'ನಾನು ವಿದ್ಯಾರ್ಥಿನಿಯಾಗಿದ್ದಾಗ, ಶಿಕ್ಷಕರ ಬಗ್ಗೆ ಒಂದು ರೀತಿಯ ಭಯ, ಗೌರವ ಎನ್ನುವುದಿತ್ತು. ಇಂದಿಗೂ ನನಗೆ ಕಲಿಸಿದ ಶಿಕ್ಷಕರನ್ನು ನೋಡಿದರೆ, ಅರಿವಿಲ್ಲದೆ ನನ್ನ ತಲೆ ಬಾಗುತ್ತದೆ. ಕೈಗಳು ನಮಸ್ಕಾರ ಮಾಡುತ್ತವೆ. ಬಾಯಿಂದ ತಾನಾಗಿಯೇ 'ನಮಸ್ತೆ' ಎಂಬ ಪದ ಹೊರಡುತ್ತದೆ. ಆದರೆ ಈ ಸಂಸ್ಕೃತಿ ನಮ್ಮ ಮಕ್ಕಳಿಗೂ ಬರದೆ ಎಲ್ಲಿ ಕಣ್ಮರೆಯಾಯಿತು ಎಂದು ಕೆಲವೊಮ್ಮೆ ನನಗೆ ಆಶ್ಚರ್ಯವಾಗುತ್ತದೆ.
ನಾವು ನಮ್ಮ ಮಕ್ಕಳನ್ನು ಬೆಳೆಸಲು ಎಲ್ಲಿ ವಿಫಲರಾಗುತ್ತಿದ್ದೇವೆ? ಪ್ರತಿಯೊಬ್ಬ ಪೋಷಕರು, ಶಿಕ್ಷಕರು ಶಾಲೆಗಳು ಮುಜುಗರದಿಂದ ಕೇಳಿಕೊಳ್ಳಬೇಕಾದ ಪ್ರಶ್ನೆಯಿದು.
80 ಮತ್ತು 90ರ ದಶಕದ ತರಗತಿ
80 ಮತ್ತು 90ರ ದಶಕದಲ್ಲಿ ಬೆಳೆದ ನಾವು ತುಂಬಾ ವಿಭಿನ್ನವಾದ ಪ್ರಪಂಚಕ್ಕೆ ಸೇರಿದವರು. ನಮ್ಮ ಬಳಿ ಕೃತಕ ಬುದ್ಧಿಮತ್ತೆ (ಎಐ) ಇರಲಿಲ್ಲ. ಪ್ರತಿಯೊಂದು ಅಧ್ಯಾಯವನ್ನು 30 ಸೆಕೆಂಡುಗಳಲ್ಲಿ ವಿವರಿಸುವ ಯೂಟ್ಯೂಬ್ ಇರಲಿಲ್ಲ. ಸ್ಮಾರ್ಟ್‌ಫೋನ್‌ಗಳು, ಇನ್‌ಸ್ಟಾಗ್ರಾಮ್, ಗೇಮಿಂಗ್ ಕನ್ಸೋಲ್‌ಗಳು ಅಥವಾ ಶಿಕ್ಷಕರು ಯಾವ ಮನೆಗೆಲಸ (ಹೋಮ್‌ವರ್ಕ್) ನೀಡಿದ್ದಾರೆ ಎಂದು ಚರ್ಚಿಸುವ ಇಪ್ಪತ್ತೇಳು ವಾಟ್ಸಾಪ್ ಗ್ರೂಪ್‌ಗಳು ಇರಲಿಲ್ಲ. ನಮ್ಮ ಮನರಂಜನೆಯ ಆಯ್ಕೆಗಳು ಸೀಮಿತವಾಗಿದ್ದವು.
