆದ ಪ್ರದೇಶ, ನಾಗರಿಕರ ಸೌಲಭ್ಯಗಳಿಗೆ ಮೀಸಲಿಡಬೇಕಾಗಿದೆ. ಈ ಭೂಮಿ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಸ್ವತ್ತಾಗುತ್ತದೆ. ಈ ನಿಯಮಗಳಿಂದ, ಪಿತ್ರಾರ್ಜಿತವಾಗಿರುವ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಲು ಕುಟುಂಬದ ಸದಸ್ಯರು ಶೇ 45ರಷ್ಟು ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ.

'ಅಜ್ಜ ಅಥವಾ ತಂದೆಯ ಹೆಸರಿನಲ್ಲಿರುವ ಒಂದು ಎಕರೆ ಭೂಮಿಯನ್ನು ಕುಟುಂಬದ ನಾಲ್ಕು ಸದಸ್ಯರು ತಲಾ 10 ಸಾವಿರ ಚದರಡಿಯಂತೆ ವಿಭಜನೆ ಮಾಡಿಕೊಳ್ಳುವ ಅವಕಾಶ ಇಲ್ಲ. ನಾವು ನಿವೇಶನಗಳು ರಚಿಸಿ ಮಾರಿಕೊಳ್ಳುವ ಉದ್ದೇಶವಿಲ್ಲದಿದ್ದರೂ, ಶೇ 45ರಷ್ಟು ಭೂಮಿಯನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟು, ಉಳಿದಿದ್ದನ್ನು ಹಂಚಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ' ಎಂದು ಹೂಡಿಯ ಎಚ್‌.ಎಂ. ಚಂದ್ರಶೇಖರ್‌ ಆತಂಕ ವ್ಯಕ್ತಪಡಿಸಿದರು.

'2,000 ಚದರ ಮೀಟರ್‌ವರೆಗಿನ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಲು ಇಲ್ಲದ ನಿಬಂಧನೆಯನ್ನು ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಆಸ್ತಿಗೆ ಏಕೆ ನಿಗದಿಪಡಿಸಲಾಗಿದೆ. ಇದು ರಿಯಲ್‌ ಎಸ್ಟೇಟ್‌ನವರಿಗೆ ಅವಕಾಶ ಮಾಡಿಕೊಡುವ ಕಾರ್ಯ. ಅಲ್ಲದೆ, ನ್ಯಾಯಾಲಯದಲ್ಲಿ ಡಿಕ್ರಿ ಆಗಿದ್ದರೆ ಎಷ್ಟೇ ಪ್ರಮಾಣದ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳಬಹುದು. ಅಂದರೆ, ಒಟ್ಟಾಗಿರುವ ಕುಟುಂಬದ ಸದಸ್ಯರು ನ್ಯಾಯಾಲಯದಲ್ಲಿ ಕಿತ್ತಾಡಿಕೊಳ್ಳಲಿ ಎಂದು ಹೇಳುವಂತಿದೆ ಸರ್ಕಾರದ ಈ ತಿದ್ದುಪಡಿ' ಎಂದು ದೂರಿದರು.

