ಕುಷ್ಟಗಿ: ಅದು ಗ್ರಾಮೀಣ ಪ್ರದೇಶದಲ್ಲಿ ಒಂದೂವರೆ ಕೋಟಿ ರೂಪಾಯಿ ಖರ್ಚಿನಲ್ಲಿ ಕಟ್ಟಿದ ಶಾಲಾ ಕಟ್ಟಡ, ಮೂರು ತಿಂಗಳ ಹಿಂದಷ್ಟೇ ಶಾಸಕರಿಂದ ಉದ್ಘಾಟನೆಗೊಂಡಿದೆ. ಮೊದಲ ಜಿನುಗು ಮಳೆಗೇ ಶಾಲಾ ಕೊಠಡಿಗಳು ಸೋರುತ್ತಿದ್ದು ವಿದ್ಯಾರ್ಥಿಗಳು, ಶಿಕ್ಷಕರು ಪರದಾಡುತ್ತಿದ್ದಾರೆ.
ಇದು ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡದ ಸದ್ಯದ ಸ್ಥಿತಿ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂಬುದು ಜನರ ಅಸಮಾಧಾನ. ಗುಣಮಟ್ಟದ ಕಾಮಗಾರಿಗೆ ಆರಂಭದಲ್ಲೇ ಜನರು ಬೆನ್ನುಹತ್ತಿದರೂ ಅದಕ್ಕೆ ಕ್ಯಾರೆ ಎನ್ನದ ಎಂಜಿನಿಯರ್ ನಿರ್ಲಕ್ಷ್ಯವಹಿಸಿದರು. ಪರಿಣಾಮ ಈಗ ಶಾಲಾ ಕೊಠಡಿ ಒಳಗೆ ಕುಳಿತ ಮಕ್ಕಳು, ಶೈಕ್ಷಣಿಕ ಪರಿಕರಗಳ ಮೇಲೆ ನೀರು ತೊಟ್ಟಿಕ್ಕುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ 2023-24ನೇ ಹಣಕಾಸು ವರ್ಷದಲ್ಲಿ ಪ್ರೌಢಶಾಲೆಯ ಆರು ಕೊಠಡಿಗಳ ಕಟ್ಟಡ ನಿರ್ಮಾಣಕ್ಕೆ ಗ್ರಾಮೀಣ ಮೂಲಸೌಲಭ್ಯ ಅಭಿವೃದ್ಧಿ ನಿಗಮ (ಕೆಆರ್‌ಡಿಐಎಲ್)ಗೆ ಮೈಕ್ರೊ ಯೋಜನೆಯಲ್ಲಿ ₹ 1.14 ಕೋಟಿ ಅನುದಾನ ಬಿಡುಗಡೆಮಾಡಿತ್ತು. ಎರಡು ವರ್ಷಗಳ ನಂತರ ಕಟ್ಟಡ ನಿರ್ಮಾಣವೇನೊ ಮುಗಿದು ಈ ವರ್ಷದ ಮಾ.5 ರಂದು ಉದ್ಘಾಟನೆಗೊಂಡಿತ್ತು. ಆದರೆ ನೀರು ಸೋರುತ್ತಿರುವ ಕಾರಣ ಪ್ರಯೋಜನ ಇಲ್ಲದಂತಾಗಿದೆ. ಈ ಗ್ರಾಮಕ್ಕೆ ಹೊಸದಾಗಿ ಪ್ರೌಢಶಾಲೆ ಮಂಜೂರಾಗಿದ್ದು ಅದಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೂ ಸರ್ಕಾರ ಮುಂದಾಗಿದ್ದಕ್ಕೆ ಖುಷಿ ಪಟ್ಟಿದ್ದ ಗ್ರಾಮಸ್ಥರೇ ಈಗ ತಮ್ಮ ಮಕ್ಕಳ ತಲೆಯ ಮೇಲೆ ನೀರು ಹನಿಸುತ್ತಿರುವುದಕ್ಕೆ ಶಪಿಸುವಂತಾಗಿದೆ.
ನೆಲಮಟ್ಟದ ಮತ್ತು ಮೊದಲ ಅಂತಸ್ತಿನಲ್ಲಿ ಒಟ್ಟು ಆರು ಕೊಠಡಿಗಳನ್ನು ನಿರ್ಮಿಸಲಾಗಿದೆ. ಮೇಲಿನ ಮೂರು ಕೊಠಡಿಗಳಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ. ಜಿನುಗು ಮಳೆಗೇ ನೀರು ಸೋರುತ್ತಿದೆ ಇನ್ನು ದೊಡ್ಡ ಪ್ರಮಾಣದಲ್ಲಿ ಮಳೆ ಬಂದರೆ ಎಷ್ಟು ಸೋರಿಕೆಯಾಗುತ್ತದೆಯೊ ಗೊತ್ತಿಲ್ಲ. ಚಾವಣಿ ಮೇಲೆ ಹೋಗಿ ಏನಾಗಿದೆ ನೋಡಬೇಕೆಂದರೆ ಹತ್ತುವುದಕ್ಕೂ ವ್ಯವಸ್ಥೆ ಕಲ್ಪಿಸಿಲ್ಲ. ಇನ್ನು ನೆಲಹಾಸು (ಫ್ಲೋರಿಂಗ್) ನಿರ್ಮಾಣವೂ ಅವೈಜ್ಞಾನಿಕವಾಗಿದ್ದು ಎಂಜಿನಿಯರ್ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಕಟ್ಟಡಕ್ಕೆ ದುಸ್ಥಿತಿ ಎದುರಾಗಿದ್ದರೂ ನಿಗಮದ ಎಂಜಿನಿಯರ್ ಇತ್ತ ಸುಳಿದಿಲ್ಲ ಎಂಬ ಆರೋಪ ಕೇಳಿಬಂದಿತು.
ಕಟ್ಟಡ ಸುಪರ್ದಿಗೆ ನಿರಾಕರಣೆ: ಈ ಮಧ್ಯೆ ಕಟ್ಟಡ ಉದ್ಘಾಟನೆಗೊಂಡಿದೆ. ಅದರಲ್ಲಿ ತರಗತಿಗಳೂ ನಡೆಯುತ್ತಿವೆ. ಆದರೆ ಕಟ್ಟಡವನ್ನು ವಹಿಸಿಕೊಳ್ಳುವುದಕ್ಕೆ ಶಾಲೆಯವರು ನಿರಾಕರಿಸುತ್ತಿದ್ದಾರೆ. 'ಕಾಮಗಾರಿ ಕಳಪೆಯಾಗಿದೆ, ವಿದ್ಯುತ್ ಸಂಪರ್ಕ ಎಲ್ಲಿ ಮಾಡಿದ್ದಾರೋ ಗೊತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಅಲ್ಲದೆ ಸೋರುತ್ತಿರುವುದು ಬೇರೆ ಹಾಗಾಗಿ ಇದೆಲ್ಲವನ್ನೂ ಸರಿಪಡಿಸಿದ ನಂತರವಷ್ಟೇ ಕಟ್ಟಡವನ್ನು ವಹಿಸಿಕೊಳ್ಳುತ್ತೇವೆ ಎಂದು ಎಂಜಿನಿಯರ್ ಇರ್ಫಾನ್ ಎಂಬುವವರಿಗೆ ತಿಳಿಸಿದ್ದೇವೆ' ಎಂದು ಎಸ್‌ಡಿಎಂಸಿಯವರು 'ಪ್ರಜಾವಾಣಿ'ಗೆ ಸ್ಪಷ್ಟಪಡಿಸಿದರು.
ಹನುಮಂತ ಹರಿಜನ, ಎಸ್‌ಡಿಎಂಸಿ ಉಪಾಧ್ಯಕ್ಷಕೋಟಿಗಟ್ಟಲೇ ಹಣ ಖರ್ಚಾದರೂ ಕಟ್ಟಡ ಸೋರುತ್ತಿದೆ. ಹೇಳಿದರೆ ಎಂಜಿನಿಯರ್ ದರ್ಪ ತೋರಿಸುತ್ತಾರೆ ಇರ್ಫಾನ್ ಪಠಾಣ್,ಎಇಇ, ಕೆಆರ್‌ಡಿಐಎಲ್‌ಕಟ್ಟಡ ಸೋರುತ್ತಿರುವುದನ್ನು ಯಾರೂ ಗಮನಕ್ಕೆ ತಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಮಹಾಂತೇಶ ಜಾಲಿಗಿಡದ, ಮುಖ್ಯಶಿಕ್ಷಕಹೊಸ ಕೊಠಡಿಗಳು ಸೋರುತ್ತಿರುವುದರಿಂದ ಪಾಠ ಮಾಡಲು ತೊಂದರೆಯಾಗಿದೆ. ಸ್ವಂತ ಹಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ಶೌಚಾಲಯ ಕಟ್ಟಿಸಿದ್ದೇನೆ ಈ ಮಧ್ಯೆ ಶಾಲಾ ಕಟ್ಟಡ ವಹಿಸಿಕೊಳ್ಳುವ ಸಂಬಂಧ ಕೆಆರ್‌ಡಿಐಎಲ್ ಎಂಜಿನಿಯರ್ ಇರ್ಫಾನ್ ಪಠಾಣ ಮತ್ತು ಎಸ್‌ಡಿಎಂಸಿ ಉಪಾಧ್ಯಕ್ಷರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಆಡಿಯೊ ಲಭ್ಯವಾಗಿದೆ. ಕಳಪೆ ಕಾಮಗಾರಿ ಎಂದು ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ ಹರಿಜನ ದೂರಿದ್ದಾರೆ. ಆದರೆ ಅದಕ್ಕೆ ಸ್ಪಷ್ಟನೆ ನೀಡದ ಎಂಜಿನಿಯರ್, 'ಸುಪರ್ದಿಗೆ ತೆಗೆದುಕೊಳ್ಳದ ಕಟ್ಟಡದಲ್ಲಿ ತರಗತಿ ನಡೆಸುತ್ತಿರುವುದೇಕೆ, ಉದ್ಘಾಟನೆಯನ್ನು ನಾನು ಮಾಡಿಸಿಯೇ ಇಲ್ಲ. ಮುಂದೆ ಹೇಗೆ ಮಾಡಬೇಕೆಂಬುದು ನನಗೂ ಗೊತ್ತಿದೆ' ಎಂದು ಹೇಳುತ್ತಿರುವುದು ಆಡಿಯೊದಲ್ಲಿದೆ.ಫೋನ್ ಸಂಭಾಷಣೆಯಲ್ಲಿ ತಿಕ್ಕಾಟಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-35-1771973247