ಶಾಲೆ, ಪುಸ್ತಕಗಳು, ಸ್ನೇಹಿತರು, ಹೊರಗೆ ಆಟವಾಡುವುದು, ಅಪರೂಪಕ್ಕೆ ಟಿವಿ ನೋಡುವುದೇ ಅಭ್ಯಾಸವಾಗಿತ್ತು. ಬಹುಶಃ ಗಮನವನ್ನು ಬೇರೆಡೆ ಸೆಳೆಯುವ ವಿಷಯಗಳು ಕಡಿಮೆಯಿದ್ದ ಕಾರಣ, ನಮ್ಮ ಮಿದುಳಿಗೆ ಆಲೋಚಿಸಲು ಹೆಚ್ಚಿನ ಜಾಗವಿತ್ತು.
ಅದಕ್ಕಿಂತ ಮಿಗಿಲಾಗಿ ನಮ್ಮ ಜೀವನದಲ್ಲಿ ಇನ್ನೊಂದು ಗಟ್ಟಿ ಶಕ್ತಿಯಿತ್ತು. ಅವರೇ ಶಿಕ್ಷಕರು. ನಾವು ನಮ್ಮ ಹೆತ್ತವರಿಗೆ ಹೆದರುತ್ತಿದ್ದೆವು. ನಮ್ಮ ಶಿಕ್ಷಕರಿಗೆ ಇನ್ನು ಹೆಚ್ಚು ಹೆದರುತ್ತಿದ್ದೆವು.
ಶಿಕ್ಷಕರು ಬೈದರೆ ಅಥವಾ ದೈಹಿಕವಾಗಿ ಶಿಕ್ಷಿಸಿದರೂ ಸಹ, ಆ ದಿನಗಳಲ್ಲಿ ನಾವು ದೂರು ನೀಡಲು ಮನೆಗೆ ಓಡಿಹೋಗುತ್ತಿರಲಿಲ್ಲ. ಒಂದು ವೇಳೆ ಮನೆಗೆ ಹೋಗಿ 'ಇಂದು ಟೀಚರ್ ನನಗೆ ಹೊಡೆದರು' ಎಂದು ಹೇಳಿದರೆ, ನಮ್ಮ ಪೋಷಕರಿಂದ 'ನೀನು ಏನು ಮಾಡಿದೆ?' ಎನ್ನುವ ಎರಡನೇ ಸುತ್ತಿನ ಪ್ರಶ್ನೆ ಎದುರಾಗುತ್ತಿತ್ತೇ ಹೊರತು, ನಮ್ಮನ್ನು 'ಅಯ್ಯೋ ಪಾಪ' ಎನ್ನುವ ರೀತಿ ನೋಡುತ್ತಿರಲಿಲ್ಲ.
ದೈಹಿಕ ಶಿಕ್ಷೆ ನೀಡುವುದು ಖಂಡಿತ ಸರಿಯಲ್ಲ. ಮಕ್ಕಳಿಗೆ ಅವಮಾನವಾಗದಂತೆ, ದೌರ್ಜನ್ಯಕ್ಕೆ ಒಳಗಾಗದಂತೆ ತಡೆಯಬೇಕು ಎನ್ನುವುದು ಇಂದು ಎಲ್ಲರಿಗೂ ತಿಳಿದಿದೆ. ಆದರೆ, ಹಿಂದಿನ ವ್ಯವಸ್ಥೆಯಲ್ಲಿ ಮೌಲ್ಯಯುತವಾದ ವಿಷಯವಿತ್ತು. ಶಿಕ್ಷಕರಿಗೆ ಅಧಿಕಾರ ಮತ್ತು ಘನತೆಯಿದೆ ಎನ್ನುವುದನ್ನು ಅರ್ಥಮಾಡಿಕೊಂಡು, ನಮಗೆ ಕಲಿಸಿದವರನ್ನು ಗೌರವಿಸುತ್ತಿದ್ದೆವು. ನಾವು ಇಂದು ಒಂದು ಒಳ್ಳೆಯ ಹಂತದಲ್ಲಿ ಇದ್ದೇವೆ ಎಂದರೆ ಅದಕ್ಕೆ ಅವರೇ ಕಾರಣ.