'ಕಟ್ಟಡಗಳು ನಿರ್ಮಾಣವಾಗಿದ್ದರೆ ಆ ಆಸ್ತಿಯನ್ನು ವಿಭಜನೆ ಮಾಡಿಕೊಳ್ಳುವಾಗ ಸರ್ಕಾರಕ್ಕೆ ಭೂಮಿ ಬಿಡಲು ಹೇಗೆ ಸಾಧ್ಯ? ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತದೆಯೇ? ಒಂದಷ್ಟು ವಿವೇಚನೆ ಬಳಸದೆ ನಿಯಮಗಳಿಗೆ ತಿದ್ದುಪಡಿ ತರಲು ನಗರಾಭಿವೃದ್ಧಿ ಇಲಾಖೆ ಮುಂದಾಗಿದೆ. ಸದ್ಯಕ್ಕೆ ಇದು ಜಿಬಿಎ ವ್ಯಾಪ್ತಿಗೆ ಅನ್ವಯವಾಗಲಿದೆ ಆದರೂ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಇದೇ ನಿಯಮಗಳು ಜಾರಿ ಬಂದರೂ ಆಶ್ಚರ್ಯವಿಲ್ಲ. ತಿದ್ದುಪಡಿಗೆ ಕರಡು ಅಧಿಸೂಚನೆ ಮಾತ್ರ ಆಗಿದ್ದು, ಅಂತಿಮ ಅಧಿಸೂಚನೆಯ ಸಂದರ್ಭದಲ್ಲಿ ನಮ್ಮೆಲ್ಲ ಆಕ್ಷೇಪಣೆಗಳನ್ನು ಪರಿಗಣಿಸಬೇಕು' ಎಂದು ಅವರು ಮನವಿ ಮಾಡಿದರು.

'ಕುಟುಂಬದ ಸದಸ್ಯರ ನಡುವೆ ಈಗಾಗಲೇ ಆಗಿರುವ ವಿಭಜನೆ ನೋಂದಣಿ ಪತ್ರ ಅಥವಾ ಇಚ್ಛಾ ಪತ್ರದಂತೆ (ವಿಲ್‌) ವಿಭಜನೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮೂರ್ನಾಲ್ಕು ವರ್ಷದಿಂದ ಕಾಯುತ್ತಿರುವವರಿಗೆ ಹೊಸ ನಿಯಮಗಳು ಜಾರಿಯಾದರೆ, ನಮ್ಮ ಸ್ವಂತ ಆಸ್ತಿಯಲ್ಲಿ ಸುಮಾರು ಅರ್ಧದಷ್ಟು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗುತ್ತದೆ. ನಮ್ಮ ಭೂಮಿಯಲ್ಲಿ ತೆಗೆದುಕೊಳ್ಳಲು ಯಾರು ಅಧಿಕಾರ ಕೊಟ್ಟಿದ್ದು' ಎಂದು ಪ್ರಶ್ನಿಸಿದರು.

'ಜಿಬಿಎ ವ್ಯಾಪ್ತಿಯಲ್ಲಿ 2,000 ಚದರ ಮೀಟರ್‌ಗೂ ಹೆಚ್ಚಿನ ಆಸ್ತಿಗಳಿಗೆ ಇನ್ನೂ ಇ-ಖಾತಾ ಸಿಕ್ಕಿಲ್ಲ. ಆನ್‌ಲೈನ್‌ನಲ್ಲಿ ಇವು ಅಪ್‌ಲೋಡ್‌ ಆಗಿಲ್ಲ. ಪುಸ್ತಕಗಳು ಸ್ಕ್ಯಾನ್‌ ಆಗಬೇಕು, ಸಾಫ್ಟ್‌ವೇರ್‌ ಅಪ್‌ಡೇಟ್‌ ಆಗಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ' ಎಂದು ಭೂ ಮಾಲೀಕರು ದೂರಿದರು.

'ಅಡ್ಡಾದಿಡ್ಡಿ ಬೆಳವಣಿಗೆಗೆ ಕಡಿವಾಣ ಹಾಕಲು ನಿಯಮ'

'ಜಿಬಿಎ ವ್ಯಾಪ್ತಿಯಲ್ಲಿ 2,000 ಚದರ ಮೀಟರ್‌ಗೂ (20 ಗುಂಟೆ) ಹೆಚ್ಚಿರುವ ಭೂ ಪರಿವರ್ತನೆಯಾದ, ಎ ಖಾತಾ ಹೊಂದಿರುವ ಆಸ್ತಿಗಳ ವಿಭಜನೆ ಪ್ರಕ್ರಿಯೆಯಲ್ಲಿ ಬಿಡಿಎ ವಿಧಿಸುತ್ತಿದ್ದ ಬಡಾವಣೆ ನಿಯಮಗಳಂತೆಯೇ
ಶೇ 55ರಷ್ಟು ಮಾತ್ರ ವಸತಿ ಭೂಮಿಯನ್ನು ಪಡೆಯಬಹುದು. ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿರುವ ಅಕ್ರಮ ಬಡಾವಣೆಗಳಿಗೆ ಕಡಿವಾಣ ಹಾಕಲೂ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ' ಎಂದು ಜಿಬಿಎ ನಗರ ಯೋಜನೆ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

