Dailyhunt Logo
  • Light mode
    Follow system
    Dark mode
    • Play Story
    • App Story
ಜೋಪಡಿ ಗೌರಜ್ಜಿ ಈಗ ಹೊಸ ಮನೆ ಒಡತಿ: ಆಗುಂಬೆಯಲ್ಲಿ ನೆಮ್ಮದಿಯ ಬದುಕು

ಜೋಪಡಿ ಗೌರಜ್ಜಿ ಈಗ ಹೊಸ ಮನೆ ಒಡತಿ: ಆಗುಂಬೆಯಲ್ಲಿ ನೆಮ್ಮದಿಯ ಬದುಕು

ಶಿವಮೊಗ್ಗ: ಅದು ಪ್ಲಾಸ್ಟಿಕ್‌ ಹೊದಿಕೆಯ ಜೋಪಡಿ. ಒಳಗೆ ಎಂತ ಬರುತ್ತದೋ, ಏನು ಬರುತ್ತದೋ ಎಂಬ ಚಿಂತೆಯಲ್ಲಿ ರಾತ್ರಿ ಮಲಗುತ್ತಿದ್ದೆ. ಒಮ್ಮೆ ಆನೆ ಬಂದು ಪಕ್ಕದಲ್ಲಿದ್ದ ಮನೆಯ ಸಾಮಗ್ರಿ ತುಳಿದು ಹಾಕಿತ್ತು. ಇನ್ನೊಮ್ಮೆ ಕಾಳಿಂಗ ಸರ್ಪ ಆಶ್ರಯ ಪಡೆದಿತ್ತು. ಗೌರಿಶಂಕರ ಬಂದು ಹಿಡಿದಿದ್ದರು.

ಈಗ ನೆಮ್ಮದಿ ಇದೆ. ಒಂದು ಹೊತ್ತು ಉಪವಾಸ ಇದ್ದರೂ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತೆ'...

ಹೀಗೆಂದು 'ಪ್ರಜಾವಾಣಿ'ಯೊಂದಿಗೆ ಸಂತಸ ಹಂಚಿಕೊಂಡರು ಆಗುಂಬೆಯ ಪರಿಶಿಷ್ಟರ ಕಾಲೊನಿಯ ನಿವಾಸಿ ಗೌರಜ್ಜಿ. ಅವರ ಕಣ್ಣಾಲಿಗಳು ತುಂಬಿ ಬಂದಿದ್ದವು. ಆಗುಂಬೆ ಪೊಲೀಸರು ಕಟ್ಟಿಕೊಟ್ಟಿದ್ದ ಪುಟ್ಟ ಸೂರು ಅವರಲ್ಲಿ ಹೆಮ್ಮೆಯ ಭಾವ ಮೂಡಿಸಿತ್ತು.

ಗೌರಜ್ಜಿಯ ಪತಿ ಮಂಜಪ್ಪ ಹಾಗೂ ಮೂವರು ಪುತ್ರರು ತೀರಿಹೋಗಿದ್ದು, ಪುತ್ರಿ ಘಟ್ಟದ ಕೆಳಗಿನ ಸೋಮೇಶ್ವರದಲ್ಲಿ ನೆಲೆಸಿದ್ದಾರೆ. ಹೀಗಾಗಿ ಊರಿನಲ್ಲಿ ಅಜ್ಜಿ ಒಬ್ಬಂಟಿ. ಸ್ಥಳೀಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವರ ಕುಟುಂಬಕ್ಕೆ 40 ವರ್ಷಗಳ ಹಿಂದೆ ಸರ್ಕಾರ, ಆಗುಂಬೆಯ ಪರಿಶಿಷ್ಟರ ಕಾಲೊನಿಯಲ್ಲಿ ಮನೆ ಕಟ್ಟಿಕೊಟ್ಟಿತ್ತು. ಅದು ಈಚೆಗೆ ಶಿಥಿಲಗೊಂಡಿತ್ತು. ಈಗಿರುವ ಮನೆ ಕೆಡವಿ ಗ್ರಾಮ ಪಂಚಾಯಿತಿಯಿಂದ ಮನೆ ಕಟ್ಟಿಕೊಡಲಿದ್ದಾರೆ. ಅದಕ್ಕೆ ಹಣ ಕೂಡ ಬಿಡುಗಡೆ ಆಗಿದೆ. ಮುಂದಿನ ವಾರ ಕೊಡುತ್ತಾರೆ ಎಂದು ಊರಿನಲ್ಲಿ ಯಾರೋ ಹೇಳಿದ್ದರು.