ಅವರು ನಮಗೆ ಕೇವಲ ಗಣಿತ, ವಿಜ್ಞಾನ, ಇತಿಹಾಸ, ಭಾಷೆ ಮಾತ್ರವಲ್ಲ, ಶಿಸ್ತು, ಸಹನೆ, ಹೊಣೆಗಾರಿಕೆ, ಸೌಜನ್ಯ ಮತ್ತು ಜೀವನದ ಪಾಠಗಳನ್ನು ಕಲಿಸಿದ್ದಾರೆ.
ಹಾಗಾದರೆ ಈಗ ಬದಲಾಗಿದ್ದೇನು?
ಹೀಗೆ ಸುಸಂಸ್ಕೃತವಾಗಿದ್ದ ಕಲಿಕೆಯಲ್ಲಿ ಬದಲಾಗಿದ್ದೇನು, ಮಕ್ಕಳೇಕೆ ಹೀಗಾದರು ಎಂದರೆ ಪೀಳಿಗೆ ಬದಲಾಯಿತು. ತಂತ್ರಜ್ಞಾನ ಬದಲಾಯಿತು. ಪೋಷಕರ ಶೈಲಿ ಬದಲಾಯಿತು. ಶಿಕ್ಷಣ ಒಂದು ಉದ್ಯಮವಾಯಿತು. ಎಲ್ಲೋ ಒಂದು ಕಡೆ, ಶಿಕ್ಷಕ-ಮಗು ಮತ್ತು ಪೋಷಕರ ನಡುವಿನ ಸಂಬಂಧವು ಸಂಕೀರ್ಣವಾಯಿತು.
ನಾನೊಬ್ಬ ವೃತ್ತಿಪರ ವಕೀಲೆಯಾಗಿ ಅನೇಕ ಪೋಷಕರ ದೂರನ್ನು ಕೇಳಿದ್ದೇನೆ, 'ಟೀಚರ್ ನನ್ನ ಮಗುವನ್ನೇ ಗುರಿ ಮಾಡುತ್ತಿದ್ದಾರೆ, ಅವರಿಗೆ ನನ್ನ ಮಗು ಎಂದರೆ ಇಷ್ಟವಿಲ್ಲ, ಶಾಲೆಯವರೂ ನಮ್ಮ ಮಾತು ಕೇಳುತ್ತಿಲ್ಲ' ಹೀಗೆ ಹತ್ತಾರು ದೂರುಗಳು.
ಹಾಗೆಂದು, ಪ್ರತಿಯೊಂದು ದೂರು ಕಲ್ಪನೆಯಲ್ಲ. ಶಿಕ್ಷಕರು ಮಕ್ಕಳನ್ನು ಸರಿಯಾದ ರೀತಿಯಲ್ಲಿ ನಡೆಸಿಕೊಳ್ಳದೇ ಇರುವುದನ್ನು ನಾನೂ ವೈಯಕ್ತಿಕವಾಗಿ ನೋಡಿದ್ದೇನೆ. ಅಂತಹ ಸಂದರ್ಭಗಳಲ್ಲಿ ಸಮಸ್ಯೆ ಪರಿಹರಿಸಬೇಕಾದ ಸಂದರ್ಭಗಳೂ ಒದಗಿಬಂದಿವೆ. ಕೆಲವು ಶಿಕ್ಷಕರು ಮಕ್ಕಳ ವಿಚಾರದಲ್ಲಿ ನಿಜವಾಗಿಯೂ ವಿಫಲಾಗಿರುತ್ತಾರೆ. ಪದವಿ ಪಡೆದ ಎಲ್ಲರೂ ಉತ್ತಮ ಶಿಕ್ಷಕರಾಗಲು ಸಾಧ್ಯವಿಲ್ಲ.