'2,000 ಚದರ ಮೀಟರ್‌ಗೂ ಹೆಚ್ಚಿನ ನಿವೇಶನ ಹೊಂದಿರುವ ವ್ಯಕ್ತಿಯಿಂದ ಆಸ್ತಿ ವಿಭಜನೆಯಾಗಬೇಕಾದರೆ ಅಥವಾ ಕುಟುಂಬದ ಸದಸ್ಯರೇ ವಿಭಜನೆ ಮಾಡಿಕೊಂಡರೂ ಬಡಾವಣೆಗಳನ್ನು ರಚಿಸುವಾಗ ಅನ್ವಯವಾಗುವ ರಸ್ತೆ, ಉದ್ಯಾನ, ನಾಗರಿಕ ಸೌಲಭ್ಯಗಳ ಅಗತ್ಯವಾದ ಭೂಮಿಯನ್ನು ಬಿಡಲೇಬೇಕು' ಎಂದರು.

'ಸುಮಾರು ಒಂದು ಎಕರೆ ಭೂಮಿಯನ್ನು ವಿಭಜನೆಗೆ ಅವಕಾಶ ಮಾಡಿಕೊಟ್ಟರೆ, ರಸ್ತೆ, ತೆರೆದ ಪ್ರದೇಶಗಳಿಲ್ಲದೆ ಕಟ್ಟಡಗಳು ನಿರ್ಮಾಣವಾಗಿ ಹಲವು ಸಮಸ್ಯೆ ಉಂಟಾಗುತ್ತಿವೆ. ಇಂತಹ ಪ್ರಕರಣಗಳಿಂದಲೇ ನಗರದ ಹೊರ ಭಾಗದಲ್ಲಿ ಮಳೆ ಸೇರಿದಂತೆ ಹಲವು ಸಂದರ್ಭದಲ್ಲಿ ಸಮಸ್ಯೆಗಳಾಗುತ್ತಿವೆ. ಹೀಗಾಗಿ, ಹೊಸ ತಿದ್ದುಪಡಿ ಮಾಡಲಾಗಿದೆ' ಎಂದು ಮಾಹಿತಿ ನೀಡಿದರು.

'2,000 ಚದರ ಮೀಟರ್‌ಗೂ ಹೆಚ್ಚಿನ ಆಸ್ತಿಯಲ್ಲಿ ಈಗಾಗಲೇ ಕಟ್ಟಡಗಳು ನಿರ್ಮಾಣವಾಗಿದ್ದರೆ, ಅವುಗಳ ವಿಭಜನೆಗೆ ವಿನಾಯಿತಿ ನೀಡಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಬಹುದು. ಆದರೆ, ಇವುಗಳ ಪ್ರಮಾಣ ಶೇ 2ಕ್ಕಿಂತ ಕಡಿಮೆಯಾಗಿದೆ. ಇನ್ನು, ಭೂಪರಿವರ್ತನೆಯಾಗದ ಕೃಷಿ ಭೂಮಿಯನ್ನು ವಿಭಜನೆ ಮಾಡಿಕೊಳ್ಳುವಲ್ಲಿ ಯಾವುದೇ ರೀತಿಯ ನಿರ್ಬಂಧವನ್ನು ಹೊಸ ತಿದ್ದುಪಡಿಯಲ್ಲಿ ತಂದಿಲ್ಲ' ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Prajavani