ಅದನ್ನು ನಂಬಿದ್ದ ಅಜ್ಜಿ ಹೊಸ ಸೂರಿನ ಕನಸಲ್ಲಿ ಆಗಲೇ ಶಿಥಿಲಗೊಂಡಿದ್ದ ಮನೆಯನ್ನು ಪೂರ್ಣ ಕೆಡವಿ ಪಾಯ ತೆಗೆದಿದ್ದರು. ಆದರೆ ಹಣ ಮಾತ್ರ ಬರಲಿಲ್ಲ. ಪಂಚಾಯಿತಿಗೆ ಹಲವು ಬಾರಿ ಅಲೆದದ್ದೇ ಬಂತು. ಅವರ ಹೆಸರಿಗೆ ಮಂಜೂರು ಆಗಿದ್ದ ಹಣ ಮರಳಿ ಹೋಗಿದೆ ಎಂಬ ಮಾತು ನಂತರ ಕೇಳಿ ಬಂದಿತ್ತು. ಅಕ್ಷರಶಃ ಕುಸಿದು ಹೋಗಿದ್ದ ಅವರು ಕೆಡವಿದ್ದ ಮನೆಯ ಸ್ಥಳದಲ್ಲೇ ಪ್ಲಾಸ್ಟಿಕ್‌ನ ಜೋಪಡಿ ಕಟ್ಟಿಕೊಂಡಿದ್ದರು.

ಮನೆ ಮನೆಗೆ ಪೊಲೀಸರ ಭೇಟಿ ಕಾರ್ಯಕ್ರಮದಡಿ ಕಳೆದ ಜುಲೈನಲ್ಲಿ ಆಗುಂಬೆ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಶಿವನಗೌಡ ಪಾಟೀಲ ಗೌರಜ್ಜಿಯ ಕಾಣಲು ಬಂದಿದ್ದರು. ಅವರ ಕಷ್ಟ-ಸುಖ ಆಲಿಸಿ, ಅಜ್ಜಿ ಬದುಕುತ್ತಿದ್ದ ರೀತಿ ಕಂಡು ಮರುಗಿದ್ದರು. ಮೊದಲೇ ಅದು ಕಾಡು ಪ್ರದೇಶ. ಆಕೆಯ ಜೀವಕ್ಕೆ ಖಾತರಿ ಏನು ಎಂದು ಯೋಚಿಸಿ ನೆರವಾಗಲು ನಿರ್ಧರಿಸಿದರು. ಆಗ ಅವರೊಂದಿಗೆ ಸ್ಥಳೀಯ ಲಯನ್ಸ್ ಕ್ಲಬ್‌ ಅಧ್ಯಕ್ಷ ಅರುಣ್‌ ಗುಡ್ಡೆಕೇರಿ ಕೈಜೋಡಿಸಿದರು. ಹೊಸ ಮನೆಯ ನೀಲ ನಕ್ಷೆ ಸಿದ್ಧಗೊಂಡಿತ್ತು.

ಕಳೆದ ಅಕ್ಟೋಬರ್‌ನಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಗಿ 9 ತಿಂಗಳಲ್ಲಿ ಒಂದು ಕೊಠಡಿ, ಅಡುಗೆ ಮನೆ ಹಾಗೂ ಹಾಲ್‌ ಇರುವ ₹ 1.90 ಲಕ್ಷ ಮೌಲ್ಯದ ಪುಟ್ಟ ಮನೆ ಸಿದ್ಧವಾಯಿತು. ಮನೆ ಕಟ್ಟಿಕೊಡಲು ಪಿಎಸ್‌ಐ ಸೇರಿದಂತೆ ಠಾಣೆಯ ಸಿಬ್ಬಂದಿ ವೈಯಕ್ತಿಕವಾಗಿ ಹಣ ನೀಡಿದ್ದಾರೆ. ಲಯನ್ಸ್‌ ಕ್ಲಬ್‌ನವರು ದಾನಿಗಳ ಹಿಡಿದು ನೆರವು ಕೊಡಿಸಿದ್ದಾರೆ.

'ಮನೆ ಕಟ್ಟಿಕೊಡಲು ಗೌಂಡಿ, ಮರದ ಕೆಲಸದವರು, ಸ್ಥಳೀಯರು ತಮ್ಮ ಕೈಲಾದ ರೀತಿಯಲ್ಲಿ ನೆರವಾಗಿದ್ದಾರೆ' ಎಂದು ಪಿಎಸ್‌ಐ ಶಿವನಗೌಡ ಪಾಟೀಲ ಸ್ಮರಿಸುತ್ತಾರೆ.