ಎಷ್ಟೇ ಓದಿಕೊಂಡಿದ್ದರೂ ವಿಷಯ ಜ್ಞಾನ, ಸಂವಹನ ಕೌಶಲ್ಯ, ತಾಳ್ಮೆ, ಸೌಹಾರ್ದತೆ ಅಥವಾ ಮಕ್ಕಳ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಗದೇ ಇರಬಹುದು.
ಬೋಧನೆ ಎಂದರೆ ಕೇವಲ ಪಠ್ಯದಲ್ಲಿರುವುದನ್ನು ನೋಟ್‌ಬುಕ್‌ಗೆ ವರ್ಗಾವಣೆ ಮಾಡುವುದಲ್ಲ. ಎದುರಿಗೆ ಇರುವವನೂ ಒಬ್ಬ ಮನುಷ್ಯ ಎನ್ನುವುದು ಅರಿವಿರಬೇಕು. ಒಬ್ಬ ಶಿಕ್ಷಕನ ಒಳ್ಳೆಯ ವಾಕ್ಯ ಮಗುವಿಗೆ ಜೀವನಪೂರ್ತಿ ಸ್ಫೂರ್ತಿ ನೀಡಬಲ್ಲದು. ಅದೇ ಒಂದು ಅವಮಾನ, ವರ್ಷಗಳವರೆಗೆ ಮಾಸದ ಗಾಯದಂತೆ ಮನಸ್ಸಿನಲ್ಲಿ ಉಳಿಯಬಹುದು.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಮಕ್ಕಳ ವಿಚಾರದಲ್ಲಿ ಎಡವುತ್ತಿರುವುದು ಶಿಕ್ಷಕರು ಮಾತ್ರವಲ್ಲ. ಪೋಷಕರೂ ಹೌದು ಎನ್ನುವುದು.
'ಏನೋ ತಪ್ಪಾಗಿದೆ' ಎನ್ನುವುದು ಗೊತ್ತಾದರೂ, 'ನಾನು ದೂರು ನೀಡುವುದರಿಂದ ನನ್ನ ಮಗು ಗುರಿಯಾಗಬಹುದು' ಎನ್ನುವ ಭಯದಿಂದ ಕೆಲವು ಪೋಷಕರು ಸುಮ್ಮನಾಗುತ್ತಾರೆ. ಕೆಲವರಿಗೆ ಶಾಲೆಯ ತರಗತಿಯ ಒಳಗೆ ಏನು ನಡೆಯುತ್ತಿದೆ ಎನ್ನುವುದೇ ಗೊತ್ತಿರುವುದಿಲ್ಲ.
ಇನ್ನೂ ಕೆಲವರು, ನಮ್ಮ ಮಗು ಎಂದೂ ತಪ್ಪು ಮಾಡುವುದಿಲ್ಲ 'ನನ್ನ ಮಗು ಹೇಳಿದೆ, ಹಾಗಾಗಿ ಅದು ನಿಜವೇ ಇರಬೇಕು' ಎನ್ನುವ ಮನಸ್ಥಿತಿಯಲ್ಲೇ ಇರುತ್ತಾರೆ.
ಉದಾಹರಣೆಗೆ, ಮನೆಪಾಠವನ್ನು ಮಗು ಪೂರ್ಣಗೊಳಿಸಿಲ್ಲ ಎಂದು ಶಿಕ್ಷಕರು ಹೇಳಿದರೆ, ಮನೆಯಲ್ಲಿ ಪಾಠ ಓದಿ, ಬರೆದುಕೊಂಡು ಬರಲು ನೀಡುವುದೇಕೆ ಎಂದು ಪ್ರಶ್ನಿಸುವವರೂ ಇರುತ್ತಾರೆ. ಅದೇ ಅವರದ್ದೇ ಮಗು ಅನುತ್ತೀರ್ಣವಾದರೆ, ಅಶಿಸ್ತಿನಿಂದ ನಡೆದುಕೊಂಡರೆ ನಿಂದನೆ ಮಾತ್ರ ಶಿಕ್ಷಕರಿಗೆ ಆಗಿರುತ್ತದೆ.
