ಬೆಂಗಳೂರು: ಆಗಸ್ಟ್ 1ರಂದು ನಿಗದಿಯಾಗಿದ್ದ 'ಕಾಮೆಡ್-ಕೆ ಯುಜಿಇಟಿ 2020' ಪರೀಕ್ಷೆಯನ್ನು ಮತ್ತೆ ಮುಂದೂಡಲಾಗಿದೆ.
ಎಂಜಿನಿಯರಿಂಗ್ ಕೋರ್ಸ್ಗಳಿಗೆ ಆಗಸ್ಟ್ 1ರಂದು ಬೆಳಿಗ್ಗೆ 9ರಿಂದ 12 ಹಾಗೂ ಮಧ್ಯಾಹ್ನ 2ರಿಂದ 5ರವರೆಗೆ ಕಾಮೆಡ್-ಕೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ನಿಗದಿಯಂತೆ ಪರೀಕ್ಷೆ ನಡೆಸುವುದು ಸಾಧ್ಯವಾಗುವುದಿಲ್ಲ ಎಂದು ಕಾಮೆಡ್-ಕೆ ಅಭಿಪ್ರಾಯ ಪಟ್ಟಿದೆ.
ಕೆಲವು ರಾಜ್ಯಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಿದೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ಕರ್ನಾಟಕದಲ್ಲೂ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ಪರೀಕ್ಷೆ ಮುಂದೂಡಲು ನಿರ್ಧರಿಸಲಾಗಿದೆ. ಪರೀಕ್ಷೆ ದಿನಾಂಕವನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವುದಾಗಿ ಕಾಮೆಡ್-ಕೆ ತಿಳಿಸಿದೆ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ www.comedk.org ಗಮನಿಸುತ್ತಿರುವಂತೆ ಪ್ರಕಟಣೆ ತಿಳಿಸಿದೆ.

