Dailyhunt Logo
  • Light mode
    Follow system
    Dark mode
    • Play Story
    • App Story
ಕಾಳ ಸಂತೆಯ ಮಾರಾಟಕ್ಕೆ ಕಡಿವಾಣ ಹಾಕಿ - ಶಾಸಕ ಆರಗ ಜ್ಞಾನೇಂದ್ರ

ಕಾಳ ಸಂತೆಯ ಮಾರಾಟಕ್ಕೆ ಕಡಿವಾಣ ಹಾಕಿ - ಶಾಸಕ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: 'ರಸಗೊಬ್ಬರಕ್ಕೆ ತೊಂದರೆ ಆಗದ ರೀತಿ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಆರಂಭದಲ್ಲೇ ಸೂಚನೆ ನೀಡಿದ್ದೇನೆ. ಈಗ ಕಾಳ ಸಂತೆಯಲ್ಲಿ ಮಾರಾಟ ಆಗದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಸಗೊಬ್ಬರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದರು‌.

'ಕಚ್ಚಾ ತೈಲ, ಪೆಟ್ರೋಲ್‌, ರಸಗೊಬ್ಬರದ ವಿದೇಶಿ ಆಮದಿನ ಪ್ರಮಾಣದಲ್ಲಿ ಇಳಿಮುಖವಾಗಿದ್ದು ರೈತರು ಯೂರಿಯಾ, ಡಿಎಪಿ ಬಳಕೆ ಕಡಿಮೆ ಮಾಡಬೇಕು. ಎನ್‌ಪಿಕೆ ಬಳಕೆ ಮಾಡುವುದರಿಂದ ಸಂಕೀರ್ಣ ಪೋಷಕಾಂಶಗಳು ಸಸ್ಯಗಳಿಗೆ ಸಿಗಲಿದೆ' ಎಂದು ಹೇಳಿದರು.

'ಮಳೆ ಮಾಪನ ಕೇಂದ್ರದ ನಿರ್ವಹಣೆಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೆ ವಹಿಸಲಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಸರಿಯಾದ ಮಾಪನವಿಲ್ಲದೆ ರೈತರಿಗೆ ಅನ್ಯಾಯವಾಗಿದೆ. ಈ ವರ್ಷ ಅನಾವೃಷ್ಟಿಯಾಗುವ ಸಂಭವ ಇದ್ದು, ಹೆಚ್ಚಿನ ರೈತರು ವಿಮೆ ಸೌಲಭ್ಯ ಪಡೆಯಬೇಕು. ಅಡಿಕೆಗೆ ಬಣ್ಣ ಹಾಕುವ ವರ್ತಕರು, ಮಾರಾಟಗಾರು, ಖೇಣಿದಾರರ ಬಗ್ಗೆ ಇಲಾಖೆಗೆ ದೂರು ನೀಡಿದರೆ ಅಡಿಕೆಯ ಮಾನ ಕಾಪಾಡಬಹುದು' ಎಂದರು.

'ಮಳೆಯ ಅಭಾವಕ್ಕೆ ತಕ್ಕಂತೆ ಈ ಬಾರಿ ಬಿತ್ತನೆ ಬೀಜಗಳನ್ನು ವಿತರಿಸುತ್ತಿದ್ದೇವೆ. ತಾಲ್ಲೂಕಿನಲ್ಲಿ ಸದ್ಯ ಯೂರಿಯಾ 285, ಡಿಎಪಿ 57, ಎಸ್‌ಎಸ್‌ಪಿ 286, ಎಂಒಪಿ 348, ಎನ್‌ಪಿಕೆ 666 ಮೆಟ್ರಿಕ್‌ ಟನ್‌ಗಳಷ್ಟು ದಾಸ್ತಾನು ಇದೆ' ಎಂದು ಸಹಾಯಕ ಕೃಷಿ ನಿರ್ದೇಶಕ ಪ್ರವೀಣ್‌ ಮಾಹಿತಿ ನೀಡಿದರು.

ಸಭೆಯಲ್ಲಿ ಸಾಧಕ ರೈತರಾದ ಶ್ರೀಧರ ಎಸ್.ಬಿ. ಕರಕುಚ್ಚಿ, ಜಿ.ವಿ.ಗಣೇಶ ಹೆಗ್ಡೆ, ಯೋಗೀಶ್ ಎಸ್.ಡಿ., ನಾಗರಾಜ್ ಕೆ.ವಿ., ರಂಜನ್ ಎ.ಎನ್ ಅವರಿಗೆ ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕೃಷಿಕ ಸಮಾಜದ ಅಧ್ಯಕ್ಷ ಹೊಸಮನೆ ಸತೀಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ನಾಗರಾಜ ಶೆಟ್ಟಿ, ಹಿರಿಯ ತೋಟಗಾರಿಕೆ ನಿರ್ದೇಶಕ ಸೋಮಶೇಖರ್‌ ಕೆ., ಸೀಬಿನಕೆರೆ ಅಡಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಅಂಜನ್‌ ಕುಮಾರ್‌ ನಾಯ್ಕ್‌ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260623-42-884820007

Dailyhunt
Disclaimer: This content has not been generated, created or edited by Dailyhunt. Publisher: Prajavani