ಒಂದು ಕಾಲದಲ್ಲಿ ಮಕ್ಕಳು ಮಾತನಾಡಲು ಹೆದರುತ್ತಿದ್ದರು. ಆದರೆ, ಈಗ ಮಕ್ಕಳಿಗೆ 'ಹೀಗಲ್ಲ' ಎಂದು ಹೇಳಿ ತಿದ್ದಲು ಹಿರಿಯರು ಹೆದರುವ ಸ್ಥಿತಿ ಎದುರಾಗಿದೆ.
ಗೌರವವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ. ಅದನ್ನು ಗಳಿಸಬೇಕು. ಶಿಕ್ಷಕರು ಗೌರವಕ್ಕೆ ಅರ್ಹರು. ಆದರೆ ಗೌರವವು ಎಂದಿಗೂ ಅವಮಾನ ಮಾಡುವ ಹಕ್ಕಾಗಬಾರದು. ಮಗುವಿಗೆ ರಕ್ಷಣೆ ಸಿಗಬೇಕು. ಆದರೆ ರಕ್ಷಣೆ ಎನ್ನುವುದೇ ಅಶಿಸ್ತಿನ ಪರವಾನಗಿಯಾಗಬಾರದು. 1980ರ ದಶಕದಲ್ಲಿ ಇದ್ದ ಹಾಗೆಯೇ ಮಕ್ಕಳನ್ನು ರೂಪಿಸಬೇಕು ಎನ್ನುವುದು ತಪ್ಪು. ಬದಲಾಗಿ, ಗೌರವ ನೀಡುವ ಮನಸ್ಥಿತಿಯನ್ನು ಮರಳಿ ತರಬೇಕಾಗಿದೆ.
ನಾವೇನು ಮಾಡಬಹುದು?
ಶಿಕ್ಷಕರಾದವರು ಕೇವಲ ವಿಷಯಗಳನ್ನು ಬೋಧಿಸುತ್ತಿಲ್ಲ, ಮಕ್ಕಳಿಗೆ ಕಲಿಸುತ್ತಿದ್ದೇವೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಶಿಕ್ಷಕರಾಗುವವರಿಗೆ ವಿಷಯಗಳ ಬೋಧನೆ ಮಾಡುವುದಷ್ಟೇ ಅಲ್ಲ, ಮನೋವಿಜ್ಞಾನ, ಸಂವಹನ, ತರಗತಿ ನಿರ್ವಹಣೆ, ಭಾವನಾತ್ಮಕ ಆರೋಗ್ಯ, ಶಿಸ್ತಿನ ಬಗ್ಗೆಯೂ ತರಬೇತಿ ನೀಡಬೇಕು. ಮಗುವನ್ನು ಅರ್ಥಮಾಡಿಕೊಳ್ಳಲಾಗದವನು ಎಂತಹ ಅದ್ಭುತ ಶಿಕ್ಷಕನಾಗದರೂ ಆತ ಅರ್ಧ ಶಿಕ್ಷಕ ಮಾತ್ರ.
ಅವಮಾನ ಮಾಡುವುದು ಬೋಧನಾ ವಿಧಾನವಲ್ಲ
ಮಗುವನ್ನು ದಡ್ಡ, ಉಪಯೋಗಕ್ಕೆ ಬಾರದವನು, ಸೋಮಾರಿ ಎಂದು ಕರೆಯುವುದು ಅಥವಾ ಸಹಪಾಠಿಗಳ ಮುಂದೆ ಮುಜುಗರಕ್ಕೀಡು ಮಾಡುವುದರಿಂದ ಅವರನ್ನು ಉತ್ತಮರನ್ನಾಗಿ ಮಾಡಲು ಸಾಧ್ಯವಿಲ್ಲ. ಅದು ಅವರನ್ನು ಭಯಕ್ಕೆ ದೂಡುತ್ತದೆ. ಅವರ ನಡವಳಿಕೆಯನ್ನು ತಿದ್ದಿ. ಆತ್ಮಗೌರವಕ್ಕೆ ಧಕ್ಕೆ ತರಬೇಡಿ.