ಶಿವನಗೌಡ ಪಾಟೀಲ, ಆಗುಂಬೆ ಪೊಲೀಸ್ ಠಾಣೆ ಪಿಎಸ್‌ಐಮನೆ ಮನೆಗೆ ಪೊಲೀಸ್‌ ಕಾರ್ಯಕ್ರಮದಿಂದ ಗೌರಜ್ಜಿಯ ಕಷ್ಟ ಗೊತ್ತಾಯಿತು. ಲಯನ್ಸ್‌ ಕ್ಲಬ್‌ನವರು ಕೈಜೋಡಿಸಿದರು. ಗೌರಜ್ಜಿಯ ಮನೆ ಆಗುಂಬೆಯ ವನ್ಯಜೀವಿ ವಿಭಾಗದ ಸಮೀಪವೇ ಇದೆ. ಇನ್ನು ಮುಂದೆ ವನ್ಯಪ್ರಾಣಿಗಳ ಆತಂಕವಿಲ್ಲದೇ ಆಕೆ ನೆಮ್ಮದಿಯಿಂದ ನಿದ್ರಿಸಬಹುದು ಗೌರಜ್ಜಿ, ಆಗುಂಬೆ ನಿವಾಸಿಮಳೆ ಹುಯ್ಯೋಕೆ ಶುರುವಾದ್ರೆ ಬೆಚ್ಚನೆಯ ಜಾಗ ಹುಡುಕಿ ಜೋಪಡಿಯೊಳಗೆ ಕಾಳಿಂಗ ಬರುತ್ತಿತ್ತು. ರಾತ್ರಿ ಮಲಗಿದ್ದಾಗ ಪಕ್ಕದಲ್ಲಿಯೇ ಆನೆ ತುಳಿದುಕೊಂಡು ಹೋಗಿತ್ತು. ಪೊಲೀಸ್ ಶಿವಣ್ಣ (ಪಿಎಸ್‌ಐ) ನನ್ನ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಈಗ ಬಾಳ ಖುಷಿ ಆಗುತ್ತಿದೆ

ಗೃಹಪ್ರವೇಶಕ್ಕೆ ಸ್ವತಃ ಎಸ್‌‍ಪಿ ಬಂದರು!

ಸುಣ್ಣ-ಬಣ್ಣದೊಂದಿಗೆ ಸಿದ್ಧವಾದ ಗೌರಜ್ಜಿಯ ಹೊಸ ಮನೆಯ ಗೃಹ ಪ್ರವೇಶಕ್ಕೆ ಭಾನುವಾರ ಸ್ವತಃ ಶಿವಮೊಗ್ಗ ಎಸ್‌ಪಿ ಬಿ.ನಿಖಿಲ್ ಬಂದಿದ್ದರು. ಅಜ್ಜಿಗೆ ಶುಭ ಹಾರೈಸಿದರು. ಮನೆ ಮನೆಗೆ ಪೊಲೀಸರ ಭೇಟಿಯನ್ನು ಇಲಾಖೆಯ ಕಾರ್ಯಭಾರದ ಭಾಗ ಎಂದು ಪರಿಗಣಿಸದೇ ಅಜ್ಜಿಯ ಕಷ್ಟಕ್ಕೆ ಮಿಡಿದ ಠಾಣೆಯ ಅಧಿಕಾರಿ, ಸಿಬ್ಬಂದಿಯ ಮಾನವೀಯ ನಡೆಯನ್ನು ಶ್ಲಾಘಿಸಿದರು. ಗೌರಜ್ಜಿ ಬದುಕಿರುವವರೆಗೂ ಆಕೆಯ ಬಗ್ಗೆ ಕಾಳಜಿ ಮಾಡುವಂತೆ ಆಗುಂಬೆ ಪೊಲೀಸರಿಗೆ ಸಲಹೆ ನೀಡಿದರು.

ಕಾಲೊನಿಯ ಬಾವಿಯಲ್ಲಿನ ಕೆಟ್ಟು ಹೋಗಿದ್ದ ನೀರೆತ್ತುವ ಯಂತ್ರವನ್ನು ದುರಸ್ತಿ ಮಾಡಿಸಿಕೊಟ್ಟ ಪೊಲೀಸರು ಅಲ್ಲಿನ ಮೂರು ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಮಾಡಿಕೊಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani