ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿರುವ 'ಕರಾವಳಿ' ಸಿನಿಮಾ ಜುಲೈ 24ರಂದು ತೆರೆಕಾಣಲಿದೆ.
ಕಳೆದ ವರ್ಷ ಇದೇ ದಿನದಂದು 'ಸು ಫ್ರಮ್ ಸೋ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಈ ವರ್ಷವೂ ಇದೇ ರೀತಿಯ ಮ್ಯಾಜಿಕ್ ನಡೆಯಲಿದೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ಸಿನಿಮಾದಲ್ಲಿ ರಾಜ್ ಬಿ.ಶೆಟ್ಟಿ, ರಮೇಶ್ ಇಂದಿರಾ, ಮಿತ್ರ, ಸಂಪದಾ, ಸುಷ್ಮಿತಾ ಭಟ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. 'ಇದುವರೆಗೂ ತೆರೆ ಮೇಲೆ ನೋಡಿರದ ಕಥೆಯನ್ನು ತರುವ ಪ್ರಾಮಾಣಿಕ ಪ್ರಯತ್ನವಿದು. ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ 'ಕರಾವಳಿ' ಅದ್ಭುತ ಅನುಭವ ನೀಡಲಿದೆ' ಎನ್ನುತ್ತಾರೆ ಗುರುದತ್ ಗಾಣಿಗ.
'ಕರಾವಳಿ' ಶೀರ್ಷಿಕೆ ಹೇಳುವ ಹಾಗೆ ಅಲ್ಲಿನ ಸಂಸ್ಕೃತಿ, ಸೊಗಡಿನ ಸಿನಿಮಾ. ಕರಾವಳಿ ಸುತ್ತಮುತ್ತ ಚಿತ್ರೀಕರಣ ನಡೆದಿದ್ದು, ಕಂಬಳ, ಯಕ್ಷಗಾನ ಈ ಸಿನಿಮಾದ ಹೈಲೈಟ್ಸ್. ಪ್ರಜ್ವಲ್ ದೇವರಾಜ್‌ಗೆ ನಾಯಕಿಯಾಗಿ ಸಂಪದಾ ನಟಿಸಿದ್ದಾರೆ. ಮನುಷ್ಯ ಮತ್ತು ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆ ಇದಾಗಿದೆ. ರಾಜ್ ಬಿ.ಶೆಟ್ಟಿ 'ಮಾವೀರ'ನಾಗಿ ಕಾಣಿಸಿಕೊಳ್ಳಲಿದ್ದಾರೆ. ಕರಾವಳಿಗೇ ದೊಡ್ಡವರು ಎಂದು ಗುರುತಿಸುವ, ಕಂಬಳ ಪ್ರಪಂಚವೇ ಗೌರವಿಸುವ ಒಂದು ಪಾತ್ರಕ್ಕೆ ರಮೇಶ್ ಇಂದಿರಾ ಬಣ್ಣಹಚ್ಚಿದ್ದಾರೆ.
ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ 'ಕರಾವಳಿ' ಸಿನಿಮಾವನ್ನು ಪ್ರಸ್ತುತಪಡಿಸುವುದರ ಜೊತೆಗೆ ವಿತರಣೆಯನ್ನೂ ಮಾಡುತ್ತಿದೆ. v
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-51-1391426417