ಶಾಲೆಗಳಲ್ಲಿ ದೂರು ಪರಿಹಾರ ವ್ಯವಸ್ಥೆ
ಪೋಷಕರ ದೂರನ್ನು ಶಿಕ್ಷಕರ ಮೇಲಿನ ದಾಳಿ ಎಂದೋ, ಅವರ ವಿರುದ್ಧದ ಸಾಕ್ಷಿ ಎಂದೋ ಪರಿಗಣಿಸುವುದಲ್ಲ. ಎರಡೂ ಬದಿಗಳನ್ನು ಆಲಿಸುವ ನ್ಯಾಯಯುತ, ಗೋಪ್ಯ ಮತ್ತು ಮಗುವಿನ ಹಿತದೃಷ್ಟಿ ಗಮನದಲ್ಲಿರಿಸಿ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆ ಇರಬೇಕು.
ದೂರು ನೀಡುವುದೇ ಪರಿಹಾರವಲ್ಲ
ನಿತ್ಯ ಮನೆಗೆ ಬಂದ ಮಗುವನ್ನು ಕೇಳಿ, 'ಇಂದು ಶಾಲೆ ಹೇಗಿತ್ತು?' ಯಾವ ಟೀಚರ್ ಪಾಠ ಇಷ್ಟವಾಯಿತು? ಏನಾದರೂ ಬೇಸರವಾಯಿತಾ? ತರಗತಿಯಲ್ಲಿ ಯಾರೊಂದಿಗೆ ಕುಳಿತಿದ್ದೆ? ಹೀಗೆ ಮಕ್ಕಳಿಗೆ ಸುರಕ್ಷಿತ ಭಾವನೆ ನೀಡುವ ಪ್ರಶ್ನೆಗಳನ್ನು ಕೇಳಿ. ಅದರ ಬದಲು ಎಲ್ಲದಕ್ಕೂ ದೂರು ನೀಡುವುದು ಉಚಿತವಲ್ಲ.
ಮಗುವನ್ನು ಮಧ್ಯವಿಟ್ಟು ಜಗಳ ಮಾಡುವುದಲ್ಲ
'ನಿಮ್ಮ ಮಗುವಿಗೆ ಜವಾಬ್ದಾರಿಯಿಲ್ಲ' ಎಂದು ಶಿಕ್ಷಕರು ದೂರಿದರೆ, ಪೋಷಕರು 'ನೀವು ಕಲಿಸುವ ವಿಧಾನವೇ ಸರಿಯಿಲ್ಲ' ಎನ್ನುತ್ತಾರೆ. ಆಗ ಮಧ್ಯದಲ್ಲಿ ಕುಳಿತ ಮಗು, 'ನಾನು ಊಟ ಮಾಡಲೇ, ಹಸಿವಾಗುತ್ತಿದೆ' ಎನ್ನುತ್ತದೆ. ಇಂತಹ ಸಂದರ್ಭಗಳು ಎಂದಿಗೂ ಎದುರಾಗಬಾರದು. ಮಗು ಇಬ್ಬರು ಹಿರಿಯರ ನಡುವಿನ ಯುದ್ಧ ಭೂಮಿಯಾಗಬಾರದು. ನೇರವಾಗಿ, ಗೌರವಯುತವಾಗಿ ಸಂವಹನ ನಡೆಸಿದರೆ, ಮಗುವಿಗೂ ಸುರಕ್ಷತೆಯ ಭಾವನೆ ಮೂಡಲು ಸಾಧ್ಯ.
