ಸಾಗರ: 'ತಾಲ್ಲೂಕಿನ ಜೋಗ ಜಲಪಾತ ಪ್ರದೇಶದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಅರಣ್ಯ ನಾಶ ನಡೆಯುತ್ತಿದೆ' ಎಂದು ಕರ್ನಾಟಕ ರಾಜ್ಯ ಜನಪರ ಹೋರಾಟ ವೇದಿಕೆ ಅಧ್ಯಕ್ಷ ಕೆ.ಎಲ್.ಭೋಜರಾಜ್ ಆರೋಪಿಸಿದರು.
'₹ 185 ಕೋಟಿ ವೆಚ್ಚದಲ್ಲಿ ಜೋಗ ಜಲಪಾತದ ಸುತ್ತಮುತ್ತ ವಿವಿಧ ಕಾಮಗಾರಿಗಳು ನಡೆಯುತ್ತಿವೆ.
ಜಲಪಾತದ ಅಂದ ಹೆಚ್ಚಿಸುವ ನೆಪದಲ್ಲಿ ಕಡಿದಾದ ಗುಡ್ಡ ಬೆಟ್ಟಗಳನ್ನು ಅಗೆಯುವ ಮೂಲಕ ಅದರ ನೈಜ ಸೌಂದರ್ಯಕ್ಕೆ, ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ' ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
'ಜೋಗ ಜಲಪಾತ ಪರಿಸರ ಸೂಕ್ಷ್ಮ ಪ್ರದೇಶದಲ್ಲಿದೆ. ಜಲಪಾತದ ಸುತ್ತಮುತ್ತಲಿನ ಅರಣ್ಯ ಪ್ರದೇಶ, ಕಣಿವೆ, ಗುಡ್ಡ ಬೆಟ್ಟಗಳನ್ನು ಉಳಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಬೇಕಿತ್ತು. ಆದರೆ ಪ್ರಾಕೃತಿಕ ಸಂಪತ್ತನ್ನು ನಾಶಗೊಳಿಸಿ ಜಲಪಾತದ ಸುತ್ತ ಕಾಂಕ್ರೀಟ್ ಕಟ್ಟಡಗಳನ್ನು ನಿರ್ಮಿಸಲು ಒತ್ತು ನೀಡಲಾಗುತ್ತಿದೆ' ಎಂದು ಟೀಕಿಸಿದರು.
'ಜಲಪಾತ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಪರಿಸರದ ನಾಶಕ್ಕೆ ಕಾರಣವಾಗುವ ಕಾಮಗಾರಿಗಳನ್ನು ಕೂಡಲೇ ಕೈಬಿಡಬೇಕು' ಎಂದು ಒತ್ತಾಯಿಸಿದರು.
'ಪರಿಸರಕ್ಕೆ ಪೂರಕವಾದ ಅಭಿವೃದ್ಧಿ ಕಾಮಗಾರಿಗಳನ್ನು ಜೋಗ ಜಲಪಾತದ ಸುತ್ತಮುತ್ತ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ನಮ್ಮ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದು ಎಚ್ಚರಿಸಿದರು.
ಪ್ರಮುಖರಾದ ಕುಂಟಗೋಡು ಸೀತಾರಾಮ್, ಸತೀಶ್ ಜೋಗ್, ನಿರಂಜನ್, ಸತೀಶ್, ಸುನೈನ ಉಪಸ್ಥಿತರಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-42-1135615207