ಶಾಲೆ, ಶಿಕ್ಷಣ ಉದ್ಯಮವಲ್ಲ
ಶಾಲೆ ಎಂದರೆ ಕೇವಲ ಸ್ಮಾರ್ಟ್ ಬೋರ್ಡ್‌ಗಳು, ಹವಾನಿಯಂತ್ರಿತ ತರಗತಿಗಳ ಕಟ್ಟಡವಲ್ಲ. ತರಗತಿಯಲ್ಲಿ ಕೇಳಿದ ಬೀಜಗಣಿತ ಪಾಠವನ್ನು, ಪ್ಲಾಸಿ ಕದನದ ದಿನಾಂಕವನ್ನು ಮಕ್ಕಳು ಮರೆಯಬಹುದು. ಆದರೆ ಶಿಕ್ಷಕರು ತರಗತಿಯಲ್ಲಿ ಯಾವ ರೀತಿಯ ಅನುಭವ ನೀಡುತ್ತಿದ್ದರು ಎನ್ನುವುದನ್ನು ಎಂದಿಗೂ ಮರೆಯುವುದಿಲ್ಲ.
ಮಕ್ಕಳಿಗೂ ಜವಾಬ್ದಾರಿ ಕಲಿಸಬೇಕು
ಪ್ರತಿ ತಪ್ಪನ್ನು ತಿದ್ದುವಾಗಲೂ ಶಿಕ್ಷಕರು ಮಕ್ಕಳನ್ನು ಗೌರವಿಸಬೇಕು ಎಂದು ಬೇಡಿಕೆ ಇಡಲು ಅಥವಾ ಕಡ್ಡಾಯ ಮಾಡಲು ಸಾಧ್ಯವಿಲ್ಲ. ಮಕ್ಕಳು ಸಹ, ಶಿಸ್ತು, ಗೌರವಿಸುವುದು, ಆಲಿಸುವುದು, ಹೊಣೆಗಾರಿಕೆ, ಕೃತಜ್ಞತೆ ಎಲ್ಲವನ್ನೂ ಕಲಿಯಬೇಕು. 'ನನ್ನ ತಂದೆ ತಾಯಿ ಬಂದು ದೂರು ನೀಡುತ್ತಾರೆ ನೋಡಿ' ಎನ್ನುವುದನ್ನೇ ಸೂಪರ್ ಪವರ್ ಆಗಿ ಬಳಸುವುದಲ್ಲ.
ಈಗ ಮಕ್ಕಳು ತರಗತಿಯಲ್ಲಿ ಮಾತನಾಡಲು ಹೆದರುತ್ತಿದ್ದ ಕಾಲಕ್ಕೆ ಹೋಗುವ ಅಗತ್ಯವಿಲ್ಲ. ಆದರೆ, ಮಕ್ಕಳನ್ನು ತಿದ್ದಲು ಶಿಕ್ಷಕರು ಹೆದರುವುದನ್ನು ತಡೆಯಬಹುದು. 'ಇದು ತಪ್ಪು' ಎಂದು ಶಿಕ್ಷಕರು ಹೇಳಿದಾಗ, ಅದನ್ನು ಅವಮಾನ ಎಂದು ಭಾವಿಸದೆ ಕೇಳಿಸಿಕೊಳ್ಳುವ ಗುಣ ಮಗುವಿಗಿರಬೇಕು.
ಅದೇ ರೀತಿ ಮಗು ಕೂಡ. 'ಮೇಡಂ ನೀವು ನನ್ನನ್ನು ನಡೆಸಿಕೊಂಡ ರೀತಿ ಮುಜುಗರವುಂಟು ಮಾಡಿದೆ' ಎಂದು ಧೈರ್ಯವಾಗಿ ಹೇಳುವಂತಿರಬೇಕು. ಇದನ್ನು ಶಿಕ್ಷಕರೂ ಅಷ್ಟೇ ವಿನಯದಿಂದ ಸ್ವೀಕರಿಸಬೇಕು. ಹೀಗಾಗಿ ಮಕ್ಕಳು ಮತ್ತು ಶಿಕ್ಷಕರ ನಡುವೆ ಬಾಂಧ್ಯವದಲ್ಲಿ ಭಯ, ಆತಂಕವಿರಬಾರದು.
ನಾನಿಂದು ನನ್ನ ಶಿಕ್ಷಕರಿಗೆ ಕೈಮುಗಿದು 'ನಮಸ್ತೆ' ಎನ್ನುತ್ತೇನೆ ಎಂದ ಮಾತ್ರಕ್ಕೆ ಅವರು ನನಗೆ ಎಲ್ಲವನ್ನೂ ಕಲಿಸಿದ್ದಾರೆ ಎಂದಲ್ಲ. ಮೌಲ್ಯಯುತ ಶಿಕ್ಷಣ ನೀಡಿದ್ದಾರೆ. ಕೆಲವೊಮ್ಮೆ ಭಯಪಡಿಸಿದರೂ, ವ್ಯಕ್ತಿತ್ವವನ್ನು ರೂಪಿಸಿದ್ದಾರೆ. ತಪ್ಪು ತಿದ್ದಿ, ಶಿಸ್ತು ಕಲಿಸಿ, ಪ್ರೋತ್ಸಾಹಿಸಿದ್ದಾರೆ. ಈಗ ಹಿಂತಿರುಗಿ ನೋಡಿದಾಗ, ಅವರು ಕಲಿಸಿದ ಜೀವನದ ಪಾಠಗಳು ಪಠ್ಯಪುಸ್ತಕದಲ್ಲಿ ಇರಲಿಲ್ಲ ಎನ್ನುವುದು ಅರಿವಾಗುತ್ತದೆ.
ಮಕ್ಕಳು ಶಿಕ್ಷಕರನ್ನು ಏಕೆ ಗೌರವಿಸುತ್ತಿಲ್ಲ ಎನ್ನುವುದು ಪ್ರಶ್ನೆಯಲ್ಲ
ಇಂದಿನ ಕಾಲದಲ್ಲಿ ಕಾಡುವ ನಿಜವಾದ ಪ್ರಶ್ನೆ ಎಂದರೆ, ಮಕ್ಕಳು ತಮ್ಮ ಶಿಕ್ಷಕರನ್ನು ಗೌರವಿಸುವಂತೆ ಮಾಡಲು, ಅವರೊಂದಿಗೆ ಉತ್ತಮ ಆತ್ಮೀಯ ಸಂಬಂಧ ಇರಿಸಿಕೊಳ್ಳಲು ಪೋಷಕರಾಗಿ, ಶಿಕ್ಷಕರು ಮತ್ತು ಶಾಲೆಗಳಿಗೆಂದು ನಾವು ಏನು ಮಾಡುತ್ತಿದ್ದೇವೆ ಎನ್ನುವುದು.
ಪೋಷಕರು ಮತ್ತು ಶಿಕ್ಷಕರು ಸ್ಪರ್ಧೆಗಿಳಿದವರಲ್ಲ. ಅದೊಂದು ಸಹಭಾಗಿತ್ವ. ಹೀಗಾಗಿ ಸಹಭಾಗಿತ್ವವನ್ನು ಸರಿಯಾದ ರೀತಿಯಲ್ಲಿ ಕಾಯ್ದುಕೊಂಡರೆ ಒಂದಲ್ಲ ಒಂದು ದಿನ, ವರ್ಷಗಳ ನಂತರ, ನಮ್ಮ ಮಕ್ಕಳೂ ತಮ್ಮ ಹಳೆಯ ಶಿಕ್ಷಕರನ್ನು ರಸ್ತೆಯಲ್ಲಿ ಎಲ್ಲೋ ನೋಡಿದಾಗ, ಅರಿವಿಲ್ಲದೆ ಅವರ ತಲೆ ಬಾಗುತ್ತದೆ. ಅವರ ಕೈಗಳು ಜೋಡಿಸುತ್ತವೆ. ತಾನಾಗಿಯೇ ಬಾಯಿಂದ 'ನಮಸ್ತೆ' ಎನ್ನುವ ಪದ ಹೊರಡುತ್ತದೆ.

